ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಗರಿಷ್ಠ ಜನರನ್ನು ತಲುಪುವ ವ್ಯಾಪ್ತಿ ಹಾಗೂ ಸಮಗ್ರ ಒಲಿಂಪಿಕ್ಸ್ ಕ್ರೀಡಾಕೂಟ ವರದಿಗಾರಿಕೆಯಿಂದಾಗಿ ಲಕ್ಷಾಂರತರ ಡಿಜಿಟಲ್ ವೀಕ್ಷಣೆಯೊಂದಿಗೆ ಹೊಸ ದಾಖಲೆಗೆ ಸಾಕ್ಷಿಯಾದ ಪ್ರಸಾರ ಭಾರತಿ

Posted On: 13 AUG 2021 12:17PM by PIB Bengaluru

ಟೋಕಿಯೊ ಒಲಿಂಪಿಕ್ಸ್ 2020ರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ನಿಯೋಗವು ಒಲಿಂಪಿಕ್ಸ್‌ನಲ್ಲಿ ಭಾರತದ ಅನೇಕ ಚೊಚ್ಚಲ ದಾಖಲೆಗಳೊಂದಿಗೆ ವಿಜಯಶಾಲಿಯಾಗಿ ತವರಿಗೆ ಮರಳಿತು. ಈ ಅಭೂತಪೂರ್ವ ಸಾಧನೆಯು ನವ ಭಾರತಕ್ಕೆ ಹೊಸ ಭರವಸೆಯನ್ನು ನೀಡಿದೆ. ಭಾರತದ ಮೂಲೆ ಮೂಲೆಗೂ ತಲುಪುವ ತನ್ನ ಪ್ರಸಾರದ ಮೂಲಕ ಈ ಭರವಸೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪುವಂತೆ ಮಾಡುವಲ್ಲಿ ಪ್ರಸಾರ ಭಾರತಿ ಸಮಗ್ರ ಪಾತ್ರ ವಹಿಸಿದೆ ಎಂದು ಹೇಳಲು ಹರ್ಷವೆನಿಸುತ್ತದೆ.

ನಮ್ಮ ಚಾಂಪಿಯನ್‌ಗಳು ವಿವಿಧ ಒಲಿಂಪಿಕ್ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಹೊಸ ದಾಖಲೆಗಳನ್ನು ಮಾಡಿದಾಗ ಪ್ರಸಾರ ಭಾರತಿಯು ಟಿವಿ, ರೇಡಿಯೋ ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ತನ್ನ ಪ್ರಸಾರ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ನಮ್ಮ ಒಲಿಂಪಿಕ್ಸ್‌ ಗೆಲುವುಗಳ ಅದ್ಭುತ ಕ್ಷಣಗಳ ದೃಶ್ಯವನ್ನು ಮನೆ ಮನೆಗೆ ತಲುಪಿಸಿತು.

ʻಡಿಡಿ ಸ್ಪೋರ್ಟ್ಸ್ʼ ಮತ್ತು ʻಆಲ್ ಇಂಡಿಯಾ ರೇಡಿಯೋ ಸ್ಪೋರ್ಟ್ಸ್ʼ ಜಾಲದ ಪ್ರಸಾರವು ಎಲ್ಲಾ ವಯೋಮಾನದವರು, ಲಿಂಗ, ವರ್ಗ ಮತ್ತು ಪ್ರದೇಶಗಳ ಭಾರತೀಯರಲ್ಲಿ ಭಾರಿ ಜನಪ್ರಿಯವಾಗಿದೆ.  ಪ್ರಸಾರ ಭಾರತಿಯ ಅನೇಕ ಯೂಟ್ಯೂಬ್ ಚಾನೆಲ್‌ಗಳು ಮತ್ತು ʻನ್ಯೂಸ್ ಆನ್ ಏರ್ʼ ಆ್ಯಪ್ ಒಟ್ಟಿಗೆ ಲಕ್ಷಾಂತರ ವೀಕ್ಷಣೆಯನ್ನು ದಾಖಲಿಸುವ ಮೂಲಕ ಇದು ಸಾಬೀತಾಗಿದೆ.

ದಾಖಲೆ ಅಂಕಿ-ಅಂಶಗಳ ಪಕ್ಷಿನೋಟ:

ಜವಾಬ್ದಾರಿಯುತ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿ ಪ್ರಸಾರ ಭಾರತಿಯು ತನ್ನ ಪ್ರಸಾರವನ್ನು ದೂರದ ಪ್ರದೇಶಗಳಲ್ಲಿರುವವರಿಗೆ ಅಥವಾ ಕಡಿಮೆ ಸೌಲಭ್ಯಗಳನ್ನು ಹೊಂದಿರುವವರಿಗೆ ಮಾತ್ರ ತಲುಪಿಸುವುದಲ್ಲದೆ ವಿಶೇಷ ಚೇತನ ನಾಗರಿಕರಿಗೂ ಅದು ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ.  ಒಲಿಂಪಿಕ್ಸ್‌ ಪ್ರಸಾರಕ್ಕಾಗಿ, ಪ್ರಸಾರ ಭಾರತಿಯು 14 ಸಂಜ್ಞೆ ಭಾಷಾ ಕಲಾವಿದರನ್ನು ನೇಮಿಸಿಕೊಂಡಿತು. ಅವರು 240 ಗಂಟೆಗಳ ಒಲಿಂಪಿಕ್ಸ್ ನೇರ ಪ್ರಸಾರವನ್ನು ಸಂಕೇತ ಭಾಷೆಯಲ್ಲಿ ಪ್ರಸ್ತುತಪಡಿಸಿದರು. ನಮ್ಮ ರೇಡಿಯೋ ಪ್ರೇಕ್ಷಕರಿಗಾಗಿ, 16 ಅಖಿಲ ಭಾರತ ರೇಡಿಯೋ ವ್ಯಾಖ್ಯಾನಕಾರರು ವಿವಿಧ ಒಲಿಂಪಿಕ್ಸ್‌ ಸ್ಪರ್ಧೆಗಳಲ್ಲಿ ಕ್ಷಣ ಕ್ಷಣವೂ ಏನು ನಡೆಯುತ್ತಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ಒದಗಿಸಿದರು.

ಟೋಕಿಯೋ ಒಲಿಂಪಿಕ್ಸ್ 2020 ಕುರಿತಾದ ನಮ್ಮ ಡಿಜಿಟಲ್ ಪ್ರಸಾರವು ಸಮಗ್ರ ಮತ್ತು ಬಹುಮುಖಿಯಾಗಿತ್ತು. ಒಲಿಂಪಿಕ್ಸ್‌ ಕ್ರೀಡಾ ಕೂಟಗಳ ನೇರ ಪ್ರಸಾರದ ಜೊತೆಗೆ, ನಮ್ಮ ಪ್ರಸಾರವು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ನೇರ ಪ್ರಸಾರವನ್ನೂ ಒಳಗೊಂಡಿತ್ತು.  ಭಾರತೀಯ ಶ್ರೇಷ್ಠ ಕ್ರೀಡಾ ಗಣ್ಯರೊಂದಿಗೆ ವಿಶೇಷ ವರ್ಚುವಲ್ ಸಮಾವೇಶ, ಭಾರತೀಯ ಒಲಿಂಪಿಕ್ಸ್‌ ತಂಡದ ಸದಸ್ಯರ ಜೀವನಚರಿತ್ರೆಗಳು ಮತ್ತು ಯಶೋಗಾಥೆಗಳು, ದೇಶಾದ್ಯಂತ ಅವರ ಗೆಲುವಿನ ವಿಜಯೋತ್ಸವಗಳು ಸೇರಿದಂತೆ ಹತ್ತಾರು ವಿಷಯಗಳ ಪ್ರಸಾರವನ್ನೂ ಅದು ಒಳಗೊಂಡಿತ್ತು.

***



(Release ID: 1745396) Visitor Counter : 287