ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪಿ.ಎಂ.ಜೆ.ಡಿ.ವೈ ಅತ್ಯಂತ ದುರ್ಗಮ ಮತ್ತು ಗಿರಿ ಪ್ರದೇಶಗಳನ್ನು ತಲುಪಿ ಸಮಾಜದ ಎಲ್ಲಾ ವರ್ಗಗಳಿಗೂ ಪ್ರಯೋಜನಕಾರಿಯಾಗಿದೆ: ತಜ್ಞರ ಅಭಿಮತ.


ಪಿ.ಎಂ.ಜೆ.ಡಿ.ವೈ. ಯ 7 ನೇ ವಾರ್ಷಿಕೋತ್ಸವ ಅಂಗವಾಗಿ ಪಿ.ಐ.ಬಿ. ಗುವಾಹಟಿಯಿಂದ ವೆಬಿನಾರ್ ಆಯೋಜನೆ.

Posted On: 02 SEP 2021 3:21PM by PIB Bengaluru

ಪ್ರಧಾನ ಮಂತ್ರಿ ಜನ ಧನ ಯೋಜನಾ (ಪಿ.ಎಂ.ಜೆ.ಡಿ.ವೈ.) ಮತ್ತು ಇತರ ಸಂಬಂಧಿತ ಯೋಜನೆಗಳು ಆರಂಭಗೊಂಡಾಗ 2014 ರಲ್ಲಿ ಭಾರತದಲ್ಲಿ ಹಣಕಾಸು ಸೇವೆಗಳ ಸೇರ್ಪಡೆಯ ನೈಜ ಪ್ರಯಾಣ ಆರಂಭವಾಯಿತು ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಗುವಾಹಟಿಯ ಡಿ.ಜಿ.ಎಂ. ಶ್ರೀ ಸುಶಾಂತ್ ಕುಮಾರ್ ಸಾಹೂ ಹೇಳಿದರು. ಪ್ರಧಾನ ಮಂತ್ರಿ ಜನ ಧನ ಯೋಜನಾ ಆರಂಭದ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಗುವಾಹಟಿಯ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಇಂದು ಆಯೋಜಿಸಿದ್ದ ವೆಬಿನಾರಿನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಣಕಾಸು ಸೇವೆಗಳ ಸೇರ್ಪಡೆಯ ಕುರಿತಂತೆ ಮಾತನಾಡಿದ ಶ್ರೀ ಸಾಹೂ ಹಣಕಾಸು ಸೇವೆಗಳ ಸೇರ್ಪಡೆಯು ಮುಖ್ಯವಾಗಿ ಸಮಾಜದ ದುರ್ಬಲ ವರ್ಗಗಳಿಗೆ  ಸಾಲ, ಹೂಡಿಕೆ, ವಿಮೆ ಮತ್ತು ಪಿಂಚಣಿಗೆ ಸಂಬಂಧಿಸಿದ ವಿವಿಧ ಹಣಕಾಸು ಉತ್ಪನ್ನಗಳ ಮೂಲಕ ವಿಶ್ವಾಸಾರ್ಹ ಹಣಕಾಸು ಪರಿಹಾರ ಒದಗಿಸುತ್ತದೆ ಎಂದರು. ಅಸ್ಸಾಂನಲ್ಲಿ ಪಿ.ಎಂ.ಜೆ.ಡಿ.ವೈ. ಅಡಿಯಲ್ಲಿ ದಾಖಲೆ ಸಂಖ್ಯೆಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದವರು ತಿಳಿಸಿದರು. 2021 ರ ಜೂನ್ ನಲ್ಲಿ ರಾಜ್ಯವು 50 ಲಕ್ಷ ಮನೆಗಳಲ್ಲಿ 1 ಕೋಟಿ 90 ಲಕ್ಷ ಪಿ.ಎಂ.ಜೆ.ಡಿ.ವೈ. ಖಾತೆಗಳನ್ನು ಹೊಂದಿದೆ ಎಂದವರು ತಿಳಿಸಿದರು. ಅವರು ಇತರ ಯೋಜನೆಗಳಾದ ಪಿ.ಎಂ. ಜೀವನ್ ಜ್ಯೋತಿ ಭೀಮಾ ಯೋಜನಾ ಮತ್ತು ಅಟಲ್ ಪಿಂಚಣಿ ಯೋಜನೆಗಳ ಯಶಸ್ಸಿನ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಪ್ರಸ್ತಾವಿಸಿದರು.

ವಿವಿಧ ಜಿಲ್ಲೆಗಳು ಮತ್ತು ಬ್ಲಾಕ್ ಮಟ್ಟದಲ್ಲಿರುವ ಸರಕಾರಿ ಕಾರ್ಯಕಾರಿಗಳು ಮತ್ತು ಎನ್.ಜಿ.ಒ.ಗಳಂತಹ ಭಾಗೀದಾರರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿಕೊಂಡ ಶ್ರೀ ಸಾಹೂ ಅವರು ಇದರಿಂದ ಹಣಕಾಸು ಸೇರ್ಪಡೆ ಕಾರ್ಯಕ್ರಮಗಳು ಅತ್ಯಂತ ಕೆಳವರ್ಗದಲ್ಲಿರುವ ಜನತೆಗೂ ತಲುಪಲು ಸಾಧ್ಯವಾಗುತ್ತದೆ ಮತ್ತು ಈ ಆಂದೋಲನ ಯಶಸ್ವಿಯಾಗುತ್ತದೆ ಎಂದರು. 

ವೆಬಿನಾರನ್ನು ಉದ್ದೇಶಿಸಿ ಮಾತನಾಡಿದ ಕೋಲ್ಕೊತ್ತಾ ಎಲ್.ಎಚ್.ಎಂ.ನ ಭಾರತೀಯ ಸ್ಟೇಟ್ ಬ್ಯಾಂಕಿನ ಡಿ.ಜಿ.ಎಂ. ಶ್ರೀಮತಿ ಕುಹು ಗಂಗುಲಿ ಅವರು ಸಿಕ್ಕಿಂನಲ್ಲಿ ಇಂದಿನವರೆಗೆ 86 ಸಾವಿರ ಜನ ಧನ ಖಾತೆಗಳನ್ನು ತೆರೆಯಲಾಗಿದೆ ಎಂದರು. ಇದೊಂದು ದೊಡ್ಡ ಸಾಧನೆ ಎಂದು ಬಣ್ಣಿಸಿದ ಅವರು ಜನ್ ಧನ್ ಯೋಜನಾದ ಪ್ರಯೋಜನಗಳು ಅತ್ಯಂತ ದುರ್ಗಮ ಮತ್ತು ಗಿರಿ ಪ್ರದೇಶಗಳಿಗೂ ತಲುಪಿ ಎಲ್ಲಾ ವರ್ಗದ ಜನತೆಗೆ ಲಾಭವಾಗುತ್ತಿದೆ ಎಂದರು.

ಸಿಕ್ಕಿಂ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಸ್. ಮಹಾಪಾತ್ರ ಅವರು ಹಣಕಾಸು ಸೇರ್ಪಡೆ ಮತ್ತು ಪಿ.ಎಂ.ಜೆ.ಡಿ.ವೈ. ಹಿನ್ನೆಲೆಯಲ್ಲಿ ದೇಶದಲ್ಲಿ ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಏಳು ವರ್ಷಗಳ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತವು ಹಲವು ಪರಿವರ್ತನೆಗಳನ್ನು ನೋಡಿದೆ ಮತ್ತು ಹಣಕಾಸು ಸೇರ್ಪಡೆಯ ಪರಿಸರ ವ್ಯವಸ್ಥೆ ಬಹಳ ಬಲಿಷ್ಟವಾಗಿದೆ ಮತ್ತು ಈಗ ಅದು ಬಡವರಲ್ಲಿ ಬಡವರಿಗೆ ಹಣಕಾಸು ಸೇವೆಗಳನ್ನು ಒದಗಿಸಲು ಸಮರ್ಥವಾಗಿದೆ ಎಂದವರು ಹೇಳಿದರು. ಕೋವಿಡ್ -19 ಸಂದರ್ಭದಲ್ಲಿ ಆತ್ಮ ನಿರ್ಭರ ಪ್ಯಾಕೇಜ್ ನಿಂದಾಗಿ ಜನರು ಜನ ಧನ ವನ್ನು ಎಲ್ಲಾ ಕಲ್ಯಾಣ ಯೋಜನೆಗಳಿಗೆ ವಾಹಿನಿ ಎಂಬುದಾಗಿ ಪರಿಗಣಿಸುವಂತಾಯಿತು ಎಂದೂ ಶ್ರೀ ಮಹಾಪಾತ್ರ ಹೇಳಿದರು.

ದೈನಿಕ ಪೂರ್ವೋದಯದ ಸಂಪಾದಕ ಶ್ರೀ ರವಿ ಶಂಕರ ರವಿ ಅವರು ಮಾತನಾಡಿ ನಮ್ಮ ದೇಶದಲ್ಲಿ ಪಿ.ಎಂ.ಜೆ.ಡಿ.ವೈ. ಯಿಂದಾಗಿ ಜನಸಂಖ್ಯೆಯ ಕೆಳಸ್ಥರದವರಿಗೆ ಬ್ಯಾಂಕ್ ಖಾತೆ ತೆರೆಯುವುದು ಈಗ ಕಷ್ಟದ ಕೆಲಸವಾಗಿ ಉಳಿದಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಯೋಜನೆ ಅಡಿಯಲ್ಲಿ ಸರಕಾರ ಬ್ಯಾಂಕುಗಳಲ್ಲಿ ಖಾತೆ ತೆರೆಯುವಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವವರಿಗೆ ಬ್ಯಾಂಕ್ ಸವಲತ್ತುಗಳ ಲಭ್ಯತೆಯ ಅವಕಾಶವನ್ನು ಒದಗಿಸಿದೆ ಎಂದರು.

ಪಿ.ಐ.ಬಿ.ಯ ಮಾಧ್ಯಮ ಮತ್ತು ಸಂವಹನ ಅಧಿಕಾರಿ  ಶ್ರೀ ಗೋಪ ಜಿತ್ ದಾಸ್ ಅವರು ಸ್ವಾಗತಿಸಿದರು. ಮತ್ತು ವೆಬಿನಾರನ್ನು ಪಿ.ಐ.ಬಿ.ಗುವಾಹಟಿಯ ಮಾಧ್ಯಮ ಮತ್ತು ಸಂವಹನ ಅಧಿಕಾರಿ ಶ್ರೀಮತಿ ಸುಚರಿತ ಸಾಹೂ ನಿರ್ವಹಿಸಿದರು. ಈಶಾನ್ಯ ವಲಯದಾದ್ಯಂತದಿಂದ ಪ್ರತಿನಿಧಿಗಳು, ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಕ್ಷೇತ್ರ ಅಧಿಕಾರಿಗಳು ಮತ್ತು ಪ್ರಾದೇಶಿಕ ವಿಸ್ತರಣಾ ಬ್ಯೂರೋಗಳ ಅಧಿಕಾರಿಗಳು ಇಂದಿನ ವೆಬಿನಾರಿನಲ್ಲಿ ಪಾಲ್ಗೊಂಡಿದ್ದರು.

***



(Release ID: 1751513) Visitor Counter : 138