ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಶ್ರೀ ಅಪೂರ್ವಚಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ
Posted On:
23 AUG 2021 6:00PM by PIB Bengaluru
ಶ್ರೀ ಅಪೂರ್ವ ಚಂದ್ರ ಐಎಎಸ್ (ಮಹಾರಾಷ್ಟ್ರ: 1988) ಅವರು ಇಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು, ದೆಹಲಿಯ ಐಐಟಿಯಿಂದ ನಿರ್ಮಾಣಾತ್ಮಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶ್ರೀ ಅಪೂರ್ವಚಂದ್ರ ಅವರು ಈ ಮೊದಲು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1.10.20 ರಿಂದ ಈ ವರೆಗೂ ಕಾರ್ಮಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ಕಾರ್ಮಿಕ ನೀತಿಯ ಅನುಷ್ಠಾನಕ್ಕೆ ನೀತಿನಿಯಮಗಳನ್ನು ನಿರೂಪಿಸಿದರು. ಇವರ ಮಾರ್ಗದರ್ಶನದಲ್ಲಿ ನಾಲ್ಕೂ ಕಾರ್ಮಿಕ ನೀತಿಗಳಿಗೆ ಸ್ಪಷ್ಟವಾದ ರೂಪುರೇಶೆಗಳನ್ನು ನೀಡಲಾಯಿತು. ಉದ್ಯೋಗದಾತರೊಂದಿಗೆ ಆಳವಾಗಿ ಚರ್ಚಿಸಿ, ಕರಾರುವಕ್ಕಾದ ರೂಪುರೇಷೆಗಳನ್ನು ರಚಿಸಿದರು. 23 ಸಾವಿರ ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆ ಅಡಿಯಲ್ಲಿ 78.5 ಲಕ್ಷ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಹುಟ್ಟುಹಾಕಿತು.
ಕಾರ್ಮಿಕ ಇಲಾಖೆಗೆ ಮೊದಲು 2017ರಿಂದ ರಕ್ಷಣಾ ಸಚಿವಾಲಯದಲ್ಲಿ ಮಹಾನಿರ್ದೇಶಕರಾಗಿ (ಸ್ವಾಧೀನ) ಸೇವೆ ಸಲ್ಲಿಸಿದ್ದಾರೆ. ಸ್ವಾಧೀನ ಪ್ರಕ್ರಿಯೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸುವಲ್ಲಿ ನಿಯಮಗಳನ್ನು ರಚಿಸಿದ್ದಾರೆ. S-400 ಮಿಸೈಲ್ ಸಿಸ್ಟಮ್, ಬಹುಕಾರ್ಯನಿಯೋಜಿತ ಹೆಲಿಕಾಪ್ಟರ್, ರೈಫಲ್ಸ್, ನೌಕಾ ಹಡಗುಗಳು, T-ಟ್ಯಾಂಕು ಇತ್ಯಾದಿಗಳ ಗುತ್ತಿಗೆ ಒಪ್ಪಂದಗಳಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆಯ ನೂತನ ನಿಯಮಗಳ ರಚನಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀ ಚಂದ್ರ ಅವರು 2013ರಿಂದ 2017ರವರೆಗೆ ಮಹಾರಾಷ್ಟ್ರ ಸರ್ಕಾರದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ (ಕೈಗಾರಿಕೆ), ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಎಫ್‌ಡಿಐ ಹಾಗೂ ಇತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಮಹಾರಾಷ್ಟ್ರ ಮುಂಚೂಣಿಯಲ್ಲಿತ್ತು. ಎಲೆಕ್ಟ್ರಾನಿಕ್, ರಿಟೇಲ್ ಹಾಗೂ ಏಕಗವಾಕ್ಷಿ ನೀತಿಗಳನ್ನು ಪರಿಚಯಿಸುವಲ್ಲಿ ಅಪೂರ್ವ ಚಂದ್ರ ಅವರು ಮಹತ್ತರ ಹಾಗೂ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀ ಚಂದ್ರ ಅವರ ನೇತ್ರತ್ವದಲ್ಲಿಯೇ ದೆಹಲಿ ಮುಂಬೈ ಕೈಗಾರಿಕಾ ಕಾರಿಡರ್ ಟೌನ್‌ಶಿಪ್ ಅನ್ನು ಔರಂಗಾಬಾದ್‌ನಲ್ಲಿ ಆರಂಭಿಸಲಾಯಿತು.
ಇದಕ್ಕೂ ಮೊದಲು ಶ್ರೀ ಚಂದ್ರ ಅವರು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕೈಗಾರಿಕೆಗಳಿಗೆ ಇಂಧನ ಪೂರೈಕೆಯ ನೀತಿನಿಯಮ ರಚಿಸುವಲ್ಲಿ ಇವರೂ ಪಾಲ್ಗೊಂಡಿದ್ದರು. ಪೂರೈಕೆ ಸಾಗಾಣಿಕೆ, ಸಂಚಾರ ಸಾಗಾಣಿಕೆ, ಸಂಗ್ರಹ ಹಾಗೂ ಇಂಧನ ಉತ್ಪನ್ನಗಳ ಹಂಚಿಕೆ ಮುಂತಾದವುಗಳನ್ನು ನಿರ್ವಹಿಸುವಲ್ಲಿ ಹಲವಾರು ನೀತಿಗಳನ್ನು ರೂಪಿಸಿದ್ದಾರೆ. ನೈಸರ್ಗಿಕ ಅನಿಲ ಸರಬರಾಜು ಹಾಗೂ ಕೈಗಾರಿಕಾ ಉತ್ಪನ್ನಗಳ ಪೂರೈಕೆಗೆ ಸಂಬಂಧಿಸಿದಂತೆ ಸಾಗಾಣಿಕೆ ನಿರ್ಮಾಣ ಕಾರ್ಯ ಯೋಜನೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದರು. ನಗರ ಅನಿಲ ಹಂಚಿಕೆಯ ಕಂಪನಿಗಳು, ಎಲ್‌ಎನ್‌ಜಿ ಆಮದು ಹಾಗೂ ಕೈಗಾರಿಕೆಗಳಿಗೆ ಪೂರೈಕೆಯಂಥ ಕಾರ್ಯಗಳಲ್ಲಿಯೂ ಇವರ ನೇರವಾದ ಪಾಲ್ಗೊಳ್ಳುವಿಕೆ ಇತ್ತು.
ಶ್ರೀ ಚಂದ್ರ ಅವರು ಮಹಾರತ್ನ ಪಿಎಸ್‌ಯು, GAIL (ಇಂಡಿಯಾ)ಲಿ. ಪೆಟ್ರೊನೆಟ್ ಎಲ್‌ಎನ್‌ಜಿ ಲಿ.ಗಳಿಗೆ ನಿರ್ದೇಶಕ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
***
(Release ID: 1748414)
Visitor Counter : 253