ಪ್ರಧಾನ ಮಂತ್ರಿಯವರ ಕಛೇರಿ

ಟಾಯ್ ಕಥಾನ್-2021 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 24 JUN 2021 1:54PM by PIB Bengaluru

ನಾನು ನಿಮ್ಮ ಮಾತನ್ನು ಕೇಳುವಾಗ ನಿಜವಾಗಿಯೂ ಸಂತೋಷ ಅನುಭವಿಸಿದ್ದೇನೆ. ಮತ್ತು ನನ್ನ ಸಹೋದ್ಯೋಗಿ ಸಚಿವರಾದ ಪೀಯುಷ್ ಜೀ, ಸಂಜಯ್ ಜೀ ಮತ್ತು ಇತರರು ನಮ್ಮೊಂದಿಗೆ ಇದ್ದಾರೆ. ದೇಶಾದ್ಯಂತದಿಂದ ಟಾಯ್ ಕಥಾನ್ ನಲ್ಲಿ ಭಾಗವಹಿಸುತ್ತಿರುವ ಸ್ನೇಹಿತರೇ, ಇತರ ಗಣ್ಯರೇ, ಮತ್ತು ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಜನರೇ..

ನಮ್ಮ ದೇಶದಲ್ಲಿ  : 'साहसे खलु श्री: वसति' ಎಂದು ಹೇಳಲಾಗುತ್ತಿದೆ. ಅಂದರೆ ಧೈರ್ಯವಿದ್ದಲ್ಲಿ ಸಮೃದ್ಧಿ ಇರುತ್ತದೆ ಎಂಬುದಾಗಿ. ಸವಾಲಿನ ಸಮಯದಲ್ಲಿಯೂ ದೇಶದ ಮೊದಲ ಟಾಯ್ ಕಥಾನ್ ಆಯೋಜಿಸಿರುವುದು ಸ್ಪೂರ್ತಿಯನ್ನು ಪುಷ್ಟೀಕರಿಸುತ್ತದೆ. ನೀವೆಲ್ಲರೂ ನಿಮ್ಮ ಬಾಲ್ಯದ ಸ್ನೇಹಿತರಿಂದ  ಹಿಡಿದು ಯುವ ಸ್ನೇಹಿತರವರೆಗೆ, ಶಿಕ್ಷಕರು, ನವೋದ್ಯಮಗಳು ಮತ್ತು ಉದ್ಯಮಿಗಳು ಟಾಯ್ ಕಥಾನ್ ನಲ್ಲಿ ಭಾರೀ ಉತ್ಸಾಹದಿಂದ ಪಾಲ್ಗೊಂಡಿದ್ದೀರಿ. ಇದೇ ಮೊದಲ ಬಾರಿಗೆ ಗ್ರಾಂಡ್ ಫಿನಾಲೆಯಲ್ಲಿ 1500ಕ್ಕೂ ಅಧಿಕ ತಂಡಗಳು ಭಾಗವಹಿಸಿರುವುದು ಇದಕ್ಕೆ ಭವ್ಯ ಭವಿಷ್ಯ ಇರುವುದನ್ನು ಸೂಚಿಸುತ್ತದೆ. ಗೊಂಬೆಗಳು ಮತ್ತು ಆಟಗಳಲ್ಲಿ ಆತ್ಮನಿರ್ಭರ ಭಾರತದ ಆಂದೋಲನವನ್ನು ಅದು ಬಲಪಡಿಸುತ್ತದೆ. ಟಾಯ್ ಕಥಾನ್ ನಲ್ಲಿ ಬಹಳ ಉತ್ತಮ ಚಿಂತನೆಗಳು ಉದ್ಭವಿಸಿವೆ. ನನಗೆ ನನ್ನ ಕೆಲವು ಸ್ನೇಹಿತರ ಜೊತೆ ಸಂವಾದ ನಡೆಸುವ ಅವಕಾಶವೂ ಲಭ್ಯವಾಯಿತು. ನಾನು ಇದಕ್ಕಾಗಿ ನಿಮ್ಮನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಕಳೆದ 5-6 ವರ್ಷಗಳಲ್ಲಿ, ಹ್ಯಾಕಥಾನ್ ಗಳು ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವೇದಿಕೆಗಳಾಗುತ್ತಿವೆ. ಇದರ ಹಿಂದಿನ ಚಿಂತನೆ ದೇಶದ ಸಾಮರ್ಥ್ಯವನ್ನು ವರ್ಗೀಕರಿಸುವುದು. ನಮ್ಮ ಯುವ ಜನತೆಯನ್ನು ನೇರವಾಗಿ ದೇಶದ ಸವಾಲುಗಳು ಮತ್ತು ಪರಿಹಾರಗಳತ್ತ ಸಂಪರ್ಕಿಸುವುದು. ಜೋಡಣೆ ಬಲಿಷ್ಟವಾದಾಗ ನಮ್ಮ ಯುವ ಶಕ್ತಿ ಮುಂಚೂಣಿಗೆ ಬರುತ್ತದೆ ಮತ್ತು ದೇಶ ಕೂಡಾ ಉತ್ತಮ ಪರಿಹಾರಗಳನ್ನು ಪಡೆಯುತ್ತದೆ. ಇದು ದೇಶದ ಮೊದಲ ಟಾಯ್ ಕಥಾನ್ ಉದ್ದೇಶ ಕೂಡಾ. ನಾನು ನೆನಪಿಸಿಕೊಳ್ಳುತ್ತೇನೆ, ನಾನು ಸ್ವಾವಲಂಬನೆಗಾಗಿ ಯುವ ಸಹೋದ್ಯೋಗಿಗಳಿಗೆ ಮನವಿ ಮಾಡಿಕೊಂಡಿದ್ದೆ ಮತ್ತು ಡಿಜಿಟಲ್ ಆಟಗಳು ಹಾಗು ಆಟಿಕೆಗಳ ಕ್ಷೇತ್ರದಲ್ಲಿ ಸ್ಥಳೀಯ ಪರಿಹಾರಗಳ ಅವಶ್ಯಕತೆಯನ್ನು ಪ್ರತಿಪಾದಿಸಿದ್ದೆ. ಇದರ ಧನಾತ್ಮಕ ಪ್ರತಿಕ್ರಿಯೆ ದೇಶದಲ್ಲೀಗ ಕಾಣುತ್ತಿದೆ. ಆಟಿಕೆಗಳ ಬಗ್ಗೆ ಇಂತಹ ಗಂಭೀರ ಚರ್ಚೆ ಯಾಕೆ ಅಗತ್ಯ? ಎಂದು ಕೆಲವು ಜನರಿಗೆ ಅನಿಸಿರಬಹುದು. ವಾಸ್ತವ ಎಂದರೆ ಆಟಿಕೆಗಳು ಮತ್ತು ಆಟಗಳು ನಮ್ಮ ಮಾನಸಿಕ ಶಕ್ತಿ, ರಚನಾತ್ಮಕತೆ ಮತ್ತು ಆರ್ಥಿಕತೆ ಸಹಿತ ಹಲವಾರು ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ವಿಷಯಗಳ ಬಗ್ಗೆ ಮಾತನಾಡುವುದು ಬಹಳ ಮುಖ್ಯ. ನಮಗೆಲ್ಲಾ ಮಗುವಿನ ಮೊದಲ ಶಾಲೆ ಕುಟುಂಬ ಎಂದು ಗೊತ್ತಿದ್ದರೆ, ಆಗ ಆಟಿಕೆಗಳು ಮಗುವಿನ ಪುಸ್ತಕಗಳು. ಮತ್ತು ಮೊದಲ ಸ್ನೇಹಿತರು. ಸಮಾಜದ ಜೊತೆ ಮಗುವಿನ ಮೊದಲ ಸಂವಹನ ಗೊಂಬೆಗಳ, ಆಟಿಕೆಗಳ ಮೂಲಕ ಆಗುತ್ತದೆ. ನೀವು ಗಮನಿಸಿರಬಹುದು, ಮಕ್ಕಳು ಆಟಿಕೆಗಳ ಜೊತೆ ಮಾತನಾಡುತ್ತಿರುತ್ತಾರೆ. ಅವುಗಳಿಗೆ ಸೂಚನೆ ಕೊಡುತ್ತಾರೆ, ಕೆಲವು ಕೆಲಸಗಳನ್ನು ಮಾಡುವಂತೆ ಹೇಳುತ್ತಾರೆ, ಯಾಕೆಂದರೆ ಅದು ಒಂದು ರೀತಿಯಲ್ಲಿ ಅವರ ಸಾಮಾಜಿಕ ಬದುಕಿನ ಆರಂಭ. ಅದೇ ರೀತಿ ಆಟಿಕೆಗಳು ಮತ್ತು ಬೋರ್ಡ್ ಆಟಗಳು ನಿಧಾನವಾಗಿ ಅವರ ಶಾಲೆಯ ಜೀವನದ ಪ್ರಮುಖ ಭಾಗವಾಗುತ್ತವೆ. ಮತ್ತು ಕಲಿಕೆ ಹಾಗು ಬೋಧನೆಯ ಭಾಗವೂ ಆಗುತ್ತವೆಇದರ ಜೊತೆಗೆ ಆಟಿಕೆಗಳಿಗೆ ಸಂಬಂಧಿಸಿದ ಬಹಳ ದೊಡ್ಡ ಇನ್ನೊಂದು ಸಂಗತಿ ಇದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ. ಇದು ಆಟಿಕೆಗಳ ಮತ್ತು ಆಟಗಳ ಜಗತ್ತಿನ ಆರ್ಥಿಕತೆ-ಟಾಯ್ ಕಾನಮಿ. ಜಾಗತಿಕ ಆಟಿಕೆ ಮಾರುಕಟ್ಟೆ ಸುಮಾರು ಡಾಲರ್ 100 ಬಿಲಿಯನ್ ಮತ್ತು ಭಾರತದ ಪಾಲು ಸುಮಾರು ಡಾಲರ್ 1.5 ಬಿಲಿಯನ್ . ಇಂದು ನಾವು ನಮ್ಮ ಆಟಿಕೆಗಳ 80 ಪ್ರತಿಶತ ಆಟಿಕೆಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಅಂದರೆ ಆಟಿಕೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳು ದೇಶದಿಂದ ಹೊರಗೆ ಹೋಗುತ್ತಿವೆ. ಪರಿಸ್ಥಿತಿಯನ್ನು ಬದಲಾಯಿಸುವುದು ಅತೀ ಅವಶ್ಯ. ಮತ್ತು ಇದು ಬರೇ ಅಂಕಿ ಅಂಶಗಳ ಸಂಗತಿ ಅಲ್ಲ. ವಲಯವು ದೇಶದ ಅಭಿವೃದ್ಧಿಗೆ ಕಾರಣೀಭೂತವಾದ ಸಾಮರ್ಥ್ಯವನ್ನು ಹೊಂದಿದೆ. ಕಾರಣಕ್ಕಾಗಿ ಇದು ಈಗ ಬಹಳ ಮಹತ್ವದ್ದಾಗಿದೆ. ಕ್ರೀಡೆಗೆ ಸಂಬಂಧಿಸಿದ ನಮ್ಮ ಗುಡಿ ಕೈಗಾರಿಕೆಗಳು ನಮ್ಮ ಕಲೆಯಾಗಿವೆ, ಬಡವರು, ದಲಿತರು, ಮತ್ತು ಬುಡಕಟ್ಟು ಕರಕುಶಲಕರ್ಮಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಗ್ರಾಮಗಳಲಿ ವಾಸಿಸುತ್ತಾರೆ. ಬಹಳ ಸೀಮಿತ ಸಂಪನ್ಮೂಲಗಳಲ್ಲಿ, ಸಹೋದ್ಯೋಗಿಗಳು ನಮ್ಮ ಸಂಪ್ರದಾಯಗಳನ್ನು ಮತ್ತು ಸಂಸ್ಕೃತಿಯನ್ನು ತಮ್ಮ ಆಟಿಕೆಗಳಲ್ಲಿ ಸಮ್ಮಿಳಿತಗೊಳಿಸಿ ಅತ್ಯುತ್ತಮ ಕಲೆಯಾಗಿ ಸಾದರಪಡಿಸುತ್ತಾರೆ. ನಿಟ್ಟಿನಲ್ಲಿ ನಮ್ಮ ಸಹೋದರಿಯರು ಮತ್ತು ಪುತ್ರಿಯರು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಆಟಿಕೆಗಳ ಕ್ಷೇತ್ರ ಅಭಿವೃದ್ಧಿ ಹೊಂದಿದರೆ ಅದರಿಂದ ಇಂತಹ ಮಹಿಳೆಯರಿಗೆ, ನಮ್ಮ ಬುಡಕಟ್ಟು ಜನರಿಗೆ ಮತ್ತು ದೇಶದ ದೂರಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಸ್ನೇಹಿತರಿಗೆ ಬಹಳ ಪ್ರಯೋಜನವಾಗಲಿದೆ. ಇದು ನಾವು ನಮ್ಮ ಸ್ಥಳೀಯ ಆಟಿಕೆಗಳಿಗೆ ಸಂಬಂಧಿಸಿ ವೋಕಲ್ ಫಾರ್ ಲೋಕಲ್ ಆದಾಗ ಮಾತ್ರ ಸಾಧ್ಯವಾಗುತ್ತದೆ. ನಾವು ಸ್ಥಳೀಯರ ಪರ ಧ್ವನಿಯಾಗಬೇಕು. ಮತ್ತು ನಾವು ಅವರನ್ನು ಸುಧಾರಿಸಲು ಪ್ರತೀ ಹಂತದಲ್ಲಿಯೂ ಅವರಿಗೆ ಪ್ರೋತ್ಸಾಹವನ್ನು ಒದಗಿಸಬೇಕು. ಮತ್ತು ಮೂಲಕ ಅವರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕಗೊಳಿಸಬೇಕು. ಆದುದರಿಂದ ಅನ್ವೇಷಣೆಯಿಂದ ಹಿಡಿದು ಹಣಕಾಸಿನವರೆಗೆ  ಹೊಸ ಮಾದರಿಗಳನ್ನು  ಅಭಿವೃದ್ಧಿಗೊಳಿಸುವುದು ಬಹಳ ಮುಖ್ಯ. ಪ್ರತೀ ಹೊಸ ಚಿಂತನೆಯನ್ನು ಮೂಡಿಸುವುದೂ ಅಷ್ಟೇ ಅವಶ್ಯ. ಹೊಸ ನವೋದ್ಯಮಗಳನ್ನು ಉತ್ತೇಜಿಸುವುದು ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಗಳಲ್ಲಿ ತೊಡಗಿಸಿಕೊಂಡಿರುವ  ನಮ್ಮ ಕಲಾವಿದರನ್ನು ಹೊಸ ತಂತ್ರಜ್ಞಾನಕ್ಕೆ ಮತ್ತು ಹೊಸ ಮಾರುಕಟ್ಟೆ ಆವಶ್ಯಕತೆಗಳಿಗೆ ಅನುಗುಣವಾಗಿ ತಯಾರು ಮಾಡುವುದು ಬಹಳ ಅಗತ್ಯ. ಇದು ಟಾಯ್ ಕಥಾನ್ ಹಿಂದಿರುವ ಚಿಂತನೆ.

ಸ್ನೇಹಿತರೇ,

ಕಡಿಮೆ ವೆಚ್ಚದ ದತ್ತಾಂಶಗಳು ಮತ್ತು ಅಂತರ್ಜಾಲಗಳು ಈಗ ನಮ್ಮ ಗ್ರಾಮಗಳನ್ನು ಜೋಡಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ದೈಹಿಕ ಆಟಗಳ ಜೊತೆಗೆ ಆಟಿಕೆಗಳೊಂದಿಗೆ  ವರ್ಚುವಲ್, ಡಿಜಿಟಲ್, ಮತ್ತು ಆನ್ ಲೈನ್ ಗೇಮಿಂಗ್ ನಲ್ಲಿ ಭಾರತದ ಸಾಮರ್ಥ್ಯ ಮತ್ತು ಅವಕಾಶಗಳು ತ್ವರಿತವಾಗಿ ಹೆಚ್ಚುತ್ತಿವೆ. ಆದರೆ ಇಂದು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಬಹುತೇಕ ಆನ್ ಲೈನ್ ಅಥವಾ ಡಿಜಿಟಲ್ ಆಟಗಳ ಚಿಂತನೆ ಅಥವಾ ತತ್ವಜ್ಞಾನ ಭಾರತದ್ದಲ್ಲ. ಅದು ನಮ್ಮ ಧೋರಣೆಗಳಿಗೆ ಸರಿ ಹೊಂದುವುದಿಲ್ಲ. ನಿಮಗೆಲ್ಲ ಗೊತ್ತಿರಬಹುದು ಇಂತಹ ಬಹುತೇಕ ಆಟಗಳ ತಾತ್ವಿಕತೆ ಒಂದೋ ಹಿಂಸೆಯನ್ನು ಉತ್ತೇಜಿಸುವಂತಹದಾಗಿರುತ್ತದೆ ಇಲ್ಲವೇ ಮಾನಸಿಕ ಒತ್ತಡವನ್ನು ಉಂಟು ಮಾಡುವಂತಹದಾಗಿರುತ್ತದೆ. ಆದುದರಿಂದ ಒಟ್ಟು ಮಾನವ ಕಲ್ಯಾಣಕ್ಕೆ ಸಂಬಂಧಿಸಿದ ಭಾರತದ ತಾತ್ವಿಕತೆಯನ್ನು ಪ್ರತಿಬಿಂಬಿಸುವಂತಹ  ಪರ್ಯಾಯ ತಾತ್ವಿಕತೆಯನ್ನು ವಿನ್ಯಾಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದು ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿರಬೇಕು ಮತ್ತು ಮೋಜಿನ ಸಂಗತಿಗಳನ್ನು ಒಳಗೊಂಡಿರಬೇಕು ಹಾಗು ದೈಹಿಕ ಕ್ಷಮತೆಯನ್ನು ಉತ್ತೇಜಿಸುವಂತಿರಬೇಕು. ಹೊತ್ತಿನಲ್ಲಿ ಬಹಳಷ್ಟು ಸಾಮಗ್ರಿಗಳು ನಮ್ಮಲ್ಲಿರುವುದನ್ನು ಹಾಗು ಡಿಜಿಟಲ್ ಗೇಮಿಂಗ್ ಗೆ ಅವಶ್ಯವಾದ ಸ್ಪರ್ಧಾಸಾಮರ್ಥ್ಯವನ್ನು  ನಾನು ಸ್ಪಷ್ಟವಾಗಿ ಕಾಣುತ್ತಿದ್ದೇನೆ. ನಾವು ಭಾರತದ ಶಕ್ತಿಯನ್ನು ಟಾಯ್ ಕಥಾನ್ ನಲ್ಲಿಯೂ ಸ್ಪಷ್ಟವಾಗಿ ಕಾಣಬಹುದು. ಟಾಯ್ ಕಥಾನ್ ಗೆ ಆಯ್ಕೆಯಾದ ಚಿಂತನೆಗಳು ಗಣಿತ ಮತ್ತು ರಾಸಾಯನಿಕ ಶಾಸ್ತ್ರವನ್ನು ಸುಲಭ ಮಾಡುವಂತಹ ಚಿಂತನೆಗಳನ್ನು ಒಳಗೊಂಡಿವೆ. ಹಾಗು ಮೌಲ್ಯ ಆಧಾರಿತ ಸಮಾಜವನ್ನು ಬಲಪಡಿಸುವಂತಹ ಚಿಂತನೆಗಳನ್ನೂ ಅಡಕಗೊಳಿಸಿವೆ. ನಿಮ್ಮ ಕಲ್ಪನೆಯಾದ ಕಾಗ್ನಿಟೋ ಗೇಮಿಂಗ್ ಭಾರತದ ಅದೇ ಶಕ್ತಿಯನ್ನು ದರ್ಶಿಸುತ್ತದೆ. ವಿ.ಆರ್. ಮತ್ತು .. ತಂತ್ರಜ್ಞಾನವನ್ನು ಯೋಗದೊಂದಿಗೆ ಸಮ್ಮಿಳಿತಗೊಳಿಸಿಕೊಂಡು ಹೊಸ ಗೇಮಿಂಗ್ ಪರಿಹಾರವನ್ನು ಜಗತ್ತಿಗೆ ಒದಗಿಸುವುದು ಬಹಳ ದೊಡ್ಡ ಸಾಹಸ. ಅದೇ ರೀತಿ ಆಯುರ್ವೇದಕ್ಕೆ ಸಬಂಧಿಸಿದ ಬೋರ್ಡ್ ಆಟಗಳು ಹಳೆಯದು ಮತ್ತು ಹೊಸತರ ಅದ್ಭುತ ಸಮಾಗಮ. ಈಗಷ್ಟೇ ನಮ್ಮ ಸಂವಾದದಲ್ಲಿ ಯುವಕರೊಬ್ಬರು ಗಮನ ಸೆಳೆದಂತೆ ಸ್ಪರ್ಧಾತ್ಮಕ ಆಟವು ಯೋಗವನ್ನು ಜಗತ್ತಿನ ಮೂಲೆ ಮೂಲೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ನಮ್ಮನ್ನು ಬಹಳ ದೂರ ಕೊಂಡೊಯ್ಯಲಿದೆ.

ಸ್ನೇಹಿತರೇ,

ಭಾರತದ ಈಗಿನ ಸಾಮರ್ಥ್ಯ, ಕಲೆ,ಮತ್ತು ಸಮಾಜವನ್ನು ತಿಳಿದುಕೊಳ್ಳಲು ಜಗತ್ತು ಇಂದು ಬಹಳ ಕುತೂಹಲ ತಾಳಿದೆ. ನಿಟ್ಟಿನಲ್ಲಿ ನಮ್ಮ ಆಟಿಕೆಗಳು ಮತ್ತು ಗೇಮಿಂಗ್ ಉದ್ಯಮ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಬಲ್ಲದು. ಪ್ರತಿಯೊಂದು ನವೋದ್ಯಮಕ್ಕೆ ಮತ್ತು ಪ್ರತಿಯೊಬ್ಬ ಯುವಜನತೆಗೆ ನನ್ನ  ಕಳಕಳಿಯ ಮನವಿ ಏನೆಂದರೆಅವರು ಒಂದು ಸಂಗತಿಯನ್ನು ಸದಾ ನೆನಪಿನಲ್ಲಿಡಬೇಕು. ನೀವು ಜಗತ್ತಿನೆದುರು ಭಾರತದ ಚಿಂತನೆ ಮತ್ತು ಸಾಮರ್ಥ್ಯ ಕುರಿತ ನೈಜ ಚಿತ್ರವನ್ನು ಇಡುವ ಜವಾಬ್ದಾರಿಯನ್ನು ಹೊಂದಿದ್ದೀರಿ. ನಮ್ಮ ಏಕ ಭಾರತ್, ಶ್ರೇಷ್ಟ ಭಾರತ್ (ಏಕ ಭಾರತ, ಸರ್ವೋಚ್ಛ ಭಾರತ) ದಿಂದ ವಸುದೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ)ದವರೆಗೆ ಚಿರಂತನವಾದ ಸ್ಪೂರ್ತಿಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ. ಇಂದು ದೇಶವು ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆಯನ್ನು ಮಾಡುತ್ತಿರುವಾಗ ಎಲ್ಲಾ ಆಟಿಕೆಗಳು ಮತ್ತು ಗೇಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಅನ್ವೇಷಕರಿಗೆ ಮತ್ತು ರೂಪಕರಿಗೆ ಇದೊಂದು ಬೃಹತ್ ಅವಕಾಶ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಹಲವು ಕಥೆಗಳು ಅಲ್ಲಿವೆ. ಅವುಗಳನ್ನೀಗ ಮುನ್ನೆಲೆಗೆ ತರಬೇಕಾಗಿದೆ.ನಮ್ಮ ಕ್ರಾಂತಿಕಾರಿಗಳ ಮತ್ತು ಹೋರಾಟಗಾರರ  ಶೌರ್ಯ, ಮತ್ತು ನಾಯಕತ್ವಕ್ಕೆ ಸಂಬಂಧಿಸಿದ ಹಲವು ಘಟನೆಗಳನ್ನು ಆಟಿಕೆಗಳ ಮತ್ತು ಗೇಮ್ ಗಳಲ್ಲಿ ಪರಿಕಲ್ಪನೆಯಾಗಿ  ಅಳವಡಿಸಬಹುದು. ನೀವು ಭಾರತದ ಜಾನಪದವನ್ನು ಭವಿಷ್ಯದ ಜೊತೆ ಜೋಡಿಸುವ ಬಲಿಷ್ಟವಾದ ಕೊಂಡಿಯನ್ನು ಹೊಂದಿದ್ದೀರಿ. ಆದುದರಿಂದ ನಮ್ಮ ಆದ್ಯ ಗಮನ ಅಂತಹ ಆಟಿಕೆಗಳನ್ನು ಮತ್ತು ಆಟಗಳನ್ನು ಅಭಿವೃದ್ಧಿ ಮಾಡುವುದರತ್ತ ಇರುವುದು ಬಹಳ ಮುಖ್ಯ, ಯಾಕೆಂದರೆ ಅವು ನಮ್ಮ ಕಿರಿಯ ತಲೆಮಾರಿಗೆ ಭಾರತೀಯತೆಯ ಪ್ರತಿಯೊಂದು ಅಂಶವನ್ನೂ ಆಸಕ್ತಿದಾಯಕವಾಗಿ ಮತ್ತು ಸಂವಾದ ಮಾದರಿಯಲ್ಲಿ ತಿಳಿಸುತ್ತವೆ. ನಾವು ನಮ್ಮ ಆಟಿಕೆಗಳು ಮತ್ತು ಆಟಗಳು ಜನರನ್ನು ಒಳಗೊಳಿಸಿಕೊಂಡು, ಮನೋರಂಜನೆ ನೀಡುತ್ತ ಅವರನ್ನು ಶಿಕ್ಷಿತರನ್ನಾಗಿಸುವಂತಿರಬೇಕು. ದೇಶವು ನಿಮ್ಮಂತಹ ಯುವ ಅನ್ವೇಷಕರ ಮತ್ತು ರೂಪಕರ ಬಗ್ಗೆ ಬಹಳ ಭರವಸೆಯನ್ನು ಹೊಂದಿದೆ. ನೀವು ನಿಮ್ಮ ಗುರಿ ಸಾಧನೆಯಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮ ಕನಸುಗಳನ್ನು ಸಾಕಾರಗೊಳಿಸುತ್ತೀರಿ ಎಂಬ ಬಗ್ಗೆ ನನಗೆ ಖಚಿತ ಭರವಸೆ ಇದೆ. ಮತ್ತೊಮ್ಮೆ ನಾನು ಟಾಯ್ ಕಥಾನ್ ನ್ನು ಯಶಸ್ವಿಯಾಗಿ ಸಂಘಟಿಸಿದುದಕ್ಕಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ಎಲ್ಲರಿಗೂ ಶುಭ ಹಾರೈಸುತ್ತೇನೆ.

ಧನ್ಯವಾದಗಳು

ಘೋಷಣೆ: ಇದು ಪ್ರಧಾನ  ಮಂತ್ರಿಯವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1730295) Visitor Counter : 263