ಉಪರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್-19 ಲಸಿಕಾ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡಲು ಲಸಿಕೆಯ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವೈದ್ಯಕೀಯ ಸಮುದಾಯಕ್ಕೆ ಉಪರಾಷ್ಟ್ರಪತಿ ಕರೆ


ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿನ ಜನರಿಗೆ ಲಸಿಕೆ ಖಾತ್ರಿಪಡಿಸುವಂತೆ ಕರೆ
ಕೋವಿಡ್-19 ವಿರುದ್ಧ ಲಸಿಕೆ ಅತ್ಯಂತ ಪರಿಣಾಮಕಾರಿ ಕವಚ: ಉಪರಾಷ್ಟ್ರಪತಿ

ನಿಖರ ಮಾಹಿತಿ ಮೂಲಕ ತಪ್ಪು ನಂಬಿಕೆಗಳನ್ನು ಹೋಗಲಾಡಲು ಮಾಧ್ಯಮಗಳಿಗೆ ಉಪರಾಷ್ಟ್ರಪತಿ ಸಲಹೆ

ಜನರ ದೂರುವಿಕೆ ಬಗ್ಗೆ ಎಚ್ಚರಿಕೆ ನೀಡಿದ ಉಪರಾಷ್ಟ್ರಪತಿ: ನಾವಿನ್ನು ಸಂಪೂರ್ಣ ಸೋಂಕಿನಿಂದ ಹೊರಬಂದಿಲ್ಲವೆಂದು ಹೇಳಿಕೆ

ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಕೈಜೋಡಿಸುವಂತೆ ಖಾಸಗಿ ವಲಯಕ್ಕೆ ಉಪರಾಷ್ಟ್ರಪತಿ ಕರೆ

‘ಭಾರತ ಲಸಿಕಾ ಅಭಿಯಾನಕ್ಕೆ’ ಉಪರಾಷ್ಟ್ರಪತಿ ಚಾಲನೆ

Posted On: 24 AUG 2021 1:39PM by PIB Bengaluru

ಕೋವಿಡ್-19 ವಿರುದ್ಧ ಲಸಿಕೆ ಪಡೆಯುವ ಪ್ರಾಮುಖ್ಯ ಮತ್ತು ಅದರ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುವಂತೆ ವೈದ್ಯಕೀಯ ಸಮುದಾಯಕ್ಕೆ ವಿಶೇಷವಾಗಿ ಭಾರತೀಯ ವೈದ್ಯಕೀಯ ಒಕ್ಕೂಟಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಇಂದು ಕರೆ ನೀಡಿದರು.

ಕರ್ನಾಟಕ ಸರ್ಕಾರದ ಸುಸ್ಥಿರ ಗುರಿಗಳ ಸಮನ್ವಯ ಕೇಂದ್ರದ ಉಪಕ್ರಮವಾಗಿ ಗಿವ್ ಇಂಡಿಯಾ ಫೌಂಡೇಷನ್ ಸಹಭಾಗಿತ್ವದಲ್ಲಿ ಕೈಗೊಂಡಿರುವ ‘ಭಾರತ ಲಸಿಕಾ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಮಾತನಾಡಿದ ಉಪರಾಷ್ಟ್ರಪತಿ, ಲಸಿಕೆ ಪಡೆಯುವುದಕ್ಕೆ ಕೆಲವು ವರ್ಗದವರಲ್ಲಿ ಹಿಂಜರಿಕೆ ಇರುವಂತೆ ಕಂಡುಬರುತ್ತಿದೆ ಎಂದರು. ಲಸಿಕೆ ಬಗ್ಗೆ ಇನ್ನೂ ಅನುಮಾನಗಳನ್ನು ಹೊಂದಿರುವವರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರಿಗೆ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ ಎಂದು ಹೇಳಿದರು.

ಕೋವಿಡ್ ಲಸಿಕಾ ಅಭಿಯಾನವನ್ನು ‘ಜನಾಂದೋಲನ’ವನ್ನಾಗಿ ಮಾಡುವಂತೆ ಕರೆ ನೀಡಿದ ಶ್ರೀ ವೆಂಕಯ್ಯನಾಯ್ಡು ಅವರು, ಎಲ್ಲಾ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡಿರುವುದನ್ನು ಖಾತ್ರಿಪಡಿಸಬೇಕು ಎಂದು ಅವರು ಹೇಳಿದರು. ಲಸಿಕೆ ಹಿಂಜರಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಅವರು ಮಾಧ್ಯಮಗಳಿಗೆ ಕರೆ ನೀಡಿದರು. “ಖಚಿತ ಮಾಹಿತಿ ನೀಡುವ ಮೂಲಕ ಸುಳ್ಳು ನಂಬಿಕೆಗಳನ್ನು ದೂರ ಮಾಡಬೇಕಿದೆ” ಎಂದು ಅವರು ಪ್ರತಿಪಾದಿಸಿದರು.

ಕೋವಿಡ್-19 ವಿರುದ್ಧ ಲಸಿಕೀಕರಣ ಅತ್ಯಂತ ಪ್ರಮುಖ ರಕ್ಷಾ ಕವಚವಾಗಿದೆ ಎಂದು ಹೇಳಿದ ಉಪರಾಷ್ಟ್ರಪತಿ ಅವರು, ಲಸಿಕೆ ಪಡೆಯುವುದು ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಲು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಇನ್ನು ಸರಳವಾಗಿ ಹೇಳುವುದಾದರೆ “ಒಂದು ವೇಳೆ ಸೋಂಕು ತಗುಲಿದರೂ ಆ ರೋಗ ಸೌಮ್ಯವಾಗಿರುತ್ತದೆ” ಎಂದು ಹೇಳಿದರು.

ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ. 97.6ಕ್ಕೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ ಅವರು, “ನಾವಿನ್ನೂ ಸಾಂಕ್ರಾಮಿಕದಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಪ್ರತಿಯೊಬ್ಬರೂ ಎಲ್ಲ ಕೋವಿಡ್ ಸಂಬಂಧಿ ಶಿಷ್ಟಾಚಾರ ಮತ್ತು ಮುನ್ನೆಚ್ಚರಿಕೆ ಕ್ರಮ ಪಾಲಿಸುವುದನ್ನು ಮುಂದುವರಿಸುವ ಅಗತ್ಯವಿದೆ” ಎಂದು ಎಚ್ಚರಿಕೆ ನೀಡಿದರು.

ಜನರ ಸಹಕಾರವಿಲ್ಲದೆ, ಕೊರೊನಾ ಸೋಂಕಿನ ವಿರುದ್ಧ ಹೋರಾಟ ಗೆಲ್ಲಲು ಸಾಧ್ಯವಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಶ್ರೀ ವೆಂಕಯ್ಯನಾಯ್ಡು ಅವರು, ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಪದೇ ಪದೇ ಕೈತೊಳೆಯಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಮತ್ತು ಶಿಸ್ತುಬದ್ಧ ಹಾಗೂ ಆರೋಗ್ಯಕರ ಜೀವನಶೈಲಿಯಲ್ಲಿ ರೂಢಿಸಿಕೊಳ್ಳಬೇಕು ಎಂದರು. ಯುವಜನರು ಜಂಕ್ ಫುಡ್ ತಿನ್ನುವುದನ್ನು ಬಿಡಬೇಕು ಎಂದ ಅವರು, ಸಾಂಪ್ರದಾಯಿಕ ಬೇಯಿಸಿದ ಭಾರತೀಯ ಆಹಾರವನ್ನು ತಿನ್ನುವುದು ನಮ್ಮ ದೇಹ ಮತ್ತು ಹವಾಮಾನ ಸ್ಥಿತಿಗತಿಗೆ ಹೆಚ್ಚು ಹೊಂದಿಕೆಯಾಗುತ್ತದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ನಮ್ಮ ಆರೋಗ್ಯ ಮೂಲಸೌಕರ್ಯದಲ್ಲಿನ ನಗರ ಕೇಂದ್ರಗಳಿಂದ ಗ್ರಾಮೀಣ ಭಾಗದವರೆಗೆ ಅಂತರವನ್ನು ನಿವಾರಿಸುವುದಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ಉಪರಾಷ್ಟ್ರಪತಿ ಹೇಳಿದರು. ಈ ನಿಟ್ಟಿನಲ್ಲಿ ಹಿಂದುಳಿದ ಮತ್ತು ದೂರದ ಗುಡ್ಡಗಾಡು ಪ್ರದೇಶಗಳಿಗೆ ವಿಶೇಷ ಗಮನಹರಿಸುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರದ ಜತೆ ಖಾಸಗಿ ವಲಯವೂ ಸಹ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಆಧುನಿಕ ಮತ್ತು ಉತ್ತಮ ವೈದ್ಯಕೀಯ ಸೌಕರ್ಯಗಳನ್ನು ಹೊಂದಿದ ಮುಂದುವರಿದ ರಾಷ್ಟ್ರಗಳೂ ಸಹ ಕೋವಿಡ್-19 ಸೃಷ್ಟಿಸಿದ ಬಿಕ್ಕಟ್ಟಿನ ತೀವ್ರತೆಯಿಂದ ಹೊರಬರಲು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲ ಎಂದ ಉಪರಾಷ್ಟ್ರಪತಿ ಅವರು, ಭಾರತ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರಂತರ ಸಂಘಟಿತ ಪ್ರಯತ್ನಗಳಿಂದಾಗಿ ದೇಶದಲ್ಲಿ ಕೋವಿಡ್-19 ಅನ್ನು ನ್ಯಾಯಯುತ ತೃಪ್ತಿಕರ ರೀತಿಯಲ್ಲಿ ನಿಯಂತ್ರಿಸಲಾಗಿದೆ ಎಂದು ಹೇಳಿದರು.

ಕೋವಿಡ್-19 ವಿರುದ್ಧ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕಿಸಲು ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಒಗ್ಗೂಡಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ದೇಶಾದ್ಯಂತ ಈವರೆಗೆ 58 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಸರ್ಕಾರದ ಪ್ರಯತ್ನಗಳಿಗೆ ಪೂರಕ ನೆರವು ನೀಡುತ್ತಿರುವ ಗಿವ್ ಇಂಡಿಯಾ ಫೌಂಡೇಷನ್ ಕಾರ್ಯವನ್ನು ಅವರು ಶ್ಲಾಘಿಸಿದರು.

ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಕೆ. ಸುಧಾಕರ್ ಮತ್ತು ಶ್ರೀ ಮುನಿರತ್ನ, ಸಂಸದ ಶ್ರೀ ಪಿ.ಸಿ. ಮೋಹನ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜಿನೀಶ್ ಮತ್ತು ಗೀವ್ ಇಂಡಿಯಾ ಫೌಂಡೇಷನ್ ಸಂಸ್ಥಾಪಕ ಶ್ರೀ ಅತುಲ್ ಸತಿಜಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾಷಣದ ಪೂರ್ಣ ಪಠ್ಯ ಈ ಕೆಳಗಿನಂತಿದೆ

“ಕರ್ನಾಟಕ ಸರ್ಕಾರದ ಯೋಜನಾ ಇಲಾಖೆ, ಗಿವ್ ಇಂಡಿಯಾ ಫೌಂಡೇಷನ್ ಸಹಭಾಗಿತ್ವದಲ್ಲಿ ಕೈಗೊಂಡಿರುವ ಉಪಕ್ರಮ ‘ಭಾರತ ಲಸಿಕಾ ಕಾರ್ಯಕ್ರಮ’ಕ್ಕೆ ಚಾಲನೆ ನೀಡುತ್ತಿರುವುದು ನನಗೆ ಹರ್ಷತಂದಿದೆ. ಗಿವ್ ಇಂಡಿಯಾ ಸಂಸ್ಥೆ ದೇಶದಲ್ಲಿ ಬಡತನ ನಿವಾರಣೆ ಉದ್ದೇಶದಿಂದ ನಾನಾ ಕಾರಣಗಳಿಗಾಗಿ ಸಂಘ ಸಂಸ್ಥೆಗಳಿಂದ ನಿಧಿ ಸಂಗ್ರಹ ಹಾಗೂ ದೇಣಿಗೆ ನೀಡುವ ಕಾರ್ಯವನ್ನು ಮಾಡುತ್ತಿದೆ.

ನೀವೆಲ್ಲರೂ ತಿಳಿದಿರುವಂತೆ ಭಾರತ ಸರ್ಕಾರದ ಸಂಘಟಿತ ಕ್ರಮ, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಹಲವು ಪಾಲುದಾರರು ವಿಶೇಷವಾಗಿ ಆರೋಗ್ಯ ರಕ್ಷಣಾ ಸಿಬ್ಬಂದಿ ಮತ್ತು ವಿಜ್ಞಾನಿಗಳ ನಿರಂತರ ಪ್ರಯತ್ನದಿಂದಾಗಿ ಕೋವಿಡ್-19 ಅನ್ನು ನ್ಯಾಯಯುತ, ತೃಪ್ತಿಕರ ರೀತಿಯಲ್ಲಿ ದೇಶದಲ್ಲಿ ನಿಯಂತ್ರಿಸಲಾಗಿದೆ. ದುರದೃಷ್ಟವೆಂದರೆ ಸಾಂಕ್ರಾಮಿಕ ಈವರೆಗೆ 4.3 ಲಕ್ಷಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಆದರೆ ಬಿಕ್ಕಟ್ಟಿನ ಸಮಯದಲ್ಲಿ ಅದರ ಮಿತಿಗಳಿಗೆ ವಿಸ್ತರಿಸಲಟ್ಟ ನಮ್ಮ ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

ಸೋಂಕು ಕಾಣಿಸಿಕೊಂಡ ನಂತರ ಸಾಂಕ್ರಾಮಿಕ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಆಧುನಿಕ ಮತ್ತು ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಅತ್ಯಂತ ಮುಂದುವರಿದಿರುವ ರಾಷ್ಟ್ರಗಳೂ ಕೂಡ ಬಿಕ್ಕಟ್ಟಿನ ತೀವ್ರತೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಿಲ್ಲ. ಅದು ಜಾಗತಿಕವಾಗಿ ಆರ್ಥಿಕತೆ, ಜೀವನ ಮತ್ತು ಜೀವನೋಪಾಯಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ. ಅಗತ್ಯ ಡೋಸ್ ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು, ಸೂಕ್ತ ಸುರಕ್ಷಿತ ದೈಹಿಕ ಅಂತರ ಕಾಯ್ದುಕೊಳ್ಳುವುದು, ಪದೇ ಪದೇ ಕೈತೊಳೆಯುವುದು ಮತ್ತು ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳುವುದನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ. ಹೆಚ್ಚಿನ ಸಂಕಲ್ಪದೊಂದಿಗೆ ನಾವು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮುನ್ನಡೆಯಬೇಕಿದೆ.

ನಿಜವಾದ ಟೀಂ ಇಂಡಿಯಾ ಸ್ಫೂರ್ತಿಯೊಂದಿಗೆ ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯಗಳು ಕೋವಿಡ್-19 ವಿರುದ್ಧ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕಿಸಲು ಸಾಮೂಹಿಕವಾಗಿ ಕಾರ್ಯೋನ್ಮುಖವಾಗಿವೆ. ದೇಶದಲ್ಲಿ ಈವರೆಗೆ 58 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಮತ್ತು 13 ಕೋಟಿ ಮಂದಿಗೆ ಸಂಪೂರ್ಣ ಅಂದರೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಲು ನನಗೆ ಸಂತಸವಾಗುತ್ತಿದೆ. ಗಿವ್ ಇಂಡಿಯಾದಂತಹ ಸಂಸ್ಥೆಗಳು ಸರ್ಕಾರದ ಪ್ರಯತ್ನಗಳಿಗೆ ಪೂರಕ ನೆರವು ನೀಡುತ್ತಿರುವುದು ಸಂತಸ ತಂದಿದೆ.

ಈವರೆಗೆ ಆಗಿರುವ ಲಸಿಕೆನೀಡಿಕೆಯ ಸಂಖ್ಯೆ ಗಮನಾರ್ಹವಾಗಿದೆ. ಆದರೆ ನಾವು ಲಸಿಕಾ ಕಾರ್ಯಕ್ರಮದ ವೇಗವನ್ನು ತೀವ್ರಗೊಳಿಸುವ ಅಗತ್ಯವಿದೆ. ಅದರ ಜಾಲವನ್ನು ವಿಸ್ತರಿಸಬೇಕು ಮತ್ತು ಅದು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಬೇಕಿದೆ. ಮಕ್ಕಳಿಗಾಗಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬುದನ್ನು ತಿಳಿದು ನನಗೆ ಸಂತಸವಾಗುತ್ತಿದೆ. ಹೆಚ್ಚಿನ ವಯಸ್ಕ ಯುವಜನತೆ ಎರಡು ಡೋಸ್ ಗಳ ಪೈಕಿ ಮೊದಲ ಡೋಸ್ ಪಡೆದಿರುವುದರಿಂದ ನಾವು ಇದೀಗ ಕೋವಿಡ್-19 ವಿರುದ್ಧ ಖಚಿತವಾಗಿ ಉತ್ತಮ ಸ್ಥಿತಿಯಲ್ಲಿದ್ದೇವೆ.

ನನ್ನ ಸಹೋದರಿ ಮತ್ತು ಸಹೋದರಿಯರೇ,

ಕೋವಿಡ್ 19 ವಿರುದ್ಧ ಲಸಿಕೆ ಪಡೆಯುವುದು ಅತ್ಯಂತ ಪರಿಣಾಮಕಾರಿ ರಕ್ಷಾ ಕವಚ ಎಂಬುದು ಈಗ ಸ್ಪಷ್ಟವಾಗಿದೆ. ಇದು ಸೋಂಕಿಗೆ ಒಳಗಾಗದಂತೆ ವ್ಯಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸದಿದ್ದರೂ ಸಹ ಲಸಿಕೆ ಹಾಕಿಸಿಕೊಳ್ಳುವುದು ಖಂಡಿತವಾಗಿ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯುತ್ತದೆ ಮತ್ತು ರೋಗದ ತೀವ್ರತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಸರಳವಾಗಿ ಹೇಳುವುದಾರೆ ಸೋಂಕಿಗೆ ಒಳಗಾಗಿದ್ದರೂ ಸಹ ರೋಗವು ಸೌಮ್ಯವಾಗಿರುತ್ತದೆ.

ಕೊರೊನಾ ಸಾಂಕ್ರಾಮಿಕವು ಪ್ರತಿಯೊಂದು ಕ್ಷೇತ್ರದಲ್ಲೂ ಅನಿರೀಕ್ಷಿತ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ನಾವು ಇನ್ನೂ ಸಂಪೂರ್ಣವಾಗಿ ಸೋಂಕಿನಿಂದ ಹೊರಬಂದಿಲ್ಲ, ನಮ್ಮಲ್ಲಿ ಪ್ರತಿಯೊಬ್ಬರೂ ಸಹ ಕೋವಿಡ್ ಸಂಬಂಧಿ ಶಿಷ್ಟಾಚಾರಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ಮುಂದುವರಿಸಬೇಕಿದೆ.

ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.97.6ಕ್ಕೆ ತಲುಪಿದೆ ಮತ್ತು ಕೆಲವು ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸೋಂಕುಗಳು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಒಂದು ದೊಡ್ಡ ಪರಿಹಾರವಾಗಿದೆ. ಆದರೆ ಸಂಪೂರ್ಣವಾಗಿ ಆತ್ಮ ತೃಪ್ತಿಗೆ ಅವಕಾಶವಿಲ್ಲ.

ನಾವು ನಮ್ಮ ಲಕ್ಷ್ಯವನ್ನು ಕಡಿಮೆ ಮಾಡುವಂತಿಲ್ಲ. ಅಲ್ಲದೆ, ಕೆಲವು ವರ್ಗದಲ್ಲಿ ಲಸಿಕೆ ಪಡೆಯುವ ಬಗ್ಗೆ ಸ್ವಲ್ಪ ಹಿಂಜರಿಕೆ ಇದ್ದಂತಿದೆ. ಇನ್ನೂ ಅನುಮಾನಗಳನ್ನು ಹೊಂದಿರುವವರಲ್ಲಿ ಲಸಿಕೆ ಪಡೆಯುವುದರಿಂದ ಒದಗುವ ಸುರಕ್ಷತೆ ಮತ್ತು ಪ್ರಾಮುಖ್ಯದ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು ಸಂಪೂರ್ಣ ಅವಶ್ಯಕವಾಗಿದೆ. ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾರ್ವತ್ರಿಕ ಲಸಿಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ನಿಟ್ಟಿನಲ್ಲಿ ವಿಶೇಷ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು ನಾವು ವೈದ್ಯಕೀಯ ಸಮುದಾಯವನ್ನು ವಿಶೇಷವಾಗಿ ಭಾರತೀಯ ವೈದ್ಯಕೀಯ ಒಕ್ಕೂಟಕ್ಕೆ ಕರೆ ನೀಡುತ್ತೇನೆ. ಲಸಿಕೆ ಹಿಂಜರಿಕೆಯನ್ನು ಹೋಗಲಾಡಿಸಲು ಮತ್ತು ಲಸಿಕೆ ಪಡೆಯುವುದರಿಂದ ದೊರಕುವ ಸುರಕ್ಷತೆಯ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಈ ಮೊದಲೇ ಹೇಳಿದ್ದಂತೆ, ಸಾಂಕ್ರಾಮಿಕ ರೋಗವು ನಗರ ಕೇಂದ್ರಗಳಿಂದ ಗ್ರಾಮೀಣ ಒಳನಾಡಿನವರೆಗಿನ ನಮ್ಮ ಆರೋಗ್ಯ ಮೂಲಸೌಕರ್ಯದಲ್ಲಿನ ಅಂತರವನ್ನು ಆದ್ಯತೆಯ ಮೇಲೆ ತುಂಬುವ ಅಗತ್ಯವನ್ನು ತೀಕ್ಷ್ಣವಾಗಿ ಗಮನಿಸಬೇಕಾಗಿದೆ. ಆ ನಿಟ್ಟಿನಲ್ಲಿ ಹಿಂದುಳಿದ ಮತ್ತು ದೂರದ ಪ್ರದೇಶಗಳಿಗೆ ವಿಶೇಷ ಗಮನಹರಿಸಬೇಕಾಗಿದೆ. ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಖಾಸಗಿ ವಲಯವು ಸರ್ಕಾರದ ಜೊತೆ ಕೈಜೋಡಿಸಬೇಕಿದೆ.

ದೇಶೀಯ ಲಸಿಕೆ ಉತ್ಪಾದನೆಯನ್ನು ತ್ವರಿತ ಗತಿಯಲ್ಲಿ ನಡೆಸುತ್ತಿರುವ ನಮ್ಮ ವಿಜ್ಞಾನಿಗಳು, ಫಾರ್ಮಾ ಕಂಪನಿಗಳು, ಉದ್ಯಮಿಗಳು, ವೈದ್ಯರು ಮತ್ತು ನಿಯಂತ್ರಣ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ. ಜೊತೆಗೆ ಆತ್ಮನಿರ್ಭರ ಭಾರತದ ನಿಜವಾದ ಉತ್ಸಾಹದಲ್ಲಿ ಪಿಪಿಟಿ ಕಿಟ್, ಸ್ಯಾನಿಟೈಸರ್, ಮುಖ ರಕ್ಷಾ ಕವಚಗಳನ್ನೂ ಸಹ ಉತ್ಪಾದಿಸಲಾಗುತ್ತಿದೆ.

ಸಮಾಜದ ದುರ್ಬಲ ವರ್ಗಗಳಿಗೆ ಕೋವಿಡ್-19 ಲಸಿಕೆ ನೀಡಲು ಅನುಕೂಲವಾಗುವಂತೆ ನಾನಾ ದಾನಿಗಳು ಮತ್ತು ಪಾಲುದಾರರ ಸಂಸ್ಥೆಗಳೊಂದಿಗೆ ಸಹಕರಿಸಿದ್ದಕ್ಕಾಗಿ ನಾನು “ಗಿವ್ ಇಂಡಿಯಾ’’ ಸಂಸ್ಥೆಯನ್ನು ಮತ್ತೊಮ್ಮೆ ಅಭಿನಂದಿಸಲು ಬಯಸುತ್ತೇನೆ.

***



(Release ID: 1748573) Visitor Counter : 480