ಗಣಿ ಸಚಿವಾಲಯ
ರಷ್ಯಾದ ಜಂಟಿ ಷೇರು ಕಂಪನಿ ʻರೋಸ್‌ಜಿಯಾಲಜಿಯಾʼ ಮತ್ತು ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ(ಜಿಎಸ್‌ಐ) ನಡುವೆ ಭೂವಿಜ್ಞಾನ ಕ್ಷೇತ್ರದಲ್ಲಿ ಸಹಕಾರ ಕುರಿತ ಒಡಂಬಡಿಕೆಗೆ ಸಚಿವ ಸಂಪುಟದ ಅನುಮೋದನೆ
प्रविष्टि तिथि:
08 SEP 2021 2:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಷ್ಯಾದ ಜಂಟಿ ಷೇರು ಕಂಪನಿ ʻರೋಸ್‌ಜಿಯಾಲಜಿಯಾʼ ಮತ್ತು ಭಾರತ ಸರಕಾರದ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆʼ ನಡುವೆ ಭೂವಿಜ್ಞಾನ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಡಂಬಡಿಕೆಗೆ ಅನುಮೋದನೆ ನೀಡಿದೆ. ʻರೋಸ್‌ಜಿಯಾಲಜಿʼ ಎಂಬುದು (ಸ್ಟೇಟ್ ಹೋಲ್ಡಿಂಗ್ ಕಂಪನಿ) (ʻರೋಸ್‌ಜಿಯೋʼ ಎಂದು ಕರೆಯಲಾಗುತ್ತದೆ) ರಷ್ಯಾದ ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾದ ಸರಕಾರಿ ಸಂಸ್ಥೆಯಾಗಿದೆ.
ಭೂಗರ್ಭದ ಆಳದಲ್ಲಿರುವ ಮತ್ತು/ಅಥವಾ ಮರೆಮಾಚಿಕೊಂಡಿರುವ ಖನಿಜ ನಿಕ್ಷೇಪದ ಅನ್ವೇಷಣೆಯಲ್ಲಿ ತಾಂತ್ರಿಕ ಸಹಯೋಗಕ್ಕಾಗಿ ಪರಸ್ಪರ ಸಹಕಾರವನ್ನು ವಿಸ್ತರಿಸುವುದು ಈ ಒಡಂಬಡಿಕೆಯ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ವೈಮಾನಿಕ-ಭೂಭೌತವಿಜ್ಞಾನ (ಏರೋ-ಜಿಯೋಫಿಸಿಕಲ್) ದತ್ತಾಂಶದ ವಿಶ್ಲೇಷಣೆ ಮತ್ತು ವ್ಯಾಖ್ಯಾನ; ʻಪಿಜಿಇʼ ಮತ್ತು ʻಆರ್‌ಇಇʼ ಅನ್ವೇಷಣೆ ಮತ್ತು ಸಂಶೋಧನೆ; ರಷ್ಯಾದ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದೊಂದಿಗೆ ಭಾರತೀಯ ಭೂವಿಜ್ಞಾನ ದತ್ತಾಂಶ ಭಂಡಾರದ ಜಂಟಿ ಅಭಿವೃದ್ಧಿ; ಕೊರೆಯುವಿಕೆ, ಮಾದರಿ ಸಂಗ್ರಹ ಮತ್ತು ಪ್ರಯೋಗಾಲಯ ವಿಶ್ಲೇಷಣೆ ಕ್ಷೇತ್ರದಲ್ಲಿ ದತ್ತಾಂಶ ನಿಖರತೆ ಮತ್ತು ವೆಚ್ಚ ಅನುಕೂಲತೆ ಸಾಧನೆಗಾಗಿ ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯ; ಹಾಗೂ ವೈಜ್ಞಾನಿಕ ಸಿಬ್ಬಂದಿಯ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಇತ್ಯಾದಿಗಳೂ ಭೂವಿಜ್ಞಾನ ಕ್ಷೇತ್ರಗಳಲ್ಲಿ ಎರಡೂ ಸಂಸ್ಥೆಗಳ ನಡುವೆ ನಡೆದ ಈ ಒಡಂಬಡಿಕೆಯ ಪ್ರಮುಖ ಉದ್ದೇಶದಲ್ಲಿ ಸೇರಿವೆ.
ʻರೋಸ್‌ಜಿಯೊʼ ಮತ್ತು ʻಜಿಎಸ್‌ಐʼ ಹೊಂದಿರುವ ಶ್ರೀಮಂತ ಅನುಭವ ಮತ್ತು ಅವುಗಳ ಸಹಕಾರದ ಸಾಮರ್ಥ್ಯದ ಹಿನ್ನೆಲೆಯಲ್ಲಿ, ಭೂವಿಜ್ಞಾನ ಕ್ಷೇತ್ರದಲ್ಲಿ ಇವೆರಡೂ ಸಂಸ್ಥೆಗಳ ನಡುವಿನ ಸಹಕಾರಕ್ಕೆ ಈ ಒಡಂಬಡಿಕೆಯು ಅತ್ಯಂತ ಅನುಕೂಲಕರವಾಗಿದೆ. ವಿಶೇಷವಾಗಿ ಭೂವೈಜ್ಞಾನಿಕ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಸಮಗ್ರ ಚೌಕಟ್ಟನ್ನು ಇದು ಒದಗಿಸುತ್ತದೆ.
ಹಿನ್ನೆಲೆ:
ಜಂಟಿ ಷೇರು ಕಂಪನಿಯಾದ ರೋಸ್‌ಜಿಯಾಲಜಿಯಾ (ರೋಸ್‌ಜಿಯೊ) ರಷ್ಯಾ ಅತಿದೊಡ್ಡ ಸರಕಾರಿ ಭೂವೈಜ್ಞಾನಿಕ ಸಂಸ್ಥೆಯಾಗಿದೆ. ಸುಧಾರಿತ ಉತ್ಪಾದನೆ ಮತ್ತು ತಾಂತ್ರಿಕ ಸಾಮರ್ಥ್ಯಗಳು, ಹೆಚ್ಚಿನ ವೃತ್ತಿಪರ ಸಾಮರ್ಥ್ಯಗಳು ಮತ್ತು ವಿಶಿಷ್ಟ ವ್ಯಾಪ್ತಿಯ ಭೂವೈಜ್ಞಾನಿಕ ಮಾಹಿತಿಯನ್ನು ಇದು ಹೊಂದಿದೆ. ಕಂಪನಿಯು ಎಲ್ಲಾ ಬಗೆಯ ಖನಿಜಗಳ ಪ್ರಾದೇಶಿಕ ಸಮೀಕ್ಷೆಗಳಿಂದ ಹಿಡಿದು ಖನಿಜ ನಿಕ್ಷೇಪಗಳ ಅಂದಾಜು ಮತ್ತು ನಿಕ್ಷೇಪಗಳ ಕಾರ್ಯಾಚರಣೆವರೆಗೆ ಎಲ್ಲಾ ರೀತಿಯ ಭೂವೈಜ್ಞಾನಿಕ ಮುಂಗಾಣಿಕೆ ಮತ್ತು ಪರಿಶೋಧನಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಕಡಲಾಚೆಯ ಭೂವೈಜ್ಞಾನಿಕ ಮತ್ತು ಆನ್-ಶೆಲ್ಫ್ ಕಾರ್ಯಾಚರಣೆಗಳ ಕ್ಷೇತ್ರದಲ್ಲಿ ವಿಶಿಷ್ಟ ಸಾಮರ್ಥ್ಯವನ್ನು ಸಂಸ್ಥೆಯು ಹೊಂದಿದೆ.
2020ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ʻರೋಸ್‌ಜಿಯೊʼ ನಿಯೋಗವು ಅನ್ವೇಷಣಾ ಕಾರ್ಯಗಳಲ್ಲಿ ಸಹಕಾರದ ಬಗ್ಗೆ ಚರ್ಚಿಸಲು ಭಾರತೀಯ ಗಣಿ ಸಚಿವಾಲಯ ಮತ್ತು ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯೊಂದಿಗೆ (ಜಿಎಸ್‌ಐ) ನವದೆಹಲಿಯಲ್ಲಿ ಸಭೆ ನಡೆಸಿತ್ತು. ಈ ಸಭೆಯಲ್ಲಿ, ಭೂವಿಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಜಿಎಸ್‌ಐ ಮತ್ತು ರೋಸ್‌ಜಿಯೊ ನಡುವೆ ಒಡಂಬಡಿಕೆಗೆ ಸಹಿ ಹಾಕಲು ಪ್ರಸ್ತಾಪಿಸಲಾಯಿತು. ಅದರಂತೆ, ಜಿಎಸ್ಐ ತನ್ನ ರಷ್ಯಾದ ಸಹವರ್ತಿ ಅಂದರೆ ʻರೋಸ್‌ಜಿಯೊʼದೊಂದಿಗೆ ಸಮಾಲೋಚಿಸಿ ಕರಡು ಒಡಂಬಡಿಕೆಯನ್ನು ಅಂತಿಮಗೊಳಿಸಿತು.
***
(रिलीज़ आईडी: 1753246)
आगंतुक पटल : 177