ಪ್ರಧಾನ ಮಂತ್ರಿಯವರ ಕಛೇರಿ
ಆಗಸ್ಟ್ 2ರಂದು ಡಿಜಿಟಲ್ ಪಾವತಿ ಸೌಲಭ್ಯ, ಇ-ರುಪಿ(e-RUPI)ಗೆ ಚಾಲನೆ ನೀಡಲಿರುವ ಪ್ರಧಾನಿ
Posted On:
31 JUL 2021 8:23PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಆಗಸ್ಟ್ 2ರಂದು ಸಂಜೆ 4:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವ್ಯಕ್ತಿ ಮತ್ತು ಉದ್ದೇಶ ನಿರ್ದಿಷ್ಟ ಡಿಜಿಟಲ್ ಪಾವತಿ ಸೌಲಭ್ಯ ʻಇ-ರುಪಿʼ(e-RUPI)ಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿಯವರು ಸದಾ ಡಿಜಿಟಲ್ ಉಪಕ್ರಮಗಳನ್ನು ಬೆಂಬಲಿಸಿದ್ದಾರೆ. ಕಳೆದ ಹಲವು ವರ್ಷಗಳಲ್ಲಿ ಸರ್ಕಾರವು ತನ್ನ ಯೋಜನೆಗಳ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಖಾತರಿಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಸರಕಾರ ಮತ್ತು ಫಲಾನುಭವಿಯ ನಡುವೆ ಸೀಮಿತ ಸ್ಪರ್ಶ ಬಿಂದುಗಳನ್ನು ಒಳಗೊಂಡಿರುವ ಈ ಉಪಕ್ರಮಗಳು, ಸೋರಿಕೆರಹಿತ ಹಾಗೂ ಉದ್ದೇಶಿತ ರೀತಿಯಲ್ಲಿ ಫಲಾನುಭವಿಯನ್ನು ತಲುಪುವುದು ವಿಶೇಷವಾಗಿದೆ. ವಿದ್ಯುನ್ಮಾನ ವೋಚರ್ ಪರಿಕಲ್ಪನೆಯು ಉತ್ತಮ ಆಡಳಿತದ ಈ ದೃಷ್ಟಿಕೋನವನ್ನು ಮತ್ತಷ್ಟು ಉತ್ತೇಜಿಸುತ್ತದೆ.
ಇ-ರುಪಿ ಕುರಿತು:
ʻಇ-ರುಪಿʼ ಎಂಬುದು ಡಿಜಿಟಲ್ ಪಾವತಿಗಾಗಿ ನಗದು ರಹಿತ ಮತ್ತು ಸಂಪರ್ಕರಹಿತ ಸಾಧನವಾಗಿದೆ. ಇದು ʻಕ್ಯೂ-ಆರ್ ಕೋಡ್ʼ ಅಥವಾ ʻಎಸ್ಎಂಎಸ್ ಸ್ಟ್ರಿಂಗ್ʼ ಆಧಾರಿತ ಇ-ವೋಚರ್ ಆಗಿದ್ದು, ಇದನ್ನು ಫಲಾನುಭವಿಗಳ ಮೊಬೈಲ್ಗೆ ತಲುಪಿಸಲಾಗುತ್ತದೆ. ಈ ತಡೆರಹಿತ, ಒಂದು ಹಂತದ ಪಾವತಿ ವ್ಯವಸ್ಥೆಯ ಬಳಕೆದಾರರು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಅಗತ್ಯವಿಲ್ಲದೇ ಸೇವಾ ಪೂರೈಕೆದಾರರ ಬಳಿ ವೋಚರ್ ಅನ್ನು ನಗದೀಕರಿಸಬಹುದು. ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ʻಭಾರತೀಯ ರಾಷ್ಟ್ರೀಯ ಪಾವತಿನಿಗಮʼವು ತನ್ನ ಯುಪಿಐ ವೇದಿಕೆಯಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ.
ʻಇ-ರುಪಿʼ ವ್ಯವಸ್ಥೆಯು ಸೇವೆಗಳ ಪ್ರಾಯೋಜಕರು, ಫಲಾನುಭವಿಗಳು ಹಾಗೂ ಸೇವಾ ಪೂರೈಕೆದಾರರನ್ನು ಯಾವುದೇ ಭೌತಿಕ ಸಂಪರ್ಕವಿಲ್ಲದೆ ಡಿಜಿಟಲ್ ರೀತಿಯಲ್ಲಿ ಪರಸ್ಪರ ಸಂಪರ್ಕಿಸುತ್ತದೆ. ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಹಣ ಪಾವತಿಯಾಗುವಂತೆ ಇದು ಖಾತರಿ ಒದಗಿಸುತ್ತದೆ. ಇದೊಂದು ಪೂರ್ವಪಾವತಿ ಸ್ವರೂಪದ ವ್ಯವಸ್ಥೆಯಾಗಿರುವುದರಿಂದ ಯಾವುದೇ ಮಧ್ಯವರ್ತಿಯ ಹಸ್ತಕ್ಷೇಪವಿಲ್ಲದೆ ಸೇವಾ ಪೂರೈಕೆದಾರರಿಗೆ ಸಕಾಲದಲ್ಲಿ ಹಣ ಪಾವತಿಯ ಭರವಸೆಯನ್ನು ಒದಗಿಸುತ್ತದೆ.
ಸರಕಾರದ ಕಲ್ಯಾಣ ಸೇವೆಗಳನ್ನು ಸೋರಿಕೆರಹಿತವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಉಪಕ್ರಮವಾಗುವ ನಿರೀಕ್ಷೆಯಿದೆ. ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಕ್ಷಯರೋಗ ನಿರ್ಮೂಲನಾ ಯೋಜನೆಗಳ ಅಡಿಯಲ್ಲಿ ಔಷಧ ಹಾಗೂ ಪೌಷ್ಟಿಕಾಂಶ ಪೂರೈಕೆ ಸೇವೆಗಳಿಗೂ ಇದನ್ನು ಬಳಸಬಹುದಾಗಿದೆ. ಜೊತೆಗೆ, ʻಆಯುಷ್ಮಾನ್ ಭಾರತ್ʼ, ʻಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ ಅಡಿಯಲ್ಲಿ ಔಷಧ ಹಾಗೂ ರೋಗಪತ್ತೆ ಸೇವೆಗಳನ್ನು ಒದಗಿಸಲು; ರಸಗೊಬ್ಬರ ಸಬ್ಸಿಡಿಯನ್ನು ತಲುಪಿಸಲು ಸಹ ಇದನ್ನು ಬಳಸಬಹುದಾಗಿದೆ. ಖಾಸಗಿ ವಲಯವು ಸಹ ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಈ ಡಿಜಿಟಲ್ ವೋಚರ್ಗಳನ್ನು ಬಳಸಿಕೊಳ್ಳಬಹುದು.
***
(Release ID: 1741406)
Visitor Counter : 360
Read this release in:
Assamese
,
English
,
Urdu
,
Hindi
,
Marathi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam