ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ದೇಶದ ಭದ್ರತೆಯನ್ನು ಬಲಪಡಿಸಲು ದೇಶದ ಇತರ 19 ಸ್ಥಳಗಳಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀ ನಿತಿನ್ ಗಡ್ಕರಿ ಹೇಳಿದರು
Posted On:
09 SEP 2021 1:35PM by PIB Bengaluru
ದೇಶದ ಭದ್ರತೆಯನ್ನು ಬಲಪಡಿಸಲು ದೇಶದ ಇತರ 19 ಸ್ಥಳಗಳಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದರು. ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರೊಂದಿಗೆ ರಾಜಸ್ಥಾನದ ರಾಷ್ಟ್ರೀಯ ಹೆದ್ದಾರಿ ʻ925ಎʼನಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ಅವರು, ವ್ಯೂಹಾತ್ಮಕವಾಗಿ ಪ್ರಮುಖವೆನಿಸಿದ ಗಡಿಗಳನ್ನು ರಕ್ಷಿಸುವ ಮೂಲಕ ದೇಶದ ಭದ್ರತೆಯನ್ನು ಈ ಹೆದ್ದಾರಿ ʻರನ್-ವೇʼ ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಸ್ಥಾನದ ಫಲೋಡಿ-ಜೈಸಲ್ಮೇರ್ ರಸ್ತೆ ಮತ್ತು ಬರ್ಮರ್- ಜೈಸಲ್ಮೇರ್ ರಸ್ತೆ; ಪಶ್ಚಿಮ ಬಂಗಾಳದ ಖರಗ್‌ಪುರ್ – ಬಾಲಸೋರ್ ರಸ್ತೆ, ಖರಗ್‌ಪುರ್– ಕಿಯೋಂಜಾರ್ ರಸ್ತೆ; ತಮಿಳುನಾಡಿನ ಚೆನ್ನೈನ ಪನಘರ್/ಕೆಕೆಡಿ ಬಳಿ; ಪುದುಚೇರಿ ರಸ್ತೆಯಲ್ಲಿ; ಆಂಧ್ರ ಪ್ರದೇಶದ ನೆಲ್ಲೂರು-ಒಂಗೋಲ್ ರಸ್ತೆ ಮತ್ತು ಒಂಗೋಲ್ - ಚಿಲಕಲೂರಿಪೇಟ್ ರಸ್ತೆ; ಹರಿಯಾಣದ ಮಂಡಿ ಡಬ್ವಾಲಿ-ಓಧನ್ ರಸ್ತೆ; ಪಂಜಾಬ್‌ನ ಸಂಗ್ರೂರ್ ಬಳಿ; ಗುಜರಾತಿನ ಭುಜ್-ನಲಿಯಾ ರಸ್ತೆಯಲ್ಲಿ ಮತ್ತು ಸೂರತ್-ಬರೋಡಾ ರಸ್ತೆಯಲ್ಲಿ; ಜಮ್ಮು-ಕಾಶ್ಮೀರದ ಬನಿಹಾಲ್-ಶ್ರೀನಗರ ರಸ್ತೆ; ಅಸ್ಸಾಂನ ಲೇಹ್/ನ್ಯೋಮಾ ಪ್ರದೇಶ ಮತ್ತು ಜೋರ್ಹತ್-ಬಾರಾಘಾಟ್ ರಸ್ತೆಯಲ್ಲಿ, ಶಿವಸಾಗರ ಬಳಿ, ಬಾಗ್ದೋಗ್ರಾ-ಹಶೀಮಾರಾ ರಸ್ತೆ, ಹಶೀಮಾರಾ-ತೇಜ್‌ಪುರ್ ಮಾರ್ಗ ಮತ್ತು ಅಸ್ಸಾಂನ ಹಶೀಮಾರಾ-ಗುವಾಹಟಿ ರಸ್ತೆ ಸೇರಿದಂತೆ ದೇಶದ ಇತರ 19 ಸ್ಥಳಗಳಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಗಡ್ಕರಿ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ದಾಖಲೆಯ ವೇಗದಲ್ಲಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು. ಈಗ ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಸೇನೆಯ ಬಳಕೆಗೆ ಸಹ ಉಪಯೋಗವಾಗಲಿವೆ. ಇದರಿಂದ ನಮ್ಮ ದೇಶವನ್ನು ಹೆಚ್ಚು ಸುರಕ್ಷಿತಗೊಳಿಸಲು ಮತ್ತು ತುರ್ತು ಪರಿಸ್ಥಿತಿಗಳಿಗೆ ಸದಾ ಸನ್ನದ್ಧವಾಗಿರಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಏರ್‌ಚೀಫ್ ಮಾರ್ಷಲ್ ಶ್ರೀ. ಆರ್.ಎಸ್. ಭದೌರಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***
(Release ID: 1753507)
Visitor Counter : 217