ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದಲ್ಲಿ ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನಾ-ಪಿ.ಎಂ.ಯು.ವೈ.) ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 10 AUG 2021 3:09PM by PIB Bengaluru

ನಮಸ್ಕಾರ,

ಈಗಷ್ಟೇ ನನಗೆ ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಜೊತೆ ಮಾತನಾಡುವ ಅವಕಾಶ ಲಭಿಸಿತು. ಕೆಲವು ದಿನಗಳ ಬಳಿಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದು ನನಗೆ ಸಂತೋಷದ ಸಂಗತಿ ಮತ್ತು ನನಗೆ ತಾಯಂದಿರ ಹಾಗು ಸಹೋದರಿಯರ ಆಶೀರ್ವಾದ ಮುಂಚಿತವಾಗಿಯೇ ಸಿಕ್ಕಿದೆ. ಇಂದು ನನಗೆ ದೇಶದ ಕೋಟ್ಯಂತರ ಬಡವ, ದಲಿತ, ಅವಕಾಶ ವಂಚಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಸಹೋದರಿಯರಿಗೆ ಇನ್ನೊಂದು ಕೊಡುಗೆಯನ್ನು ನೀಡುವ ಅವಕಾಶ  ದೊರಕಿದೆ. ಇಂದು ಹಲವು ಸಹೋದರಿಯರು ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ಯಾಸ್ ಸ್ಟವ್ (ಅನಿಲ ಒಲೆಗಳನ್ನು) ಉಜ್ವಲ ಯೋಜನೆಯ ಎರಡನೇ ಹಂತದ ಅಂಗವಾಗಿ ಪಡೆಯುತ್ತಿದ್ದಾರೆ. ಎಲ್ಲಾ ಫಲಾನುಭವಿಗಳಿಗೆ ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಮಹೋಬಾದಲ್ಲಿ ಹಾಜರಿರುವ ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ನನ್ನ ಸಂಪುಟದ ಇನ್ನೋರ್ವ ಸಹೋದ್ಯೋಗಿ ರಾಮೇಶ್ವರ ತೇಲಿ ಜೀ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಾ ಜೀ, ಡಾ. ದಿನೇಶ್ ಶರ್ಮಾ ಜೀ, ಉತ್ತರ ಪ್ರದೇಶ ಸರಕಾರದ ಎಲ್ಲಾ ಸಚಿವರೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಎಲ್ಲಾ ಗೌರವಾನ್ವಿತ ಶಾಸಕರೇ ಮತ್ತು ನನ್ನ ಸಹೋದರರೇ ಮತ್ತು ಸಹೋದರಿಯರೇ,

ಉಜ್ವಲಾ ಯೋಜನೆಯು ಬೆಳಗಿದ ಜನರ ಮತ್ತು ಮಹಿಳೆಯರ ಸಂಖ್ಯೆ ಅಭೂತಪೂರ್ವ. ಯೋಜನೆಯನ್ನು 2016 ರಲ್ಲಿ ಉತ್ತರ ಪ್ರದೇಶದ ಬಲ್ಲಿಯಾದಿಂದ, ಸ್ವಾತಂತ್ರ್ಯ ಹೋರಾಟದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಮಂಗಲ್ ಪಾಂಡೇ ಜೀ ಅವರ ನೆಲದಿಂದ ಅರಂಭಿಸಲಾಯಿತು. ಉಜ್ವಲಾದ ಎರಡನೇ ಹಂತ ಕೂಡಾ ಮಹೋಬಾದಿಂದ, ಉತ್ತರ ಪ್ರದೇಶದ ವೀರ ಭೂಮಿಯಿಂದ  ಆರಂಭವಾಗುತ್ತಿದೆ. ಮಹೋಬಾ ಇರಲಿ ಅಥವಾ ಬುಂದೇಲ್ ಖಂಡ ಇರಲಿ, ಇವು ದೇಶದ ಸ್ವಾತಂತ್ರ್ಯದ ಸ್ಫೂರ್ತಿಯ ಸ್ಥಳಗಳು. ಇಲ್ಲಿಯ ಪ್ರತಿಯೊಂದು ಕಣವೂ ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ಮಹಾರಾಜ ಛತ್ರಸಾಲ್, ವೀರ ಅಲ್ಹಾ ಮತ್ತು ಉದಾಲ್ ರಂತಹ ಹಲವು ನಾಯಕ-ನಾಯಕಿಯರ ನಾಯಕತ್ವದ ಕಥೆಗಳ ಸುವಾಸನೆಯನ್ನು ಹೊಂದಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶವು ಆಚರಿಸುತ್ತಿರುವ ಸಂದರ್ಭದಲ್ಲಿ , ಕಾರ್ಯಕ್ರಮ ನಮ್ಮ ಶ್ರೇಷ್ಠ ವ್ಯಕ್ತಿತ್ವಗಳನ್ನು ಸ್ಮರಿಸುವ ಒಂದು ಸಂದರ್ಭ.

ಸ್ನೇಹಿತರೇ,

ಇಂದು ನಾನು ಬುಂದೇಲ್ ಖಂಡದ ಇನ್ನೋರ್ವ ಶ್ರೇಷ್ಠ ಅದ್ಭುತ ಆಟಗಾರರಾದ ಮೇಜರ್ ಧ್ಯಾನ್ ಚಂದ್ , ನಮ್ಮ ದಾದಾ ಧ್ಯಾನ್ ಚಂದ್ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ದೇಶದ ಅತ್ಯುಚ್ಚ ಕ್ರೀಡಾ ಪುರಸ್ಕಾರದ ಹೆಸರು ಈಗ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದಾಗಿದೆ. ದಾದಾ ಅವರ ಹೆಸರು ಈಗ  ಖೇಲ್ ರತ್ನದ ಜೊತೆ ಸೇರಿಕೊಂಡಿದೆ ಮತ್ತು ಒಲಿಂಪಿಕ್ಸ್ ನಲ್ಲಿ ನಮ್ಮ ಯುವ ಆಟಗಾರರ ಸಾಧನೆಯ ಹಿನ್ನೆಲೆಯಲ್ಲಿ ಅದು ಲಕ್ಷಾಂತರ ಮತ್ತು ಕೋಟ್ಯಾಂತರ ಯುವಜನತೆಯನ್ನು ಪ್ರೇರೇಪಿಸಬಲ್ಲದು ಎಂಬುದರ ಬಗ್ಗೆ  ನನಗೆ ಖಚಿತ ಭರವಸೆ ಇದೆ. ಬಾರಿ ನಮ್ಮ ಆಟಗಾರರು ಪದಕಗಳನ್ನು ಗೆದ್ದಿರುವುದು ಮಾತ್ರವಲ್ಲ, ಹಲವು ಕ್ರೀಡೆಗಳಲ್ಲಿ ಉತ್ತಮವಾಗಿ ಸಾಧನೆ ತೋರಿ ಉತ್ತಮ ಭವಿಷ್ಯವನ್ನು ಹಾಕಿಕೊಟ್ಟಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುವ ದಿಕ್ಕಿನಲ್ಲಿದ್ದೇವೆ. ಆದರೆ ನಾವು ಕಳೆದ ಏಳುವರೆ ದಶಕಗಳ ಸಾಧನೆಯನ್ನು ಗಮನಿಸಿದರೆ, ಕೆಲವು ಪರಿಸ್ಥಿತಿಗಳನ್ನು ಹಲವು ದಶಕಗಳ ಹಿಂದೆಯೇ ಬದಲಿಸಬಹುದಿತ್ತೇನೋ ಎಂಬ ಭಾವನೆ ನನಗೆ ಬರುತ್ತದೆ. ಅಲ್ಲಿ ಮನೆ, ವಿದ್ಯುತ್, ನೀರು, ಶೌಚಾಲಯ, ಅನಿಲ, ರಸ್ತೆ, ಆಸ್ಪತ್ರೆ, ಮತ್ತು ಶಾಲೆಗಳಂತಹ ಮೂಲ ಆವಶ್ಯಕತೆಗಳು ಬಹಳವಿವೆ, ಅದಕ್ಕಾಗಿ ದೇಶವಾಸಿಗಳು ದಶಕಗಳ ಕಾಲ ಕಾಯಬೇಕಾಯಿತು ಎನ್ನುವುದು ದುರಂತದ ಸಂಗತಿ. ನಿರ್ಲಕ್ಷ್ಯದಿಂದ ನಮ್ಮ ಮಾತೆಯರು ಮತ್ತು ಸಹೋದರಿಯರು ಬಹಳ ತೊಂದರೆಗಳನ್ನು ಅನುಭವಿಸಬೇಕಾಯಿತು. ಅದರಲ್ಲೂ ಬಡ ಮಾತೆಯರು ಮತ್ತು ಸಹೋದರಿಯರು ಬಹಳ ನೋವುಗಳಿಗೆ ಸಿಲುಕಿಕೊಂಡರುಗುಡಿಸಲಿನ ಮಾಡು ಸೋರುತ್ತಿದ್ದರೆ ಅದರ ಸಮಸ್ಯೆಯನ್ನು ಎದುರಿಸಬೇಕಾದುದು ಮಾತೆಯರು. ವಿದ್ಯುತ್ ಇಲ್ಲದಿದ್ದರೆ ತೊಂದರೆ ಮಾತೆಯರಿಗೆ, ಮಾಲಿನ್ಯಯುಕ್ತ ನೀರಿನಿಂದಾಗಿ ಕುಟುಂಬ ಅನಾರೋಗ್ಯಕ್ಕೀಡಾದರೆ, ಆಗಲೂ ಮಾತೆಗೆ ಬಹಳ ಸಂಕಷ್ಟ. ಶೌಚಾಲಯಗಳಿಲ್ಲದಿದ್ದರೆ ಮಾತೆಯರು ಮತ್ತು ಸಹೋದರಿಯರು ಹೊರಗೆ ಹೋಗಲು ಕತ್ತಲಾಗುವವರೆಗೆ ಕಾಯಬೇಕಾಗುವ ಸಮಸ್ಯೆ ಇತ್ತು. ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಇಲ್ಲದಿದ್ದರೆ ಆಗಲೂ ನಮ್ಮ ಸಹೋದರಿಯರಿಗೆ ತೊಂದರೆ. ಮಾತೆಯರು ಅಡುಗೆ ಕೋಣೆಯಲ್ಲಿ ಬೆಂಕಿಯ ಬಿಸಿಗೆ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವುದನ್ನು ನೋಡುತ್ತಲೇ ನಮ್ಮಂತಹ ಅನೇಕ ತಲೆಮಾರುಗಳು ಬೆಳೆದು ಬಂದಿವೆ.

ಸ್ನೇಹಿತರೇ,

ನಾವು ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯದ ನೂರನೇ ವರ್ಷದತ್ತ ಸಾಗುವುದೇ?. ನಾವು ನಮ್ಮ ಶಕ್ತಿಯನ್ನು ಬರೇ ಮೂಲ ಆವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕಷ್ಟೇ ಸೀಮಿತ ಮಾಡಿಕೊಳ್ಳಬೇಕೇ?. ಒಂದು ಕುಟುಂಬ, ಒಂದು ಸಮಾಜ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಲಿದ್ದರೆ, ಆಗ ದೊಡ್ಡ ಕನಸುಗಳನ್ನು ನನಸು ಮಾಡುವುದು ಹೇಗೆ?. ಸಮಾಜ ಅವುಗಳನ್ನು ಈಡೇರಿಸುವ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಆಗ ಕನಸುಗಳು ನನಸಾಗುವುದಾದರೂ ಹೇಗೆ?. ಮತ್ತು ದೇಶವು ಆತ್ಮವಿಶ್ವಾಸ ಹೊಂದಿಲ್ಲದಿದ್ದರೆ ಅದು ಸ್ವಾವಲಂಬನೆ ಸಾಧಿಸುವುದಾದರೂ ಹೇಗೆ?.

ಸಹೋದರರೇ ಮತ್ತು ಸಹೋದರಿಯರೇ,

ದೇಶವು ನಮಗೆ 2014ರಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಕೊಟ್ಟಾಗ , ನಾವು ನಮ್ಮಲ್ಲಿಯೇ ಪ್ರಶ್ನೆಗಳನ್ನು ಕೇಳಿಕೊಂಡಿದ್ದೆವು. ಒಂದು ನಿರ್ದಿಷ್ಟ ಅವಧಿಯೊಳಗೆ ನಾವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಬಹಳ ಸ್ಪಷ್ಟವಾಗಿತ್ತು. ನಮ್ಮ ಪುತ್ರಿಯರು ಮನೆಯಿಂದ ಹೊರ ಬಂದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಿದ್ದರೆ ಅವರಿಗೆ ಸಂಬಂಧಿಸಿದ ಮನೆ ಮತ್ತು ಅಡುಗೆ ಮನೆಯ ಸಮಸ್ಯೆಗಳನ್ನು ಮೊದಲು ಪರಿಹಾರ ಮಾಡಬೇಕಾಗಿತ್ತು. ಆದುದರಿಂದ ಪರಿಹಾರಗಳನ್ನು ಹುಡುಕಲು ಕಳೆದ 6-7 ವರ್ಷಗಳಲ್ಲಿ ಪ್ರತಿಯೊಂದನ್ನೂ ಆಂದೋಲನ ರೀತಿಯಲ್ಲಿ ಮಾಡಲಾಯಿತು. ಸ್ವಚ್ಛ ಭಾರತ್ ಆಂದೋಲನ ಅಡಿಯಲ್ಲಿ ದೇಶದಲ್ಲಿ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಯಿತು. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಬಡವರಿಗಾಗಿ 2 ಕೋಟಿಗೂ ಅಧಿಕ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಲಾಯಿತು. ಬಹುತೇಕ ಮನೆಗಳ ಮಾಲಕತ್ವ ನಮ್ಮ ಸಹೋದರಿಯರ ಕೈಯಲ್ಲಿದೆ. ನಾವು ಸಾವಿರಾರು ಕಿಲೋ ಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಿದೆವು. ಸೌಭಾಗ್ಯ ಯೋಜನೆಯ ಮೂಲಕ ಸುಮಾರು 3 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿದೆವು. ಆಯುಷ್ಮಾನ್ ಭಾರತ್ ಯೋಜನೆಯು 50 ಕೋಟಿಗೂ ಅಧಿಕ ಜನರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತಿದೆ. ಮಾತೃ ವಂದನಾ ಯೋಜನಾ ಅಡಿಯಲ್ಲಿ ಗರ್ಭಿಣಿಯರಿಗೆ ಪೋಷಕಾಂಶಯುಕ್ತ ಆಹಾರ ಮತ್ತು ಲಸಿಕಾಕರಣಕ್ಕಾಗಿ ಸಾವಿರಾರು ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.   ಜನ್ ಧನ್ ಯೋಜನಾ ಅಡಿಯಲ್ಲಿ ಕೋಟ್ಯಂತರ ಸಹೋದರಿಯರು  ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಕೊರೊನಾ ಅವಧಿಯಲ್ಲಿ ಸುಮಾರು 30,000 ಕೋ.ರೂ.ಗಳನ್ನು ಸರಕಾರ ಖಾತೆಗಳಿಗೆ ಜಮಾ ಮಾಡಿದೆ. ಈಗ ಜಲ್ ಜೀವನ್ ಆಂದೋಲನದ ಮೂಲಕ ಗ್ರಾಮೀಣ ಕುಟುಂಬಗಳ ನಮ್ಮ ಸಹೋದರಿಯರಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ

ಸ್ನೇಹಿತರೇ,

ಉಜ್ವಲಾ ಯೋಜನೆಯು ಆರೋಗ್ಯ, ಅನುಕೂಲ ಮತ್ತು ಸಹೋದರಿಯರ ಸಶಕ್ತೀಕರಣವನ್ನು ಖಾತ್ರಿಪಡಿಸುವ ದೃಢ ಸಂಕಲ್ಪಕ್ಕೆ ದೊಡ್ಡ ಒತ್ತನ್ನು ನೀಡಿದೆ. ಯೋಜನೆಯ ಮೊದಲ ಹಂತದಲ್ಲಿ ಎಂಟು ಕೋಟಿ ಬಡವರು, ದಲಿತರು, ಅವಕಾಶವಂಚಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕಗಳನ್ನು ನೀಡಲಾಗಿತ್ತು. ಇದರ ಪ್ರಯೋಜನಗಳನ್ನು ನಾವು ಕೊರೊನಾ ಅವಧಿಯಲ್ಲಿ  ನೋಡಿದ್ದೇವೆ. ಸಂಚಾರ ಇಲ್ಲದಾಗ ಮತ್ತು ವ್ಯಾಪಾರೋದ್ಯಮಗಳು ಮುಚ್ಚಲ್ಪಟ್ಟಿದ್ದಾಗ, ಕೋಟ್ಯಂತರ ಬಡ ಕುಟುಂಬಗಳಿಗೆ ಹಲವಾರು ತಿಂಗಳುಗಳ ಕಾಲ ಉಚಿತ ಅನಿಲ ಸಿಲಿಂಡರ್ ಗಳನ್ನು ನೀಡಲಾಯಿತು. ಕಲ್ಪಿಸಿಕೊಳ್ಳಿ, ಉಜ್ವಲಾ ಯೋಜನೆ ಜಾರಿಯಲ್ಲಿರದಿದ್ದರೆ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಬಡ ಸಹೋದರಿಯರ ಪರಿಸ್ಥಿತಿ ಏನಾಗುತ್ತಿತ್ತು?

ಸ್ನೇಹಿತರೇ,

ಉಜ್ವಲಾ ಯೋಜನೆಯ ಇನ್ನೊಂದು ಪರಿಣಾಮ ಎಂದರೆ ಇಡೀ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹಲವು ಪಟ್ಟು ವಿಸ್ತರಿಸಿದೆ. ಕಳೆದ 6-7 ವರ್ಷಗಳಲ್ಲಿ ದೇಶಾದ್ಯಂತ 11,000 ಹೊಸ ಎಲ್.ಪಿ.ಜಿ. ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉತ್ತರ ಪ್ರದೇಶ ಒಂದರಲ್ಲಿಯೇ 2014ರಲ್ಲಿ 2,000ಕ್ಕಿಂತ ಕಡಿಮೆ ವಿತರಣಾ ಕೇಂದ್ರಗಳಿದ್ದವು. ಇಂದು ಅವುಗಳು 4,000 ವನ್ನು ದಾಟಿದೆ. ಇದರಿಂದಾಗಿ ಸಾವಿರಾರು ಯುವಜನತೆಗೆ ಉದ್ಯೋಗ ದೊರೆತಿದೆ. ಮತ್ತು ಎರಡನೆಯದಾಗಿ ಮೊದಲು ಅಡುಗೆ ಅನಿಲ ಸಂಪರ್ಕದಿಂದ ವಂಚಿತರಾದವರು ಈಗ ಅದನ್ನು ಪಡೆದಿದ್ದಾರೆ. ಪ್ರಯತ್ನಗಳಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ವ್ಯಾಪ್ತಿ ಸರಿಸುಮಾರು 100% ಹತ್ತಿರ ಬಂದಿದೆ. ದೇಶದಲ್ಲಿ 2014ರವರೆಗೆ ಇದ್ದುದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕಗಳನ್ನು ಕಳೆದ 7 ವರ್ಷಗಳಲ್ಲಿ ನೀಡಲಾಗಿದೆ. ಮೊದಲು ಇದ್ದ ಸಿಲಿಂಡರ್ ಬುಕ್ಕಿಂಗ್ ಮತ್ತು ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ಜಾರಿಯಲ್ಲಿವೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಉಜ್ವಲಾ ಯೋಜನೆಯಲ್ಲಿದ್ದ ಹಾಲಿ ಸೌಲಭ್ಯಗಳ ಜೊತೆಗೆ ಇನ್ನೊಂದು ಸೌಲಭ್ಯವನ್ನು ಸೇರಿಸಲಾಗಿದೆ. ಬುಂದೇಲ್ ಖಂಡ ಸಹಿತ ಇಡೀ ಉತ್ತರ ಪ್ರದೇಶದಿಂದ ಮತ್ತು ಇತರ ರಾಜ್ಯಗಳಿಂದ ನಮ್ಮ ಅನೇಕ ಸಹಚರರು ಗ್ರಾಮಗಳಿಂದ ಇತರ ರಾಜ್ಯಗಳ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಆದರೆ ಅವರು ವಿಳಾಸದ ಪುರಾವೆ/ದಾಖಲೆಯ ಸಮಸ್ಯೆ ಎದುರಿಸುತ್ತಾರೆ. ಉಜ್ವಲಾ ಎರಡನೆಯ ಹಂತದ ಯೋಜನೆ ಇಂತಹ ಲಕ್ಷಾಂತರ ಕುಟುಂಬಗಳಿಗೆ ಪರಿಹಾರ ಒದಗಿಸಬಲ್ಲದು. ಈಗ ನನ್ನ ಕಾರ್ಮಿಕ ಸಹೋದ್ಯೋಗಿಗಳು ವಿಳಾಸದ ದಾಖಲೆಗಾಗಿ ಅಲೆದಾಡಬೇಕಾಗಿಲ್ಲ. ಸರಕಾರ ನಿಮ್ಮ ಪ್ರಾಮಾಣಿಕತೆಯ ಮೇಲೆ ಪೂರ್ಣ ವಿಶ್ವಾಸವನ್ನು ಹೊಂದಿದೆ. ನೀವೆಲ್ಲರೂ ಮಾಡಬೇಕಾದುದಿಷ್ಟೇ, ನೀವು ನಿಮ್ಮ ವಿಳಾಸದ ಬಗ್ಗೆ ಬರಹದ ಮೂಲಕ ಸ್ವಯಂಘೋಷಣೆ ನೀಡಬೇಕು ಮತ್ತು ಆಗ ನೀವು ಅಡುಗೆ ಅನಿಲ ಸಂಪರ್ಕ ಪಡೆಯುತ್ತೀರಿ.

ಸ್ನೇಹಿತರೇ,

ನಿಮ್ಮ ಅಡುಗೆ ಮನೆಯಲ್ಲಿ ಕೊಳವೆ ಮೂಲಕ ನೀರು ಬರುವಂತೆಕೊಳವೆ ಮೂಲಕ ಅನಿಲ ಪೂರೈಸುವ ನಿಟ್ಟಿನಲ್ಲಿ ಈಗ ಸರಕಾರವು ಕಾರ್ಯೋನ್ಮುಖವಾಗಿದೆ. ಪಿ.ಎನ್.ಜಿ.ಯು ಅನಿಲ ಜಾಡಿಯ ಮೂಲಕ ಪೂರೈಕೆಯಾಗುವ ಅನಿಲಕ್ಕಿಂತ ಕಡಿಮೆ ಖರ್ಚಿನದು. ಉತ್ತರ ಪ್ರದೇಶ ಸಹಿತ ಪೂರ್ವ ಭಾರತದ ಹಲವು ರಾಜ್ಯಗಳಲ್ಲಿ ಪಿ.ಎನ್.ಜಿ. ಸಂಪರ್ಕಗಳನ್ನು ಒದಗಿಸುವ ಕಾರ್ಯ ತ್ವರಿತಗತಿಯಿಂದ ಸಾಗುತ್ತಿದೆ. ಮೊದಲ ಹಂತದಲ್ಲಿ ಉತ್ತರ ಪ್ರದೇಶದ 50 ಕ್ಕೂ ಅಧಿಕ  ಜಿಲ್ಲೆಗಳಲ್ಲಿ ಸುಮಾರು 21 ಲಕ್ಷ ಮನೆಗಳಿಗೆ ಅನಿಲ ಸಂಪರ್ಕ ಒದಗಿಸುವ ಗುರಿ ಹಾಕಲಾಗಿದೆ. ಅದೇ ರೀತಿ ಸಿ.ಎನ್.ಜಿ. ಆಧಾರಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ  ಪ್ರಯತ್ನವೂ  ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕನಸುಗಳು ದೊಡ್ಡದಿರುವಾಗ, ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳೂ ಅಷ್ಟೇ ದೊಡ್ಡದಿರಬೇಕಾಗುತ್ತದೆ. ಇಂದು ಜೈವಿಕ ಇಂಧನ ದಿನದ ಸಂದರ್ಭದಲ್ಲಿ, ನಾವು ನಮ್ಮ ಗುರಿಗಳನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳಬೇಕಾಗುತ್ತದೆ. ನಾವು ಈಗಷ್ಟೇ ಜೈವಿಕ ಇಂಧನ ಕ್ಷೇತ್ರದಲ್ಲಿ ಏನಾಗುತ್ತಿದೆ  ಎಂಬುದರ ಬಗ್ಗೆ ಸಾಕ್ಷ್ಯಚಿತ್ರವನ್ನು ನೋಡಿದೆವು. ಜೈವಿಕ ಅನಿಲ ಬರೇ ಸ್ವಚ್ಛ ಇಂಧನ ಮಾತ್ರವಲ್ಲ, ಇದು ಇಂಧನ ವಲಯದಲ್ಲಿ ಸ್ವಾವಲಂಬನೆಯ ಇಂಜಿನಿನ ವೇಗವನ್ನು ವರ್ಧಿಸುವ ಮಾಧ್ಯಮ. ದೇಶದ ಅಭಿವೃದ್ಧಿಯ ಇಂಜಿನನ್ನು ಮತ್ತು ಗ್ರಾಮಗಳ , ಹಳ್ಳಿಗಳ ಅಭಿವೃದ್ಧಿಯನ್ನು ವೇಗವರ್ಧಕಗೊಳಿಸುವ ಮಾಧ್ಯಮ. ಜೈವಿಕ ಇಂಧನವನ್ನು ನಾವು ಮನೆಗಳಿಂದ, ಕೃಷಿ ತ್ಯಾಜ್ಯದಿಂದ, ಸಸ್ಯಗಳಿಂದ, ಕೊಳೆತ ಧಾನ್ಯಗಳಿಂದ ಪಡೆಯಬಹುದು. ದೇಶವು ಜೈವಿಕ ಇಂಧನ ಎಥೆನಾಲ್ ಗುರಿಯ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಕಳೆದ 6-7 ವರ್ಷಗಳಲ್ಲಿ ನಾವು ಪೆಟ್ರೋಲಿನಲ್ಲಿ 10 ಪ್ರತಿಶತ ಬ್ಲೆಂಡ್ ಮಾಡುವ ಗುರಿಗೆ ಹತ್ತಿರದಲ್ಲಿದ್ದೇವೆ. ಮುಂದಿನ 4-5 ವರ್ಷಗಳಲ್ಲಿ 20ಪ್ರತಿಶತ ಬ್ಲೆಂಡ್ ಮಾಡುವ ಗುರಿಯತ್ತ ನಾವು ಸಾಗಲಿದ್ದೇವೆ. ಶೇ.100 ಎಥೆನಾಲ್ ನಲ್ಲಿ ಓಡುವ ವಾಹನಗಳನ್ನು ದೇಶದಲ್ಲಿ ತಯಾರಿಸುವ  ಗುರಿಯನ್ನೂ ಹಾಕಿಕೊಳ್ಳಲಾಗಿದೆ.

ಸ್ನೇಹಿತರೇ,

ಎಥೆನಾಲ್ ಸಂಚಾರವನ್ನು ಅಗ್ಗ ಮಾಡುತ್ತದೆ. ಮತ್ತು ಪರಿಸರವೂ ಸುರಕ್ಷಿತವಾಗಿರುತ್ತದೆ. ನಮ್ಮ ರೈತರು ಮತ್ತು ಯುವ ಜನತೆಗೆ, ಅದರಲ್ಲೂ ಉತ್ತರ ಪ್ರದೇಶದವರಿಗೆ ಬಹಳ ದೊಡ್ಡ ಲಾಭ ಲಭಿಸಲಿದೆ. ಕಬ್ಬಿನಿಂದ ಎಥೆನಾಲ್ ತಯಾರಿಸುವ ಅವಕಾಶ ಲಭ್ಯವಾದಾಗ, ಕಬ್ಬು ಬೆಳೆಗಾರರು ಹೆಚ್ಚು ಹಣ ಪಡೆಯುತ್ತಾರೆ ಮತ್ತು ಅದೂ ಸಕಾಲದಲ್ಲಿ. ಕಳೆದ ಒಂದೇ ವರ್ಷದಲ್ಲಿ ಉತ್ತರ ಪ್ರದೇಶದ ಎಥೆನಾಲ್ ಉತ್ಪಾದಕರಿಂದ 7,000 ಕೋ.ರೂ.ಮೌಲ್ಯದ ಎಥೆನಾಲ್ ನ್ನು ಖರೀದಿ ಮಾಡಲಾಗಿದೆ. ಕಾಲಾನುಕ್ರಮದಲ್ಲಿ ಎಥೆನಾಲ್ ಗೆ ಸಂಬಂಧಿಸಿದ ಘಟಕಗಳು ಮತ್ತು ಜೈವಿಕ ಅನಿಲ ಸ್ಥಾವರಗಳು ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿವೆಕಬ್ಬಿನ ತ್ಯಾಜ್ಯದಿಂದ ಕಂಪ್ರೆಸ್ ಮಾಡಲಾದ ಜೈವಿಕ ಅನಿಲವನ್ನು ತಯಾರಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ 70 ಜಿಲ್ಲೆಗಳಲ್ಲಿ ಸಿ.ಬಿ.ಜಿ. ಸ್ಥಾವರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಕೃಷಿ ತ್ಯಾಜ್ಯದಿಂದ ಜೈವಿಕ ಅನಿಲ ಅಭಿವೃದ್ಧಿ ಮಾಡುವ ಮೂರು ಬೃಹತ್ ಸಂಕೀರ್ಣಗಳನ್ನು ಈಗ ನಿರ್ಮಾಣ ಮಾಡಲಾಗುತ್ತಿದೆ. ಇವುಗಳಲ್ಲಿ ಎರಡನ್ನು ಉತ್ತರ ಪ್ರದೇಶದ ಬಡೌನ್ ಮತ್ತು ಗೋರಖ್ ಪುರಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದರೆ ಇನ್ನೊಂದನ್ನು ಪಂಜಾಬಿನ ಭಾತಿಂಡಾದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಯೋಜನೆಗಳೊಂದಿಗೆ ರೈತರಿಗೆ  ತ್ಯಾಜ್ಯಕ್ಕೂ ಹಣ ಸಿಗಲಿದೆ, ಸಾವಿರಾರು ಯುವ ಜನತೆಗೆ ಉದ್ಯೋಗ ಸಿಗಲಿದೆ ಮತ್ತು ಪರಿಸರ ಕೂಡಾ ಸಂರಕ್ಷಿಸಲ್ಪಡುತ್ತದೆ.

ಸ್ನೇಹಿತರೇ,

ಅದೇ ರೀತಿ ಅಲ್ಲಿ ಇನ್ನೊಂದು ಬಹಳ ಪ್ರಮುಖ ಯೋಜನೆ ಇದೆ, ಗೋಬರ್ ಧನ್ ಯೋಜನಾ. ಯೋಜನೆಯು ದನಗಳ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಹಳ್ಳಿಗಳಲ್ಲಿ ಸ್ವಚ್ಛತೆಯನ್ನು ತರುತ್ತದೆ ಮತ್ತು ಹೈನು ವಲಯಕ್ಕೆ ಉಪಯುಕ್ತವಲ್ಲದ ಹಾಗು ಹಾಲು ಕೊಡದ ಪಶುಗಳು ಕೂಡಾ ಉಪಯುಕ್ತವಾಗುತ್ತವೆ. ಯೋಗೀ ಜೀ ಅವರ ಸರಕಾರ ಹಲವು ಗೋಶಾಲೆಗಳನ್ನು ಕಟ್ಟಿದೆ. ದನಗಳ ರಕ್ಷಣೆಗೆ ಇದು ಪ್ರಮುಖವಾದಂತಹ ಪ್ರಯತ್ನ ಮತ್ತು ರೈತರ ಬೆಳೆ  ರಕ್ಷಣೆ ನಿಟ್ಟಿನಲ್ಲಿಯೂ ಇದು ಪ್ರಮುಖ ಹೆಜ್ಜೆ.

ಸ್ನೇಹಿತರೇ,

ಈಗ ದೇಶವು ಮೂಲ ಸೌಕರ್ಯಗಳನ್ನು ಒದಗಿಸಿಕೊಂಡು ಉತ್ತಮ ಬದುಕಿನ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ  ನಾವು ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಬೇಕಾಗಿದೆ. ಒಗ್ಗೂಡಿ ನಾವು ಸಮರ್ಥ ಭಾರತದ ನಿರ್ಧಾರವನ್ನು ಅನುಷ್ಠಾನ ಮಾಡಬೇಕಾಗಿದೆ. ಇದರಲ್ಲಿ ನಮ್ಮ ಸಹೋದರಿಯರಿಗೆ ವಿಶೇಷ ಪಾತ್ರವಿದೆ. ನಾನು ಮತ್ತೊಮ್ಮೆ ಉಜ್ವಲದ ಎಲ್ಲಾ ಫಲಾನುಭವಿ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಹೇಳುತ್ತೇನೆ. ರಕ್ಷಾ ಬಂಧನದಂತಹ ಪವಿತ್ರ ಹಬ್ಬ ಹತ್ತಿರದಲ್ಲಿಯೇ ಇರುವಾಗ ಮಾತೆಯರಿಗೆ ಮತ್ತು ಸಹೋದರಿಯರಿಗೆ ಸೇವೆಯನ್ನು ಮಾಡುವ ಅವಕಾಶ ನನಗೆ ದೊರೆತುದರಿಂದ  ನನಗೆ ಆಶೀರ್ವಾದ ಸಿಕ್ಕಷ್ಟು ಸಂತೋಷವಾಗಿದೆ. ನನಗೆ ಆಶೀರ್ವಾದಗಳು ದೊರೆತಿವೆ. ನಿಮ್ಮ ಆಶೀರ್ವಾದಗಳು ಸದಾ ನಮ್ಮ ಮೇಲಿರಲಿ, ಅದರಿಂದ ಭಾರತ ಮಾತೆಗೆ, 130 ಕೋಟಿ ದೇಶವಾಸಿಗಳಿಗೆ, ಹಳ್ಳಿಗಳಿಗೆ, ಬಡವರಿಗೆ, ರೈತರಿಗೆ, ದಲಿತರಿಗೆ, ಶೋಷಿತರಾದವರಿಗೆ ಮತ್ತು ಹಿಂದುಳಿದವರಿಗೆ  ಇನ್ನಷ್ಟು ಸೇವೆ ಸಲ್ಲಿಸುವ ಕೆಲಸವನ್ನು ಮುಂದುವರಿಸಲು ನಮಗೆ ಶಕ್ತಿ ದೊರೆಯುತ್ತದೆ. ಆಶಯದೊಂದಿಗೆ ನಿಮಗೆಲ್ಲರಿಗೂ ಶುಭಾಶಯಗಳು, ಬಹಳ ಧನ್ಯವಾದಗಳು !.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ, ಮೂಲ ಭಾಷಣವನ್ನು ಹಿಂದಿಯಲ್ಲಿ  ಮಾಡಲಾಗಿದೆ.

***



(Release ID: 1745105) Visitor Counter : 256