ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2017-18 ಮತ್ತು 2018-19ರ ರಾಷ್ಟ್ರೀಯ ಯುವ ಪ್ರಶಸ್ತಿಗಳು ಆಗಸ್ಟ್ 12 ರಂದು ಪ್ರದಾನ; ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ ವಿಜ್ಞಾನ ಭವನದಲ್ಲಿ 22 ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ


ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಅವರಿಂದ S.O.L.V.E.D ಚಾಲೆಂಜ್ ವಿಜೇತರಿಗೆ ಪ್ರಶಸ್ತಿ ಪ್ರದಾನ

Posted On: 11 AUG 2021 5:38PM by PIB Bengaluru

ಪ್ರಮುಖ ಅಂಶಗಳು

• 2017-18 ನೇ ಸಾಲಿಗೆ 14 ಮತ್ತು 2018-19 ನೇ ವರ್ಷಕ್ಕೆ 8 ರಾಷ್ಟ್ರೀಯ ಯುವ ಪುರಸ್ಕಾರಗಳನ್ನು ನೀಡಲಾಗುವುದು

• ಈ ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು ವ್ಯಕ್ತಿಗೆ 1,00,000 ರೂ. ಮತ್ತು ಸಂಸ್ಥೆಗೆ 3,00,000 ರೂ. ನಗದು ಬಹುಮಾನವನ್ನು ಒಳಗೊಂಡಿದೆ

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2017-18 ಮತ್ತು 2018-19 ರ ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಆಗಸ್ಟ್ 12, 2021 ರಂದು ಪ್ರದಾನ ಮಾಡಲಿದ್ದಾರೆ. ಅಂತರರಾಷ್ಟ್ರೀಯ ಯುವ ದಿನ 2021 ರ ಸ್ಮರಣಾರ್ಥ, ಕೃಷಿ ಉದ್ಯಮ ಸವಾಲಿನ S.O.L.V.E.D 2021 (ಸಾಮಾಜಿಕ ಉದ್ದೇಶಗಳು-ನೇತೃತ್ವದ ಸ್ವಯಂಸೇವಾ ಉದ್ಯಮ ಅಭಿವೃದ್ಧಿ) ರ ಹತ್ತು ವಿಜೇತ ಯುವ ಉದ್ಯಮಿ ತಂಡಗಳನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಅವರು ಪುರಸ್ಕರಿಸಲಿದ್ದಾರೆ.

ಒಟ್ಟು 22 ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ವೈಯಕ್ತಿಕ ಮತ್ತು ಸಂಸ್ಥೆಗಳ ವಿಭಾಗಗಳಲ್ಲಿ ನೀಡಲಾಗುವುದು. 2017-18 ನೇ ಸಾಲಿಗೆ ಒಟ್ಟು 14 ಪ್ರಶಸ್ತಿಗಳನ್ನು ನೀಡಲಾಗುವುದು, ಇದರಲ್ಲಿ ವೈಯಕ್ತಿಕ ವಿಭಾಗದಲ್ಲಿ 10 ಪ್ರಶಸ್ತಿಗಳು ಮತ್ತು ಸಂಸ್ಥೆಗಳ ವಿಭಾಗದಲ್ಲಿ 4 ಪ್ರಶಸ್ತಿಗಳು ಸೇರಿವೆ. 2018-19 ನೇ ವರ್ಷಕ್ಕೆ ಒಟ್ಟು 8 ಪ್ರಶಸ್ತಿಗಳನ್ನು ನೀಡಲಾಗುವುದು ಇದರಲ್ಲಿ ವೈಯಕ್ತಿಕ ವಿಭಾಗದಲ್ಲಿ 7 ಪ್ರಶಸ್ತಿಗಳು ಮತ್ತು ಸಂಸ್ಥೆ ವಿಭಾಗದಲ್ಲಿ 1 ಪ್ರಶಸ್ತಿ ಸೇರಿವೆ. ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು ವ್ಯಕ್ತಿಗೆ 1,00,000 ರೂ. ಮತ್ತು ಸಂಸ್ಥೆಗೆ 3,00,000 ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ವ್ಯಕ್ತಿಗಳು (15-29 ವರ್ಷ ವಯಸ್ಸಿನವರು) ಮತ್ತು ಅಭಿವೃದ್ಧಿ ಮತ್ತು ಸಾಮಾಜಿಕ ಸೇವೆಯ ವಿವಿಧ ಕ್ಷೇತ್ರಗಳಾದ ಆರೋಗ್ಯ ಮತ್ತು ಮಾನವ ಹಕ್ಕುಗಳ ಪ್ರೋತ್ಸಾಹ ಸಕ್ರಿಯ ಪೌರತ್ವ, ಸಮುದಾಯ ಸೇವೆ ಇತ್ಯಾದಿಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಸಂಸ್ಥೆಗಳಿಗೆ ನೀಡುತ್ತದೆ.

ರಾಷ್ಟ್ರಗಳ ಅಭಿವೃದ್ಧಿ ಮತ್ತು ಸಾಮಾಜಿಕ ಸೇವೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಯುವಕರನ್ನು ಪ್ರೇರೇಪಿಸುವುದು, ಯುವಜನರರಲ್ಲಿ ಸಮುದಾಯದ ಹೊಣೆಗಾರಿಕೆ ಪ್ರಜ್ಞೆಯನ್ನು ಪ್ರೋತ್ಸಾಹಿಸುವುದು ಮತ್ತು ಆ ಮೂಲಕ ಉತ್ತಮ ನಾಗರಿಕರಾಗಿ ಅವರ ವೈಯಕ್ತಿಕ ಸಾಮರ್ಥ್ಯವನ್ನು ಸುಧಾರಿಸುವುದು ಮತ್ತು ಸಾಮಾಜಿಕ ಸೇವೆ ಸೇರಿದಂತೆ ರಾಷ್ಟ್ರೀಯ ಅಭಿವೃದ್ಧಿಗೆ ಯುವಕರೊಂದಿಗೆ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳು ಮಾಡಿದ ಅತ್ಯುತ್ತಮ ಕೆಲಸಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ.

ಯುನೈಟೆಡ್ ನೇಷನ್ಸ್ ಸ್ವಯಂಸೇವಕರು ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಹಯೋಗದೊಂದಿಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಡಿಸೆಂಬರ್ 2020 ರಲ್ಲಿ ಗ್ರಾಮೀಣ, ಪಟ್ಟಣ ಮತ್ತು ನಗರ ಭಾರತದ ಯುವಕರಿಗೆ SOLVED ಚಾಲೆಂಜ್ ಅನ್ನು ಆರಂಭಿಸಿತು, ಕೃಷಿ-ಆಹಾರ ಮೌಲ್ಯ ಸರಪಳಿಯಲ್ಲಿ ನವೀನ, ಯುವಜನ ನೇತೃತ್ವದ ಉದ್ಯಮಶೀಲ ಪರಿಹಾರಗಳನ್ನು ಗುರುತಿಸುವುದು ಮತ್ತು ಪೋಷಿಸುವುದು ಇದರ ಉದ್ದೇಶವಾಗಿದೆ. ಭಾರತದಾದ್ಯಂತ 850 ಕ್ಕೂ ಹೆಚ್ಚು ಯುವಕರು ಈ ಚಾಲೆಂಜ್ ಗೆ ಅರ್ಜಿ ಸಲ್ಲಿಸಿದರು ಮತ್ತು ಹಲವು ಸುತ್ತಿನ ಸ್ಪರ್ಧೆಗಳು ಮತ್ತು ತರಬೇತಿಯ ನಂತರ 10 ವಿಜೇತರನ್ನು ಆಯ್ಕೆ ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರ, ಬಿಹಾರ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಗುಜರಾತ್ ರಾಜ್ಯಗಳ ಯುವಕರು ವಿಜೇತರಲ್ಲಿ ಸೇರಿದ್ದಾರೆ.

***



(Release ID: 1744936) Visitor Counter : 187