ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

70 ಲಕ್ಷ ಸಮಾಲೋಚನೆಗಳನ್ನು ಪೂರ್ಣಗೊಳಿಸಿದ ಭಾರತ ಸರ್ಕಾರದ ಉಚಿತ ಟೆಲಿ ಮೆಡಿಸನ್ ‘ಇ-ಸಂಜೀವಿನಿ’ ಸೇವೆ


ಡಿಜಿಟಲ್ ಇಂಡಿಯಾ ಉಪಕ್ರಮಗಳ 6ನೇ ವಾರ್ಷಿಕೋತ್ಸವದ ವೇಳೆ ಇ-ಸಂಜೀವಿನಿ ಅನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಕಳೆದ 30 ದಿನಗಳಲ್ಲಿ ಸುಮಾರು 1.25 ದಶಲಕ್ಷ ರೋಗಿಗಳಿಂದ ರಾಷ್ಟ್ರೀಯ ಟೆಲಿಮೆಡಿಸನ್ ಸೇವೆ ಪ್ರಯೋಜನ: ಕಳೆದ ಎರಡು ವಾರಗಳಲ್ಲಿ ಪ್ರತಿ ದಿನ 50 ಸಾವಿರಕ್ಕೂ ಅಧಿಕ ಸಮಾಲೋಚನೆ

Posted On: 03 JUL 2021 5:58PM by PIB Bengaluru

 ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ ಇ-ಸಂಜೀವಿನಿ 7 ಮಿಲಿಯನ್(70 ಲಕ್ಷ) ಸಮಾಲೋಚನೆಗಳನ್ನು ಪೂರ್ಣಗೊಳಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದೆ. ರೋಗಿಗಳು ಈ ನವೀನ ಡಿಜಿಟಲ್ ವೇದಿಕೆಯ ಮೂಲಕ ಆರೋಗ್ಯ ಸೇವೆಗಳಿಗಾಗಿ ಪ್ರತಿ ದಿನ ವೈದ್ಯರು ಹಾಗೂ ವಿಶೇಷ ಪರಿಣತರನ್ನು ಸಂಪರ್ಕಿಸುತ್ತಿದ್ದಾರೆ. ಮತ್ತೊಂದು ಮಹತ್ವದ ಮೈಲಿಗಲ್ಲಿನಲ್ಲಿ ಈ ವೇದಿಕೆ ಸುಮಾರು 12.5 ಲಕ್ಷ ರೋಗಿಗಳಿಗೆ ಸೇವೆ ನೀಡಿದ್ದು, ಇದು ಕಳೆದ ಮಾರ್ಚ್ ನಲ್ಲಿ ಯೋಜನೆ ಆರಂಭವಾದ ನಂತರ ನೀಡಿರುವ ಅತಿ ಹೆಚ್ಚಿನ ಸಂಖ್ಯೆಯದ್ದಾಗಿದೆ. 

    ಸದ್ಯ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಯಲ್ಲಿದೆ. 

30 ರಾಜ್ಯಗಳಾದ್ಯಂತ ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿರುವ 1900 ಸ್ಥಳಗಳಲ್ಲಿ ಹರಡಿರುವ ಸುಮಾರು 21,000 ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳಲ್ಲಿ ಇ-ಸಂಜೀವಿನಿ ಎಬಿ-ಎಚ್ ಡಬ್ಲ್ಯೂಸಿ ವೈದ್ಯರಿಂದ ವೈದ್ಯರ ಟೆಲಿ ಮೆಡಿಸನ್ ಸೇವೆ ಜಾರಿಯಾಗಿದೆ. ಈ ವೈದ್ಯರಿಂದ ವೈದ್ಯರ ಟೆಲಿ ಮೆಡಿಸನ್ ವೇದಿಕೆ ಸುಮಾರು 32 ಲಕ್ಷ ರೋಗಿಗಳಿಗೆ ಸೇವೆ ಒದಗಿಸಿದೆ. ರಕ್ಷಣಾ ಸಚಿವಾಲಯ ಕೂಡ ಇ-ಸಂಜೀವಿನಿ ಒಪಿಡಿಯಲ್ಲಿ ರಾಷ್ಟ್ರೀಯ ಒಪಿಡಿಯನ್ನು ಆರಂಭಿಸಿದ್ದು, ಅಲ್ಲಿ ಸುಮಾರು 100 ಹಿರಿಯ ವೈದ್ಯರು ಮತ್ತು ತಜ್ಞರು ಸೇವೆ ಒದಗಿಸುತ್ತಿದ್ದು, ಅವರು ಕೂಡ ದೇಶಾದ್ಯಂತ ರೋಗಿಗಳಿಗೆ ನೆರವು ನೀಡುತ್ತಿದ್ದಾರೆ. 

    ಕಳೆದ ವರ್ಷ ಏಪ್ರಿಲ್ ನಲ್ಲಿ ಮೊದಲ ಲಾಕ್ ಡೌನ್ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಾಂಕ್ರಾಮಿಕ ಉಲ್ಬಣಿಸುತ್ತಿರುವುದನ್ನು ಮನಗಂಡು ಇ-ಸಂಜೀವಿನಿ ಒಪಿಡಿ ಸೇವೆಯನ್ನು ಆರಂಭಿಸಿತು. ಇ-ಸಂಜೀವಿನಿ ಒಪಿಡಿ ಸೇವೆ ರೋಗಿಯಿಂದ ವೈದ್ಯರಿಗೆ ಟೆಲಿ ಮೆಡಿಸನ್ ವೇದಿಕೆಯಾಗಿದ್ದು, ಮನೆಗಳಲ್ಲೇ ಇರುವ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. ಇ-ಸಂಜೀವಿನಿ ಒಪಿಡಿ ಅಡಿ 420 ಆನ್ ಲೈನ್ ಒಪಿಡಿಗಳನ್ನು ಆರಂಭಿಸಲಾಗಿದೆ ಮತ್ತು ಇದೇ ವೇದಿಕೆಯಲ್ಲಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಒಪಿಡಿಗಳನ್ನು ಆರಂಭಿಸಲಾಗಿದೆ. ಜೊತೆಗೆ ಬಹುತೇಕ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಒಪಿಡಿಗಳನ್ನು 5 ರಾಜ್ಯಗಳಲ್ಲಿರುವ ಏಮ್ಸ್ ನಂತಹ ಪ್ರತಿಷ್ಠಿತ ಆಸ್ಪತ್ರೆಗಳು(ಹಿಮಾಚಲ ಪ್ರದೇಶ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ) ಲಖನೌದ ಕಿಂಗ್ ಜಾರ್ಜ್ ವಿಶ್ವವಿದ್ಯಾಲಯ ನಿರ್ವಹಿಸುತ್ತಿದೆ. ಕಳೆದ ಎರಡು ವಾರಗಳಲ್ಲಿ ಸುಮಾರು 50,000 ರೋಗಿಗಳು ಇ-ಸಂಜೀವಿನಿ ಸೇವೆಯನ್ನು ಬಳಸಿಕೊಂಡಿದ್ದಾರೆ ಮತ್ತು ಸುಮಾರು 2000 ವೈದ್ಯರು ಪ್ರತಿ ದಿನ ಟೆಲಿ ಮೆಡಿಸನ್ ಸೇವೆ ನೀಡುತ್ತಿದ್ದಾರೆ. 

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅತ್ಯಾಧುನಿಕ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಕಳೆದ ತಿಂಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಿ-ಡಾಕ್ ಜೊತೆ ಮೊಹಾಲಿಯಲ್ಲಿ ದೇಶಾದ್ಯಂತ ಇರುವ 3.75 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ಇ-ಸಂಜೀವಿನಿ ಸೇವೆ ಪಡೆಯುವುದಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಡಿಜಿಟಲ್ ಆರೋಗ್ಯ ವಿಭಾಗದಲ್ಲಿ ಅನುಕೂಲವಾಗಿದೆ. 2021ರ ಜುಲೈ 1 ರಂದು ಪ್ರಧಾನಮಂತ್ರಿ ಅವರು ಡಿಜಿಟಲ್ ಇಂಡಿಯಾ ಉಪಕ್ರಮ 6ನೇ ವಾರ್ಷಿಕೋತ್ಸವದಲ್ಲಿ ಇ-ಸಂಜೀವಿನಿ ಸೇವೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಅಜ್ಜಿಯ ಕಾಯಿಲೆಗೆ ಲಖನೌದ ಕೆಜಿಎಂಸಿ ನಡೆಸುತ್ತಿರುವ ಮಾನಸಿಕ ಆರೋಗ್ಯ ಒಪಿಡಿ ಮತ್ತು ಜಿರಿಯಾಟ್ರಿಕ್ಸ್ ಮೂಲಕ ಇ-ಸಂಜೀವಿನಿಯ ವಿಶೇಷ ಸೇವೆಗಳನ್ನು ಪಡೆದ ಬಿಹಾರದ ಪೂರ್ವ ಚಂಪಾರಣ್ ನ ಫಲಾನುಭವಿಯೊಂದಿಗೆ ಪ್ರಧಾನಮಂತ್ರಿ ವರ್ಚುವಲ್ ಸಂವಾದ ನಡೆಸಿದರು. 

    ಹಲವು ರಾಜ್ಯಗಳ ಜನರು ಅತ್ಯಂತ ಕ್ಷಿಪ್ರವಾಗಿ ಇ-ಸಂಜೀವಿನಿ ಪ್ರಯೋಜನಗಳನ್ನು ಗುರುತಿಸುತ್ತಿದ್ದಾರೆ ಮತ್ತು ಇದರಿಂದಾಗಿ ಆರೋಗ್ಯ ಸೇವೆಗಳನ್ನು ಪಡೆಯುವ ಈ ಡಿಜಿಟಲ್ ಮಾಧ್ಯಮ ಅತ್ಯಂತ ಕ್ಷಿಪ್ರವಾಗಿ ಜನಪ್ರಿಯಗೊಳ್ಳುತ್ತಿರುವ ಪ್ರವೃತ್ತಿ ಕಂಡುಬರುತ್ತಿದೆ. ಇದರಿಂದಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಗಣನೀಯವಾಗಿ ಸುಧಾರಿಸಿದೆ. ಅಲ್ಲದೆ ನಗರ ಪ್ರದೇಶಗಳ ರೋಗಿಗಳಿಗೂ ಈ ಸೇವೆ ಅತ್ಯಂತ ಸುಲಭವಾಗಿದೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಎರಡನೇ ಅಲೆ ವೇಳೆ ಇದು ದೇಶದ ಆರೋಗ್ಯ ವಿತರಣಾ ಸೇವೆಗಳ ಮೇಲಿನ ಹೊರೆಯನ್ನು ಗಣನೀಯವಾಗಿ ತಗ್ಗಿಸಿದೆ. 

    ಅತ್ಯಲ್ಪ ಅವಧಿಯಲ್ಲಿಯೇ ಭಾರತ ಸರ್ಕಾರದ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ ಭಾರತೀಯ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ನೆರವು ನೀಡುವ ಜೊತೆಗೆ ಇದು ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಡಿಜಿಟಲ್ ಅಂತರ ನಿವಾರಣೆಗೆ ಸಹಕಾರಿಯಾಗಿದೆ. ಅಲ್ಲದೆ ಇದು ದ್ವಿತೀಯ ಹಾಗೂ ತೃತೀಯ ಹಂತದ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ವಿಶೇಷ ತಜ್ಞರ ಕೊರತೆಯನ್ನು ನೀಗಿಸುತ್ತಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಭಾಗವಾಗಿ ಇ-ಸಂಜೀವಿನಿ ದೇಶದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. 

10 ಪ್ರಮುಖ ರಾಜ್ಯಗಳು ಇ-ಸಂಜೀವಿನಿ ಸೇವೆ ಪಡೆಯುವಲ್ಲಿ ಮುಂಚೂಣಿಯಲ್ಲಿವೆ. ಅವುಗಳೆಂದರೆ ಆಂಧ್ರಪ್ರದೇಶ(16,32,377), ತಮಿಳುನಾಡು(12,66,667), ಕರ್ನಾಟಕ (12,19,029), ಉತ್ತರ ಪ್ರದೇಶ(10,33,644), ಗುಜರಾತ್(3,03,426), ಮಧ್ಯಪ್ರದೇಶ (2,82,012), ಮಹಾರಾಷ್ಟ್ರ(2,25,138), ಬಿಹಾರ(2,23,197), ಕೇರಳ(1,99,339) ಮತ್ತು ಉತ್ತರಾಖಂಡ(1,66,827).

​​​​​ಇ-ಸಂಜೀವಿನಿ’ ಸೇವೆ ಆಂಡ್ರಾಯ್ಡ್ ಮೂಲಕವೂ ಪಡೆಯಬಹುದಾಗಿದ್ದು, ಅದರ ಲಿಂಕ್  https://esanjeevaniopd.in/

 

*****



(Release ID: 1732570) Visitor Counter : 238