ಪ್ರಧಾನ ಮಂತ್ರಿಯವರ ಕಛೇರಿ

ಕೊವಿನ್ ಜಾಗತಿಕ ಸಮಾವೇಶ 2021 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 05 JUL 2021 3:27PM by PIB Bengaluru

ಗಣ್ಯ ಸಚಿವರೇ, ಹಿರಿಯ ಅಧಿಕಾರಿಗಳೇ, ಆರೋಗ್ಯ ವೃತ್ತಿಪರರೇ ಮತ್ತು ಜಗತ್ತಿನಾದ್ಯಂತದ ಸ್ನೇಹಿತರೇ

ನಮಸ್ಕಾರ!

ಕೊವಿನ್ ಜಾಗತಿಕ ಸಮಾವೇಶದಲ್ಲಿ ವಿವಿಧ ರಾಷ್ಟ್ರಗಳ ತಜ್ಞರು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ನನಗೆ ಸಂತೋಷ ತಂದಿದೆ. ಎಲ್ಲಕ್ಕಿಂತ ಮೊದಲು ನಾನು ಜಾಗತಿಕ ಸಾಂಕ್ರಾಮಿಕದಲ್ಲಿ ಎಲ್ಲಾ ದೇಶಗಳಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಕಳೆದ ನೂರು ವರ್ಷಗಳಲ್ಲಿ ಜಾಗತಿಕ ಸಾಂಕ್ರಾಮಿಕದಂತಹ ಘಟನೆ ಸಂಭವಿಸಿರಲಿಲ್ಲ. ಇಂತಹ ಸವಾಲನ್ನು ಯಾವುದೇ ದೇಶವೂ ಏಕಾಂಗಿಯಾಗಿ ಪರಿಹರಿಸಲು, ನಿಭಾಯಿಸಲು ಅದು ಎಷ್ಟೇ ಶಕ್ತಿಶಾಲಿ ರಾಷ್ಟ್ರವಾದರೂ ಸಾಧ್ಯವಿಲ್ಲ  ಎಂಬುದನ್ನು ಅನುಭವ ನಮಗೆ ತೋರಿಸಿಕೊಟ್ಟಿದೆ. ಕೋವಿಡ್ -19 ಅತ್ಯಂತ ದೊಡ್ಡ ಪಾಠವೆಂದರೆ ಮಾನವತೆ ಮತ್ತು ಮಾನವ ಕಾರಣಕ್ಕೆ ನಾವು ಒಗ್ಗೂಡಿ ಕೆಲಸ ಮಾಡಬೇಕು ಮತ್ತು ಒಗ್ಗೂಡಿ ಮುನ್ನಡೆಯಬೇಕು ಎಂಬುದು. ನಾವು ಪರಸ್ಪರರಿಂದ ಕಲಿಯಬೇಕು ಮತ್ತು ಉತ್ತಮ ಪದ್ಧತಿಗಳ ಬಗ್ಗೆ ಪರಸ್ಪರ ಮಾರ್ಗದರ್ಶನ ಮಾಡಬೇಕು. ಜಾಗತಿಕ ಸಾಂಕ್ರಾಮಿಕ ಆರಂಭವಾದಂದಿನಿಂದ ಭಾರತವು ತನ್ನ ಎಲ್ಲಾ ಅನುಭವ, ತಜ್ಞತೆ ಮತ್ತು ಸಂಪನ್ಮೂಲಗಳನ್ನು ಯುದ್ಧದಲ್ಲಿ ಜಾಗತಿಕ ಸಮುದಾಯದ ಜೊತೆ ಹಂಚಿಕೊಳ್ಳಲು ಬದ್ಧವಾಗಿದೆ. ನಮ್ಮೆಲ್ಲ ಮಿತಿಗಳ ನಡುವೆಯೂ ನಾವು ಜಗತ್ತಿಗೆ ಸಾಧ್ಯ ಇರುವ ಎಲ್ಲವನ್ನೂ ಹಂಚಿಕೊಳ್ಳಲು ಪ್ರಯತ್ನಿಸಿದ್ದೇವೆ. ಮತ್ತು ನಾವು ಜಾಗತಿಕ ಪದ್ಧತಿಗಳಿಂದ ಕಲಿಯಲು ಕಾತರದಿಂದಿದ್ದೇವೆ.

ಸ್ನೇಹಿತರೇ,

ಕೋವಿಡ್ -19 ವಿರುದ್ಧದ ನಮ್ಮ ಹೋರಾಟದಲ್ಲಿ ತಂತ್ರಜ್ಞಾನ ಸಮಗ್ರ ಭಾಗ. ಅದೃಷ್ಟವಶಾತ್, ಸಾಫ್ಟ್ ವೇರ್ ಕ್ಷೇತ್ರ ಸಂಪನ್ಮೂಲಗಳ ಕೊರತೆ ಇಲ್ಲದ ಕ್ಷೇತ್ರಗಳಲ್ಲೊಂದು. ಅದರಿಂದಾಗಿ ನಾವು ನಮ್ಮ ಕೋವಿಡ್ ಪತ್ತೆ ಮತ್ತು ನಿಗಾ ಆಪ್ ನ್ನು ಅದು ತಾಂತ್ರಿಕವಾಗಿ ಅನುಷ್ಠಾನ ಯೋಗ್ಯ ಎಂದಾದ ಕೂಡಲೇ ಮುಕ್ತ ಮೂಲವನ್ನಾಗಿ ಮಾಡಿದೆವು. ಸುಮಾರು 200 ಮಿಲಿಯನ್ ಬಳಕೆದಾರರೊಂದಿಗೆ ಆರೋಗ್ಯ ಸೇತುಆಪ್ ಅಭಿವೃದ್ಧಿ ಮಾಡುವವರಿಗೆ ತಕ್ಷಣವೇ ಲಭ್ಯವಾಗುವ ಪ್ಯಾಕೇಜ್ ಆಗಿದೆ. ಭಾರತದಲ್ಲಿ ಬಳಕೆಯಾಗುತ್ತಿರುವುದರಿಂದ, ವೇಗ ಮತ್ತು ಪ್ರಮಾಣಕ್ಕೆ ಸಂಬಂಧಿಸಿ ಅದು ನೈಜ ಜಗತ್ತಿನಲ್ಲಿ ಪರೀಕ್ಷಿಸಲ್ಪಟ್ಟಿರುವ ಬಗ್ಗೆ ನಿಮಗೆ ಖಾತ್ರಿ ಇರಬಹುದು.

ಸ್ನೇಹಿತರೇ,

ಮಾನವ ಕುಲಕ್ಕೆ ಜಾಗತಿಕ ಸಾಂಕ್ರಾಮಿಕದಿಂದ ಯಶಸ್ವಿಯಾಗಿ ಪಾರಾಗಲು ಲಸಿಕೆ ನೀಡುವಿಕೆ ಒಂದು ಅತ್ಯುತ್ತಮ ಭರವಸೆ. ಮತ್ತು ಆರಂಭದಿಂದಲೂ ಭಾರತದಲ್ಲಿರುವ ನಾವು ನಮ್ಮ ಲಸಿಕಾ ಅಭಿಯಾನದ ಕಾರ್ಯತಂತ್ರವನ್ನು ಯೋಜಿಸುವಾಗ ಸಂಪೂರ್ಣವಾಗಿ ಡಿಜಿಟಲ್ ಧೋರಣೆಯನ್ನು ಅನುಸರಿಸಲು ನಿರ್ಧರಿಸಿದ್ದೆವು. ಇಂದಿನ ಜಾಗತೀಕರಣದ ವಿಶ್ವದಲ್ಲಿ, ಜಾಗತಿಕ ಕೋರೋನೋತ್ತರ ಜಗತ್ತು ಸಹಜತೆಗೆ ಮರಳಬೇಕಾದರೆ ಇಂತಹ  ಡಿಜಿಟಲ್ ವಿಧಾನ  ಬಹಳ ಅವಶ್ಯಕ. ಎಲ್ಲಕ್ಕಿಂತ ಮುಖ್ಯ ಜನರು ತಾವು ಲಸಿಕಾ ಕಾರ್ಯಕ್ರಮಕ್ಕೆ ಒಳಪಟ್ಟಿರುವುದನ್ನು ಸಾಬೀತು ಮಾಡಲು ಸಮರ್ಥರಿರಬೇಕಾಗುತ್ತದೆ. ಇಂತಹ ಸಾಕ್ಷ್ಯಾಧಾರ ಸುರಕ್ಷಿತವಾಗಿರಬೇಕು, ಭದ್ರವಾಗಿರಬೇಕು ಮತ್ತು ನಂಬಿಕೆಗೆ ಅರ್ಹವಾಗಿರಬೇಕು. ಜನರು ಕೂಡಾ ತಾವು ಯಾವಾಗ, ಎಲ್ಲಿ ಮತ್ತು ಯಾರಿಂದ ಲಸಿಕೆ ಪಡೆದಿದ್ದೇವೆ ಎಂಬ ಬಗ್ಗೆ ದಾಖಲೆ ಇಟ್ಟುಕೊಳ್ಳುವಂತಾಗಬೇಕು. ಲಸಿಕೆಯ ಪ್ರತೀ ಡೋಸ್ ಎಷ್ಟೊಂದು ಅಮೂಲ್ಯ ಎಂಬುದರ ಅರಿವಿನ ಜೊತೆ ಸರಕಾರಗಳು ಪ್ರತೀ ಡೋಸಿನ ಪತ್ತೆಯೊಂದಿಗೆ ಪೋಲಾಗುವ (ವ್ಯರ್ಥವಾಗುವ) ಪ್ರಮಾಣವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ಬಗ್ಗೆಯೂ ಕಳವಳ ಹೊಂದಿದ್ದವು. ಇದೆಲ್ಲವೂ ಆರಂಭದಿಂದ ಕೊನೆಯವರೆಗೆ  ಡಿಜಿಟಲ್ ವಿಧಾನ  ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ.

ಸ್ನೇಹಿತರೇ,

ಭಾರತದ ನಾಗರಿಕತೆಯು ಇಡೀ ವಿಶ್ವವನ್ನು ಕುಟುಂಬ ಎಂದು ಭಾವಿಸುತ್ತದೆಜಾಗತಿಕ ಸಾಂಕ್ರಾಮಿಕವು ತತ್ವಶಾಸ್ತ್ರದ ಮೂಲಭೂತ ಸತ್ಯವನ್ನು ಜನತೆ ಅರಿಯುವಂತೆ ಮಾಡಿತು. ಅದರಿಂದಾಗಿ ನಮ್ಮ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕಾಗಿ ಅಭಿವೃದ್ಧಿ ಪಡಿಸಲಾಗಿರುವ ತಾಂತ್ರಿಕ ವೇದಿಕೆಯನ್ನು -ನಾವು ಕೊವಿನ್ ಎಂದು ಕರೆಯುವ ವೇದಿಕೆಯನ್ನು ಮುಕ್ತ ಮೂಲವಾಗಿ ತಯಾರು ಮಾಡಲಾಯಿತು. ಶೀಘ್ರವೇ ಇದು ಯಾವುದೇ ದೇಶಕ್ಕೆ  ಮತ್ತು ಎಲ್ಲಾ ದೇಶಗಳಿಗೂ ಲಭ್ಯವಾಗುತ್ತದೆ. ಇಂದಿನ ಸಮಾವೇಶ ವೇದಿಕೆಯನ್ನು ನಿಮ್ಮೆಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ. ವೇದಿಕೆಯ ಮೂಲಕ ಭಾರತವು 350 ಮಿಲಿಯನ್ ಡೋಸ್ ಗಳಷ್ಟು ಕೋವಿಡ್ ಲಸಿಕೆಗಳನ್ನು ನೀಡಿದೆ. ಕೆಲವು ದಿನಗಳ  ಹಿಂದೆ ನಾವು ಒಂದು ದಿನದಲ್ಲಿ ಸುಮಾರು 9 ಮಿಲಿಯನ್ ಜನರನ್ನು ಲಸಿಕಾ ಕಾರ್ಯಕ್ರಮಕ್ಕೆ ಒಳಪಡಿಸಿದ್ದೆವು. ಅವರು ಯಾವುದನ್ನೇ ಆದರೂ ಸಾಬೀತು ಮಾಡಲು ದುರ್ಬಲವಾದಂತಹ ಪೇಪರಿನ ತುಂಡನ್ನು ಕೊಂಡೊಯ್ಯಬೇಕಾಗಿಲ್ಲ. ಅದು ಡಿಜಿಟಲ್ ಮಾದರಿಯಲ್ಲಿ ಲಭ್ಯವಾಗುತ್ತದೆ. ಮತ್ತು ಇನ್ನೂ ಮಹತ್ವದ್ದೆಂದರೆ ಎಂದರೆ ಸಾಫ್ಟ್ ವೇರನ್ನು ಯಾವುದೇ ದೇಶ  ಸ್ಥಳೀಯ ಆವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದು. ಇಂದಿನ ಸಮಾವೇಶದಲ್ಲಿ ನೀವು ತಾಂತ್ರಿಕ ವಿವರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಿರಿ. ನೀವು ಆರಂಭಿಸಲು ಉತ್ಸುಕರಾಗಿರುವಿರಿ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಮತ್ತು ನಾನು ನಿಮ್ಮನ್ನು ಇನ್ನಷ್ಟು ಕಾಯುವಂತೆ ಮಾಡಲು ಇಚ್ಛಿಸುವುದಿಲ್ಲ. ಆದುದರಿಂದ ನಾನು ಇಂದು ಬಹಳ ಫಲಪ್ರದ ಚರ್ಚೆ ನಡೆಯಲಿ ಎಂಬ ಆಶಯದೊಂದಿಗೆ ನಿಮಗೆಲ್ಲಾ ಶುಭವನ್ನು ಹಾರೈಸುತ್ತಾ ಮಾತುಗಳನ್ನು ಮುಕ್ತಾಯ ಮಾಡುತ್ತೇನೆ. ’ಒಂದು ಭೂಮಿ, ಒಂದು ಆರೋಗ್ಯಎಂಬ ನಿಲುವಿನ ಮಾರ್ಗದರ್ಶನದಲ್ಲಿ ಮಾನವತೆಯು ಜಾಗತಿಕ ಸಾಂಕ್ರಾಮಿಕವನ್ನು ನಿವಾರಿಸಿಕೊಂಡುಖಚಿತವಾಗಿ ಮುನ್ನಡೆಯಲಿದೆ.

ವಂದನೆಗಳು

ಬಹಳ ಬಹಳ ಧನ್ಯವಾದಗಳು.

***(Release ID: 1733003) Visitor Counter : 244