ಪ್ರಧಾನ ಮಂತ್ರಿಯವರ ಕಛೇರಿ

ಆಷಾಢ ಪೂರ್ಣಿಮಾ-ಧಮ್ಮ ಚಕ್ರ ದಿನದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಸಂದೇಶ


ಕೊರೊನಾ ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಭಗವಾನ್ ಬುದ್ಧನ ಸಂದೇಶಗಳು ಪ್ರಸ್ತುತ: ಪ್ರಧಾನ ಮಂತ್ರಿ

ಬುದ್ಧನ ಹಾದಿಯಲ್ಲಿ ನಡೆದರೆ ಸಂಕಷ್ಟದ ಸವಾಲುಗಳನ್ನು ನಾವು ಹೇಗೆ ಎದುರಿಸಬಲ್ಲೆವು ಎಂಬುದನ್ನು ಭಾರತ ವಿಶ್ವಕ್ಕೆ ತೋರಿದೆ: ಪ್ರಧಾನ ಮಂತ್ರಿ

ದುರಂತದ ಸಮಯದಲ್ಲಿ ಬುದ್ಧನ ಬೋಧನೆಗಳ ಪ್ರಭಾವವನ್ನು ಇಡೀ ವಿಶ್ವವೇ ಅನುಭವಿಸಿದೆ: ಪ್ರಧಾನ ಮಂತ್ರಿ

Posted On: 24 JUL 2021 8:58AM by PIB Bengaluru

ಇಡೀ ಜಗತ್ತಿಗೆ ಕೊರೊನಾ ಸಾಂಕ್ರಾಮಿಕ ಸೋಂಕು ಆವರಿಸಿರುವ ಈ ಕಾಲಘಟ್ಟದಲ್ಲಿ ಭಗವಾನ್ ಬುದ್ಧನ ಸಂದೇಶಗಳು ಇಂದಿಗೂ ಸಹ ಅತ್ಯಂತ ಪ್ರಸ್ತುತ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು.

ಬುದ್ಧನ ಹಾದಿಯಲ್ಲಿ ನಡೆಯುವ ಮೂಲಕ ಭಾರತವು, ಎಂತಹ ಸಂಕಷ್ಟದ ಸವಾಲುಗಳನ್ನು ಹೇಗೆ ಎದುರಿಸಬಲ್ಲದು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿದೆ. ಬುದ್ಧನ ಬೋಧನೆಗಳನ್ನು ಅನುಸರಿಸುವ ಮೂಲಕ ಇಡೀ ಜಗತ್ತೇ ಒಗ್ಗಟ್ಟಿನಲ್ಲಿ ಮುನ್ನಡೆಯುತ್ತಿದೆ. ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು ಆಯೋಜಿಸಿರುವ ‘ಪ್ರಾರ್ಥನೆಯೊಂದಿಗೆ ಕಾಳಜಿ’ ಉಪಕ್ರಮವು ಪ್ರಶಂಸನೀಯವಾಗಿದೆ ಎಂದು ಪ್ರಧಾನ ಮಂತ್ರಿ ಶ್ಲಾಘಿಸಿದ್ದಾರೆ.

ಆಷಾಢ ಪೂರ್ಣಿಮಾ ಧಮ್ಮ ಚಕ್ರ ದಿನದ ಕಾರ್ಯಕ್ರಮದ ಸುಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಶುಭಾಶಯ ಸಂದೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

 

ನಮ್ಮ ಮನಸ್ಸು, ಮಾತು ಮತ್ತು ಸಂಕಲ್ಪದ ನಡುವಿನ ಸಾಮರಸ್ಯ, ನಮ್ಮ ಕ್ರಿಯೆ ಮತ್ತು ಪ್ರಯತ್ನದ ನಡುವಿನ ಸಾಮರಸ್ಯವು ನೋವಿನಿಂದ ದೂರಾಗಿ ಸಂತೋಷದ ಕಡೆಗೆ ತೆರಳುವಂತೆ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತದೆ. ಒಳ್ಳೆಯ ಸಮಯದಲ್ಲಿ ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಇದು ನಮಗೆ ಪ್ರೇರಣೆ ನೀಡುತ್ತದೆ ಮತ್ತು ಕಷ್ಟದ ಸಮಯಗಳನ್ನು ಎದುರಿಸಲು ನಮಗೆ ಶಕ್ತಿ ನೀಡುತ್ತದೆ. ಈ ಸಾಮರಸ್ಯ ಸಾಧಿಸಲು ಭಗವಾನ್ ಬುದ್ಧ ನಮಗೆ 8 ಪಥದ ರಾಜಮಾರ್ಗ ತೋರಿದ್ದಾರೆ ಎಂದು ಪ್ರಧಾನಿ ಹೇಳಿದರು.

ತ್ಯಾಗ ಮತ್ತು ಸಹಿಷ್ಣುತೆಯ ರಾಜಮಾರ್ಗದಲ್ಲಿ ಮುನ್ನಡೆದ ಬುದ್ಧ ನುಡಿದ ಪದಗಳು ಕೇವಲ ಮಾತುಗಳಾಗದೆ, ‘ಧಮ್ಮ’ದ ಸಂಪೂರ್ಣ ಚಕ್ರವೇ ಪ್ರಾರಂಭವಾಗುತ್ತ. ಅವನಿಂದ ಹರಿಯುವ ಜ್ಞಾನವು ವಿಶ್ವ ಕಲ್ಯಾಣಕ್ಕೆ ಸಮಾನಾರ್ಥಕವಾಗುತ್ತದೆ. ಈ ಕಾರಣಕ್ಕಾಗಿಯೇ ಭಗವಾನ್ ಬುದ್ಧ ಇಂದಿಗೂ ವಿಶ್ವಾದ್ಯಾಂತ ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಪ್ರಧಾನಿ ಸ್ಮರಿಸಿದರು.

‘ಧಮ್ಮ ಪಾದ’ವನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ ಅವರು, ದ್ವೇಷವು ದ್ವೇಷವನ್ನು ತಣಿಸುವುದಿಲ್ಲ. ಬದಲಾಗಿ, ಪ್ರೀತಿ ಮತ್ತು ವಿಶಾಲ ಹೃದಯದಿಂದ ದ್ವೇಷವು ಶಾಂತವಾಗುತ್ತದೆ. ಸಾಂಕ್ರಾಮಿಕ ಸೋಂಕಿನ ದುರಂತದ ಕಾಲಘಟ್ಟದಲ್ಲಿ, ಪ್ರೀತಿ ಮತ್ತು ಸಾಮರಸ್ಯದ ಶಕ್ತಿಯನ್ನು ಇಡೀ ಜಗತ್ತು ಅನುಭವಿಸಿದೆ. ಬುದ್ಧನ ಈ ಜ್ಞಾನ, ಮಾನವೀಯತೆಯ ಈ ಅನುಭವವು ಸಮೃದ್ಧವಾಗುತ್ತಿದ್ದಂತೆ, ಜಗತ್ತು ಯಶಸ್ಸು ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಮುಟ್ಟಲಿದೆ ಎಂದು ಪ್ರಧಾನ ಮಂತ್ರಿ ಅವರು ತಮ್ಮ ಸಂದೇಶವನ್ನು ಸಮಾಪನಗೊಳಿಸಿದರು.

https://youtu.be/Sq6i8ZGgmqU

***



(Release ID: 1738557) Visitor Counter : 194