ರಕ್ಷಣಾ ಸಚಿವಾಲಯ
azadi ka amrit mahotsav

ಮಹಿಳಾ ಅಧಿಕಾರಿಗಳಿಗೆ ಸೇವಾವಧಿ ಆಧರಿತ (ಟೈಮ್‌ ಸ್ಕೇಲ್‌) ಕರ್ನಲ್  ಶ್ರೇಣಿಯನ್ನು ನೀಡಿದ ಭಾರತೀಯ ಸೇನೆ

Posted On: 23 AUG 2021 2:18PM by PIB Bengaluru

ಭಾರತೀಯ ಸೇನೆಯ ಆಯ್ಕೆ ಮಂಡಳಿಯು 26 ವರ್ಷ ಸೇವೆ ಪೂರೈಸಿದ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ (ಸೇವಾವಧಿ ಆಧರಿತ - ಟೈಮ್ ಸ್ಕೇಲ್) ಶ್ರೇಣಿಗೆ ಬಡ್ತಿ ನೀಡಲು ಹಾದಿಯನ್ನು ಮುಕ್ತಗೊಳಿಸಿದೆ. ʻಕಾರ್ಪ್ಸ್ ಆಫ್ ಸಿಗ್ನಲ್ಸ್ʼ, ʻಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ʼ ಮತ್ತು ʻಮೆಕ್ಯಾನಿಕಲ್ ಎಂಜಿನಿಯರ್ಸ್ʼ (ಇಎಂಇ) ಹಾಗೂ ʻಕಾರ್ಪ್ಸ್ ಆಫ್ ಎಂಜಿನಿಯರ್ಸ್ʼನೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಗೆ  ಕರ್ನಲ್ ಶ್ರೇಣಿಗೆ ಬಡ್ತಿ ಪಡೆಯಲು ಅನುಮೋದಿಸಿರುವುದು ಇದೇ ಮೊದಲು. ಹಿಂದೆ, ʻಸೇನಾ ವೈದ್ಯಕೀಯ ಪಡೆʼ (ಎಎಂಸಿ), ʻನ್ಯಾಯಾಧೀಶ ಅಡ್ವೊಕೇಟ್ ಜನರಲ್ʼ (ಜೆಎಜಿ) ಮತ್ತು ʻಸೇನಾ ಶಿಕ್ಷಣ ಪಡೆʼ (ಎಇಸಿ) ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್ ಹುದ್ದೆಗೆ ಬಡ್ತಿ ಅನ್ವಯವಾಗಿಗುತ್ತಿತ್ತು.

ಭಾರತೀಯ ಸೇನೆಯ ಹೆಚ್ಚಿನ ಶಾಖೆಗಳಿಗೆ ಬಡ್ತಿ ಮಾರ್ಗಗಳ ವಿಸ್ತರಣೆಯು ಮಹಿಳಾ ಅಧಿಕಾರಿಗಳಿಗೆ ವೃತ್ತಿ ಅವಕಾಶಗಳು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಈಗಾಗಲೇ ಭಾರತೀಯ ಸೇನೆಯ ಬಹುಪಾಲು ಶಾಖೆಗಳ  ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವಾವಧಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರೊಂದಿಗೆ, ಈಗಿನ ಕ್ರಮವು ಭಾರತೀಯ ಸೇನೆಯ ಲಿಂಗ-ತಟಸ್ಥ ನಿಲುವನ್ನು ವ್ಯಾಖ್ಯಾನಿಸುತ್ತದೆ.

ಸೇವಾವಧಿ ಆಧರಿತವಾಗಿ ಕರ್ನಲ್ ಶ್ರೇಣಿಗೆ ಆಯ್ಕೆಯಾದ ಐದು ಮಹಿಳಾ ಅಧಿಕಾರಿಗಳಗಳೆಂದರೆ ʻಕಾರ್ಪ್ಸ್ ಆಫ್ ಸಿಗ್ನಲ್ಸ್ʼ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದಾನ, ʻಇಎಂಇ ಕಾರ್ಪ್ಸ್‌ʼ ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್ ಮತ್ತು ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್ ಮತ್ತು ʻಕಾರ್ಪ್ಸ್ ಆಫ್ ಎಂಜಿನಿಯರ್ಸ್ʼ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಹಾಗೂ ಲೆಫ್ಟಿನೆಂಟ್ ಕರ್ನಲ್ ರಿಚಾ ಸಾಗರ್.

***


(Release ID: 1748276) Visitor Counter : 327