ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಂಗಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು.

Posted On: 15 AUG 2021 2:18PM by PIB Bengaluru

ಪ್ರಧಾನಿಯವರ ಭಾಷಣದ ಮುಖ್ಯಾಂಶಗಳು:

1. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪವಿತ್ರ ದಿನವಾದ ಇಂದು, ದೇಶವು ತನ್ನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಹಗಲಿರುಳು ತಮ್ಮನ್ನು ಸಮರ್ಪಿಸಿಕೊಂಡಿರುವ ವೀರರಿಗೆ ತಲೆಬಾಗಿ ನಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ ಪೂಜ್ಯ ಬಾಪು, ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ ಮತ್ತು ಅಶ್ಫಖುಲ್ಲಾ ಖಾನ್ ರಂತಹ ಮಹಾನ್ ಕ್ರಾಂತಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನೂ ದೇಶವು ಸ್ಮರಿಸಿಕೊಳ್ಳುತ್ತಿದೆ; ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಅಥವಾ ರಾಣಿ ಗಾಯಿಡಿನ್ಲಿಯು ಅಥವಾ ಮಾತಂಗಿನಿಹಜ್ರಾ ಅವರ ಶೌರ್ಯ; ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂ, ದೇಶವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತದ ಭವಿಷ್ಯಕ್ಕೆ ದಿಕ್ಕು ತೋರಿದ ಬಾಬಾ ಸಾಹೇಬ್ ಅಂಬೇಡ್ಕರ್. ಈ ಎಲ್ಲ ಮಹಾನ್ ವ್ಯಕ್ತಿಗಳಿಗೆ ದೇಶ ಚಿರಋಣಿಯಾಗಿದೆ.

2. ಇಂದು ನಾವು ನಮ್ಮ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಎಲ್ಲಾ ಭಾರತೀಯರ ಹೃದಯದಲ್ಲಿರುವ ದೇಶ ವಿಭಜನೆಯ ನೋವನ್ನು ನಾವು ಮರೆಯಲು ಸಾಧ್ಯವಿಲ್ಲ. ಇದು ಕಳೆದ ಶತಮಾನದ ದೊಡ್ಡ ದುರಂತಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯವನ್ನು ಪಡೆದ ನಂತರ, ಈ ಜನರನ್ನು ಬೇಗನೆ ಮರೆತುಬಿಡಲಾಯಿತು. ನಿನ್ನೆಯಷ್ಟೇ ಭಾರತ ಭಾವನಾತ್ಮಕ ನಿರ್ಧಾರ ತೆಗೆದುಕೊಂಡಿದೆ, ಇನ್ನು ಮುಂದೆ ನಾವು ಆಗಸ್ಟ್ 14 ಅನ್ನು ವಿಭಜನೆಯ ಸಂತ್ರಸ್ತರ ನೆನಪಿಗಾಗಿ "ವಿಭಜನೆಯ ಭಯಾನಕಗಳ ಸ್ಮರಣೆಯ ದಿನ" ವನ್ನಾಗಿ ಆಚರಿಸುತ್ತೇವೆ. ಅಮಾನವೀಯ ಸನ್ನಿವೇಶಗಳಿಗೆ ಒಳಗಾದವರು, ಹಿಂಸೆಯನ್ನು ಅನುಭವಿಸಿದರು, ಗೌರವಾನ್ವಿತ ಅಂತ್ಯಸಂಸ್ಕಾರವನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಜೀವಂತವಾಗಿರಬೇಕು ಮತ್ತು ನಮ್ಮ ನೆನಪುಗಳಿಂದ ಎಂದಿಗೂ ಅಳಿಸಿ ಹೋಗಬಾರದು. 75 ನೇ ಸ್ವಾತಂತ್ರ್ಯ ದಿನಾಚರಣೆಯಂದು "ವಿಭಜನೆಯ ಭಯಾನಕಗಳ ಸ್ಮರಣೆಯ ದಿನ" ವನ್ನು ಆಚರಿಸುವ ನಿರ್ಧಾರವು ಪ್ರತಿಯೊಬ್ಬ ಭಾರತೀಯರೂ ಅವರಿಗೆ ಸಲ್ಲಿಸುವ ಗೌರವವಾಗಿದೆ.

3. ಆಧುನಿಕ ಮೂಲಸೌಕರ್ಯದ ಜೊತೆಗೆ, ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ಮತ್ತು ಅಂತರ್ಗತ ವಿಧಾನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ, ನಾವು ಪ್ರಧಾನ ಮಂತ್ರಿ 'ಗತಿ ಶಕ್ತಿ'ಯ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸಲಿದ್ದೇವೆ, ಇದೊಂದು ದೊಡ್ಡ ಯೋಜನೆಯಾಗಿದ್ದು, ಕೋಟ್ಯಾಂತರ ದೇಶವಾಸಿಗಳ ಕನಸುಗಳನ್ನು ಈಡೇರಿಸಲಿದೆ. 100 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಈ ಯೋಜನೆಯು ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

4. ನಮ್ಮ ವಿಜ್ಞಾನಿಗಳ ಪ್ರಯತ್ನದಿಂದಾಗಿ, ನಾವು ಎರಡು ಮೇಕ್ ಇನ್ ಇಂಡಿಯಾ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ಮತ್ತು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಕೈಗೊಂಡಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ.

5. ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನೇ ಕಾಡುತ್ತಿರುವ ಇಂತಹ ದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಲಸಿಕೆಗಳನ್ನು ಪಡೆಯುವುದು ಅತ್ಯಂತ ಕಷ್ಟಕರವಾಗಿತ್ತು. ಭಾರತವು ಅದನ್ನು ಪಡೆಯಬಹುದಿತ್ತು ಅಥವಾ ಪಡೆಯದೆಯೂ ಇರಬಹುದಿತ್ತು ಮತ್ತು ಲಸಿಕೆ ಪಡೆದಿದ್ದರೂ ಸಹ ಅದನ್ನು ಸಮಯಕ್ಕೆ ಸರಿಯಾಗಿ ಸಿಗುವ ಖಚಿತತೆ ಇರುತ್ತಿರಲ್ಲ. ಆದರೆ ಇಂದು ನಾವು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ನಮ್ಮ ದೇಶದಲ್ಲಿ ನಡೆಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಹುದು. ಈಗಾಗಲೇ 54 ಕೋಟಿಗೂ ಹೆಚ್ಚು ಜನರು ಲಸಿಕೆಯನ್ನು ಪಡೆದಿದ್ದಾರೆ. ಕೋವಿನ್ ಮತ್ತು ಡಿಜಿಟಲ್ ಪ್ರಮಾಣಪತ್ರಗಳಂತಹ ಆನ್‌ಲೈನ್ ವ್ಯವಸ್ಥೆಗಳು ಇಂದು ಜಗತ್ತಿನ ಗಮನ ಸೆಳೆದಿವೆ. 

6. ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ, ಲಸಿಕೆಗಳನ್ನು ಅಭಿವೃದ್ಧಿಪಡಿಸುವ ವಿಜ್ಞಾನಿಗಳು, ಈ ಕೊರೋನಾ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಸೇವವಾ ಮನೋಭಾವದಿಂದ ಕೆಲಸ ಮಾಡಿದ ಲಕ್ಷಾಂತರ ದೇಶವಾಸಿಗಳು ಸಹ ನಮ್ಮೆಲ್ಲರ ಪ್ರಶಂಸೆಗೆ ಅರ್ಹರು.

7. ಭಾರತದ ಯುವ ಪೀಳಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ. ಅಂತಹ ಎಲ್ಲಾ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರು ನಮ್ಮ ಹೃದಯವನ್ನು ಗೆದ್ದಿರುವುದು ಮಾತ್ರವಲ್ಲ, ನಮ್ಮ ಯುವ ಪೀಳಿಗೆಗೆ ಸ್ಫೂರ್ತಿಯೂ ಆಗಿದ್ದಾರೆ.

8. ಸಾಂಕ್ರಾಮಿಕ ಸಮಯದಲ್ಲಿ ತಿಂಗಳುಗಳ ಕಾಲ ನಿರಂತರವಾಗಿ 80 ಕೋಟಿ ದೇಶವಾಸಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಮೂಲಕ ಬಡವರ ಮನೆಯ ಒಲೆಯ ಬೆಂಕಿ ಆರದಂತೆ ನೋಡಿಕೊಂಡಿದ್ದು ಜಗತ್ತಿಗೆ ಆಶ್ಚರ್ಯದ ಹಾಗೂ ಚರ್ಚೆಯ ವಿಷಯವಾಗಿದೆ.

9. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದು ನಿಜ; ಪ್ರಪಂಚದ ಇತರ ದೇಶಗಳ ಜನಸಂಖ್ಯೆಗೆ ಹೋಲಿಸಿದರೆ, ನಾವು ಭಾರತದಲ್ಲಿ ಹೆಚ್ಚಿನ ನಾಗರಿಕರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಇದು ಹೆಮ್ಮೆಯ ವಿಷಯವಲ್ಲ! ನಾವು ಈ ಪ್ರಶಂಸೆಗಳ ಮೇಲೆ ವಿರಮಿಸುವಂತಿಲ್ಲ. ಯಾವುದೇ ಸವಾಲು ಇರಲಿಲ್ಲ ಎಂದು ಹೇಳುವುದು, ನಮ್ಮದೇ ಅಭಿವೃದ್ಧಿಯ ಹಾದಿಯಲ್ಲಿ ನಿರ್ಬಂಧಿತ ಚಿಂತನೆಯಾಗುತ್ತದೆ.

10. ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಿರುವ ರಾಷ್ಟ್ರವನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಹಾಗೆಯೇ, 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬ ಮಂತ್ರದೊಂದಿಗೆ ಮುಂದೆ ಸಾಗಬೇಕಿದೆ. 

11. ಭಾರತ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭವನ್ನು ನಾವು ಕೇವಲ ಒಂದು ಸಮಾರಂಭಕ್ಕೆ ಸೀಮಿತಗೊಳಿಸಬಾರದು. ನಾವು ಹೊಸ ಸಂಕಲ್ಪಗಳಿಗೆ ಬುನಾದಿ ಹಾಕಬೇಕು ಮತ್ತು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಬೇಕು. ಇಲ್ಲಿಂದ ಆರಂಭಿಸಿ, ಮುಂದಿನ 25 ವರ್ಷಗಳ ಸಂಪೂರ್ಣ ಪಯಣ, ನಾವು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ, ನವ ಭಾರತದ ಸೃಷ್ಟಿಯ ಅಮೃತ ಕಾಲವನ್ನು ಸೂಚಿಸಬೇಕು. ಈ ಅಮೃತ ಕಾಲದಲ್ಲಿ  ನಮ್ಮ ಸಂಕಲ್ಪಗಳ ನೆರವೇರಿಕೆಯು ನಮ್ಮನ್ನು ಹೆಮ್ಮೆಯಿಂದ ಭಾರತ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಕರೆದೊಯ್ಯುತ್ತದೆ.

12. 'ಅಮೃತ್ ಕಾಲ'ದ ಗುರಿ ಭಾರತ ಮತ್ತು ಭಾರತದ ನಾಗರಿಕರು ಸಮೃದ್ಧಿಯ ಹೊಸ ಎತ್ತರಕ್ಕೆ ಏರುವುದು. 'ಅಮೃತ ಕಾಲ’ದ ಗುರಿಯು ಸೌಲಭ್ಯಗಳಲ್ಲಿ ಹಳ್ಳಿ ಮತ್ತು ನಗರವನ್ನು ವಿಭಜಿಸದ ಭಾರತವನ್ನು ಸೃಷ್ಟಿಸುವುದು, ಸರ್ಕಾರವು ನಾಗರಿಕರ ಜೀವನದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡದ ಭಾರತವನ್ನು ನಿರ್ಮಿಸುವುದು 'ಅಮೃತ ಕಾಲ'ದ ಗುರಿಯಾಗಿದೆ. 'ಅಮೃತ್ ಕಾಲ’ದ ಗುರಿಯು ಪ್ರಪಂಚದ ಪ್ರತಿಯೊಂದು ಆಧುನಿಕ ಮೂಲಸೌಕರ್ಯವೂ ಇರುವ ಭಾರತವನ್ನು ನಿರ್ಮಿಸುವುದಾಗಿದೆ.

13. ಅಮೃತ್ ಕಾಲದ ಅವಧಿ 25 ವರ್ಷ. ಆದರೆ ನಮ್ಮ ಗುರಿಗಳನ್ನು ಸಾಧಿಸಲು ನಾವು ಅಷ್ಟು ಸಮಯ ಕಾಯಬೇಕಾಗಿಲ್ಲ. ನಾವು ಈಗಲೇ ಆರಂಭಿಸಬೇಕು. ನಮಗೆ ಒಂದು ಕ್ಷಣವನ್ನೂ ಕಳೆದುಕೊಳ್ಳಬಾರದು. ಇದು ಸೂಕ್ತ ಸಮಯ. ನಮ್ಮ ದೇಶವೂ ಬದಲಾಗಬೇಕು ಮತ್ತು ಪ್ರಜೆಗಳಾದ ನಾವೂ ಸಹ ಬದಲಾಗಬೇಕು. ಬದಲಾಗುತ್ತಿರುವ ಯುಗಕ್ಕೆ ನಾವೂ ಸಹ ಹೊಂದಿಕೊಳ್ಳಬೇಕು. ನಾವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ನ ಉತ್ಸಾಹದಿಂದ ಆರಂಭಿಸಿದ್ದೇವೆ. ಇಂದು ನಾನು ಕೆಂಪುಕೋಟೆಯ ಪ್ರಾಕಾರದಿಂದ ವಿನಂತಿಸುತ್ತಿದ್ದೇನೆ, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ಮತ್ತು ಈಗ ಸಬ್ಕಾ ಪ್ರಯಾಸ್  (ಎಲ್ಲರ ಪ್ರಯತ್ನ) ನಮ್ಮ ಗುರಿ ಸಾಧನೆಗೆ ಬಹಳ ಮುಖ್ಯವಾಗಿವೆ.

14. ಈ ಭಾರತ್ ಕಿ ವಿಕಾಸ್ ಯಾತ್ರೆಯಲ್ಲಿ, ನಾವು ಭಾರತದ 100 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಗುರಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

15. ನಾವು ಶೇ. 100 ರಷ್ಟು ಮನೆಗಳಿಗೆ ವಿದ್ಯುತ್ ತಲುಪುವಂತೆ ಮಾಡಿದಂತೆ ಮತ್ತು ಶೇ.100 ರಷ್ಟು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಪ್ರಯತ್ನಗಳನ್ನು ಮಾಡಿದಂತೆಯೇ, ಈಗ ನಾವು ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಗುರಿಯೊಂದಿಗೆ ಮುಂದುವರಿಯಬೇಕು, ಮತ್ತು ಇದಕ್ಕಾಗಿ, ನಾವು ದೂರದ ಗಡುವನ್ನು ಇಟ್ಟುಕೊಳ್ಳಬೇಕಾಗಿಲ್ಲ. ನಾವು ಕೆಲವೇ ವರ್ಷಗಳಲ್ಲಿ ನಮ್ಮ ಸಂಕಲ್ಪಗಳನ್ನು ನಿಜವಾಗಿಸಬೇಕು.

16. ಈಗ, ನಾವು ಇನ್ನೂ ಮುಂದೆ ಸಾಗಬೇಕು. ಶೇ.100 ರಷ್ಟು ಹಳ್ಳಿಗಳು ರಸ್ತೆಗಳನ್ನು ಹೊಂದಿರಬೇಕು, ಶೇ.100 ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು, ಶೇ.100 ರಷ್ಟು ಫಲಾನುಭವಿಗಳು ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಹೊಂದಿರಬೇಕು, ಶೇ.100 ರಷ್ಟು ಅರ್ಹ ವ್ಯಕ್ತಿಗಳು ಉಜ್ವಲ ಯೋಜನೆಯಲ್ಲಿ ಅನಿಲ ಸಂಪರ್ಕವನ್ನು ಹೊಂದಿರಬೇಕು ಮತ್ತು ಶೇ.100 ರಷ್ಟು ಫಲಾನುಭವಿಗಳು ಆವಾಸ್ (ಮನೆ) ಹೊಂದಿರಬೇಕು.

17. ನಾವು ಶೇಕಡಾವಾರು ಸಾಧನೆಯ ಮನಸ್ಥಿತಿಯೊಂದಿಗೆ ಮುಂದುವರಿಯಬೇಕು. ತಮ್ಮ ಸರಕುಗಳನ್ನು ತಳ್ಳುಗಾಡಿಗಳು, ಫುಟ್‌ಪಾತ್‌ಗಳು ಮತ್ತು ಗಾಡಿಗಳಲ್ಲಿ ಮಾರಾಟ ಮಾಡುತ್ತಿದ್ದ ನಮ್ಮ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಇಲ್ಲಿಯವರೆಗೆ ಯೋಚಿಸಿರಲಿಲ್ಲ. ಇವರೆಲ್ಲರನ್ನೂ ಈಗ ಸ್ವನಿಧಿ ಯೋಜನೆಯ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ.

18. ಪ್ರತಿಯೊಬ್ಬ ನಾಗರಿಕನು ಸರ್ಕಾರದ ಪರಿವರ್ತಕ ಯೋಜನೆಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ನಾವು ಮುಂದುವರಿಯಬೇಕು. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಸರ್ಕಾರವು ಹಳ್ಳಿಗಳಿಗೆ ರಸ್ತೆ ಮತ್ತು ವಿದ್ಯುತ್ ಒದಗಿಸಿದೆ. ಈಗ ಈ ಗ್ರಾಮಗಳನ್ನು ಆಪ್ಟಿಕಲ್ ಫೈಬರ್ ನೆಟ್ವರ್ಕ್ ಮತ್ತು ಅಂತರ್ಜಾಲದೊಂದಿಗೆ ಬಲಪಡಿಸಲಾಗಿದೆ.

19. ಜಲ ಜೀವನ್ ಮಿಷನ್‌ ಆರಂಭವಾದ ಕೇವಲ 2 ವರ್ಷಗಳಲ್ಲಿ 4.5 ಕೋಟಿಗೂ ಹೆಚ್ಚು ಕುಟುಂಬಗಳು ನಲ್ಲಿ ನೀರು ಪಡೆಯಲು ಪ್ರಾರಂಭಿಸಿರುವುದಕ್ಕೆ ನನಗೆ ಸಂತೋಷವಾಗಿದೆ; ಪ್ರಯೋಜನವನ್ನು ಕಟ್ಟ ಕಡೆಯ ನಾಗರಿಕನಿಗೆ ತಲುಪಿಸಿರುವುದು ನಮ್ಮ ಪ್ರಮುಖ ಸಾಧನೆಯಾಗಿದೆ.

20. ಪೋಷಣೆ ನಮ್ಮ ಸರ್ಕಾರದ ಪ್ರಮುಖ ಗಮನಗಳಲ್ಲಿ ಒಂದಾಗಿದೆ. ಸರ್ಕಾರವು ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಮತ್ತು ಕ್ಷೇಮ ಮೂಲಸೌಕರ್ಯಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿದೆ.

21. ಹಿಂದುಳಿದ ವರ್ಗಗಳು ಮತ್ತು ವಲಯಗಳನ್ನು ನಾವು ಕೈ ಹಿಡಿಯಬೇಕಾಗಿದೆ. ಮೂಲ ಅಗತ್ಯಗಳನ್ನು ಒದಗಿಸುವ ಕಳಕಳಿಯೊಂದಿಗೆ ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು, ಮತ್ತು ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಖಚಿತಪಡಿಸಲಾಗಿದೆ. ಇತ್ತೀಚೆಗೆ ವೈದ್ಯಕೀಯ ಶಿಕ್ಷಣದಲ್ಲಿ ಅಖಿಲ ಭಾರತ ಕೋಟಾದಡಿ ಒಬಿಸಿಗಳಿಗೆ ಮೀಸಲಾತಿಯನ್ನು ಖಾತ್ರಿಪಡಿಸಲಾಗಿದೆ. ಸಂಸತ್ತಿನಲ್ಲಿ ಕಾನೂನು ರೂಪಿಸುವ ಮೂಲಕ ತಮ್ಮ ಸ್ವಂತ ಒಬಿಸಿ ಪಟ್ಟಿ ರಚಿಸುವ ಹಕ್ಕುಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

 

22. ಪಡಿತರ ವ್ಯವಸ್ಥೆಯಡಿ ಅಕ್ಕಿ ಲಭ್ಯತೆ, ಮಧ್ಯಾಹ್ನದ ಬಿಸಿಯೂಟದಲ್ಲಿ ಅಕ್ಕಿ, ಪ್ರತಿಯೋಜನೆಯ ಮೂಲಕ ಅಕ್ಕಿ ಒದಗಿಸುವ ವ್ಯವಸ್ಥೆ 2024 ರ ವೇಳೆಗೆ ಬಲಪಡಿಸಲಾಗುತ್ತದೆ.

 

23. ಜಮ್ಮು – ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಯೋಗವನ್ನು ರಚಿಸಲಾಗಿದೆ ಮತ್ತು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ.  

 

24. ಹೊಸ ಪರಿವರ್ತನೆಯ ಹಂತಕ್ಕೆ ಲಡಾಖ್ ಸಾಕ್ಷಿಯಾಗುತ್ತಿದ್ದು, ಅಲ್ಲಿ ವಿಶ್ವದರ್ಜೆಯ ಮೂಲಕ ಸೌಕರ್ಯ ನಿರ್ಮಾಣ ಮಾಡುವುದರತ್ತ ಸರ್ಕಾರ ತನ್ನ ಗಮನ ಕೇಂದ್ರೀಕರಿಸಿದೆ. ಒಂದು ಕಡೆ ಲಡಾಕ್ ಆಧುನಿಕ ಮೂಲ ಸೌಕರ್ಯ ಸೃಷ್ಟಿಗೆ ಸಾಕ್ಷಿಯಾಗಿದ್ದು, ಮತ್ತೊಂದೆಡೆ “ಸಿಂಧು ಕೇಂದ್ರೀಯ ವಿಶ್ವವಿದ್ಯಾಲಯ” ಲಡಾಕ್ ಅನ್ನು ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ.

 

25. ಪ್ರವಾಸೋದ್ಯಮ, ಸಾಹಸ ಕ್ರೀಡೆ, ಸಾವಯವ ಕೃಷಿ, ಗಿಡಮೂಲಿಕೆ ಔಷಧ ಮತ್ತು ತೈಲ ಪಂಪ್ ವಲಯದಲ್ಲಿ ಈಶಾನ್ಯ ಭಾಗ ಭಾರೀ ಸಾಮರ್ಥ್ಯ ಹೊಂದಿದೆ. ನಾವು ಈ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಮತ್ತು ದೇಶದ ಅಭಿವೃದ್ಧಿ ಯಾನದಲ್ಲಿ ಇದನ್ನು ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ನಾವು “ಅಮೃತ್ ಕಾಲ್” ನ ಕೆಲವು ದಶಕಗಳ ಒಳಗಾಗಿ ಈ ಕೆಲಸವನ್ನು ಪೂರ್ಣಗೊಳಿಸಬೇಕು. ಎಲ್ಲರ ಸಾಮರ್ಥ್ಯಗಳಿಗೆ ನ್ಯಾಯಯುತ ಅವಕಾಶ ನೀಡುವುದು ಪ್ರಜಾಪ್ರಭುತ್ವದ ನಿಜವಾದ ಸ್ಪೂರ್ತಿಯಾಗಿದೆ. ಜಮ್ಮು ಅಥವಾ ಕಾಶ್ಮೀರವೇ ಇರಲಿ, ಅಭಿವೃದ್ಧಿಯ ಸಮತೋಲನ ಈ ನೆಲದ ಮೇಲೆ ಗೋಚರಿಸುತ್ತದೆ.

 

26. ಪೂರ್ವ, ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಹೀಗೆ ಸಂಪೂರ್ಣ ಹಿಮಾಲಯ ವಲಯದಲ್ಲಿಯೇ ಇರಬಹುದು, ನಮ್ಮ ಕರಾವಳಿ ಅಥವಾ ಬುಡಕಟ್ಟು ವಲಯವೇ ಆಗಿರಬಹುದು. ಇವು ಮುಂದಿನ ದಿನಗಳಲ್ಲಿ ಭಾರತದ ಅಭಿವೃದ್ಧಿಗೆ ದೊಡ್ಡ ನೆಲೆಯಾಗಲಿವೆ.

 

27. ಇಂದು ಈಶಾನ್ಯದಲ್ಲಿ ಸಂಪರ್ಕದ ಹೊಸ ಇತಿಹಾಸ ಬರೆಯಲಾಗಿದೆ. ಇದು ಹೃದಯಗಳು ಮತ್ತು ಮೂಲ ಸೌಕರ್ಯಗಳ ಸಂಪರ್ಕವಾಗಿದೆ. ಅತಿ ಶೀರ್ಘದಲ್ಲಿ ಈಶಾನ್ಯ ಭಾಗದ ಎಲ್ಲಾ ರಾಜ್ಯಗಳ ರಾಜಧಾನಿಗಳನ್ನು ರೈಲು ಸೇವೆ ಮೂಲಕ ಸಂಪರ್ಕಿಸುವ  ಕಾರ್ಯ ಪೂರ್ಣಗೊಳ್ಳಲಿದೆ.

 

28. ಪೂರ್ವದತ್ತ ನೋಡು ನೀತಿಯಡಿ ಇಂದು ಈಶಾನ್ಯ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ದಕ್ಷಿಣ ಏಷ್ಯಾ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಪ್ರಯತ್ನಗಳ ಫಲವಾಗಿ ಈಶಾನ್ಯದಲ್ಲಿ ಶ್ರೇಷ್ಠ ಭಾರತ ಮತ್ತು ದೀರ್ಘಕಾಲೀನ ಶಾಂತಿಯನ್ನು ನಿರ್ಮಿಸುವ ಉತ್ಸಾಹ ಅನೇಕಪಟ್ಟು ಹೆಚ್ಚಾಗಿದೆ.

 

29. ನಮ್ಮ ಹಳ್ಳಿಗಳಲ್ಲಿ ಅಭಿವೃದ್ಧಿ ಪಯಣದ ಹೊಸ ಹಂತಕ್ಕೆ ನಾವು ಸಾಕ್ಷಿಯಾಗಿದ್ದೇವೆ. ವಿದ್ಯುತ್ ಮತ್ತು ನೀರು ಅಷ್ಟೇ ಅಲ್ಲದೇ ಡಿಜಿಟಲ್ ಉದ್ಯಮಿಗಳನ್ನು ಪೋಷಿಸಲಾಗುತ್ತಿದೆ. 110 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಠಿಕತೆ, ರಸ್ತೆ, ಉದ್ಯೋಗಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಇವುಗಳಲ್ಲಿ ಹಲವು ಜಿಲ್ಲೆಗಳು ಬುಡಕಟ್ಟು ಪ್ರದೇಶಗಳಲ್ಲಿವೆ.

 

30. ನಾವು ಸಣ್ಣ ರೈತರಿಗೆ ಸಹಾಯಮಾಡುವತ್ತ ಗಮನಹರಿಸಬೇಕು. ಇವರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಗರಿಷ್ಠ ಪ್ರಯೋಜನ ನೀಡಬೇಕು. ಇದು ಡಿಬಿಟಿ ಅಥವಾ ಕೃಷಿ ರೈಲ್ ಮುಖಾಂತರವೇ ಆಗಿರಬಹುದು.

 

31. ಕೃಷಿ ರೈಲು ಆಧುನಿಕ ಸೌಲಭ್ಯ ಹೊಂದಿರುವ ಸಣ್ಣ ರೈತರಿಗೆ ಕಡಿಮೆ ವೆಚ್ಚದ ಸಾಗಾಣೆ ಮೂಲಕ ತಮ್ಮ ಉತ್ಪನ್ನಗಳನ್ನು ದೂರದ ಪ್ರದೇಶಗಳನ್ನು ತಲುಪಲು ಸಹಾಯ ಮಾಡುತ್ತದೆ. ಅದು ಕಮಲಂ, ಶಾಹಿ ಲಿಚಿ, ಭಟ್ ಜೊಲೊಕಿಯಾ ಮೆಣಸಿನ ಕಾಯಿ, ಕಪ್ಪು ಅಕ್ಕಿ ಅಥವಾ ಅರಿಶಿನದಂತಹ ಹಲವಾರು ಉತ್ಪನ್ನಗಳನ್ನು ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

 

32. ಇದೀಗ ಸಣ್ಣ ರೈತರ ಕಲ್ಯಾಣವನ್ನು ಸರ್ಕಾರ ಕೇಂದ್ರೀಕರಿಸಿಕೊಂಡಿದೆ. 10 ಕೋಟಿ ರೈತರು 1.5 ಲಕ್ಷ ಕೋಟಿ ರೂ ಗೂ ಹೆಚ್ಚು ಮೊತ್ತವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳ ಮೂಲಕ ಸ್ವೀಕರಿಸಿದ್ದಾರೆ.  

 

33. ಸ್ವಾಮಿತ್ವ ಯೋಜನೆ ಗ್ರಾಮೀಣ ಭಾರತದ ಜನರಲ್ಲಿ ಪರಿವರ್ತನೆ ತರುತ್ತಿದೆ. ನಮ್ಮ ಗ್ರಾಮೀಣ ನಾಗರಿಕರ ಭೂಮಿಯನ್ನು ಗುರುತಿಸಲು ಡ್ರೋನ್ ಸಹಾಯ ಮಾಡುತ್ತಿದೆ ಮತ್ತು ಆನ್ ಲೈನ್ ಮೂಲಕ ವಿವಿಧ ಯೋಜನೆಗಳು/ ಸಾಲಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

 

34. ಸಹಕಾರಿ ಎಂದರೆ ಕಾನೂನು ಮತ್ತು ನಿಯಮಗಳನ್ನೊಳಗೊಂಡ ಕೇವಲ ಒಂದು ಸಂಪರ್ಕ ಜಾಲದ ವ್ಯವಸ್ಥೆಯಲ್ಲ, ಸಹಕಾರಿ ಎನ್ನುವುದು ಒಂದು ಸ್ಪೂರ್ತಿ, ಸಂಸ್ಕೃತಿ ಮತ್ತು ಸಾಮೂಹಿಕ ಬೆಳವಣಿಗೆಯ ಮನೋಸ್ಥಿತಿಯಾಗಿದೆ. ಇವರನ್ನು ಸಬಲೀಕರಣಗೊಳಿಸಲು ಪ್ರತ್ಯೇಕ ಸಚಿವಾಲಯವನ್ನು ರಚಿಸುವ ಹೆಜ್ಜೆ ಇಟ್ಟಿದ್ದೇವೆ. ರಾಜ್ಯಗಳಲ್ಲಿ ಸಹಕಾರಿ ವಲಯವನ್ನು ಸಬಲೀಕರಣಗೊಳಿಸಲು ನಾವು ಮುನ್ನಡೆದಿದ್ದೇವೆ.  

 

35. ಮುಂಬರುವ ವರ್ಷಗಳಲ್ಲಿ ನಾವು ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಬೇಕು. ಅವರಿಗೆ ಹೊಸ ಸೌಕರ್ಯಗಳನ್ನು ಕಲ್ಪಿಸಬೇಕು. ಈ ರೈತರನ್ನು ಸ್ವಾಮಿತ್ವ ಯೋಜನೆ ಮೂಲಕ ನಾವು ಸಬಲೀರಣಗೊಳಿಸುತ್ತಿದ್ದೇವೆ.

 

36. ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ್ ಕಾರ್ಯಕ್ರಮಗಳನ್ನು 75 ವಾರಗಳ ಕಾಲ ಆಚರಿಸಲು ನಾವು ತೀರ್ಮಾನಿಸಿದ್ದೇವೆ. ಮಾರ್ಚ್ 12 ರಂದು ಇದು ಆರಂಭವಾಗಿದೆ ಮತ್ತು 2023 ರ ಆಗಸ್ಟ್ 15 ರ ವರೆಗೆ ಇದು ಮುಂದುವರೆಯಲಿದೆ. ಹೊಸ ಸ್ಪೂರ್ತಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಮತ್ತು ದೇಶ ಅತ್ಯಂತ ಉತ್ತಮ ನಿರ್ಧಾರ ಕೈಗೊಂಡಿದೆ.

 

37. ಸ್ವಾತಂತ್ರ್ಯೋತ್ಸವದ 75 ವಾರಗಳ ಅಮೃತ ಮಹೋತ್ಸವ್ ಸಂದರ್ಭದಲ್ಲಿ 75 ವಂದೇ ಭಾರತ್ ರೈಲುಗಳು ದೇಶದ ಪ್ರತಿಯೊಂದು ಮೂಲೆಯನ್ನು ತಲುಪಲಿವೆ. ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ವೇಗ ಮತ್ತು ದೂರದ ಪ್ರದೇಶಗಳನ್ನು ಸಂಪರ್ಕಿಸುವ ಉಡಾನ್ ಯೋಜನೆ ಅಭೂತಪೂರ್ವವಾಗಿದೆ.

 

38. ವಿಶ್ವದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ನಾವಿನ್ಯತೆ ಮತ್ತು ಹೊಸ ಯುಗದ ತಂತ್ರಜ್ಞಾನವನ್ನು ಬಳಸಬೇಕಿದೆ.

 

39. ಜನೌಷಧಿ ಯೋಜನೆಯಡಿ ಬಡವರು ಮತ್ತು ಅಗತ್ಯವಿರುವವರು ಕೈಗೆಟುಕುವ ದರದಲ್ಲಿ ಔಷಧಗಳನ್ನು ಪಡೆಯುತ್ತಿದ್ದಾರೆ. 75,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬ್ಲಾಕ್ ಹಂತದ ಆಸ್ಪತ್ರೆಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

 

40. ನಮ್ಮ ಅಭಿವೃದ್ಧಿ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಉತ್ಪಾದನೆ ಮತ್ತು ರಫ್ತು ವಲಯದ ಮೇಲೆ ಗಮನ ಹರಿಸಬೇಕು.

41.     ಕೊರೊನಾ ಕಾರಣದಿಂದಾಗಿ ಉಂಟಾಗಿರುವ ಹೊಸ ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ನಮ್ಮ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬಲಪಡಿಸಲು ದೇಶ ಉತ್ಪಾದನೆ ಆಧರಿತ ಪ್ರೋತ್ಸಾಹಕ ಕ್ರಮವನ್ನು ಪ್ರಕಟಿಸಿದೆ. ಈ ಯೋಜನೆ ಅನ್ವಯ ಜಾರಿಗೊಳಿಸಲಾದ ಬದಲಾವಣೆಗೆ ವಿದ್ಯುನ್ಮಾನ ಉತ್ಪಾದನಾ ವಲಯ ಉದಾಹರಣೆಯಾಗಿ ನಿಂತಿದೆ. ಏಳು ವರ್ಷದ ಹಿಂದೆ ನಾವು ಸುಮಾರು 8 ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇದೀಗ ಆಮದು ಪ್ರಮಾಣ ಗಣನೀಯವಾಗಿ ತಗ್ಗಿದೆ ಮತ್ತು ನಾವು ಇಂದು ಸುಮಾರು ಮೂರು ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನ್ ಗಳನ್ನು ರಫ್ತು ಮಾಡುತ್ತಿದ್ದೇವೆ.

 

42.     ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿರುವ ಭಾರತ, ಉತ್ಪಾದನೆ ಮತ್ತು ರಫ್ತು ಎರಡು ವಲಯಗಳಲ್ಲೂ ಬದಲಾವಣೆಗಳನ್ನು ಕಾಣುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನಾವು ದೇಶದ ಮೊದಲ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಪರೀಕ್ಷೆಯನ್ನು ಯಶಸ್ವಿಯಾಗಿ ಸಮುದ್ರದಲ್ಲಿ ನಡೆಸಿ ಅದಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ಭಾರತ ತನ್ನದೇ ಆದ ಸ್ವದೇಶಿ ಯುದ್ಧ ವಿಮಾನವನ್ನು, ತನ್ನದೇ ಆದ ಜಲಾಂತರ್ಗಾಮಿಗಳನ್ನು ಉತ್ಪಾದಿಸುತ್ತಿದೆ. ಗಗನಯಾನ ಕೂಡ ಬಾಹ್ಯಾಕಾಶ ವಲಯದಲ್ಲಿ ಭಾರತದ ಧ್ವಜವನ್ನು ಹಾರಿಸಲು ಸಜ್ಜಾಗಿದೆ. ಇದು ನಮ್ಮ ದೇಶೀಯ ಉತ್ಪಾದನೆಯ ಅಪಾರ ಸಾಮರ್ಥ್ಯಕ್ಕೆ ಪುರಾವೆಯಾಗಿದೆ.

 

43.     ನಾನು ಉತ್ಪಾದಕರಿಗೆ ಹೇಳಬಯಸುವುದೆಂದರೆ, ನೀವು ಉತ್ಪಾದಿಸುವ ಪ್ರತಿಯೊಂದು ವಸ್ತುವು ಬ್ರಾಂಡ್ ರಾಯಭಾರಿ ಆಗಲಿದೆ ಎಂದು. ನಿಮ್ಮ ಉತ್ಪನ್ನ ಬಳಕೆಯಲ್ಲಿರುವವರೆಗೆ ಖರೀದಿದಾರರು, ಹೌದು ಇದು ಮೇಡ್ ಇನ್ ಇಂಡಿಯಾ ಉತ್ಪಾದನೆ ಎಂದು ಹೇಳುತ್ತಾರೆ.

 

44.     ಸಂಕೀರ್ಣ ನೀತಿಗಳ ರೂಪದಲ್ಲಿ ನಾವು ಸರ್ಕಾರದ ಅತಿಯಾದ ಒಳಗೊಳ್ಳುವಿಕೆಯನ್ನು ನಿಲ್ಲಿಸಬೇಕಾಗಿದೆ. ಇಂದು ನಾವು ಸುಮಾರು 15 ಸಾವಿರ ಅನಗತ್ಯ ನಿಯಮ ಪಾಲನೆಗಳನ್ನು ರದ್ದುಗೊಳಿಸಿದ್ದೇವೆ.

 

45.     ಜೀವನ ಸುಗಮಗೊಳಿಸುವ ಮತ್ತು ವ್ಯವಹಾರ ಸುಲಭಗೊಳಿಸುವ ಹಲವು ತೆರಿಗೆ ಸುಧಾರಣೆಗಳನ್ನು ನಾವು ಜಾರಿಗೊಳಿಸಿದ್ದೇವೆ. ಈ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಉತ್ತಮ ಮತ್ತು ಸ್ಮಾರ್ಟ್ ಆಡಳಿತ ಅಗತ್ಯವಿದೆ. ಇಂದು ಇಡೀ ಜಗತ್ತು ಭಾರತ ಹೇಗೆ ಆಡಳಿತದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

 

46.     ಆಡಳಿತಶಾಹಿಯಲ್ಲಿ ನಾಗರಿಕ ಕೇಂದ್ರಿತ ಮನೋಭಾವವನ್ನು ಪರಿಚಯಿಸಲು ನಾವು ಮಿಷನ್ ಕರ್ಮಯೋಗಿ ಯೋಜನೆ ಮತ್ತು ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆ.

 

47.    21ನೇ ಶತಮಾನದ ಅಗತ್ಯತೆಗಳನ್ನು ಪೂರೈಸಲು ದೇಶ ಕೂಡ ಇಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊಂದಿದೆ. ಇಂದು ನಮ್ಮ ಮಕ್ಕಳು ಕೌಶಲ್ಯದ ಕೊರತೆ ಕಾರಣಕ್ಕೆ ಎಲ್ಲೂ ನಿಲ್ಲಬೇಕಾಗಿಲ್ಲ ಅಥವಾ ಭಾಷಾ ಸಮಸ್ಯೆಗಳಿಂದಾಗಿ ಹೆದರುವುದಿಲ್ಲ. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ರೀತಿಯಲ್ಲಿ ಬಡತನದ ವಿರುದ್ಧದ ಹೋರಾಟಕ್ಕೆ ದೊಡ್ಡ ಅಸ್ತ್ರವಾಗಲಿದೆ. ಬಡತನದ ವಿರುದ್ಧದ ಸಮರದಲ್ಲಿ ಗೆಲ್ಲುವ ಆಧಾರವು ಸಹ ಮಾತೃಭಾಷೆಯ ಶಿಕ್ಷಣ, ಘನತೆ ಮತ್ತು ಪ್ರಾಮುಖ್ಯತೆಯಾಗಿದೆ.

 

48      ಬೇಟಿ ಬಚಾವೊ ಬೇಟಿ ಪಢಾವೋ ಉಪಕ್ರಮವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ನಮ್ಮ ಹೆಣ್ಣುಮಕ್ಕಳು ಕೂಡ ಇನ್ನು ಮುಂದೆ ಸೈನಿಕ ಶಾಲೆಗಳಲ್ಲಿ ಓದಬಹುದಾಗಿದೆ. ಇಂದು ಶಿಕ್ಷಣವಾಗಿರಬಹುದು ಅಥವಾ ಒಲಿಂಪಿಕ್ಸ್ ಆಗಿರಬಹುದು, ನಮ್ಮ ಹೆಣ್ಣು ಮಕ್ಕಳು ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತಾ ಮತ್ತು ಅವರಿಗೆ ಸುರಕ್ಷತಾ ಭಾವನೆಯನ್ನು ಹಾಗೂ ಗೌರವವನ್ನು ನಾವು ಖಾತ್ರಿಪಡಿಸಬೇಕಿದೆ.

 

49.     ಗ್ರಾಮಗಳಲ್ಲಿನ 8 ಕೋಟಿಗೂ ಅಧಿಕ ಸಹೋದರಿಯರು ಸ್ವ-ಸಹಾಯ ಗುಂಪುಗಳ ಜತೆ ಬೆಸೆದು ಕೊಂಡಿದ್ದಾರೆ. ಅವರು ಮೊದಲಿನಿಂದ ಕೊನೆಯವರೆಗೆ ಎಲ್ಲ ಬಗೆಯ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಇದೀಗ ಸರ್ಕಾರ ದೇಶದಲ್ಲಿ ಮತ್ತು ವಿದೇಶದಲ್ಲಿ ಅವರ ಉತ್ಪನ್ನಗಳಿಗೆ ಬಹುದೊಡ್ಡ ಮಾರುಕಟ್ಟೆಯನ್ನು ಒದಗಿಸಲು ಇ-ವಾಣಿಜ್ಯ ವೇದಿಕೆಯನ್ನು ಸೃಷ್ಟಿಸಬೇಕಾಗಿದೆ. ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ, ವೋಕಲ್ ಫಾರ್ ಲೋಕಲ್ ಮಂತ್ರದೊಂದಿಗೆ ಇಡೀ ದೇಶ ಮುನ್ನಡೆಯುತ್ತಿರಬೇಕಾದರೆ ಈ ಡಿಜಿಟಲ್ ವೇದಿಕೆ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಜತೆ ದೇಶ ಮತ್ತು ವಿದೇಶಗಳಲ್ಲಿನ ದೂರ ದೂರದಲ್ಲಿರುವ ಜನರೊಂದಿಗೆ ಬೆಸೆಯಲಿದೆ ಮತ್ತು ಇದರಿಂದ ದೂರಗಾಮಿ ಪರಿಣಾಮಗಳು ಉಂಟಾಗಲಿವೆ.  

 

50.     ಭಾರತ ಇನ್ನು ಇಂಧನ ಸ್ವಾತಂತ್ರ್ಯ ಪಡೆದಿಲ್ಲ, ಇದು ಇಂಧನ ಆಮದಿಗೆ ಸುಮಾರು 12 ಲಕ್ಷ ಕೋಟಿ ರೂ. ವ್ಯಯ ಮಾಡುತ್ತಿದೆ. 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ವೇಳೆ ಭಾರತ ಕೂಡ ಇಂಧನ ಉತ್ಪಾದನೆಯಲ್ಲಿ ಆತ್ಮನಿರ್ಭರವನ್ನು ಸಾಧಿಸುತ್ತದೆ ಎಂಬುದನ್ನು ಖಾತ್ರಿಪಡಿಸಬೇಕಿದೆ.

 

51.     ನಾವು ರಾಷ್ಟ್ರೀಯ ಭದ್ರತೆಗೆ ನೀಡುವಷ್ಟೇ ಸಮಾನ ಒತ್ತನ್ನು ಪರಿಸರ ಭದ್ರತೆಗೂ ನೀಡುತ್ತಿದ್ದೇವೆ. ಅದು ಜೀವ ವೈವಿಧ್ಯವಾಗಿರಬಹುದು ಅಥವಾ ಭೂತಟಸ್ಥತೆ, ಹವಾಮಾನ ವೈಪರೀತ್ಯ ಅಥವಾ ತ್ಯಾಜ್ಯ ಸಂಸ್ಕರಣೆ, ಸಾವಯವ ಕೃಷಿ ಆಗಿರಬಹುದು. ಭಾರತ ಈ ಎಲ್ಲ ವಲಯಗಳಲ್ಲಿ ಪ್ರಗತಿ ಸಾಧಿಸುತ್ತಿದೆ.

 

52.     21ನೇ ಶತಮಾನದ ಈ ದಶಕದಲ್ಲಿ ಭಾರತ ನೀಲಿ ಆರ್ಥಿಕತೆ ನಿಟ್ಟಿನಲ್ಲಿ ತನ್ನ ಪ್ರಯತ್ನಗಳಿಗೆ ಮತ್ತಷ್ಟು ವೇಗ ನೀಡಿದೆ. ಸಾಗರದ ಅಪರಿಮಿತ ಸಾಧ್ಯತೆಗಳನ್ನು ಅನ್ವೇಷಿಸುವ ನಮ್ಮ ಮಹತ್ವಾಕಾಂಕ್ಷೆಯ ಫಲ ಡೀಪ್ ಓಶನ್ ಮಿಷನ್(ಆಳ ಸಾಗರ ಮಿಷನ್) ಆಗಿದೆ. ಸಮುದ್ರದಲ್ಲಿ ಹುದುಗಿರುವ ಖನಿಜ ಸಂಪತ್ತು, ಸಮುದ್ರದ ನೀರಿನಲ್ಲಿರುವ ಶಾಖೋತ್ಪನ್ನ ಶಕ್ತಿ, ದೇಶದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲವು.

 

53.     ಹಸಿರು ಹೈಡ್ರೋಜನ್ ಜಗತ್ತಿನ ಭವಿಷ್ಯವಾಗಿದೆ. ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಸ್ಥಾಪಿಸುವುದಾಗಿ ಇಂದು ನಾನು ಪ್ರಕಟಿಸುತ್ತಿದ್ದೇನೆ.

 

54.     ನಾವು ಭಾರತವನ್ನು ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತಿನ ತಾನ ‘ಅಮೃತ್ ಕಾಲ್’ಅನ್ನಾಗಿ ಮಾಡಬೇಕಾಗಿದೆ. ಇದು ಇಂಧನ ಸ್ವಾವಲಂಬನೆ ವಲಯದಲ್ಲಿ ಹೊಸ ಪ್ರಗತಿ ಕಾಣಲು ಭಾರತಕ್ಕೆ ಸಹಕಾರಿಯಾಗುವುದು ಮಾತ್ರವಲ್ಲದೆ, ಜಗತ್ತಿನಾದ್ಯಂತ ಶುದ್ಧ ಇಂಧನ ಪರಿವರ್ತನೆ ನಿಟ್ಟಿನಲ್ಲಿ ಹೊಸ ಸ್ಫೂರ್ತಿಯಾಗಲಿದೆ. ಇಂದು ನಮ್ಮ ನವೋದ್ಯಮಗಳು ಮತ್ತು ಯುವಜನತೆಗೆ ಹಸಿರು ಪ್ರಗತಿಯಿಂದ ಹಸಿರು ಉದ್ಯೋಗಗಳ ವರೆಗೆ ಹಲವು ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ.

 

55.     ಭಾರತ ಕೂಡ ಎಲೆಕ್ಟ್ರಿಕ್ ವಾಹನಗಳ ಸಾರಿಗೆ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಮತ್ತು ಕ್ಷಿಪ್ರಗತಿಯಲ್ಲಿ ಶೇ.100ರಷ್ಟು ರೈಲ್ವೆ ವಿದ್ಯುದೀಕರಣ ಕಾರ್ಯ ಪ್ರಗತಿಯಲ್ಲಿದೆ. ಭಾರತೀಯ ರೈಲ್ವೆ 2030ರ ವೇಳೆಗೆ ಶೂನ್ಯ ಇಂಗಾಲ ಹೊರ ಹಾಕುವ ಗುರಿಯನ್ನು ಹೊಂದಿದೆ.

 

56.     ದೇಶ ಆರ್ಥಿಕತೆ ಚಲಾವಣೆ ಯೋಜನೆಗೆ ಒತ್ತು ನೀಡುತ್ತಿದೆ. ಅದಕ್ಕೆ ನಮ್ಮ ವಾಹನ ಗುಜರಿ ನೀತಿ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತ ಇಂದು ಹವಾಮಾನ ಗುರಿಗಳನ್ನು ಅತ್ಯಂತ ವೇಗವಾಗಿ ಸಾಧಿಸುವ ನಿಟ್ಟಿನಲ್ಲಿ ಸಾಗಿರುವ ಜಿ-20 ರಾಷ್ಟ್ರಗಳ ಗುಂಪಿನ ಏಕೈಕ ರಾಷ್ಟ್ರವಾಗಿದೆ.

 

57.     ಈ ದಶಕದ ಅಂತ್ಯದ ವೇಳೆಗೆ ಅಂದರೆ 2030 ವೇಳೆಗೆ 450 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ. ಅದರಲ್ಲಿ 100 ಗಿಗಾವ್ಯಾಟ್ ಸಾಮರ್ಥ್ಯವನ್ನು ಭಾರತ ನಿಗದಿತ ಅವಧಿಗಿಂತ ಮುನ್ನವೇ ಸಾಧಿಸಿದೆ.

 

58.     ಭಾರತ ಇಂದು ಹಲವು ದಶಕಗಳು ಮತ್ತು ಶತಮಾನಗಳಿಂದ ತೂಗುಯ್ಯಾಲೆಯಲ್ಲಿದ್ದ ಹಲವು ವಲಯಗಳ ಸಮಸ್ಯೆಗಳನ್ನು ಪರಿಹರಿಸಿದೆ. ಅದು ಕಲಂ 370 ರದ್ದುಗೊಳಿಸುವ ಐತಿಹಾಸಿಕ ನಿರ್ಣಯವಾಗಿರಬಹುದು, ಜಿಎಸ್ ಟಿ ಜಾರಿ, ತೆರಿಗೆಗಳ ಜಾಲದಿಂದ ದೇಶವನ್ನು ಮುಕ್ತಗೊಳಿಸುವ ವ್ಯವಸ್ಥೆಯಾಗಿರಬಹುದು, ನಮ್ಮ ಮಿಲಿಟರಿ ಸ್ನೇಹಿತರಿಗೆ ‘ಒಂದು ಶ್ರೇಣಿ – ಒಂದು ಪಿಂಚಣಿ ಕುರಿತ ನಿರ್ಧಾರವಾಗಿರಬಹುದು, ರಾಮಜನ್ಮಭೂಮಿ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಂಡಿರುವುದು ಸೇರಿದಂತೆ ನಾವು ಕೆಲವು ವರ್ಷಗಳಿಂದೀಚೆಗೆ ಇವುಗಳೆಲ್ಲಾ ನಿಜವಾಗಿರುವುದನ್ನು ಕಾಣುತ್ತಿದ್ದೇವೆ.

 

59.     ದಶಕಗಳ ನಂತರ ತ್ರಿಪುರಾದಲ್ಲಿ ಬ್ರೂ-ರಿಯಾಂಗ್ ಒಪ್ಪಂದವಾಗಿರಬಹುದು, ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದು ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಬಿಡಿಸಿ ಮತ್ತು ಡಿಡಿಸಿ ಚುನಾವಣೆಗಳನ್ನು ನಡೆಸಿದ್ದು ಸೇರಿದಂತೆ ಭಾರತದ ಇಚ್ಛಾಶಕ್ತಿ ತನ್ನೆಲ್ಲಾ ನಿರ್ಣಯಗಳ ಮೂಲಕ ಸಾಕಾರಗೊಂಡಿದೆ.

 

60.     ಎರಡನೇ ಜಾಗತಿಕ ಯುದ್ಧದ ನಂತರ ಜಾಗತಿಕ ಸಂಬಂಧಗಳ ಸ್ವರೂಪ ಬದಲಾಗಿದೆ. ಕೊರೊನಾ ನಂತರ ಹೊಸ ಜಾಗತಿಕ ವ್ಯವಸ್ಥೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಭಾರತ ಕೊರೊನಾ ಸಮಯದಲ್ಲಿ ವಿಶ್ವ ಭಾರತದ ಪ್ರಯತ್ನಗಳನ್ನು ಕಣ್ಣಾರೆ ಕಂಡಿದೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದು ವಿಶ್ವ ಭಾರತವನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಿದೆ. ಈ ಗ್ರಹಿಕೆಯ ಎರಡು ಪ್ರಮುಖ ಅಂಶಗಳಿವೆ. ಒಂದು ಭಯೋತ್ಪಾದನೆ ಮತ್ತು ಮತ್ತೊಂದು ವಿಸ್ತರಣಾವಾದ. ಭಾರತ ಈ ಎರಡು ಬದಲಾವಣೆಗಳ ವಿರುದ್ಧ ಸೆಣೆಸುತ್ತಿದೆ ಮತ್ತು ಇವುಗಳ ವಿರುದ್ಧ ಸಂಯಮದ ಬಲದಿಂದಾಗಿ ಪ್ರತಿಕ್ರಿಯೆ ನೀಡುತ್ತಿದೆ. ಭಾರತ ತನ್ನ ಬಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಬೇಕಾದರೆ ರಕ್ಷಣಾ ಸಿದ್ಧತೆಗಳು ಅಷ್ಟೇ ಬಲಿಷ್ಠವಾಗಿರಬೇಕಾಗಿದೆ.

 

61.     ನಮ್ಮ ಯುವಕರು ‘ಏನನ್ನು ಬೇಕಾದರು’ ಮಾಡುವಂತಹ ಪೀಳಿಗೆಯವರು ಮತ್ತು ಅವರು ತಮ್ಮ ಮನಸ್ಸಿಗೆ ಬಂದಿದ್ದನ್ನು ಸಾಧಿಸದೇ ಇರಲಾರರು. ಇಂದಿನ ನಮ್ಮ ಕ್ರಿಯೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಇಂದಿನ ನಮ್ಮ ಜಗತ್ತು ಭಾರತದ 100 ವರ್ಷಗಳ ಸ್ವಾತಂತ್ರ್ಯೋತ್ಸವಕ್ಕೆ ಧ್ಯೇಯವನ್ನು ನಿಗದಿಪಡಿಸುತ್ತವೆ.

 

62.     ನಾನು ಭವಿಷ್ಯ ಹೇಳುವವನಲ್ಲ. ಆದರೆ ನಾನು ಕ್ರಿಯೆಯ ಫಲದಲ್ಲಿ ನಂಬಿಕೆ ಹೊಂದಿರುವವನು. ನನಗೆ ನಮ್ಮ ದೇಶದ ಯುವ ಜನತೆಯ ಮೇಲೆ ವಿಶ್ವಾಸವಿದೆ. ನಾನು ದೇಶದ ಸಹೋದರಿಯರ ಮೇಲೆ, ದೇಶದ ಹೆಣ್ಣು ಮಕ್ಕಳ ಮೇಲೆ, ದೇಶದ ರೈತರ ಮೇಲೆ ಅಥವಾ ದೇಶದ ವೃತ್ತಿಪರರ ಮೇಲೆ ವಿಶ್ವಾಸ ಹೊಂದಿದ್ದೇನೆ. ಈ ‘ಏನನ್ನು ಬೇಕಾದರೂ ಸಾಧಿಸುವ’ ಛಲ ಹೊಂದಿರುವ ಪೀಳಿಗೆ ಊಹಿಸಲಾಗದಂತಹ ಗುರಿಗಳನ್ನು ಸಾಧಿಸಬಲ್ಲವರು.

 

63.     21ನೇ ಶತಮಾನದಲ್ಲಿ ಭಾರತದ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯಾವುದೇ ಅಡೆ-ತಡೆಯು ನಮ್ಮನ್ನು ತಡೆಯಲಾಗದು. ನಮ್ಮ ಶಕ್ತಿಯೇ ನಮ್ಮ ಚೈತನ್ಯ, ನಮ್ಮ ಶಕ್ತಿಯೇ ನಮ್ಮ ಒಗ್ಗಟ್ಟು, ನಮ್ಮ ಚೈತನ್ಯದ ಮೊದಲ ರಾಷ್ಟ್ರದ ಚೈತನ್ಯ ಮೊದಲು-ಯಾವಾಗಲೂ ಅದೇ ಮೊದಲಾಗಿರಬೇಕು.  ಇದು ಕನಸುಗಳ ಹಂಚಿಕೆಯ ಸಮಯ, ಸಂಕಲ್ಪ ಹಂಚಿಕೊಳ್ಳುವ ಸಮಯ ಹಾಗು ಹಂಚಿಕೆಯ ಪ್ರಯತ್ನಗಳನ್ನು ಸಮಯವಾಗಿದ್ದು, ಈ ಬಾರಿ ನಾವು ಗೆಲುವಿನತ್ತ ಮುನ್ನಡೆಯುವ ಸಮಯವಾಗಿದೆ.

 

64.     ಇಂದು ದೇಶದ ಶ್ರೇಷ್ಠ ಚಿಂತಕ ಶ್ರೀ ಅರಬಿಂದೊ ಅವರ ಜನ್ಮ ವಾರ್ಷಿಕೋತ್ಸವ. ಅವರ 150ನೇ ಜಯಂತಿಯನ್ನು 2022ರಲ್ಲಿ ಆಚರಿಸಲಾಗುವುದು. ಶ್ರೀ ಅರಬಿಂದೊ ಅವರು ಭಾರತದ ಉಜ್ವಲ ಭವಿಷ್ಯದ ದಾರ್ಶನಿಕರಾಗಿದ್ದರು. ಅವರು ನಾವು ಹಿಂದೆಂದೂ ಇಲ್ಲದಷ್ಟು ಶಕ್ತಿಯುತವಾಗಿರಬೇಕು ಎಂದು ಹೇಳುತ್ತಿದ್ದರು. ನಾವು ನಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾಗಿದೆ. ನಮ್ಮನ್ನು ನಾವು ಮತ್ತೆ ಜಾಗೃತಗೊಳಿಸಿಕೊಳ್ಳಬೇಕಿದೆ.

 

65.     ಸ್ವಾಮಿ ವಿವೇಕಾನಂದರು ಭಾರತದ ಭವಿಷ್ಯದ ಕುರಿತು ಮಾತನಾಡುವಾಗ ಅವರು ತಮ್ಮ ಕಣ್ಣಿನಲ್ಲಿ ತಾಯಿ ಭಾರತಿಯ ಭವ್ಯತೆಯನ್ನು ಕಂಡಾಗ, ಅವರು ಎಷ್ಟು ಸಾಧ್ಯವೋ ಅಷ್ಟು ಹಿಂದಿನದನ್ನು ನೋಡಲು ಪ್ರಯತ್ನಿಸಿ ಎಂದು ಹೇಳಿದರು. ಅಲ್ಲಿಗೆ ಮತ್ತೆ ಹರಿಯುವ ಹೊಸ ನೀರಿನ ಬುಗ್ಗೆಯನ್ನು ಕುಡಿಯಿರಿ ಮತ್ತು ಅದರ ನಂತರ ಮುಂದೆ ನೋಡಿ, ಮುಂದುವರಿಯಿರಿ ಮತ್ತು ಭಾರತವನ್ನು ಪ್ರಕಾಶಮಾನವಾಗಿ, ಶ್ರೇಷ್ಠವಾಗು ಎಂದಿಗಿಂತಲೂ ಉತ್ತಮವಾಗಿಸಿ. 75ನೇ ಸ್ವಾತಂತ್ರ್ಯೋತ್ಸವದ ಈ ಸಮಯದಲ್ಲಿ ದೇಶದ ವಿಪುಲ ಸಾಮರ್ಥ್ಯದಲ್ಲಿ ನಂಬಿಕೆಯನ್ನಿರಿಸಿ ಮುನ್ನಡೆಯುವುದು ನಮ್ಮ ಕರ್ತವ್ಯವಾಗಿದೆ. ನಾವು ಹೊಸ ಪೀಳಿಗೆಯ ಮೂಲಸೌಕರ್ಯಕ್ಕೆ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ನಾವು ವಿಶ್ವದರ್ಜೆಯ ಉತ್ಪಾದನೆಗಾಗಿ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ; ಆವಿಷ್ಕಾರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಲು ನಾವು ಒಂದಾಗಿ ಕಾರ್ಯನಿರ್ವಹಿಸಬೇಕು. ನಾವು ಹೊಸ ಯುಗದ ತಂತ್ರಜ್ಞಾನಕ್ಕಾಗಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು.

 

****(Release ID: 1746158) Visitor Counter : 652