ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಇ-ಶ್ರಮ ಪೋರ್ಟಲ್‌ ಮೂಲಕ ರಾಷ್ಟ್ರ ಅಸಂಘಟಿತ ಕಾರ್ಮಿಕರ ನೋಂದಣಿ ಆರಂಭ


ರಾಷ್ಟ್ರದಾದ್ಯಂತ ಇರುವ ಅಸಂಘಟಿತ ಕಾರ್ಮಿಕರ ಮಾಹಿತಿಯ ಸಮಗ್ರ ಸಂಗ್ರಹಕ್ಕೆ ಈ ಪೋರ್ಟಲ್‌ ಸಹಾಯಕವಾಗಲಿದೆ.

ಪೋರ್ಟಲ್‌ ಮೂಲಕ, ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಕಲ್ಯಾಣ ಯೋಜನೆಗಳು ತಲುಪುತ್ತವೆ: ಶ್ರೀ ಭುಪೆಂದರ್‌ ಯಾದವ್‌

ಭಾರತದಲ್ಲಿ ಇದು ಪರ್ವಕಾಲ, 38 ಕೋಟಿ ಕಾರ್ಮಿಕರು ಒಂದೇ ಪೋರ್ಟಲ್‌ ಅಡಿ ತಮ್ಮ ಮಾಹಿತಿಯನ್ನು ನೋಂದಾಯಿಸಲಿದ್ದಾರೆ

ನೋಂದಣಿ ಸಂಪೂರ್ಣವಾಗಿ ಉಚಿತವಾಗಿರಲಿದೆ. ಕಾರ್ಮಿಕರು ಯಾರಿಗೂ ಹಣ ನೀಡಬೇಕಾಗಿಲ್ಲ

Posted On: 26 AUG 2021 6:13PM by PIB Bengaluru

ಕಾರ್ಮಿಕಾ ಹಾಗೂ ಉದ್ಯೋಗ ಸಚಿವಾಲಯದ ಮಂತ್ರಿ ಶ್ರೀ ಭುಪೇಂದ್ರ  ಯಾದವ್‌ ಅವರು ಇ–ಶ್ರಮ ಪೋರ್ಟಲ್‌ ಅನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಬಳಿಕ ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಹಸ್ತಾಂತರಿಸಿದರು.  ಕಾರ್ಮಿಕರು ಹಾಗೂ ಉದ್ಯೋಗ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ರಾಜ್ಯ ಸಚಿವರಾದ ಶ್ರೀ ರಾಮೇಶ್ವರ ತೇಲಿ ಅವರು ಉಪಸ್ಥಿತರಿದ್ದರು.

ಭಾರತದ ಇತಿಹಾಸದಲ್ಲಿಯೇ ಮೊದಲ ಸಲ 38ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆಯನ್ನು ರಚಿಸಲಾಗಿದೆ. ಇದು ಕೇವಲ ಕಾರ್ಮಿಕರನ್ನು ನೊಂದಾಯಿಸುವುದಷ್ಟೇ ಅಲ್ಲ, ಸಾಮಾಜಿಕ ಸುರಕ್ಷೆ ನೀಡುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನಕಲ್ಯಾಣ ಯೋಜನೆಗಳು ಅವರವರೆಗೂ ತಲುಪುವಂತೆ ಸಹಾಯ ಮಾಡುತ್ತವೆ. ದೇಶ ಕಟ್ಟುವ ಈ ಅಸಂಘಟಿತ ಕಾರ್ಮಿಕರ ವಲಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮಹತ್ವ ನೀಡುತ್ತ, ಕಾರ್ಮಿಕ ಸಚಿವರು ಈ ಪೋರ್ಟಲ್‌ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇ-ಶ್ರಮ ಪೋರ್ಟಲ್‌ ಅಡಿಯಲ್ಲಿ ನೋಂದಾಯಿಸಿರುವ ಪ್ರತಿ ಅಸಂಘಟಿತ ಕಾರ್ಮಿಕ ವಲಯದ ಶ್ರಮಜೀವಿಗೆ ₹ 2ಲಕ್ಷ ಮೊತ್ತದ ಆಕಸ್ಮಿಕ ವಿಮೆ ನೀಡಲು ಅನುಮೋದಿಸಿರುವುದಕ್ಕೆ ಭುಪೇಂದ್ರ ಯಾದವ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಇ-ಶ್ರಮ ಪೋರ್ಟಲ್‌ ಅಡಿಯಲ್ಲಿ ನೊಂದಾಯಿಸಿದ ಶ್ರಮಿಕ ವರ್ಗದಲ್ಲಿ ಯಾರಾದರೂ ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಮೃತರಾದರೆ ಮೃತರ ಅವಲಂಬಿತರಿಗೆ 2 ಲಕ್ಷ ರೂಪಾಯಿ ವಿಮೆಯ ಮೊತ್ತ ಪರಿಹಾರವಾಗಿ ದೊರೆಯುತ್ತದೆ. ಶಾಶ್ವತ ಅಂಗವೈಕಲ್ಯ ಹೊಂದಿದರೂ ಈ ಪರಿಹಾರಕ್ಕೆ ಕಾರ್ಮಿಕರು ಅರ್ಹರಾಗಿರುತ್ತಾರೆ. ಅಲ್ಪಪ್ರಮಾಣದ ಅಂಗವೈಕಲ್ಯಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ಈ ವಿಮೆ ಅಡಿಯಲ್ಲಿ ಪ್ರತಿಕಾರ್ಮಿಕನಿಗೂ ದೊರೆಯುತ್ತದೆ. ಈ ಯೋಜನೆಗೆ ಹಾಗೂ ಈ ಪರಿಹಾರ ನೀಡುವಲ್ಲಿ ಸರ್ಕಾರ ಬದ್ಧವಾಗಿರುತ್ತದೆ. ಕಾರ್ಮಿಕರ ಹಿತಾಸಕ್ತಿ ಕಾಯಲು ಮೊದಲ ಆದ್ಯತೆ ನೀಡಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾರ್ಮಿಕ ಹಾಗೂ ಉದ್ಯೋಗ ರಾಜ್ಯ ಸಚಿವ ಶ್ರೀ ರಾಮೇಶ್ವರ ತೇಲಿ ಅವರು ಮಾತನಾಡಿ, ಈ ಪೋರ್ಟಲ್‌ನ ವಿಶೇಷಗಳನ್ನು ಬಣ್ಣಿಸಿದರು. ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡಾಟಾ ಬೇಸ್‌ ಈ ಇಶ್ರಮ ಪೋರ್ಟಲ್‌ ಅನ್ನು ವಿನ್ಯಾಸಗೊಳಿಸಿದೆ. ಭಾರತದ ಪ್ರಜೆಗಳೆಲ್ಲರೂ ಈ ನೊಂದಣಿ ಅಭಿಯಾನದಲ್ಲಿ ಭಾಗವಹಿಸಬೇಕು. ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಸಹಾಯ ಮಾಡಬೇಕು. ಪ್ರತಿ ಕಾರ್ಮಿಕನೂ ಈ ವೆಬ್‌ಪೋರ್ಟಲ್‌ ಅಡಿಯಲ್ಲಿ ಹೆಸರು ದಾಖಲಿಸಿಕೊಂಡು, ಸರ್ಕಾರದ ಧ್ಯೇಯವಾಕ್ಯ ಆಗಿರುವ ‘ಯಾವ ಕೆಲಸಗಾರನೂ ಹೊರ ಉಳಿಯಲಾರ, ಎಲ್ಲರ ಮನೆಬಾಗಿಲಿಗೂ ಯೋಜನೆಗಳು ಅಪಾರ’ ಎಂಬ ಧ್ಯೇಯ ವಾಕ್ಯ ಸಾಕಾರಗೊಳಿಸುವಲ್ಲಿ  ಸಹಭಾಗಿಗಳಾಗಿ ಎಂದು ಕೋರಿಕೊಂಡರು.

ಈ ಸಂದರ್ಭದಲ್ಲಿ ಇಬ್ಬರೂ ಸಚಿವದ್ವಯರು ಅಜ್ಮೇರ್‌, ದಿಲ್ಬರ್ಗ, ಚೆನ್ನೈ ಹಾಗೂ ವಾರಾಣಸಿಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸಿ, ಸಚಿವರೊಂದಿಗೆ ತಮ್ಮ ಅನುಭವ ಹಾಗೂ ನಿರೀಕ್ಷೆಗಳನ್ನು ಹಂಚಿಕೊಂಡರು. ಶ್ರೀ ಯಾದವ್‌ ಹಾಗೂ ಶ್ರೀ ತೆಲಿ ಅವರು ವಿಮಾ ಯೋಜನೆ ಹಾಗೂ ಅದರ ಲಾಭಗಳನ್ನು, ಇ–ಶ್ರಮ ಪೋರ್ಟಲ್‌ನಲ್ಲಿ ಹೆಸರು ದಾಖಲಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.

ಈ ಪೋರ್ಟಲ್‌ ಭಾರತೀಯ ಇತಿಹಾಸದಲ್ಲಿ ಹೊಸದೊಂದು ಮನ್ವಂತರವನ್ನೇ ಸೃಷ್ಟಿಸಲಿದೆ. ಬದಲಾವಣೆಯ ಮೈಲಿಗಲ್ಲಾಗಲಿದೆ ಎಂದು ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಅವರು ಅಭಿಪ್ರಾಯ ಪಟ್ಟರು. 38 ಕೋಟಿಗಿಂತಲೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರು ದೇಶದಲ್ಲಿದ್ದಾರೆ. ಇವರೆಲ್ಲರನ್ನೂ ಇ–ಶ್ರಮ ಪೋರ್ಟಲ್‌ ಅಡಿಯಲ್ಲಿ ಎಲ್ಲರ ಮಾಹಿತಿಯನ್ನೂ ದಾಖಲಿಸಲಾಗುವುದು. ಈ ದಾಖಲೀಕರಣ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಕಾರ್ಮಿಕರು ಯಾವ ಶುಲ್ಕವನ್ನೂ ನೀಡಬೇಕಾಗಿಲ್ಲ. ಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋಗಿ ತಮ್ಮ ಹೆಸರನ್ನು ದಾಖಲಿಸಿಕೊಳ್ಳಬೇಕು ಎಂದು ವಿವರಿಸಿದರು. ದೇಶದ ಯಾವುದೇ ಭಾಗದಲ್ಲಿರುವ ಯಾವುದೇ ಕೇಂದ್ರದಲ್ಲಿಯೂ ದಾಖಲಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.

ಪ್ರತಿ ದಾಖಲೀಕರಣಕ್ಕೆ ಇ- ಶ್ರಮ ಪೋರ್ಟಲ್‌ನಲ್ಲಿ ದಾಖಲಿಸಲಾದ, ನೊಂದಾಯಿತ ಪ್ರತಿ ವ್ಯಕ್ತಿಯಗೂ ಒಂದು ವಿಶೇಷ ಖಾತೆ ಸಂಖ್ಯೆ ನೀಡಲಾಗುವುದು. (ಯುನಿವರ್ಸಲ್‌ ಅಕೌಂಟ್‌ ನಂಬರ್‌, ಯು ಎಎನ್‌) ಇದರ ಮೂಲಕ ದೇಶದ ಯಾವುದೇ ಮೂಲೆಯಿಂದಲಾದರೂ, ಯಾವ ಸಮಯದಲ್ಲಿಯಾದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಚಯಿಸುವ ಜನಕಲ್ಯಾಣ ಯೋಜನೆಯ ಲಾಭಗಳನ್ನು ಪಡೆಯಲು ಅಸಂಘಟಿತ ವಲಯದ ಕಾರ್ಮಿಕರು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.

 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು, ಅಪರ ಪ್ರಧಾನ ಕಾರ್ಯದರ್ಶಿಗಳು (ಕಾರ್ಮಿಕ),  ಕಾರ್ಮಿಕ ಇಲಾಖೆಯ ಆಯುಕ್ತರು ಎಲ್ಲರೂ ವರ್ಚುವಲ್‌ ವೇದಿಕೆಯ ಮೂಲಕ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.     EPFO and ESIC ಪ್ರಾದೇಶಿಕ ಕಚೇರಿಯ ಎಲ್ಲ ಸಿಬ್ಬಂದಿಯೂ ಈ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಹಾಜರಿದ್ದರು. ಇದಷ್ಟೇ ಅಲ್ಲದೆ, ನೊಂದಣಿ ಕಾರ್ಯಕೈಗೊಳ್ಳಬೇಕಿರುವ ಸುಮಾರು ನಾಲ್ಕು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವು.

ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಪೋರ್ಟಲ್‌ ಆರಂಭಿಸುವ ಪೂರ್ವದ ಸಭೆಗಳಲ್ಲಿಯೇ ಪೋರ್ಟಲ್‌ನ ಕಾರ್ಯವೈಖರಿ, ನೋಂದಣಿ ಪ್ರಕ್ರಿಯೆ ಹೇಗೆ ಎಂಬುದನ್ನು ಪ್ರಸ್ತುತಪಡಿಸಲಾಗಿತ್ತು. ಎಲ್ಲ ರಾಜ್ಯ ಸರ್ಕಾರಗಳಿಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಈ ಮುನ್ನವೇ ಸಭೆಯಲ್ಲಿ ಪ್ರತಿಪ್ರಕ್ರಿಯೆಯನ್ನೂ ವಿವರಿಸಲಾಗಿದೆ. ಈ ನಿಟ್ಟಿನಲ್ಲಿ ವಿಸ್ತೃತವಾದ ಮಾರ್ಗಸೂಚಿಯನ್ನು  ಎಲ್ಲ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಈ ಸಮಾರಂಭವನ್ನು ಸರಳವಾಗಿ ವರ್ಚುವಲ್‌ ವೇದಿಕೆಯ ಮೂಲಕವೇ ಹಮ್ಮಿಕೊಳ್ಳಲು ಯೋಜಿಸಲಾಗಿತ್ತು. ಅಸಂಘಟಿತ ವಲಯದ ಕಾರ್ಮಿಕರ ನೊಂದಾವಣಿಗೆ ವಿಳಂಬವಾಗದಂತೆ ಇದೇ ಸಮಾರಂಭದಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇ–ಶ್ರಮ ಪೋರ್ಟಲ್‌ ಹಸ್ತಾಂತರಗೊಳಿಸಲಾಯಿತು.

ಭಾರತೀಯ ಮಜ್ದೂರ್‌ ಸಂಘ, ಭಾರತೀಯ ರಾಷ್ಟ್ರೀಯ ಟ್ರೇಡ್‌ ಯುನಿಯನ್‌ ಕಾಂಗ್ರೆಸ್‌, ಅಖಿಲ ಭಾರತೀಯ ಟ್ರೇಡ್‌ ಯುನಿಯನ್‌ ಕಾಂಗ್ರೆಸ್‌, ಹಿಂದು ಮಹಾಸಭಾ, ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ, ಟಿಯುಸಿಸಿ, ಸೇವಾ, (ಸೆಲ್ಫ್‌ ಎಂಪ್ಲಾಯ್ಡ್‌ ವುಮೆನ್‌ ಅಸೋಸಿಯೇಷನ್), ಯುಟಿಯುಸಿ, ನ್ಯಾಶನಲ್ ಫ್ರಂಟ್ ಆಫ್‌ ಟ್ರೇಡ್‌ ಯುನಿಯನ್‌ ಮುಂತಾದ ಅಸಂಘಟಿತ ವಲಯದ ಕಾರ್ಮಿಕರ ಸಂಘಟನೆಯ ಮುಖಂಡರೊಂದಿಗೆ ಹಾಗೂ ನಾಯಕರೊಂದಿಗೆ ಆ.24 2021ರಂದು ಕೇಂದ್ರದ ಕಾರ್ಮಿಕ ಸಚಿವರು ಸಮಾಲೋಚಿಸಿದ್ದರು.

ಪ್ರತಿ ಸಂಘಟನೆಯ ಮುಖಂಡರೂ ಈ ಪೋರ್ಟಲ್‌ ವ್ಯವಸ್ಥೆಯು ಭಾರತೀಯ ಕಾರ್ಮಿಕರ ಇತಿಹಾಸದಲ್ಲಿ ಮನ್ವಂತರ ತರಲಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು. ದೇಶ ಕಟ್ಟುವ ಕಾರ್ಮಿಕರ ಅಭ್ಯುದಯಕ್ಕಾಗಿ ತಮ್ಮ ಸಂಘಟನೆಯ ಪ್ರತಿ ಸದಸ್ಯರೂ ಈ ಯೋಜನೆಗೆ ಒಳಪಡುವರು. ಈ ಅಭಿಯಾನವು ಯಶಸ್ವಿಯಾಗಲು ಸಂಪೂರ್ಣ ಬೆಂಬಲ ತೋರುವುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದರು. ಇ–ಶ್ರಮ ಪೋರ್ಟಲ್‌ ಅಡಿಯಲ್ಲಿ ಪ್ರತಿ ಕಾರ್ಮಿಕನ ಹೆಸರೂ ದಾಖಲಾಗುವಂತೆ ಕಾಳಜಿವಹಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

***



(Release ID: 1749410) Visitor Counter : 1591