ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಸಾಂಕ್ರಾಮಿಕದ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ಮುಂದುವರಿಕೆ ಬದ್ಧತೆಯನ್ನು ಪುನರುಚ್ಚರಿಸಿದ ಜಿ20 ರಾಷ್ಟ್ರಗಳ ಶಿಕ್ಷಣ ಸಚಿವರು


ಶೈಕ್ಷಣಿಕ ತಾರತಮ್ಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆ ಪುನರುಚ್ಚರಿಸಿದ ಶ್ರೀ ಸಂಜಯ್ ಧೋತ್ರೆ

ಜಿ20 ರಾಷ್ಟ್ರಗಳ ಶಿಕ್ಷಣ ಸಚಿವರ ಸಭೆ ಮತ್ತು ಶಿಕ್ಷಣ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಸಂಜಯ್ ಧೋತ್ರೆ

Posted On: 23 JUN 2021 4:49PM by PIB Bengaluru

ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಅವರು, 2021 ಜೂನ್ 22ರಂದು ಜಿ20 ರಾಷ್ಟ್ರಗಳ ಶಿಕ್ಷಣ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯನ್ನು ಮಿಶ್ರ ಮಾದರಿ (ಬ್ಲಂಡೆಡ್ ಮೋಡ್) ಯಲ್ಲಿ ಇಟಲಿ ಆಯೋಜಿಸಿತ್ತು. ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಸನ್ನಿವೇಶದಲ್ಲಿ ಶೈಕ್ಷಣಿಕ ಬಡತನ ಮತ್ತು ಅಸಮಾನತೆಗಳ ವಿರುದ್ಧದ ಹೋರಾಟದಲ್ಲಿ ಹೇಗೆ ಪ್ರಗತಿ ಸಾಧಿಸಬೇಕು ಎಂಬ ಕುರಿತು ಜಿ20 ರಾಷ್ಟ್ರಗಳ ಶಿಕ್ಷಣ ಸಚಿವರು ವಿಚಾರ ವಿನಿಮಯ ನಡೆಸಿದರು. ಅಲ್ಲದೆ ಸಚಿವರು ಸಾಂಕ್ರಾಮಿಕದ ಸಮಯದಲ್ಲಿ ಮಿಶ್ರ ಶೈಕ್ಷಣಿಕ ಮಾಧ್ಯಮಗಳ ಮೂಲಕ ಗುಣಮಟ್ಟದ ಕಲಿಕೆ ಮುಂದುವರಿಕೆ ಖಾತ್ರಿಪಡಿಸುವಾಗ ಜಾರಿಗೊಳಿಸಿರುವ ನವೀನ ಅನುಭವಗಳ ಕುರಿತು ಮಾಹಿತಿ ಹಂಚಿಕೊಂಡರು

ಭಾರತವನ್ನು ಪ್ರತಿನಿಧಿಸಿದ ಶ್ರೀ ಸಂಜಯ್ ಧೋತ್ರೆ, ಶೈಕ್ಷಣಿಕ, ಬಡತನ, ಅಸಮಾನತೆ ಮತ್ತು ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ದೇಶದ ಬದ್ಧತೆಯನ್ನು ಪುನರುಚ್ಚರಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ಮಾತನಾಡಿದ ಸಚಿವರು, ಅದರಡಿ ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ಒತ್ತು ನೀಡಿ, ವಿಶೇಷವಾಗಿ ಬಾಲಕಿಯರಿಗೆ ಸಮಾನ ಮತ್ತು ಸಮಗ್ರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದು ಅಪಾಯಕ್ಕೆ ಸಿಲುಕಿರುವ ಗುಂಪುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು

ಹಲವು ಮಧ್ಯೆಪ್ರವೇಶಗಳ ಮೂಲಕ ಎಲ್ಲ ಹಂತದಲ್ಲಿ ಲಿಂಗ ಮತ್ತು ಸಾಮಾಜಿಕ ವರ್ಗ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆ ಸ್ಥಿರವಾದ ಪ್ರಗತಿ ಸಾಧಿಸುತ್ತಿದೆ ಎಂದು ಶ್ರೀ ಸಂಜಯ್ ಧೋತ್ರೆ ಹೇಳಿದರು. ಅವುಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಸಂಖ್ಯೆ ಹೆಚ್ಚಳ; ಶಾಲೆಯಿಂದ ಹೊರಗುಳಿದ ಮಕ್ಕಳ ಮೇಲೆ ನಿಗಾವಹಿಸುವುದು; ಸೂಕ್ಷ್ಮ ವರ್ಗದ ವಿದ್ಯಾರ್ಥಿಗಳ ಕಲಿಕಾ ಫಲಿತಾಂಶದ ಮೇಲೆ ನಿಗಾ ಇಡುವುದು. ಮಕ್ಕಳ ಹಕ್ಕುಗಳ ಉಲ್ಲಂಘನೆ ವಿರುದ್ಧ ಶೂನ್ಯ ಸಂಯಮ ಮತ್ತು ದೈಹಿಕ ಸುರಕ್ಷತೆ ಖಾತ್ರಿಪಡಿಸುವುದು, ಮಕ್ಕಳ ಆರೋಗ್ಯ ಖಾತ್ರಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ; ವಿಶೇಷ ಮಕ್ಕಳ ಆರೈಕೆಗೆ ಕಾರ್ಯತಂತ್ರಗಳನ್ನು ರೂಪಿಸುವುದು; ಮುಕ್ತ ಹಾಗೂ ದೂರಶಿಕ್ಷಣ ಕಲಿಕಾ ಕಾರ್ಯಕ್ರಮಗಳ ಬಲವರ್ಧನೆಗೆ ಬಹು ವಿಧದ ಕಾರ್ಯತಂತ್ರಗಳನ್ನು ಉತ್ತೇಜಿಸುವುದು ಸೇರಿದೆ

ಸಾಂಕ್ರಾಮಿಕದ ಸಮಯದಲ್ಲಿ ಶೈಕ್ಷಣಿಕ ಮುಂದುವರಿಕೆ ಖಾತ್ರಿಪಡಿಸಲು ಭಾರತ ಮಿಶ್ರ ಕಲಿಕಾ ವಿಧಾನಗಳನ್ನು ವ್ಯಾಪಕವಾಗಿ ಉತ್ತೇಜಿಸಿದೆ ಎಂದು ಸಚಿವರು ಮಾಹಿತಿಯನ್ನು ಹಂಚಿಕೊಂಡರು. ಡಿಜಿಟಲ್ ಶೈಕ್ಷಣಿಕ ಪಠ್ಯ, ನಾನಾ -ಕಲಿಕಾ ವೇದಿಕೆಗಳಾದ ದೀಕ್ಷಾ, ಸ್ವಯಂ ಮತ್ತು ಇತರ ವೇದಿಕೆಗಳಲ್ಲಿ ಲಭ್ಯವಿದ್ದು, ಅವುಗಳನ್ನು ಯಾರು ಬೇಕಾದರೂ, ಯಾವಾಗ ಬೇಕಾದರು ಮತ್ತು ಎಲ್ಲಿ ಬೇಕಾದರೂ ಉಚಿತವಾಗಿ ಪಡೆಯಬಹುದಾಗಿದೆ. ಸಾಂಪ್ರದಾಯಿಕ ಶಿಕ್ಷಣದ ಅನುಮತಿಸುವ ಆನ್ ಲೈನ್ ಕಾಂಪೋನೆಂಟ್ ಮಿತಿಯನ್ನುಶೇ.20 ರಿಂದ ಶೇ.40ಕ್ಕೆ ಹೆಚ್ಚಿಸಲಾಗಿದೆ. ಸುಮಾರು 100 ಅಗ್ರ ಶ್ರೇಯಾಂಕದ ವಿಶ್ವವಿದ್ಯಾಲಯಗಳಿಗೆ ಪೂರ್ಣ ಪ್ರಮಾಣದ ಆನ್ ಲೈನ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಡಿಜಿಟಲ್ ಅಂತರವನ್ನು ನಿವಾರಿಸುವ ಉದ್ದೇಶದಿಂದ ಭಾರತ ಸ್ವಯಂಪ್ರಭ ಟಿವಿ ಚಾನಲ್ ಮತ್ತು ಸಮುದಾಯ ರೇಡಿಯೋಗಳನ್ನು ವ್ಯಾಪಕ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ಡಿಜಿಟಲ್ ಮೂಲಸೌಕರ್ಯವನ್ನು ಕ್ಷಿಪ್ರವಾಗಿ ವಿಸ್ತರಿಸಲಾಗುತ್ತಿದೆ. ಎನ್ಇಪಿ 2020ಅಡಿ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು ಸ್ಥಾಪಿಸಲಾಗಿದೆ.

ಅಲ್ಲದೆ ಸರ್ಕಾರ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಲು ಆಪ್ತ ಸಮಾಲೋಚನಾ ಕಾರ್ಯಕ್ರಮಗಳಾದ ಮನೋದರ್ಪಣ ಮತ್ತಿತರವುಗಳ ಮೂಲಕ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಶೈಕ್ಷಣಿಕ ಬಡತನ, ಅಸಮಾನತೆ ತಗ್ಗಿಸುವುದು ಮತ್ತು ಮುಂಚಿತವಾಗಿಯೇ ಶಾಲೆ ತೊರೆಯುವ ಮಕ್ಕಳ ಸಮಸ್ಯೆ ನಿವಾರಣೆಗೆ ಜಿ-20 ರಾಷ್ಟ್ರಗಳು ಕೈಗೊಳ್ಳಲಿರುವ ಸಾಮೂಹಿಕ ಪ್ರಯತ್ನಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶ್ರೀ ಸಂಜಯ್ ಧೋತ್ರೆ ಪುನರುಚ್ಚರಿಸಿದರು. ಶೈಕ್ಷಣಿಕ ಮುಂದುವರಿಕೆ ಖಾತ್ರಿಪಡಿಸಲು ಸಾಂಕ್ರಾಮಿಕದ ಸಮಯದಲ್ಲಿ ಕಲಿತ ಪಾಠಗಳನ್ನು ಆಧರಿಸಿ ಮಿಶ್ರ ಕಲಿಕಾ ಮಾಧ್ಯಮ ಉಪಕ್ರಮಗಳ ಬಲವರ್ಧನೆ ಮತ್ತು ಮತ್ತಷ್ಟು ಸುಧಾರಣೆಗೆ ಜಿ20 ರಾಷ್ಟ್ರಗಳ ಸಾಮೂಹಿಕ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡಲಿದೆ.

ಸಭೆಯ ಕೊನೆಯಲ್ಲಿ ಶಿಕ್ಷಣ ಸಚಿವರು ಘೋಷಣೆಯನ್ನು ಅಂಗೀಕರಿಸಿದರು.

ಅನಂತರ ಶಿಕ್ಷಣ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಸಚಿವರುಗಳ ಜಂಟಿ ಸಭೆ ವರ್ಚುವಲ್ ರೂಪದಲ್ಲಿ ನಡೆಯಿತು. ಜಿ20 ರಾಷ್ಟ್ರಗಳ ಸಚಿವರುಗಳು ಶಾಲೆಯಿಂದ ಕೆಲಸದ ಸ್ಥಳಕ್ಕೆ  ಆಗುತ್ತಿರುವ ಪರಿವರ್ತನೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀ ಸಂಜಯ್ ಧೋತ್ರೆ ಅವರು ಸಭೆಯಲ್ಲಿ ಶಿಕ್ಷಣ ಸಚಿವಾಲಯವನ್ನು ಪ್ರತಿನಿಧಿಸಿದರು. ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಸಂತೋಷ್ ಗಂಗ್ವಾರ್ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವನ್ನು ಪ್ರತಿನಿಧಿಸಿದರು.

ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಂಜಯ್ ಧೋತ್ರೆ, ಜಿ20 ರಾಷ್ಟ್ರಗಳ ಸದಸ್ಯರಾಗಿ ನಮ್ಮ ಯುವ ಜನಾಂಗ ತಮ್ಮ ಶಾಲಾ ಶಿಕ್ಷಣ ಪೂರೈಸಿದ ಬಳಿಕ ಸುಗಮವಾಗಿ ದುಡಿಯುವ ಸ್ಥಳಗಳಿಗೆ ವರ್ಗಾವಣೆಗೊಳ್ಳುವುದಕ್ಕೆ ನಾವು ಅವರನ್ನು ಸಜ್ಜುಗೊಳಿಸುವ ಅಗತ್ಯವಿದೆ ಎಂದರು. ವಿಶೇಷವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಜನಸಂಖ್ಯೆಗೆ ಸೇರಿರುವವರು ತೀರಾ ಹಿಂದುಳಿದಿದ್ದು, ಅವರಿಗೆ ಅಪಾಯದ ತೀವ್ರತೆ ಹೆಚ್ಚಿದೆ, ಹಾಗಾಗಿ ಇದು ಅತಿ ಮುಖ್ಯವಾಗಿದೆ ಎಂದರು.

ಭಾರತ ತನ್ನ ಯುವ ಜನಾಂಗ 21ನೇ ಶತಮಾನದ ಜಾಗತಿಕ ದುಡಿಯುವ ಸ್ಥಳಕ್ಕೆ ಅಗತ್ಯ ಜ್ಞಾನ, ಕೌಶಲ್ಯ ಮತ್ತು ನಡವಳಿಕೆಗಳನ್ನು ಹೊಂದುವಂತೆ ಭಾರತವು ತನ್ನ  ಯುವಕರಿಗೆ ಸಹಾಯ ಮಾಡಲು ಬದ್ಧವಿದೆ ಎಂದು ಸಚಿವರು ಹೇಳಿದರು. ನಮ್ಮ ಮನೋಭಾವ ಸಾಮಾನ್ಯ ಶೈಕ್ಷಣಿಕ ಶಿಕ್ಷಣದ ಜೊತೆ ವೃತ್ತಿಪರ ಶಿಕ್ಷಣವನ್ನೂ ಸಹ ಸೇರ್ಪಡೆ ಮಾಡುವುದಾಗಿದೆ. ಅದರಲ್ಲೂ ಬೇಡಿಕೆ ಆಧಾರಿತ, ದಕ್ಷತೆ ಆಧಾರಿತ ಮತ್ತು ಮಾದರಿ ವೃತ್ತಿಪರ ಕೋರ್ಸ್ ಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರೌಢ ಮತ್ತು ಮಧ್ಯಮ ಶಾಲಾ ಹಂತದಲ್ಲಿ ಮುಂಚಿತವಾಗಿಯೇ ವೃತ್ತಿಪರ ಕೌಶಲ್ಯ ತಿಳಿಯಲು ಅವಕಾಶ ಒದಗಿಸಿಕೊಡುತ್ತದೆ ಮತ್ತು ಅದನ್ನು ಶಿಕ್ಷಣದ ಮುಖ್ಯ ವಾಹಿನಿ ಜೊತೆ ಸುಗಮವಾಗಿ ಸೇರಿಸಲಾಗುತ್ತಿದೆ ಎಂದು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ನೂತನ ಶಿಕ್ಷಣ ನೀತಿ 2025 ವೇಳೆಗೆ ಶಾಲೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ಕನಿಷ್ಠ ಶೇ.50ರಷ್ಟು ಕಲಿಕಾರ್ಥಿಗಳು ವೃತ್ತಿ ಶಿಕ್ಷಣ ಕಲಿತಿರಬೇಕೆಂಬ ಗುರಿ ಹೊಂದಲಾಗಿದೆ. ಅಲ್ಲದೆ ಎನ್ಇಪಿ 2020 ವೃತ್ತಿಪರ ಶಿಕ್ಷಣದ ಮೂಲಕ  ಕೌಶಲ್ಯ ಅಂತರ ವಿಶ್ಲೇಷಣೆಯನ್ನು ದೂರ ಮಾಡುವುದಲ್ಲದೆ ಸ್ಥಳೀಯ ಅವಕಾಶವನ್ನು ಗುರುತಿಸಲಿದೆ. ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ ಮೂಲಕ ವೃತ್ತಿಪರ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮೇಲೇರಲು ಸಹಾಯಕವಾಗಲಿದೆ. ಚೌಕಟ್ಟಿನಲ್ಲಿನ ಮಾನದಂಡಗಳು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಕಾಯ್ದುಕೊಂಡಿರುವ ವೃತ್ತಿಗಳ ಕುರಿತ ಅಂತಾರಾಷ್ಟ್ರೀಯ ಮಾನದಂಡಗಳ ವರ್ಗೀಕರಣದ ಜೊತೆ ಸಂಯೋಜನೆಗೊಂಡಿವೆ. ಚೌಕಟ್ಟು ಮೊದಲಿನ ಕಲಿಕೆ ಗುರುತಿಸುವಿಕೆ ಮತ್ತು ಔಪಚಾರಿಕ ವ್ಯವಸ್ಥೆಯಿಂದ ಹೊರಗುಳಿದವರಿಗೆ ಮರು ಸೇರ್ಪಡೆಗೆ ಅವಕಾಶ ಒದಗಿಸಲಿದೆ ಎಂದು ಹೇಳಿದರು.

ಹಾಲಿ ಇರುವ ರಾಷ್ಟ್ರೀಯ ಅಪ್ರೆಂಟಿಶಿಪ್ ತರಬೇತಿ ಯೋಜನೆ ಮೂಲಕ ಶೈಕ್ಷಣಿಕ ಪ್ರಶಿಕ್ಷಣಾರ್ಥಿಗಳ ಅವಕಾಶಗಳನ್ನು ವೃದ್ಧಿಸಲು ಭಾರತ ಕ್ರಮ ಕೈಗೊಂಡಿದೆ ಎಂದು ಶ್ರೀ ಸಂಜಯ್ ಧೋತ್ರೆ ಮಾಹಿತಿ ನೀಡಿದರು. ವೃತ್ತಿಪರ ಶಿಕ್ಷಣ ಮತ್ತು ತರಬೇತಿ ವಲಯದಲ್ಲಿ ಜಿ20 ರಾಷ್ಟ್ರಗಳ ನಡುವೆ ಸಹಭಾಗಿತ್ವಕ್ಕೆ ಭಾರತ ಹೆಚ್ಚಿನ ಪ್ರಾಮುಖ್ಯ ನೀಡುತ್ತದೆ ಎಂದು ಅವರು ಹೇಳಿದರು. ಶಿಕ್ಷಣದಿಂದ ದುಡಿಯುವ ಸ್ಥಳಕ್ಕೆ ಸುಗಮ ಪರಿವರ್ತನೆ ಖಾತ್ರಿಪಡಿಸಲು ಕಾರ್ಯತಂತ್ರಗಳ ಅಭಿವೃದ್ಧಿಗೆ ಜಿ20 ರಾಷ್ಟ್ರಗಳ ಸಾಮೂಹಿಕ ಪ್ರಯತ್ನಗಳಿಗೆ ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಪುನರುಚ್ಚರಿಸಿದರು

ಸಭೆಯ ಕೊನೆಯಲ್ಲಿ ಜಿ20 ರಾಷ್ಟ್ರಗಳ ಶಿಕ್ಷಣ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಸಚಿವರುಗಳು ಘೋಷಣೆಯನ್ನು ಅಂಗೀಕರಿಸಿದರು.

ಜಿ20 ರಾಷ್ಟ್ರಗಳ ಶಿಕ್ಷಣ ಮಂತ್ರಿಗಳ ಘೋಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿ20 ರಾಷ್ಟ್ರಗಳ ಶಿಕ್ಷಣ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಸಚಿವರುಗಳ ಘೋಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

***



(Release ID: 1729836) Visitor Counter : 252