ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ 19 ಲಸಿಕಾಕರಣ : ಮಿಥ್ಯೆ ಮತ್ತು ವಾಸ್ತವಾಂಶಗಳು
ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು ಕೋವಿಡ್ ಲಸಿಕೆ ಕೊರತೆಯ ಸಮಸ್ಯೆಗಳ ಬಗ್ಗೆ ಸರಣಿ ಟ್ವೀಟ್‌ಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ
"ತಪ್ಪು ನಿರ್ವಹಣೆಯನ್ನು ತಡೆಯಲು ಹಾಗು ಲಸಿಕಾ ಅಭಿಯಾನದ ಪರಿಣಾಮಕಾರಿ ಮುಂಗಡ ಯೋಜನೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯ ಬಗ್ಗೆ ಮುಂಚಿತವಾಗಿ ತಿಳಿಸಲಾಗಿದೆ"
ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿರುವವರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಲಹೆ ನೀಡಿದರು
Posted On:
14 JUL 2021 3:34PM by PIB Bengaluru
ದೇಶದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಮತ್ತು ಲಭ್ಯತೆಯು ನಿಧಾನವಾಗುತ್ತಿರುವ ಬಗ್ಗೆ ಕೆಲವು ರಾಜ್ಯಗಳು ಮತ್ತು ರಾಜಕೀಯ ಪ್ರತಿನಿಧಿಗಳಿಂದ ಹಲವಾರು ಹೇಳಿಕೆಗಳು ಬಂದಿವೆ. ಇಂದು ಮಾಡಿದ ಸರಣಿ ಟ್ವೀಟ್‌ಗಳಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ, ಇಂತಹ ಹೇಳಿಕೆಗಳು ಸತ್ಯಾಂಶವನ್ನು ಆಧರಿಸಿಲ್ಲ ಮತ್ತು ಜನರಲ್ಲಿ ಭೀತಿ ಉಂಟುಮಾಡುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಸಾಕ್ಷ್ಯಾಧಾರಗಳು ಮತ್ತು ವಾಸ್ತವದ ಆಧಾರದ ಮೇಲೆ ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆಯಿಂದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕಾಕಾರ್ಯಕ್ರಮವನ್ನು ಸಕ್ರಿಯಗೊಳಿಸಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 2021 ರಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11.46 ಕೋಟಿ ಲಸಿಕೆ ಡೋಸ್ ಗಳನ್ನು ಲಭ್ಯಗೊಳಿಸಿತ್ತು. ಜುಲೈ ತಿಂಗಳಲ್ಲಿ ಪ್ರಮಾಣವನ್ನು 13.50 ಕೋಟಿ ಡೋಸ್‌ಗೆ ಹೆಚ್ಚಿಸಲಾಗಿದೆ ಎಂದರು.
ತಯಾರಕರೊಂದಿಗಿನ ಚರ್ಚೆಯ ಆಧಾರದ ಮೇಲೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 19, 2021ರಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ ತಿಂಗಳಲ್ಲಿ ಲಭ್ಯವಾಗುವ ಲಸಿಕೆ ಡೋಸ್ ಗಳ ಬಗ್ಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿತ್ತು. ತರುವಾಯ, ಜೂನ್ 27 ಮತ್ತು ಜುಲೈ 13 ರಂದು, ಜುಲೈ 2021 ರ ಮೊದಲ ಮತ್ತು ಎರಡನೆಯ ಪಾಕ್ಷಿಕದಲ್ಲಿ ಪ್ರತಿದಿನ ಸಿಗುವ ಲಸಿಕೆಗಳ ಬಗ್ಗೆ ರಾಜ್ಯಗಳಿಗೆ ಮುಂಚಿತವಾಗಿ ತಿಳಿಸಲಾಯಿತು. ಲಸಿಕಾ ಅಭಿಯಾನವನ್ನು ರಾಜ್ಯ / ಜಿಲ್ಲಾ ಮಟ್ಟದಲ್ಲಿ ಉತ್ತಮ ಮತ್ತು ಪರಿಣಾಮಕಾರಿ ರೀತಿಯಲ್ಲಿ ಯೋಜಿಸಲು ಈ ಮಾಹಿತಿಯನ್ನು ನೀಡಲಾಗಿತ್ತು. ದೇಶದ ಜನರು ಯಾವುದೇ ಸಮಸ್ಯೆಯನ್ನು ಎದುರಿಸಬಾರದೆಂದು ಕೋವಿಡ್ ಲಸಿಕೆಗಳ ಲಭ್ಯತೆಯ ಆಧಾರದ ಮೇಲೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಯೋಜಿಸಲು ಸೂಚಿಸಲಾಗಿದೆ.
ಲಸಿಕೆ ಲಭ್ಯತೆಯ ಬಗ್ಗೆ ರಾಜ್ಯಗಳಿಗೆ ಮುಂಗಡ ಮಾಹಿತಿ ನೀಡಿದ್ದರೂ, ತಪ್ಪಾದ ನಿರ್ವಹಣೆ ಮತ್ತು ಲಸಿಕೆ ಫಲಾನುಭವಿಗಳ ದೀರ್ಘ ಸರತಿ ಸಾಲುಗಳನ್ನು ನೋಡುತ್ತಿದ್ದರೆ, ನಿಜವಾದ ಸಮಸ್ಯೆ ಏನು ಮತ್ತು ಈ ಪರಿಸ್ಥಿತಿಗೆ ಯಾರು ಹೊಣೆಗಾರರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ತಮ್ಮ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ. ಜನರಲ್ಲಿ ತಪ್ಪು ಮಾಹಿತಿ ಮತ್ತು ಭೀತಿಯನ್ನು ಉಂಟುಮಾಡುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೀಡುತ್ತಿರುವ ವ್ಯಕ್ತಿಗಳು, ಲಸಿಕೆಗಳ ಲಭ್ಯತೆಗೆ ಸಂಬಂಧಿಸಿದಂತೆ ಸರಿಯಾದ ಮುಂಗಡ ಮಾಹಿತಿಯ ಬಗ್ಗೆ ಅರಿವಿಲ್ಲದೆ, ಆಡಳಿತ ಪ್ರಕ್ರಿಯೆಗಳಿಂದ ಮತ್ತು ಅವರಿಗೆ ನೀಡಲಾಗುತ್ತಿರುವ ಸಂಬಂಧಿತ ಮಾಹಿತಿಯಿಂದ ಅವರು ಅಷ್ಟೊಂದು ವಿಮುಖರಾಗಿದ್ದಾರೆಯೇ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶ್ರೀ ಮನ್ಸುಖ್ ಮಾಂಡವಿಯಾ ಸಲಹೆ ನೀಡಿದರು.
(Release ID: 1735499)
Visitor Counter : 208