ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಸೋಂಕು ದೃಢಪಟ್ಟಿರುವ ತಾಯಿ ಮಗುವಿಗೆ ಹಾಲುಣಿಸುವುದನ್ನು ಮುಂದುವರಿಸಬಹುದು, ಆದರೆ ಹಾಲುಣಿಸದೆ ಇದ್ದ ವೇಳೆ ಮಗುವನ್ನು ಆರು ಅಡಿ ದೂರದಲ್ಲಿಟ್ಟಿರುವುದು ಸೂಕ್ತ- ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುಪುರಿ
“ಲಸಿಕೆ ದೇಹದ ನಿರ್ದಿಷ್ಠ ರೋಗಕಾರಕದ ವಿರುದ್ಧ ನಿರೋಧಕ ಶಕ್ತಿ ಅಭಿವೃದ್ಧಿಪಡಿಸುತ್ತದೆ, ಅದರಿಂದ ದೇಹದ ಇತರೆ ಅಂಗಾಗ ಮೇಲೆ ಯಾವುದೇ ಪರಿಣಾಮವಿಲ್ಲ’’
ಕೋವಿಡ್ ಚೇತರಿಕೆ ನಂತರ ತಾಯಿ ಮತ್ತು ಭ್ರೂಣವು ಉತ್ತಮ ಆರೋಗ್ಯದಿಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಆರೋಗ್ಯ ತಪಾಸಣೆಗೆ ನಾವು ಬಲವಾಗಿ ಶಿಫಾರಸು ಮಾಡುತ್ತೇವೆ- ಡಾ. ಮಂಜು ಪುರಿ
Posted On:
26 JUL 2021 1:28PM by PIB Bengaluru
ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುಪುರಿ, ಗರ್ಭಿಣಿಯರಿಗೆ ಕೋವಿಡ್-19 ಲಸಿಕೆ ನೀಡುವ ಇತ್ತೀಚಿನ ನಿರ್ಧಾರದ ಬಗ್ಗೆ ಮತ್ತು ಕೋವಿಡ್-19 ಸೋಂಕು ತಗುಲಿದ ಸಂದರ್ಭದಲ್ಲಿ ಗರ್ಭಿಣಿ ಹಾಗೂ ಆಕೆಯ ಮಗುವನ್ನು ರಕ್ಷಿಸಲು ಮಹಿಳೆಯರು ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತು ಮಾತನಾಡಿದ್ದಾರೆ.
ಮಹಿಳೆಯರು ಗರ್ಭಧರಿಸಿದ್ದರೂ ಸಹ ಕೋವಿಡ್-19 ಲಸಿಕೆ ಪಡೆಯಲು ಇತ್ತೀಚೆಗೆ ಅನುಮೋದನೆ ನೀಡಲಾಗಿದೆ, ಅದು ಹೇಗೆ ಸಹಾಯಕಾರಿ?
ಕೋವಿಡ್ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ಸಂದರ್ಭದಲ್ಲಿ ಹಲವು ಮಹಿಳೆಯರಿಗೆ ಕೋವಿಡ್-19 ಸಾಂಕ್ರಾಮಿಕ ತಗುಲಿದೆ. ಕೋವಿಡ್ ಗಂಭೀರವಾಗಿದ್ದರೆ ಅದು ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು, ಅದರಲ್ಲೂ ವಿಶೇಷವಾಗಿ ಕೊನೆಯ ತ್ರೈಮಾಸಿಕದಲ್ಲಿ ಗರ್ಭಾಶಯವು ಅಗಲವಾಗುತ್ತದೆ ಮತ್ತು ಡಯಾಫ್ರಮ್ ಒತ್ತಿದರೆ ಆಮ್ಲಜನಕ ಶುದ್ಧತ್ವದಲ್ಲಿನ ಕುಸಿತವನ್ನು ನಿಭಾಯಿಸುವ ಮಹಿಳೆಯ ಸಾಮರ್ಥ್ಯವನ್ನು ರಾಜೀ ಮಾಡುತ್ತದೆ. ಇದರಿಂದ ರಕ್ತದ ಆಮ್ಲಜನಕ ಇದ್ದಕ್ಕಿದ್ದಂತೆ ಕುಸಿಯಬಹುದು ಮತ್ತು ತಾಯಿ ಮತ್ತು ಮಗುವಿನ ಇಬ್ಬರ ಪ್ರಾಣಕ್ಕೂ ಅಪಾಯ ಎದುರಾಗಬಹುದು. ಲಸಿಕೆ ಗರ್ಭಿಣಿಯರಲ್ಲಿ ರೋಗ ಗಂಭೀರವಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ.
ಅಲ್ಲದೆ ತಾಯಿಗೆ ಲಸಿಕೆ ನೀಡುವುದರಿಂದ ನವಜಾತ ಶಿಶುಗಳಲ್ಲೂ ಸಹ ಪ್ರತಿಕಾಯ ಅಭಿವೃದ್ಧಿಯಾಗುವ ಸಾಧ್ಯತೆ ಇದೆ. ತಾಯಿಯ ದೇಹ ಲಸಿಕೆಯ ನಂತರ ಆಕೆಯ ರಕ್ತದ ಮೂಲಕ ಭ್ರೂಣದಲ್ಲೂ ಪ್ರತಿಕಾಯ ಅಭಿವೃದ್ಧಿ ಹೊಂದಲು ನೆರವಾಗುತ್ತದೆ. ಬಾಣಂತಿಯರಲ್ಲಿ ತಾಯಿಯ ಎದೆಹಾಲಿನ ಮೂಲಕ ನವಜಾತ ಶಿಶುಗಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ.
ಲಸಿಕೆ ಕೆಲವು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಕೆಲವು ಜನರು ನಂಬಿದ್ದಾರೆ. ಅದು ನಿಜವೇ?
ಇವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಚಲಾವಣೆಯಾಗುತ್ತಿರುವ ವದಂತಿಗಳಷ್ಟೇ, ತಪ್ಪು ಮಾಹಿತಿ ಸೋಂಕಿಗಿಂತ ಅತ್ಯಂತ ಹೆಚ್ಚು ಅಪಾಯಕಾರಿ.
ಕೋವಿಡ್-19 ಲಸಿಕೆ ಹೊಸದಾದರೂ ಅವುಗಳನ್ನು ಕಾಲ ಪರೀಕ್ಷಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಲಸಿಕೆಗಳನ್ನು ನಿರ್ದಿಷ್ಟ ರೋಗಕಾರಕಗಳ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಮತ್ತು ಅದು ದೇಹದ ಇತರೆ ಅಂಗಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನಾವು ಹೆಪಟೈಟಿಸ್ ಬಿ, ಇನ್ಫ್ಲುಯನ್ಜಾ, ಪೊರ್ಟುಸಿಸ್ ಲಸಿಕೆಗಳನ್ನು ಗರ್ಭಿಣಿಯರಿಗೆ ನೀಡುತ್ತೇವೆ. ಆ ಮೂಲಕ ಅವರನ್ನು ಮತ್ತು ಇನ್ನೂ ಜನಿಸದ ಮಗುವನ್ನು ನಾನಾ ರೋಗಗಳಿಂದ ರಕ್ಷಿಸಲಾಗುತ್ತದೆ.
ಅಲ್ಲದೆ ನಮ್ಮ ನಿಯಂತ್ರಕರು ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡ ನಂತರವೇ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮೋದನೆ ನೀಡಿದ್ದಾರೆ. ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸುವ ಯಾವುದೇ ವೈಜ್ಞಾನಿಕ ದಾಖಲೆಗಳಿಲ್ಲ ಅಥವಾ ಅಧ್ಯಯನಗಳಿಂದ ತಿಳಿದುಬಂದಿಲ್ಲ. ಈ ಲಸಿಕೆಗಳು ಯಾವುದೇ ರೀತಿಯಲ್ಲೂ ಸಂತಾನೋತ್ಪತ್ತಿಯ ಅಂಗಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಕೋವಿಡ್ ಸೋಂಕು ತಗುಲದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗರ್ಭಿಣಿಯರು ಯಾವ ರೀತಿಯ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು?
ಗರ್ಭಧಾರಣೆ ಮತ್ತು ಮಗುವಿನ ಜನನ ನಮ್ಮ ಸಮಾಜದಲ್ಲಿ ಸಾಮಾಜಿಕ ಘಟನೆಗಳಾಗಿವೆ. ಆದರೆ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ತಾಯಿ ಮತ್ತು ಮಗುವನ್ನು ಸೋಂಕಿಗೆ ತೆರೆದುಕೊಳ್ಳುವ ಕುರಿತು ಆತಂಕಗಳು ವ್ಯಕ್ತವಾಗಿವೆ. ತಾಯಿಯಾಗುವ ನಿರೀಕ್ಷೆಯಲ್ಲಿರುವವರು ಮನೆಯಲ್ಲೂ ಸಹ ತಮ್ಮ ಕುಟುಂಬದ ಸದಸ್ಯರ ಜೊತೆ ಇರುವಾಗ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನಾವು ಶಿಫಾರಸ್ಸು ಮಾಡುತ್ತೇವೆ. ಆ ಮಹಿಳೆ ಹೊರಗೆ ಹೋಗದೇ ಇರಬಹುದು. ಆದರೆ ಅವರ ಕುಟುಂಬದ ಸದಸ್ಯರು ಉದ್ಯೋಗಕ್ಕಾಗಿ ಹೊರಗಡೆ ಹೋಗಿ ಬರಬಹುದು ಮತ್ತು ಇದರಿಂದ ಆಕೆಗೆ ಸೋಂಕು ತಗುಲಬಹುದು.
ಆದ್ದರಿಂದ ಗರ್ಭಧಾರಣೆ ಅವಧಿಯಲ್ಲಿ ಮಹಿಳೆ ಎಲ್ಲಾ ಕೋವಿಡ್ ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲನೆ ಮಾಡಬೇಕು ಮತ್ತು ಮಗುವಿನ ಜನನದ ನಂತರವೂ ಸೋಂಕು ಹರಡದಂತೆ ಮತ್ತು ಸಂಬಂಧಿಸಿದ ಸಮಸ್ಯೆಗಳು ಎದುರಾಗದಂತೆ ನಿಯಂತ್ರಿಸಿಕೊಳ್ಳಬೇಕು.
ಗರ್ಭಿಣಿಯರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಅವರು ಏನು ಮಾಡಬೇಕು?
ಮೊದಲಿಗೆ ಅವರಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದರೆ ಶೀಘ್ರವೇ ಅವರು ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿಕೊಳ್ಳಬೇಕು, ಸೋಂಕು ಪತ್ತೆಯಾದ ಕೂಡಲೆ ಅದನ್ನು ನಿರ್ವಹಣೆ ಮಾಡಿಕೊಳ್ಳಬೇಕು. ಕೋವಿಡ್ ನಿರ್ವಹಣೆ ಗರ್ಭಿಣಿಯರಿಗೂ ಸಹ ಇತರರಂತೆ ಪಾಲನೆ ಮಾಡಬೇಕಾಗುತ್ತದೆ. ಆದರೆ ವೈದ್ಯರ ನಿಗಾದಲ್ಲಿ ಮಾತ್ರ ನಿರ್ವಹಣೆಯನ್ನು ಕೈಗೊಳ್ಳಬೇಕಾಗುತ್ತದೆ.
ಮಹಿಳೆ ತನ್ನನ್ನು ತಾನು ಐಸೋಲೇಟ್ ಮಾಡಿಕೊಳ್ಳಬೇಕು, ಸಾಕಷ್ಟು ಪ್ರಮಾಣದ ದ್ರವಾಹಾರ ಸೇವಿಸಬೇಕು, ತಾಪಮಾನ ಪರೀಕ್ಷಿಸಿಕೊಳ್ಳಬೇಕು ಮತ್ತು ಪ್ರತಿ 4 ರಿಂದ 6 ಗಂಟೆಗೊಮ್ಮೆ ಆಮ್ಲಜನಕ ಸ್ಥಿತಿಗತಿ ಪರಿಶೀಲಿಸಿಕೊಳ್ಳಬೇಕು. ಪ್ಯಾರಸಿಟಮಲ್ ತೆಗೆದುಕೊಂಡ ನಂತರವೂ ತಾಪಮಾನ ಕಡಿಮೆಯಾಗದಿದ್ದರೆ ಅವರು ವೈದ್ಯರನ್ನು ಸಂಪರ್ಕಿಸಬೇಕು. ಆಮ್ಲಜನಕ ಸಾಂದ್ರತೆಯ ಮಟ್ಟ ಕುಸಿದರೆ ಅಥವಾ ಬೆಳಿಗ್ಗೆ 98, ಸಂಜೆ 97, ಮರುದಿನ ಮತ್ತಷ್ಟು ಕುಸಿತ ಹೀಗೆ ಕುಸಿತವಾಗುವ ಪ್ರವೃತ್ತಿ ಇದ್ದರೆ, ಅಂತಹ ಮಹಿಳೆ ನಿರಂತರವಾಗಿ ವೈದ್ಯರ ಜೊತೆ ಸಂಪರ್ಕದಲ್ಲಿರಬೇಕು.
ಅಲ್ಲದೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಸಂಬಂಧ ಸಮಸ್ಯೆಗಳು, ಬೊಜ್ಜು ಇತ್ಯಾದಿ ಕಾಯಿಲೆಗಳನ್ನು ಮಹಿಳೆಯರು ಹೊಂದಿದ್ದರೆ ಅವರು ಹೆಚ್ಚು ಜಾಗರೂಕರಾಗಿಬೇಕು ಮತ್ತು ಅತಂಹವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಹಾಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಚೇತರಿಕೆ ಅವಧಿಯುದ್ದಕ್ಕೂ ವೈದ್ಯರ ಜೊತೆ ಸತತ ಸಂಪರ್ಕದಲ್ಲಿರಬೇಕು.
ಕೋವಿಡ್ ಚೇತರಿಕೆ ನಂತರವೂ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಮಗ್ರ ಆರೋಗ್ಯ ತಪಾಸಣೆ ಮಾಡಿಸಬೇಕೆಂದು ನಾವು ಬಲವಾಗಿ ಶಿಫಾರಸುಮಾಡುತ್ತೇವೆ.
ತಾಯಿಯಿಂದ ಭ್ರೂಣಕ್ಕೆ ಕೋವಿಡ್-19 ಸೋಂಕು ತಗುಲಬಹುದೇ?
ಈ ಆತಂಕವನ್ನು ಬೆಂಬಲಿಸಲು ಯಾವುದೇ ಸಾಕ್ಷ್ಯವಿಲ್ಲ. ನಾವು ಹಲವು ಅಧ್ಯಯನಗಳನ್ನು ನಡೆಸಿದ್ದೇವೆ ಮತ್ತು ಗರ್ಭಾಶಯದಲ್ಲಿ ಭ್ರೂಣವು ಬೆಳೆಯುವ ಪ್ಲಸೆಂಟಾ ಇರುವುದನ್ನು ಪತ್ತೆ ಹಚ್ಚಿದ್ದೇವೆ, ಅದು ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ನವಜಾತ ಶಿಶುಗಳಿಗೆ ಸೋಂಕು ತಗುಲಿದ ಪ್ರಕರಣಗಳನ್ನು ನಾವು ಕಂಡಿದ್ದೇವೆ, ಆದರೆ ತಾಯಿಯ ಗರ್ಭದಲ್ಲಿದ್ದಾಗ ಅಥವಾ ಜನನದ ನಂತರ ಸೋಂಕು ತುಗಲಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ.
ನಾನು ಮೊದಲೇ ವಿವರಿಸಿದ್ದಂತೆ, ಗರ್ಭಿಣಿಯರು ಸೋಂಕನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಏಕೆಂದರೆ ಕೋವಿಡ್ -19 ಆಕೆ ಮತ್ತು ಆಕೆಯ ಮಗುವಿನ ಮೇಲೆ ಹಲವು ಬಗೆಯ ಪರಿಣಾಮಗಳನ್ನು ಬೀರಬಹುದು.
ಕೋವಿಡ್ ಪಾಸಿಟಿವ್ ಹೊಂದಿರುವ ತಾಯಿ ತನ್ನ ನವಜಾತ ಶಿಶುವನ್ನು ರಕ್ಷಿಸಲು ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು?
ತಾಯಿ ಮಗುವಿಗೆ ಹಾಲುಣಿಸುವುದನ್ನು ಮುಂದುವರಿಸಬೇಕು, ಆದರೆ ಹಾಲುಣಿಸದೇ ಇದ್ದ ಸಂದರ್ಭದಲ್ಲಿ ಮಗುವಿನಿಂದ 6 ಅಡಿ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡುತ್ತೇನೆ. ನೆಗೆಟಿವ್ ಹೊಂದಿರುವ ಆರೈಕೆದಾರರು ನವಜಾತ ಶಿಶುವಿನ ಆರೈಕೆಗೆ ಸಹಕಾರ ನೀಡಬಹುದು. ನವಜಾತ ಶಿಶುವಿಗೆ ಹಾಲುಣಿಸುವ ಮುನ್ನ ಆಕೆ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಮಾಸ್ಕ್, ಫೇಸ್ ಶೀಲ್ಡ್ ಮತ್ತಿತರ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಜೊತೆಗೆ ಆಕೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ಒಂದು ವೇಳೆ ಮಗುವಿನ ಆರೈಕೆಗೆ ಯಾರೊಬ್ಬರೂ ಇಲ್ಲದೇ ಇದ್ದ ಸಂದರ್ಭದಲ್ಲಿ ತಾಯಿ ಎಲ್ಲ ಸಂದರ್ಭದಲ್ಲೂ ಮಾಸ್ಕ್ ಅನ್ನು ಧರಿಸಬೇಕು ಮತ್ತು ಮಗುವಿನಿಂದ ಸಾಧ್ಯವಾದಷ್ಟು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತಾಯಿ ಮತ್ತು ಮಗು ಉತ್ತಮ ಗಾಳಿ – ಬೆಳಕು ಇರುವಂತಹ ಕೋಣೆಯಲ್ಲಿ ವಾಸಿಸಬೇಕು. ತಾಯಿ ಆಗಾಗ್ಗೆ ತನ್ನ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ತನ್ನ ಸುತ್ತಮುತ್ತಲಿನ ಜಾಗವನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ಮಹಿಳೆಯರಲ್ಲಿ ಪ್ರಸವ ನಂತರದ ಖಿನ್ನತೆ ಮತ್ತು ಆತಂಕ ಸಾಮಾನ್ಯವಾಗಿರುತ್ತದೆ. ಸಾಂಕ್ರಾಮಿಕದ ಸಮಯದಲ್ಲಿ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರುವುದನ್ನು ನೀವು ಗಮನಿಸಿದ್ದೀರಾ?
ಖಂಡಿತವಾಗಿಯೂ ಗರ್ಭಿಣಿಯರಲ್ಲಿ ಮತ್ತು ಪ್ರಸವದ ನಂತರ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯರಲ್ಲಿ ಸಾಕಷ್ಟು ಹಾರ್ಮೋನ್ ಗಳು ಮತ್ತು ದೈಹಿಕ ಬದಲಾವಣೆಗಳು ಕಂಡುಬರುತ್ತವೆ. ಕೌಶಲ್ಯ ನಿಭಾಯಿಸುವ ಶಕ್ತಿ ಅಂತಹವರಲ್ಲಿ ಕಡಿಮೆಯಿರುತ್ತದೆ ಹಾಗು ಆಕೆಗೆ ಸಾಮಾಜಿಕ ಬೆಂಬಲದ ಅಗತ್ಯವಿರುತ್ತದೆ. ಸಾಮಾಜಿಕ ಬೆಂಬಲದ ಕೊರತೆಯಿಂದಾಗಿ ಆಕೆಗೆ ಒಂಟಿತನದ ಅನುಭವವಾಗಬಹುದು. ಅಸಹಾಯಕತೆ ಮತ್ತು ಖಿನ್ನತೆಗೂ ಒಳಗಾಗಬಹುದು.
ಪ್ರತಿಯೊಬ್ಬರಿಗೂ ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಲ್ಲಿ ಮತ್ತು ಬಾಣಂತಿ ತಾಯಂದಿರಲ್ಲಿ 15 ದಿನಗಳ ಐಸೋಲೇಷನ್ ಅತ್ಯಂತ ಕಷ್ಟಕರ. ಅಂತಹ ಸಮಯದಲ್ಲಿ ತನ್ನ ಮಗುವಿನ ಆರೋಗ್ಯ ಸ್ಥಿತಿಗತಿ ಬಗ್ಗೆ ಆಕೆ ಹೆಚ್ಚು ಆತಂಕಕ್ಕೆ ಒಳಗಾಗುತ್ತಾಳೆ ಮತ್ತು ಆಕೆಯ ಮಾನಸಿಕ ಸ್ಥಿತಿಗತಿಯ ಮೇಲೆ ಪರಿಣಾಮವಾಗುತ್ತದೆ.
ಈ ಸಮಯದಲ್ಲಿ ಮಹಿಳೆಯರಿಗೆ ನಿರಂತರ ಬೆಂಬಲ ಮತ್ತು ಭರವಸೆ ನೀಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಕುಟುಂಬ ವಿಡಿಯೋ ಕಾಲ್ ಮೂಲಕ ಸದಾ ಆಕೆಯ ಜೊತೆಗೆ ಸಂಪರ್ಕದಲ್ಲಿರಬೇಕು ಮತ್ತು ಆಕೆಯ ಮನಸ್ಥಿತಿಯಲ್ಲಿ ಏನಾದರೂ ಬದಲಾವಣೆಗಳಾದರೆ ಗಮನಿಸಬೇಕು ಮತ್ತು ಆಕೆ ಖಿನ್ನತೆಗೆ ಒಳಗಾಗಿರುವುದು ಕಂಡುಬಂದರೆ ವೈದ್ಯಕೀಯ ನೆರವು ನೀಡಬೇಕು.
ನಾವು ಸದಾ ಗರ್ಭಿಣಿಯರು ಮತ್ತು ತಾಯಂದಿರಿಗೆ ಎರಡು ಸರಳ ತಪಾಸಣೆ ಪ್ರಶ್ನೆಗಳನ್ನು ಕೇಳುತ್ತೇವೆ. ಒಂದು ತನ್ನ ನಿತ್ಯದ ಕಾರ್ಯಗಳನ್ನು ಮಾಡುವುದರಲ್ಲಿ ಆಸಕ್ತಿ ಇದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದು. ಎರಡನೆಯದಾಗಿ ಕಳೆದ ಎರಡು ವಾರಗಳಿಂದೀಚೆಗೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಳುವಂತಹ ಭಾವನೆ ಉಂಟಾಗಿದೆ ಎಂಬುದು. ಇದಕ್ಕೆ ಆಕೆ ಹೌದು ಎಂದು ಉತ್ತರಿಸಿದರೆ ಆಕೆಗೆ ಮನಃಶಾಸ್ತ್ರಜ್ಞರಿಂದ ಆಪ್ತ ಸಮಾಲೋಚನೆ ಅಗತ್ಯವಿದೆ ಎಂದರ್ಥ. ವೈದ್ಯರು ಹಾಗೂ ಕುಟುಂಬದ ಸದಸ್ಯರು ಆ ಸಮಯದಲ್ಲಿ ಮಹಿಳೆಯ ವರ್ತನೆಯ ಮೇಲೆ ಗಂಭೀರ ನಿಗಾ ಇರಿಸುವುದು ಅವಶ್ಯಕ.
ನಿಮ್ಮ ಮಹಿಳಾ ರೋಗಿಗಳಿಗೆ ನೀವು ಯಾವ ಬಗೆಯ ಸಲಹೆಗಳನ್ನು ನೀಡಲು ಬಯಸುತ್ತೀರಿ?
ನಾವು ಸುರಕ್ಷಿತವಾಗಿರಿ, ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಿ ಮತ್ತು ಕೋವಿಡ್-19 ಸೂಕ್ತ ನಡವಳಿಕೆಯನ್ನು ಪಾಲಿಸಿ ಎಂದು ಹೇಳುತ್ತೇವೆ. ಲಭ್ಯವಿರುವಂತಹ ಸಂದರ್ಭದಲ್ಲಿ ಲಸಿಕೆಗಳನ್ನು ಪಡೆದುಕೊಳ್ಳಿ ಮತ್ತು ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡುವುದರಿಂದ ದೂರವಿರಿ ಎಂದು ಸಲಹೆ ನೀಡುತ್ತೇವೆ.
ಕೋವಿಡ್ ಸೋಂಕಿನ ಲಕ್ಷಣಗಳಾದ ಜ್ವರ, ಗಂಟಲು ನೋವು, ರುಚಿ ಅಥವಾ ವಾಸನೆ ಸಿಗದಿರುವುದು ಅಥವಾ ಕೋವಿಡ್ ಪಾಸಿಟಿವ್ ವ್ಯಕ್ತಿಯ ಜೊತೆ ತೆರೆದು ಕೊಂಡಾಗ ತಕ್ಷಣವೇ ಅಂತಹವರಿಗೆ ವೈದ್ಯಕೀಯ ಸಹಾಯ ಅಗತ್ಯವಿರುತ್ತದೆ. ಸೋಂಕು ಪತ್ತೆಯಲ್ಲಿ ಯಾವುದೇ ವಿಳಂಬ ಮಾಡುವುದು ಸರಿಯಲ್ಲ ಮತ್ತು ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಕೊನೆಯದಾಗಿ ನಮ್ಮ ಗರ್ಭಿಣಿಯರನ್ನು ಅವರು ಗರ್ಭಧರಿಸಿರುವ ವೇಳೆ ಗರ್ಭನಿರೋಧಕ ವಿಧಾನಗಳನ್ನು ಬಗ್ಗೆ ಸಲಹೆ ನೀಡುತ್ತೇವೆ. ಮತ್ತು ಅವರಿಗೆ ಪ್ರಸವ ನಂತರ ಅಥವಾ ಸಿಜೇರಿಯನ್ ನಂತರ ತಕ್ಷಣಕ್ಕೆ ಅಳವಡಿಸಿಕೊಳ್ಳಲು ಪೋಸ್ಟ್ ಪಾರ್ಟಮ್ ಇಂಟ್ರಾ ಯುಟರೈನ್ ಡಿವೈಸ್(ಸಿಯು ಟಿ) ಅಳವಡಿಸಿಕೊಳ್ಳಲು ಸೂಚಿಸುತ್ತೇವೆ. ಇದು ಮಗುವಿನ ಜನನದ ನಂತರ ಅವರು ಅನಗತ್ಯವಾಗಿ ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುತ್ತದೆ ಮತ್ತು ಯೋಜನೆ ಇಲ್ಲದ ಗರ್ಭಧಾರಣೆಯ ಅಪಾಯವನ್ನು ತಪ್ಪಿಸುತ್ತದೆ.
***
(Release ID: 1739183)
Visitor Counter : 360