ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
’ಮಕ್ಕಳಿಗಾಗಿ ಪಿ.ಎಂ.ಕೇರ್ಸ್” ಯೋಜನೆ ಅಡಿಯಲ್ಲಿ ಬೆಂಬಲ ಪಡೆಯಲು ಅರ್ಜಿ ಸಲ್ಲಿಕೆ, ಮತ್ತು ಅರ್ಹ ಮಕ್ಕಳ ಗುರುತಿಸುವಿಕೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ವೆಬ್ ಆಧಾರಿತ ಪೋರ್ಟಲ್ pmcaresforchildren.in ಆರಂಭ
ಸುಸ್ಥಿರ ರೀತಿಯಲ್ಲಿ ಅನಾಥ ಮಕ್ಕಳ ರಕ್ಷಣೆ ಮತ್ತು ಸಮಗ್ರ ಆರೈಕೆಯನ್ನು ಖಾತ್ರಿಪಡಿಸುವುದು ಯೋಜನೆಯ ಉದ್ದೇಶ
Posted On:
25 JUL 2021 7:20PM by PIB Bengaluru
’ಮಕ್ಕಳಿಗಾಗಿ ಪಿ.ಎಂ.ಕೇರ್ಸ್” ಯೋಜನೆ ಅಡಿಯಲ್ಲಿ ಬೆಂಬಲ ಪಡೆಯಲು ಅರ್ಜಿ ಸಲ್ಲಿಕೆ, ಮತ್ತು ಅರ್ಹ ಮಕ್ಕಳ ಗುರುತಿಸುವಿಕೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ವೆಬ್ ಆಧಾರಿತ ಪೋರ್ಟಲ್ pmcaresforchildren.in ಆರಂಭ ಮಾಡಿದೆ. ಇದರಿಂದ ಪ್ರಯೋಜನಗಳನ್ನು ಪಡೆಯಲು ಸಲ್ಲಿಸುವ ಅರ್ಜಿಗಳ ಸಂಸ್ಕರಣೆ ಸುಲಭ ಸಾಧ್ಯವಾಗಲಿದೆ. ಮಕ್ಕಳ ನೋಂದಣೆ ಮತ್ತು ಫಲಾನುಭವಿಗಳ ಗುರುತಿಸುವಿಕೆಯ ಮಾದರಿಯನ್ನು ಕಾರ್ಯಾರಂಭ ಮಾಡಲಾಗಿದೆ. ಪೋರ್ಟಲನ್ನು ಅವಶ್ಯ ಮಾಹಿತಿ ಮತ್ತು ಮಾದರಿಗಳ ಜೊತೆ ನಿಯಮಿತವಾಗಿ ಸಕಾಲಿಕಗೊಳಿಸಲಾಗುತ್ತದೆ.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ ಇಬ್ಬರೂ ಪೋಷಕರನ್ನು ಅಥವಾ ಕಾನೂನು ಬದ್ಧ ರಕ್ಷಕರನ್ನು ಅಥವಾ ದತ್ತು ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನೆರವು ನೀಡಲು “ಮಕ್ಕಳಿಗಾಗಿ ಪಿ.ಎಂ.ಕೇರ್ಸ್’ ಯೋಜನೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಈ ಯೋಜನೆಯು ಕೋವಿಡ್ ಜಾಗತಿಕ ಸಾಂಕ್ರಾಮಿಕದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸುಸ್ಥಿರ ರೀತಿಯಲ್ಲಿ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುತ್ತದೆ. ಅದು ಆರೋಗ್ಯ ವಿಮೆ, ಶಿಕ್ಷಣದ ಮೂಲಕ ಅವರ ಸಶಕ್ತೀಕರಣ ಮೂಲಕ ಅವರ ಕ್ಷೇಮಾಭ್ಯುದಯಕ್ಕೆ ಅನುವು ಮಾಡಿಕೊಡುತ್ತದೆ ಮತ್ತು 23 ವರ್ಷ ತಲುಪುವವರೆಗೆ 10 ಲಕ್ಷ ರೂ. ಹಣಕಾಸು ಬೆಂಬಲದೊಂದಿಗೆ ಸ್ವಾವಲಂಬನೆಯನ್ನು ಸಾಧಿಸಲು ನೆರವಾಗುತ್ತದೆ.
ಪೋರ್ಟಲಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ/ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆಗಳ ಎ.ಸಿ.ಎಸ್./ಪ್ರಧಾನ ಕಾರ್ಯದರ್ಶಿಗಳಿಗೆ ದಿನಾಂಕ 15.07.21ರಂದು ಪ್ರದರ್ಶಿಕೆ ಮೂಲಕ ವಿವರಗಳನ್ನು ಒದಗಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಲಾಗಿನ್ ಐ.ಡಿ.ಗಳನ್ನು ಮತ್ತು ಪಾಸ್ ವರ್ಡ್ ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ/ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆ ( ಅಲ್ಲಿ ಯಾವುದಿದೆಯೋ ಆ ಇಲಾಖೆ) ಗಳ ಜೊತೆ ಹಂಚಿಕೊಳ್ಳಲಾಗಿದೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಅದನ್ನು ಪಾರ್ವರ್ಡ್ ಮಾಡುವಂತೆ ಕೋರಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ 2021ರ ಜುಲೈ 22 ರಂದು ಪತ್ರ ಬರೆದು ತಮ್ಮ ರಾಜ್ಯಗಳಲ್ಲಿಯ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ “ಮಕ್ಕಳಿಗಾಗಿರುವ ಪಿ.ಎಂ. ಕೇರ್ಸ್” ಯೋಜನೆ ಅಡಿಯಲ್ಲಿ ನೆರವಿಗೆ ಅರ್ಹರಾಗಿರುವ ಮಕ್ಕಳನ್ನು ಗುರುತಿಸುವಂತೆ ನಿರ್ದೇಶನ ನೀಡುವಂತೆ ಕೋರಿದೆ. ಮಾತ್ರವಲ್ಲ pmcaresforchildren.in ಪೋರ್ಟಲನ್ನು ಅರ್ಹ ಮಕ್ಕಳ ವಿವರಗಳೊಂದಿಗೆ ಜನಪ್ರಿಯಗೊಳಿಸುವಂತೆ ಮತ್ತು ಆ ಮೂಲಕ ಅವರಿಗೆ ಸಕಾಲಿಕವಾಗಿ ನೆರವು ಲಭಿಸುವುದನ್ನು ಸಾಧ್ಯ ಮಾಡಲು ಕೋರಲಾಗಿದೆ. ನೀಡಲಾದ ಅನುಬಂಧದಲ್ಲಿ ಮಕ್ಕಳ ನೋಂದಣಿಗೂ ಕ್ರಮ ವಹಿಸುವಂತೆ ಸಲಹೆ ಮಾಡಲಾಗಿದೆ. ಈ ಕಾರ್ಯವನ್ನು ಮುಂದಿನ 15 ದಿನಗಳೊಳಗೆ ಪೂರ್ಣಗೊಳಿಸಬೇಕು. ಇದಕ್ಕಾಗಿಯೇ ಇರುವ ಪ್ರತ್ಯೇಕ ಸಹಾಯ ಡೆಸ್ಕನ್ನು ತೆರೆಯಲಾಗಿದೆ, ಅದನ್ನು ದೂರವಾಣಿ ಸಂಖ್ಯೆ 011-23388074 ಮೂಲಕ ಅಥವಾ ಮಿಂಚಂಚೆ pmcares-children.wcd[at]nic[dot]in ಮೂಲಕ ಸಂಪರ್ಕಿಸಬಹುದು.
ಪೋರ್ಟಲಿನಲ್ಲಿ ದತ್ತಾಂಶ ದಾಖಲಿಸುವಿಕೆಯ ಪ್ರಗತಿಯನ್ನು ವೈಯಕ್ತಿಕ ನಿಗಾ ವಹಿಸಿ ಮೇಲುಸ್ತುವಾರಿ ಮಾಡಬೇಕು ಎಂದೂ ಸಚಿವಾಲಯವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳನ್ನು ಕೋರಿದೆ.
ಅನುಬಂಧ
’ಮಕ್ಕಳಿಗಾಗಿ ಪಿ.ಎಂ.ಕೇರ್ಸ್” ಯೋಜನೆ ಅಡಿಯಲ್ಲಿ ಬೆಂಬಲಕ್ಕೆ ಅರ್ಹರಾದ ಮಕ್ಕಳ ಗುರುತಿಸುವಿಕೆ
ಅರ್ಹತೆ:
ಈ ಕೆಳಗಿನವರನ್ನು ಕಳೆದುಕೊಂಡ ಎಲ್ಲಾ ಮಕ್ಕಳು
- ಇಬ್ಬರೂ ಪೋಷಕರನ್ನು ಕಳೆದುಕೊಂಡವರು ಅಥವಾ
- ಓರ್ವ ಪೋಷಕರನ್ನು ಹೊಂದಿರುವವರು
- 11.03.2020 ಆರಂಭಗೊಂಡಂತೆ ಜಾಗತಿಕ ಸಾಂಕ್ರಾಮಿಕವಾದ ಕೋವಿಡ್ -19 ಕೊನೆಗೊಳ್ಳುವವರೆಗೆ ಕೋವಿಡ್ -19 ರಿಂದಾಗಿ ಕಾನೂನು ಬದ್ಧ ರಕ್ಷಕರು/ದತ್ತು ಪೋಷಕರನ್ನು ಕಳೆದುಕೊಂಡವರು ಈ ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಿರುತ್ತಾರೆ.
ಪ್ರಕ್ರಿಯೆಗಳು:
1. ಈ ಮಕ್ಕಳನ್ನು ಗುರುತಿಸಲು ಪೊಲೀಸರು, ಡಿ.ಸಿ.ಪಿ.ಯು., ಮಕ್ಕಳ ಸಹಾಯವಾಣಿ ಮತ್ತು ನಾಗರಿಕ ಸಮಾಜದ ಸಂಘಟನೆಗಳ ಸಹಾಯದೊಂದಿಗೆ ಜಿಲ್ಲಾ ಮ್ಯಾಜಿಸ್ಟ್ರೇಟರು ಆಂದೋಲನವನ್ನು ಕೈಗೊಳ್ಳಬೇಕು
2. ಗ್ರಾಮ ಪಂಚಾಯತ್, ಅಂಗನವಾಡಿ ಮತ್ತು ಆಶಾ ಜಾಲದವರಿಗೆ ಇಂತಹ ಮಕ್ಕಳ ಬಗ್ಗೆ ಸಿ.ಡಬ್ಲ್ಯು.ಸಿ. ಗೆ ವರದಿ ಮಾಡುವಂತೆ ಸೂಕ್ಷ್ಮತ್ವವನ್ನು ಮೂಡಿಸುವುದು.
3. ಗುರುತಿಸುವಿಕೆ ಆಂದೋಲನದ ಬಗ್ಗೆ ಸ್ಥಳಿಯ ಭಾಷೆಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಾಕಷ್ಟು ಪ್ರಚಾರ ನೀಡಬೇಕು ಮತ್ತು ಇಂತಹ ಮಕ್ಕಳನ್ನು ಸಿ.ಡಬ್ಲ್ಯು.ಸಿ.ಎದುರು ಹಾಜರು ಮಾಡುವಂತೆ ಅಥವಾ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಕ್ಕಳ ಸಹಾಯವಾಣಿ (1098) ಮೂಲಕ ಇಲ್ಲವೇ ಡಿ.ಸಿ.ಪಿ.ಯು. ಮೂಲಕ ವರದಿ ನೀಡುವಂತೆ ಉತ್ತೇಜಿಸಬೇಕು.
4. ಕೋವಿಡ್ ನಿಂದಾಗಿ ಇಬ್ಬರೂ ಪೋಷಕರನ್ನು ಕಳೆದುಕೊಂಡು, ಈ ಯೋಜನೆ ಅಡಿಯಲ್ಲಿ ಬೆಂಬಲದ ಅವಶ್ಯಕತೆ ಇರುವ ಮಕ್ಕಳನ್ನು ಮಕ್ಕಳ ಸಹಾಯವಾಣಿ (1098), ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿ.ಸಿ.ಪಿ.ಯು.) ಅಥವಾ ಇತರ ಏಜೆನ್ಸಿ ಅಥವಾ ವ್ಯಕ್ತಿಗಳ ಮೂಲಕ ಸಿ.ಡಬ್ಲ್ಯು.ಸಿ. ಎದುರು ಅಂತಹ ಮಕ್ಕಳು ಕಂಡುಬಂದ 24 ಗಂಟೆಗಳ ಒಳಗೆ ಹಾಜರುಪಡಿಸಬಹುದು. ಇದರಲ್ಲಿ ಪ್ರಯಾಣದ ಅವಧಿಯನ್ನು ಹೊರತುಪಡಿಸಲಾಗಿದೆ.
5. ಯೋಜನೆ ಅಡಿಯಲ್ಲಿ ಬೆಂಬಲ ಕೋರುವ ಅರ್ಜಿಗಳನ್ನು ಮಕ್ಕಳು ಅಥವಾ ಆರೈಕೆ ಮಾಡುವವರು ಅಥವಾ ಸಿ.ಡಬ್ಲ್ಯು.ಸಿ.ಎದುರು ಮಕ್ಕಳನ್ನು ಹಾಜರು ಮಾಡುವ ಯಾವುದೇ ಇತರ ಏಜೆನ್ಸಿ ಭರ್ತಿ ಮಾಡಬಹುದು.
6. ಡಿ.ಸಿ.ಪಿ.ಯು.ನಿಂದ ನೆರವು ಪಡೆದು ಸಿ.ಡಬ್ಲ್ಯು.ಸಿ.ಯು ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಂಬಂಧಿಸಿದ ಸತ್ಯ ವಿಷಯಗಳನ್ನು, ಮೃತಪಟ್ಟ ಪೋಷಕರ ವಿವರಗಳು, ಮನೆಯ ವಿಳಾಸ, ಶಾಲೆ, ಸಂಪರ್ಕ ವಿವರಗಳು, ಪರಿಚಯ ಪತ್ರಗಳು, ಕುಟುಂಬದ ವಾರ್ಷಿಕ ಆದಾಯ, ರಕ್ತ ಸಂಬಂಧಿಗಳು ಸಹಿತ ವಿವರಗಳನ್ನು ಸಂಗ್ರಹಿಸತಕ್ಕದ್ದು. ಸಿ.ಡಬ್ಲ್ಯು.ಸಿ.ಯು ಮಕ್ಕಳ ಪೋಷಕರು ಮೃತಪಟ್ಟಿರುವುದಕ್ಕೆ ಕಾರಣವನ್ನು ಅವರ ಮರಣ ಪ್ರಮಾಣ ಪತ್ರ ಅಥವಾ ಕ್ಷೇತ್ರ ತನಿಖೆಯ ಮೂಲಕ ಪರಿಶೀಲನೆ ಮಾಡಬೇಕು. ಮಾಹಿತಿಯನ್ನು ಡಿ.ಎಂ. ಅವರ ಪರಿಗಣನೆಗೆ ಸಲ್ಲಿಸುವಾಗ ಮಕ್ಕಳಿಗಾಗಿರುವ ಪಿ.ಎಂ. ಕೇರ್ಸ್ ನ ಪೋರ್ಟಲಿಗೂ ಸಿ.ಡಬ್ಲ್ಯು.ಸಿ. ಯು ಅದನ್ನು ಅಪ್ಲೋಡ್ ಮಾಡಬಹುದು.
7. ಸಿ.ಡಬ್ಲ್ಯು.ಸಿ.ಯು ತನ್ನೆದುರು ಹಾಜರುಪಡಿಸಲಾದ ಎಲ್ಲಾ ಮಕ್ಕಳ ಅಥವಾ ಪೋರ್ಟಲಿನಲ್ಲಿ ಇತರ ಏಜೆನ್ಸಿಗಳಿಂದ ಅವರಿಗೆ ವರದಿ ಮಾಡಲಾಗಿರುವ ಮಕ್ಕಳ ವಿವರಗಳನ್ನೂ ಅಪ್ಲೋಡ್ ಮಾಡಬಹುದು.
8. ಪ್ರತೀ ಪ್ರಕರಣದ ವಸ್ತು ಸ್ಥಿತಿಯನ್ನು ಖಚಿತಪಡಿಸಿಕೊಂಡ ಬಳಿಕ, ಸಿ.ಡಬ್ಲ್ಯು.ಸಿ.ಯು ಮಕ್ಕಳ ಬಗ್ಗೆ ತನ್ನ ಶಿಫಾರಸುಗಳನ್ನು ಡಿ.ಎಂ.ಗೆ ಸಲ್ಲಿಸಬಹುದು.
9. ಒಂದು ವೇಳೆ ಸಿ.ಡಬ್ಲ್ಯು.ಸಿ. ಒಂದು ನಿರ್ದಿಷ್ಟ ಮಗುವಿನ ಬಗ್ಗೆ ಶಿಫಾರಸು ಮಾಡದಿದ್ದರೆ, ಕೊಟ್ಟಿರುವ ಸ್ಥಳದಲ್ಲಿ ಡಿ.ಎಂ. ಅವರ ಗಮನಕ್ಕೆ ಬರುವಂತೆ ಕಾರಣಗಳನ್ನು ದಾಖಲಿಸಬೇಕು
10. ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಮೊದಲು ಬಂದವರಿಗೆ ಆದ್ಯತೆ ತತ್ವವನ್ನು ಅನುಸರಿಸಬಹುದು
11. ಡಿ.ಎಂ. ಅವರು ಸಿ.ಡಬ್ಲ್ಯು.ಸಿ.ಯ ಶಿಫಾರಸನ್ನು ಅಂಗೀಕರಿಸಬಹುದು ಅಥವಾ ಸಿ.ಡಬ್ಲ್ಯು.ಸಿ. ಅಥವಾ ಡಿ.ಸಿ.ಪಿ.ಯು. ಮೂಲಕ ಪರಿಶೀಲನೆಯನ್ನು ಅಪೇಕ್ಷಿಸಬಹುದು. ಸಿ.ಡಬ್ಲ್ಯು.ಸಿ.ಯು ಶಿಫಾರಸು ಮಾಡಿದ ಅಥವಾ ಶಿಫಾರಸು ಮಾಡದೇ ಇರುವ ಪ್ರತೀ ಮಗುವಿನ ಬಗ್ಗೆಯೂ ಡಿ.ಎಂ. ಅವರು ಸ್ವತಂತ್ರವಾಗಿ ಮೌಲ್ಯಮಾಪನ ಕೈಗೊಳ್ಳಬಹುದು. ಈ ಉದ್ದೇಶಕ್ಕೆ ಡಿ.ಎಂ. ಅವರು ಮಕ್ಕಳ ರಕ್ಷಣಾ ಸಿಬ್ಬಂದಿ, ಪೊಲೀಸ್, ಮಕ್ಕಳ ಸಹಾಯವಾಣಿ ಅಥವಾ ಸೂಕ್ತ ಎಂದು ಕಂಡುಬಂದ ಯಾವುದೇ ಏಜೆನ್ಸಿಯ ಸಹಾಯವನ್ನು ಪಡೆಯಬಹುದು.
12. ತಮಗೆ ಸಮಾಧಾನ/ತೃಪ್ತಿಯಾದ ಬಳಿಕ ಡಿ.ಎಂ. ಅವರು ಯೋಜನೆಗಾಗಿ ಮಕ್ಕಳ ಅರ್ಹತೆಯನ್ನು ಪೋರ್ಟಲಿನಲ್ಲಿ ದಾಖಲಿಸಬಹುದು. ಈ ಯೋಜನೆ ಅಡಿಯಲ್ಲಿ ಮಕ್ಕಳ ಅರ್ಹತೆಗೆ ಸಂಬಂಧಿಸಿದಂತೆ ಡಿ.ಎಂ. ಅವರು ಕೈಗೊಂಡ ನಿರ್ಧಾರವೇ ಅಂತಿಮ.
***
(Release ID: 1738971)
Visitor Counter : 324