ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭಾರತ್ - ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಡಿ 2 ಕೋಟಿ ಆಸ್ಪತ್ರೆ ದಾಖಲಾತಿಗಳ ಕುರಿತ ಆರೋಗ್ಯಧಾರಾ 2.0ರ ಅಧ್ಯಕ್ಷತೆ ವಹಿಸಿದ್ದ ಶ್ರೀ ಮನ್ಸುಖ್ ಮಾಂಡವೀಯ


“ಪ್ರಧಾನಮಂತ್ರಿಯವರ ಬಡತನದ ಹಿನ್ನೆಲೆ ಬಡವರು ಮತ್ತು ಅಸಾಹಯಕರ ನೋವು ಅರಿಯಲು ಅನುವು ಮಾಡಿದೆ”

ಬಡವರು ಮತ್ತು ಶ್ರೀಮಂತರು ಒಂದೇ ಸ್ಥಳದಲ್ಲಿ ಒಂದೇ ರೀತಿಯ ಚಿಕಿತ್ಸೆಯನ್ನು ಪಡೆಯುವುದನ್ನು ಈ ಕಾರ್ಯಕ್ರಮವು ಖಚಿತಪಡಿಸುತ್ತದೆ: ಎಬಿ-ಪಿಎಂಜೆಎವೈ ಕುರಿತಂತೆ ಶ್ರೀ ಮಾಂಡವಿಯ

Posted On: 18 AUG 2021 4:58PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರಿಂದು ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಅಡಿಯಲ್ಲಿ 2 ಕೋಟಿ ಚಿಕಿತ್ಸೆ ಪೂರ್ಣಗೊಂಡ ಅಂಗವಾಗಿ ಆರೋಗ್ಯ ಧಾರಾ -2.0 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿನ್ನೆ 2 ಕೋಟಿಗೂ ಅಧಿಕ ಆಸ್ಪತ್ರೆಯ ದಾಖಲು ಚಿಕಿತ್ಸೆ ಪೂರ್ಣಗೊಂಡಿದ್ದು, ಯೋಜನೆಯಡಿ ದೇಶದ 33 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ರೋಗಿಗಳಿಗೆ 2018ರ ಸೆಪ್ಟೆಂಬರ್ ನಿಂದ ಈವರೆಗೆ 23,000 ಸಾರ್ವಜನಿಕ ಮತ್ತು ಖಾಸಗಿ ಆಯ್ದ ಆಸ್ಪತ್ರೆಗಳ ವರ್ಧಿತ ಜಾಲಕ್ಕೆ ಈವರೆಗೆ ಅಂದಾಜು 25,000 ಕೋಟಿ ರೂ. ಒದಗಿಸಲಾಗಿದೆ.

ಈ ಸಾಧನೆಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ ಆರೋಗ್ಯ ಸಚಿವರು, ಸಾಧನೆ ಮಾಡಿದ ಪ್ರತಿಯೊಬ್ಬ ಉದ್ಯೋಗಿಯನ್ನು ಅಭಿನಂದಿಸಿದರು. "ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಬಡ ಮತ್ತು ಹಿಂದುಳಿದ ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯು ಎಲ್ಲಾ ಅರ್ಹ ಫಲಾನುಭವಿಗಳಿಗೆ ನಗದು ರಹಿತ ಮತ್ತು ಕಾಗದರಹಿತ ಆರೋಗ್ಯ ಸೇವೆಗಳ ಪ್ರಯೋಜನಗಳನ್ನು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಒದಗಿಸುತ್ತಿದೆ. ಹೀಗಾಗಿ, ಅನೇಕ ಅನುಕೂಲಸ್ಥರಲ್ಲದ ಕುಟುಂಬವರ್ಗಗಳು ಚಿಕಿತ್ಸೆವೆಚ್ಚಕ್ಕಾಗಿ ಲೇವಾದೇವಿದಾರರ ಬಳಿ ಹೋಗದೆ ಚಿಕಿತ್ಸೆ ಪಡೆಯುವಂತಾಗಿದೆ.”

ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯೆಡೆಗಿನ ಪಯಣದ ಮೇಲೆ ದೃಢವಾದ ರಾಜಕೀಯ ಬದ್ಧತೆಯ ಕುರಿತಂತೆ, "ಪ್ರಧಾನ ಮಂತ್ರಿಯವರ ಬಡತನದ ಹಿನ್ನೆಲೆಯು ಬಡವರು ಮತ್ತು ಅಸಹಾಯಕರ ನೋವನ್ನು ಅರಿಯಲು ಅನುವು ಮಾಡಿದೆ" ಎಂದು ಉಲ್ಲೇಖಿಸಿದರು. ಈ ಯೋಜನೆಯ ಅಡಿಯಲ್ಲಿ ಸಾಮಾನ್ಯ ಜನರಿಗೆ ಅಗತ್ಯವಾದ ವೈದ್ಯಕೀಯ ಸೇವೆಯನ್ನು ವಿಸ್ತರಿಸಲು ಸಾಧ್ಯವಾಗುವಂತೆ ಹೆಚ್ಚು ಹೆಚ್ಚು ಜನರು ನೋಂದಾಯಿಸಿಕೊಳ್ಳವಂತೆ ಮಾಡಲು ಯೋಜನೆಯ ಕುರಿತಂತೆ ತಿಳಿಸಲು ಅವರು ಈ ಸಂದರ್ಭವನ್ನು ಬಳಸಿಕೊಂಡರು.

ತಮ್ಮ ವೈಯಕ್ತಿಕ ಜೀವನದ ಉದಾಹರಣೆ ನೀಡಿದ ಸಚಿವರು, ಈ ಯೋಜನೆಯು ಬಡ ಜನರಿಗೆ ತಮ್ಮ ಸ್ಥಿತಿವಂತ ಸ್ನೇಹಿತ ಚಿಕಿತ್ಸೆ ಪಡೆಯುವ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.

ಶ್ರೀ ಮಾಂಡವೀಯ ಅವರು ಎಂ.ಬಿ.ಪಿ.ಎಂ. ಜೆ.ಎ.ವೈ. ಕಾರ್ಯಕ್ರಮದ ವ್ಯಾಪ್ತಿಯನ್ನು ದೇಶದ ಬಡ ಕುಟುಂಬಗಳಿಗೆ ತಲುಪಿಸಲು ಮತ್ತು ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸಲು ಆರೋಗ್ಯ ಧಾರಾ 2.0ನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆಳಕಂಡ ಪ್ರಮುಖ ಉಪಕ್ರಮಗಳಿಗೂ ಚಾಲನೆ ನೀಡಲಾಯಿತು.

ಅಧಿಕಾರ ಪತ್ರ: ಪಿಎಂ.-ಜೆಎವೈ ಯೋಜನೆಯಡಿಯಲ್ಲಿ ಚಿಕಿತ್ಸೆಗಾಗಿ ಫಲಾನುಭವಿಗಳು ಆಸ್ಪತ್ರೆಗೆ ದಾಖಲಾಗುವಾಗ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಅವರಿಗೆ ಅಧಿಕಾರ ಪತ್ರ ನೀಡಲಾಗುವುದು ಮತ್ತು ಇದರಿಂದ ಅವರು ಯೋಜನೆಯಡಿಯಲ್ಲಿ 5 ಲಕ್ಷದವರೆಗೆ ಉಚಿತ ಮತ್ತು ನಗದುರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು..

ಅಭಿನಂದನಾ ಪತ್ರ: ಎಬಿ ಪಿಎಂ-ಜೆಎವೈ ಯೋಜನೆಯ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಪಿಎಂ-ಜೆಎವೈ ಅಡಿಯಲ್ಲಿ ಚಿಕಿತ್ಸೆಯ ನಂತರ ಫಲಾನುಭವಿಗಳನ್ನು ಬಿಡುಗಡೆ ಮಾಡುವಾಗ ಅವರಿಗೆ 'ಧನ್ಯವಾದ ಸೂಚನೆ' ನೀಡಲಾಗುವುದು. ಈ ಅಭಿನಂದನಾ ಪತ್ರ ಅವರು ಯೋಜನೆಯ ಅಡಿಯಲ್ಲಿ ಪಡೆದ ಸೇವೆಗೆ ಸಂಬಂಧಿಸಿದಂತೆ ಫಲಾನುಭವಿಗಳು ಭರ್ತಿ ಮಾಡಬೇಕಾದ ಪ್ರತಿಕ್ರಿಯೆ ನಮೂನೆಗಳನ್ನು ಹೊಂದಿರುತ್ತದೆ.

ಆಯುಷ್ಮಾನ್ ಮಿತ್ರ: ಅರ್ಹ ನಾಗರಿಕರು ತಮ್ಮ ಆಯುಷ್ಮಾನ್ ಕಾರ್ಡ್‌ ಗಳನ್ನು ರೂಪಿಸಿ, ಅವರನ್ನು ಯೋಜನೆಯ ವ್ಯಾಪ್ತಿಗೆ ತರಲು ಸಹಾಯ ಮಾಡುವ ಮೂಲಕ ಎಲ್ಲಾ ನಾಗರಿಕರಿಗೆ ಆಯುಷ್ಮಾನ್ ಭಾರತ್ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ಅವಕಾಶವನ್ನು ಒದಗಿಸುವ ಇನ್ನೊಂದು ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಇದನ್ನು https://pmjay.gov.in/ayushman-mitra ಲಾಗ್ ಇನ್ ಮಾಡಿ, ಆಯುಷ್ಮಾನ್ ಮಿತ್ರ ಐಡಿ ಸೃಷ್ಟಿಸಬಹುದು, ನಂತರ ಅದನ್ನು ಅರ್ಹ ಜನರೊಂದಿಗೆ ಹಂಚಿಕೊಳ್ಳಬಹುದು. ಆಯುಷ್ಮಾನ್ ಕಾರ್ಡ್ ಪಡೆಯುವಾಗ ಮತ್ತು ಯೋಜನೆಯಡಿ ಚಿಕಿತ್ಸೆ ಪಡೆಯುವಾಗ ಆಯುಷ್ಮಾನ್ ಮಿತ್ರ ಐಡಿಯನ್ನು ಫಲಾನುಭವಿಗಳು ಸಿಎಸ್.ಸಿ/ಪಟ್ಟಿಯಲ್ಲಿರುವ ಆಯ್ದ ಆಸ್ಪತ್ರೆಗಳೊಂದಿಗೆ ಹಂಚಿಕೊಳ್ಳಬಹುದು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಈ ಕಾರ್ಯಕ್ರಮದ ವೇಳೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ 5 ಲಕ್ಷ ರೂ.ವರೆಗೆ ಆರ್ಥಿಕ ನೆರವನ್ನು ಕಾಲಮಿತಿಯೊಳಗೆ ಪಡೆಯಲು ಅನುವಾಗುವಂತೆ ಸರಳ, ತ್ವರಿತ, ನಗದುರಹಿತ, ಪಾರದರ್ಶಕ ಮತ್ತು ಕಾಗದ ರಹಿತ ಕ್ಲೇಮ್ ಪ್ರಕ್ರಿಯೆಗಾಗಿ ರೂಪಿಸಲಾಗಿರುವ ಎನ್.ಎಚ್.ಎ.ಯ ಚೈತನ್ಯಶೀಲ ಐಟಿ ವೇದಿಕೆಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿ.ಇ.ಓ, ಡಾ. ಆರ್.ಎಸ್. ಶರ್ಮಾ, ಪ್ರಶಂಸಿಸಿದರು ಮತ್ತು ಯೋಜನೆಯಡಿ 50 ಕೋಟಿ ಫಲಾನುಭವಿಗಳನ್ನು ನೋಂದಾಯಿಸಲು ಮತ್ತು ಪರಿಶೀಲಿಸುವ ಸರ್ಕಾರದ ಗುರಿಯನ್ನು ಶೀಘ್ರವೇ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಅತ್ಯಲ್ಪ ಅವಧಿಯಲ್ಲಿ ಈ ಸಾಧನೆ ಮಾಡಿದ್ದಕ್ಕಾಗಿ ಇಡೀ ಎನ್.ಎಚ್.ಎ. ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಮೂರು ವರ್ಷಗಳ ಅವಧಿಯಲ್ಲಿ ಯೋಜನೆ ಆಸ್ಪತ್ರೆಯ ಆರೈಕೆಯಲ್ಲಿ ಕ್ರಾಂತಿಕಾರಿಯಾಗಿದೆ ಎಂದರು.

ಎನ್.ಎಚ್.ಎ.ಯ ಹೆಚ್ಚುವರಿ ಸಿಇಓ ಡಾ. ಪ್ರವೀಣ್ ಗೆದಮ್ ಮತ್ತು ಎನ್.ಎಚ್.ಎ.ಯ ಉಪ ಸಿಇಓ ಡಾ. ವಿಪುಲ್ ಅಗರ್ವಾಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೆಬ್ ಕಾಸ್ಟ್ ಸಂಪರ್ಕ:

ಫೇಸ್ ಬುಕ್ - https://www.facebook.com/AyushmanBharatGoI/live_videos/

ಟ್ವಿಟರ್-  https://twitter.com/i/broadcasts/1MYxNmomYwQJw

ಯೂಟ್ಯೂಬ್ - https://youtu.be/fWQj-qZ6YZA

***



(Release ID: 1747140) Visitor Counter : 232