ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಅನ್ನು ಮಣಿಸಲು ಭಾರತವು ಕೋ-ವಿನ್ ವೇದಿಕೆಯನ್ನು ಡಿಜಿಟಲ್ ಸಾರ್ವಜನಿಕ ಒಳಿತಾಗಿ ಜಗತ್ತಿಗೆ ಒದಗಿಸುತ್ತಿದ್ದು, ಪ್ರಧಾನಮಂತ್ರಿ ಕೋ-ವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು
ಕೋವಿನ್ ವೇದಿಕೆಯನ್ನು ಓಪನ್ ಸೋರ್ಸ್ ಮಾಡಲಾಗಿದೆ, ಇದು ಯಾವುದೇ ಅಥವಾ ಎಲ್ಲ ರಾಷ್ಟ್ರಗಳಿಗೆ ಲಭ್ಯ: ಪ್ರಧಾನಮಂತ್ರಿ
ಸುಮಾರು 200 ದಶಲಕ್ಷ ಬಳಕೆದಾರರೊಂದಿಗೆ 'ಆರೋಗ್ಯ ಸೇತು' ಆಪ್ ಅಭಿವೃದ್ಧಿಪಡಿಸುವವರಿಗೆ ಸಿದ್ಧ ಲಭ್ಯ ಪ್ಯಾಕೇಜ್ ಆಗಿದೆ : ಪ್ರಧಾನಮಂತ್ರಿ
ನೂರು ವರ್ಷದಲ್ಲಿ ಈ ಸಾಂಕ್ರಾಮಿಕಕ್ಕೆ ಸಮನಾದ್ದು ಮತ್ತೊಂದಿಲ್ಲ ಮತ್ತು ಯಾವುದೇ ರಾಷ್ಟ್ರ, ಅದು ಶಕ್ತಿಶಾಲಿಯಾಗಿದ್ದರೂ ಅದು ಪ್ರತ್ಯೇಕವಾಗಿ ಈ ಸವಾಲನ್ನು ಪರಿಹರಿಸಲು ಸಾಧ್ಯವಿಲ್ಲ:ಪ್ರಧಾನಮಂತ್ರಿ
ನಾವೆಲ್ಲರೂ ಒಟ್ಟಾಗಿ ಶ್ರಮಿಸಿ, ಒಟ್ಟಾಗಿ ಮುಂದೆ ಸಾಗಬೇಕು: ಪ್ರಧಾನಮಂತ್ರಿ
ಭಾರತ ಲಸಿಕೆ ಕಾರ್ಯತಂತ್ರ ರೂಪಿಸುವಾಗ ಸಂಪೂರ್ಣ ಡಿಜಿಟಲ್ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ: ಪ್ರಧಾನಮಂತ್ರಿ
ಸುರಕ್ಷಿತ ಮತ್ತು ವಿಶ್ವಾಸಾರ್ಹ ಪುರಾವೆ ಜನರಿಗೆ ಯಾವಾಗ, ಎಲ್ಲಿ ಮತ್ತು ಯಾರಿಂದ ಲಸಿಕೆ ಪಡೆಯಲಾಗಿದೆ ಎಂಬುದನ್ನು ಸಾಬೀತು ಮಾಡಲು ನೆರವಾಗುತ್ತದೆ: ಪ್ರಧಾನಮಂತ್ರಿ
ಡಿಜಿಟಲ್ ದೃಷ್ಟಿಕೋನ ಲಸಿಕೆಯ ಬಳಕೆ ಪತ್ತೆ ಮಾಡಿ, ವ್ಯರ್ಥವಾಗುವುದನ್ನು ತಗ್ಗಿಸುತ್ತದೆ: ಪ್ರಧಾನಮಂತ್ರಿ
'ಒಂದು ಭೂಮಿ, ಒಂದು ಆರೋಗ್ಯ' ಎಂಬ ನಿಲುವಿನಿಂದಾಗಿ ಮಾನವಕುಲ ಖಂಡಿತಾ ಈ ಸಾಂಕ್ರಾಮಿಕದಿಂದ ಹೊರಬರುತ್ತದೆ: ಪ್ರಧಾನಮಂತ್ರಿ
Posted On:
05 JUL 2021 3:18PM by PIB Bengaluru
ಕೋವಿಡ್-19 ನಿಗ್ರಹಕ್ಕಾಗಿ ಭಾರತ ಕೋವಿನ್ ವೇದಿಕೆಯನ್ನು ಡಿಜಿಟಲ್ ಸಾರ್ವಜನಿಕ ಒಳಿತಿಗಾಗಿ ಜಗತ್ತಿಗೆ ನೀಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೋವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.
ಪ್ರಧಾನಮಂತ್ರಿಯವರು ಸಾಂಕ್ರಾಮಿಕದಿಂದ ಎಲ್ಲ ದೇಶಗಳಲ್ಲಿ ಮೃತಪಟ್ಟವರಿಗೂ ಸಂತಾಪ ಸೂಚಿಸುವುದರೊಂದಿಗೆ ಮಾತು ಆರಂಭಿಸಿದರು. ಕಳೆದ ನೂರು ವರ್ಷಗಳಲ್ಲಿ ಈ ಸಾಂಕ್ರಾಮಿಕಕ್ಕೆ ಸಮನಾದ್ದು ಯಾವುದೂ ಇಲ್ಲ ಮತ್ತು ಯಾವುದೇ ರಾಷ್ಟ್ರವು ಎಷ್ಟೇ ಬಲಿಷ್ಠವಾಗಿದ್ದರೂ ಈ ರೀತಿಯ ಸವಾಲನ್ನು ಪ್ರತ್ಯೇಕವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. "ಮಾನವೀಯತೆ ಮತ್ತು ಮಾನವಕುಲಕ್ಕಾಗಿ, ನಾವು ಒಟ್ಟಾಗಿ ಶ್ರಮಿಸಬೇಕು ಮತ್ತು ಒಟ್ಟಾಗಿ ಮುಂದುವರಿಯಬೇಕು ಎಂಬುದು ಕೋವಿಡ್-19 ಸಾಂಕ್ರಾಮಿಕದಿಂದ ಕಲಿಯಬೇಕಾದ ದೊಡ್ಡ ಪಾಠವಾಗಿದೆ. ನಾವು ಪರಸ್ಪರರು ಕಲಿಯಬೇಕು ಮತ್ತು ನಮ್ಮ ಉತ್ತಮ ರೂಢಿಗಳ ಬಗ್ಗೆ ಪರಸ್ಪರ ಮಾರ್ಗದರ್ಶನ ಮಾಡಬೇಕು ”ಎಂದು ಪ್ರಧಾನಮಂತ್ರಿ ಹೇಳಿದರು.
ಜಾಗತಿಕ ಸಮುದಾಯದೊಂದಿಗೆ ಭಾರತದ ಅನುಭವ, ತಜ್ಞತೆ ಮತ್ತು ಸಂಪನ್ಮೂಲವನ್ನು ಹಂಚಿಕೊಳ್ಳುವ ದೇಶದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಜಾಗತಿಕ ರೂಢಿಗಳಿಂದ ಕಲಿಯುವ ಕಾತರವನ್ನೂ ಪ್ರಸ್ತಾಪಿಸಿದರು. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಮಹತ್ವವನ್ನು ಪ್ರತಿಪಾದಿಸಿದ ಶ್ರೀ ಮೋದಿ, ತಂತ್ರಾಂಶವು ಇದರಲ್ಲಿ ಒಂದು ಪ್ರಮುಖವಾಗಿದ್ದು, ಇದರಲ್ಲಿ ಸಂಪನ್ಮೂಲದ ಯಾವುದೇ ಕೊರತೆಯಿಲ್ಲ ಎಂದರು. ಅದಕ್ಕಾಗಿಯೇ ಭಾರತವು ತನ್ನ ಕೋವಿಡ್ ಪತ್ತೆ ಮತ್ತು ಸಂಪರ್ಕಿತರ ಪತ್ತೆ ಆ್ಯಪ್ ತಾಂತ್ರಿಕವಾಗಿ ಕಾರ್ಯಸಾಧ್ಯವಾದ ತಕ್ಷಣ ಅದನ್ನು ಓಪನ್ ಸೋರ್ಸ್ ಮಾಡಿದೆ. ಸುಮಾರು 200 ದಶಲಕ್ಷ ಬಳಕೆದಾರರನ್ನು ಹೊಂದಿರುವ 'ಆರೋಗ್ಯ ಸೇತು' ಆ್ಯಪ್ ಡೆವಲಪರ್ ಗಳಿಗೆ ಸುಲಭವಾಗಿ ಲಭ್ಯವಿರುವ ಪ್ಯಾಕೇಜ್ ಆಗಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಆ್ಯಪ್ ಬಳಕೆಯಲ್ಲಿದ್ದು, , ಅದರ ವೇಗ ನೈಜ ಜಗತ್ತಿನಲ್ಲಿ ಸಾಬೀತಾಗಿದೆ. ಇದನ್ನು ಪರೀಕ್ಷಿಸಲಾಗಿದೆ ಎಂದು ನೀವು ಖಚಿತವಾಗಿ ಹೇಳಬಹುದು ಎಂದು ಪ್ರಧಾನ ಮಂತ್ರಿ ಜಾಗತಿಕ ಪ್ರೇಕ್ಷಕರಿಗೆ ತಿಳಿಸಿದರು.
ಲಸಿಕೆಯ ಪ್ರಾಮುಖ್ಯವನ್ನು ಗಮನದಲ್ಲಿಟ್ಟುಕೊಂಡು, ಭಾರತ ತನ್ನ ಲಸಿಕೆ ತಂತ್ರವನ್ನು ಯೋಜಿಸುವಾಗ ಸಂಪೂರ್ಣವಾಗಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಇದು ಜನರಿಗೆ ತಾವು ಲಸಿಕೆ ಪಡೆದಿರುವುದನ್ನು ಸಾಬೀತು ಪಡಿಸಲು ನೆರವಾಗುತ್ತದೆ, ಸಾಂಕ್ರಾಮಿಕೋತ್ತರ ಜಗತ್ತು ಸಹಜತೆಯತ್ತ ತ್ವರಿತವಾಗಿ ಸಾಗಲು ಸಹಾಯ ಮಾಡುತ್ತದೆ. ಸುರಕ್ಷಿತ, ಸುಭದ್ರ ಮತ್ತು ವಿಶ್ವಾಸಾರ್ಹ ಪುರಾವೆಯು ಜನರು ಯಾವಾಗ, ಎಲ್ಲಿ ಮತ್ತು ಯಾರಿಂದ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಲಸಿಕೆ ಬಳಕೆಯನ್ನು ಪತ್ತೆಹಚ್ಚಲು ಡಿಜಿಟಲ್ ವಿಧಾನವು ಸಹಾಯ ಮಾಡುತ್ತದೆ ಮತ್ತು ವ್ಯರ್ಥವಾಗುವುದನ್ನು ತಗ್ಗಿಸುತ್ತದೆ.
ಇಡೀ ಜಗತ್ತೆ ಒಂದು ಕುಟುಂಬ ಎಂಬ ಭಾರತದ ತತ್ವವನ್ನು ಪರಿಗಣಿಸುವ ನಿಟ್ಟಿನಲ್ಲಿ, ಕೋವಿಡ್ ಲಸಿಕೆ ವೇದಿಕೆ ಕೋವಿನ್ ಅನ್ನು ಒಪನ್ ಸೋರ್ಸ್ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಶೀಘ್ರವೇ ಇದು ಯಾವುದೇ ಅಥವಾ ಎಲ್ಲ ರಾಷ್ಟ್ರಗಳಿಗೂ ಲಭ್ಯವಾಗಲಿದೆ ಎಂದರು.
ಜಾಗತಿಕ ಜನತೆಗೆ ಈ ವೇದಿಕೆಯನ್ನು ಪರಿಚಯಿಸಲು ಇಂದಿನ ಸಮಾವೇಶ ಪ್ರಥಮ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಕೋವಿನ್ ಆಪ್ ಮೂಲಕ ಭಾರತವು ಕೆಲವೇ ದಿನಗಳ ಹಿಂದೆ ಒಂದೇ ದಿನದಲ್ಲಿ 90 ಲಕ್ಷ ಲಸಿಕೆ ಡೋಸ್ ಸೇರಿದಂತೆ 350 ದಶಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ನೀಡಿದೆ ಎಂದರು. ಮಿಗಿಲಾಗಿ, ಲಸಿಕೆ ಹಾಕಿಸಿಕೊಂಡ ಜನರು ಅದನ್ನು ಸಾಬೀತುಪಡಿಸಲು ದುರ್ಬಲವಾದ ಕಾಗದದ ತುಂಡುಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಇದೆಲ್ಲವೂ ಡಿಜಿಟಲ್ ಸ್ವರೂಪದಲ್ಲಿ ಲಭ್ಯವಿದೆ. ಆಸಕ್ತ ರಾಷ್ಟ್ರಗಳ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ತಂತ್ರಾಂಶವನ್ನು ಹೊಂದಿಸಿಕೊಳ್ಳಬಹುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 'ಒಂದು ಭೂಮಿ, ಒಂದು ಆರೋಗ್ಯ' ವಿಧಾನದಿಂದ ಮಾರ್ಗದರ್ಶಿತವಾದ ಮಾನವೀಯತೆಯು ಖಂಡಿತವಾಗಿಯೂ ಈ ಸಾಂಕ್ರಾಮಿಕ ರೋಗವನ್ನು ಮಣಿಸುತ್ತದೆ ಎಂಬ ಭರವಸೆಯೊಂದಿಗೆ ಪ್ರಧಾನಮಂತ್ರಿ ತಮ್ಮ ಮಾತು ಮುಗಿಸಿದರು.
***
(Release ID: 1732844)
Visitor Counter : 348
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam