ಇಂಧನ ಸಚಿವಾಲಯ

ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಇಂಧನ ಪರಿವರ್ತನೆ ಮತ್ತು ದಕ್ಷತೆ ಕ್ರಮಗಳ ಪ್ರಗತಿ ಪರಾಮರ್ಶೆ ನಡೆಸಿದ ಕೇಂದ್ರ ಇಂಧನ ಖಾತೆ ಸ್ವತಂತ್ರ ಸಚಿವ ಶ್ರೀ ಆರ್ ಕೆ ಸಿಂಗ್


ಇಂಧನ ದಕ್ಷತೆ ಮತ್ತು ಕಡಿಮೆ ಇಂಗಾಲ ತಂತ್ರಜ್ಞಾನದ ಮಾರ್ಗಸೂಚಿ ರೂಪಿಸಲು ಮತ್ತು ಜಾರಿಗೆ ತರಲು ಸಂಬಂಧಿತ ಸಚಿವಾಲಯಗಳ ಸದಸ್ಯರು ಒಳಗೊಂಡ ಸಮಿತಿ/ ಗುಂಪು ರಚಿಸಲಾಗುವುದು: ಆರ್ ಕೆ ಸಿಂಗ್

ಅಧಿಕ ಇಂಗಾಲ ಹೊರಸೂಸುವಿಕೆಯ ತೀವ್ರತೆ ಬಗ್ಗೆ ನಿಗಾ ಇಡುವ ಜತೆಗೆ, ಇಂಧನ ಪೋಲಾಗುವುದನ್ನು ಕನಿಷ್ಠಗೊಳಿಸುವುದನ್ನು ಖಚಿತಪಡಿಸಬೇಕು - ಶ್ರೀ ಆರ್ ಕೆ ಸಿಂಗ್

ಕಡಿಮೆ ಇಂಗಾಲ ಹೊರಸೂಸುವ ತಂತ್ರಜ್ಞಾನಗಳ ಅಳವಡಿಕೆಯನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಬೇಕು, ವಿಶೇಷವಾಗಿ ಎಂಎಸ್’ಎಂಇ ಘಟಕಗಳಲ್ಲಿ; ವಿದ್ಯುತ್ ಚಲನಶೀಲತೆಯನ್ನು ವ್ಯಾಪಕವಾಗಿ ಬಳಸಬೇಕು: ವಿವಿಧ ಸಚಿವಾಲಯಗಳ ಉನ್ನತಾಧಿಕಾರಿಗಳಿಗೆ ಆರ್ ಕೆ ಸಿಂಗ್ ಸೂಚನೆ

Posted On: 17 JUN 2021 9:18AM by PIB Bengaluru

ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಶೀಲತೆ ಖಾತೆ ಸ್ವತಂತ್ರ ಸಚಿವ ಆರ್ ಕೆ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ವೀಡಿಯೊ ಕಾನ್ಫರೆನ್ಸಿಂಗ್ ಸಭೆಯಲ್ಲಿ ಇಂಧನ ದಕ್ಷತೆಯ ಹಲವಾರು ಕಾರ್ಯಕ್ರಮಗಳು ಮತ್ತು ಹವಾಮಾನ ಬದಲಾವಣೆಯ ಕ್ರಮಗಳಿಗೆ ದೇಶದಲ್ಲಿ ಆಗಿರುವ ಸಿದ್ಧತೆಗಳ ಪ್ರಗತಿ ಪರಾಮರ್ಶೆ ನಡೆಯಿತು.

ದೇಶದ ಅರ್ಥ ವ್ಯವಸ್ಥೆಯ ಎಲ್ಲಾ ವಲಯಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಣಕ್ಕೆ ತರುವ ಜತೆಗೆ, ಇಂಧನ ವಲಯದಲ್ಲಿ ದಕ್ಷತೆ ಹೆಚ್ಚಿಸುವ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಯಿತು.

ವಿಪರೀತ ಇಂಗಾಲ ಹೊರಸೂಸುವ ತೀವ್ರತೆ ಹೊಂದಿರುವ ಸಾರಿಗೆ, ಎಂಎಸ್ಎಂಇ ಮತ್ತು ವಿದ್ಯುತ್ ಘಟಕಗಳ ಮೇಲೆ ತೀವ್ರ ನಿಗಾ ವಹಿಸುವತೆ ಅವರು ವಿವಿಧ ಸಚಿವಾಲಯಗಳು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ದೇಶಾದ್ಯಂತ ಸರಣಿ ಇಂಧನ ಸಂರಕ್ಷಣಾ ಯೋಜನೆಗಳನ್ನು ಜಾರಿಗೆ ತರಲು ಆಭಿವೃದ್ಧಿ ಪಡಿಸಿರುವ ರೋಶನಿ ಮಿಷನ್ ದಾಖಲೆ ಪತ್ರದಲ್ಲಿ ವ್ಯಾಖ್ಯಾನಿಸಿರುವ ಚಟುವಟಿಕೆಗಳ ಕುರಿತು ಸಚಿವರು ಸಭೆಯಲ್ಲಿ ಚರ್ಚೆ ನಡೆಸಿದರು.

ಇಂಧನ ಬೇಡಿಕೆಗೆ ಅನುಗುಣವಾದ ಉಪಕ್ರಮಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯವಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಸಚಿವಾಲಯಗಳಿಗೆ ಸೂಚನೆ ನೀಡಿದ ಶ್ರೀ ಆರ್ ಕೆ ಸಿಂಗ್ ಅವರು, ಇಂಧನ ಪೋಲಾಗುವುದನ್ನು ಕನಿಷ್ಠ ಮಟ್ಟಕ್ಕೆ ತರುವುದನ್ನು ಖಚಿತಪಡಿಸುವಂತೆ ಹಾಗೂ ಕಡಿಮೆ ಇಂಗಾಲ ಹೊರಸೂಸುವಿಕೆಯ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳುವುದು ಅತ್ಯಗತ್ಯ. ವಿಶೇಷವಾಗಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಲ್ಲಿ ಇಂಗಾಲ ಹೊರಸೂಸುವಿಕೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು. ಎಲ್ಲಾ ಇಲಾಖೆಗಳು ವಿದ್ಯುತ್ ಚಲನಶೀಲತೆಯನ್ನು ವ್ಯಾಪಕವಾಗಿ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಸಚಿವರು ಸೂಚಿಸಿದರು. ಇಂಧನ ದಕ್ಷತೆಯ ಎಲ್ಲಾ ಯೋಜನೆಗಳ ಸಮರ್ಪಕ ಜಾರಿಗೆ, ಇಂಧನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಸಾರ್ವಜನಿಕ ವಲಯದ ಘಟಕ(ಸಿಪಿಎಸ್ಯು) ಇಂಧನ ದಕ್ಷತೆ ಬ್ಯೂರೊ (ಬಿಇಇ) ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸಬೇಕು. ಇಂಧನ ದಕ್ಷತೆ ಹೆಚ್ಚಿಸುವ ಪ್ರಯತ್ನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಇಂಧನ ವಲಯದ ವಿವಿಧ ಏಜೆನ್ಸಿಗಳ ಕಾರ್ಯಕ್ಷಮತೆಯನ್ನು ಬಲಪಡಿಸಬೇಕು. ಕೆಳಗಿನ ಅಂಶಗಳಿಗೆ ಒತ್ತು ನೀಡಬೇಕು ಎಂದರು.

ಆರ್ಥಿಕತೆಯ ಪ್ರಗತಿಶೀಲ ವಿದ್ಯುದೀಕರಣ: ವಿದ್ಯುತ್ ಸಂಪರ್ಕ ಒದಗಿಸಬೇಕಾದ ಸಂಭಾವ್ಯ ಪ್ರದೇಶಗಳನ್ನು ಗುರುತಿಸಲು ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು.

  • ವಿದ್ಯುಚ್ಛಕ್ತಿಯ ಹಸಿರೀಕರಣ - ನವೀಕರಿಸಬಹುದಾದ ಇಂಧನ ಮೂಲಗಳ ವ್ಯಾಪಕ ಬಳಕೆಗೆ ಸಂಘಟಿತ ಪ್ರಯತ್ನ ಈಗಾಗಲೇ ಪ್ರಗತಿಯಲ್ಲಿದೆ.
  • ಇಂಧನ ದಕ್ಷತೆ ಹೆಚ್ಚಿಸಲು ಮತ್ತು ಕಡಿಮೆ ಇಂಗಾಲ ಹೊರಸೂಸುವಿಕೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಾರ್ಗಸೂಚಿಗಳ ಜಾರಿಗಾಗಿ ಸಂಬಂಧಿತ ಸಚಿವಾಲಯಗಳ ಸದಸ್ಯರನ್ನು ಒಳಗೊಂಡ ಸಮಿತಿ ಅಥವಾ ಗುಂಪು ರಚಿಸಲಾಗುವುದು.
  • ಕೇಂದ್ರ ಸ್ವಾಮ್ಯದ ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ(ಇಂಧನ ದಕ್ಷತೆ ಕೇಂದ್ರ) ಮತ್ತು ರಾಜ್ಯಗಳ ವ್ಯಾಪ್ತಿಯ ಇಂಧನ ಸಂಸ್ಥೆಗಳ ಸಾಂಸ್ಥಿಕ ಸ್ವರೂಪ ಬಲಪಡಿಸಬೇಕು.

ಇಂಧನ ಪರಿವರ್ತನೆ ಮತ್ತು ದಕ್ಷತೆ ಕ್ರಮಗಳ ಪ್ರಗತಿ ಪರಾಮರ್ಶೆಯ ಉನ್ನತ ಮಟ್ಟದ ಸಭೆಯಲ್ಲಿ ಇಂಧನ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ವಸತಿ ಮತ್ತು ನಗರಾಭಿವೃದ್ಧಿ, ವಿದೇಶಾಂಗ ವ್ಯವಹಾರಗಳು, ಕಲ್ಲಿದ್ದಲು, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬೃಹತ್ ಕೈಗಾರಿಕೆ ಸಚಿವಾಲಯಗಳ ಹಿರಿಯ ಅಧಿಕಾರಿಗಳು, ನೀತಿ ಆಯೋಗ, ವೆಚ್ಚ ಇಲಾಖೆ, ಸಂಪುಟ ಆರ್ಥಿಕ ವ್ಯಹಾರಗಳ ಇಲಾಖೆ, ಬಿಇಇ, ಎನ್ ಟಿಪಿಸಿ, ಪಿಎಫ್ ಸಿ, ಆರ್ ಇಸಿ, ಇಇಎಸ್ಎಲ್, ಐಆರ್ ಇಡಿಎ ಮತ್ತು ಎಸ್ಇಸಿಐ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಇಂಧನ ಇಲಾಖೆಯ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಮಾತನಾಡಿ, ಇಂಗಾಲ ಹೊರಸೂಸುವಿಕೆ ಕಡಿತದ ನಮ್ಮ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಕೂಲಿಂಗ್ ವಲಯ, ಕೋಲ್ಡ್ ಸ್ಟೋರೇಜ್ ಮತ್ತು ಅಡುಗೆ ಪ್ರಮುಖ ಕ್ಷೇತ್ರಗಳಾಗಿವೆ. ನಿಟ್ಟಿನಲ್ಲಿ ನಾವು ಶೀತಲೀಕರಣ, ಶೀತಲ ಘಟಕ ಮತ್ತು ಅಡುಗೆ ವಲಯಗಳಿಗೆ ಪ್ರಮುಖವಾಗಿ ಗಮನ ಹರಿಸಬೇಕಿದೆ ಎಂದರು. ಸರಕು ಸಾಗಣೆಯನ್ನು ರಸ್ತೆ ಸಾರಿಗೆಯಿಂದ ರೈಲ್ವೆಗೆ ಬದಲಾಯಿಸುವ ಸಾಧ್ಯತೆಗಳ ಬಗ್ಗೆಯೂ ಅವರು ಚರ್ಚಿಸಿದರು. ಇಂಧನ ದಕ್ಷತೆ ಹೆಚ್ಚಿಸುವ ಯೋಜನೆಗಳ ಜಾರಿಗೆ ಹಣಕಾಸು ಸೌಲಭ್ಯ ಒದಗಿಸಲು ಇಂಧನ ಸಚಿವಾಲಯದ ಅಡಿ ಬರುವ ಪವರ್ ಫೈನಾನ್ಸ್ ಕಾರ್ಪೊರೇಷನ್ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಹಲವಾರು ಹಣಕಾಸು ಕಾರ್ಯಕ್ರಮಗಳಿಗೆ ಇದು ಜ್ಞಾನಾಧಾರ ಮೂಲದ ಚಾಂಪಿಯನ್ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಎಂಎಸ್ಎಂಇ ವಲಯಗಳಿಗೆ ಹಣಕಾಸು ಒದಗಿಸುವುದೇ ಪ್ರಮುಖ ಸವಾಲಾಗಿದೆ ಎಂದು ಅವರು ತಿಳಿಸಿದರು.

ಬ್ಯೂರೊ ಆಫ್ ಎನಜರ್ಜಿ ಎಫಿಶಿಯನ್ಸಿಯ ಮಹಾನಿರ್ದೇಶಕರು ಹವಾಮಾನ ಬದಲಾವಣೆ ಮತ್ತು ಭಾರತದ ರಾಷ್ಟ್ರೀಯ ನಿಶ್ಚಯಿತ(ನಿರ್ಣಯಿತ) ಕೊಡುಗೆಗಳ ಬದ್ಧತೆಗಳು ಮತ್ತು ಮಿಷನ್ ರೋಶನಿ ದಾಖಲೆ ಪತ್ರಗಳಲ್ಲಿ ವ್ಯಾಖ್ಯಾನಿತವಾಗಿರುವ ಕ್ರಿಯೆ(ಕ್ರಮ)ಗಳ ಕುರಿತು ಪ್ರಸ್ತುತಿ ನೀಡಿದರು. ಇಂಧನ ದಕ್ಷತೆ ಬ್ಯೂರೊ ಸಂಸ್ಥೆಯು 2 ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿದೆ. ರೋಶನಿ ಮತ್ತು ಉನ್ನತಿ ಹೆಸರಿನ ಕಾರ್ಯಕ್ರಮಗಳಲ್ಲಿ 2021-2030 ವರೆಗೆ ವಲಯವಾರು ಕ್ರಿಯಾಯೋಜನೆಗಳನ್ನು ರೂಪಿಸಲಾಗಿದೆ. ಮಿಷನ್ ರೋಶನಿ ಕಾರ್ಯಕ್ರಮದಲ್ಲಿ ಎಲ್ಲ ವಲಯಗಳ ಇಂಧನ ದಕ್ಷತೆ ಮತ್ತು ಇಂಗಾಲ ಹೊರಸೂಸುವಿಕೆ ಕಡಿತಕ್ಕೆ ಅಗತ್ಯವಾದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 2030 ಹೊತ್ತಿಗೆ ದೇಶದಲ್ಲಿ 550 ದಶಲಕ್ಷ ಟನ್ಗಿಂತ ಹೆಚ್ಚಿನ ಇಂಗಾಲ ಹೊರಸೂಸುವಿಕೆ ನಿಯಂತ್ರಣ ಉದ್ದೇಶ ಹೊಂದಲಾಗಿದೆ. ಉನ್ನತಿಯು ಕಾರ್ಯನಿರತ ದಾಖಲೆ ಪತ್ರವಾಗಿದ್ದು, ಅಲ್ಪ ಮತ್ತು ದೀರ್ಘಾವಧಿಯಲ್ಲಿ ಇಂಧನ ಪೋಲು ತೀವ್ರತೆಯನ್ನು ಕಡಿಮೆ ಮಾಡಲು ಕ್ರಿಯಾಯೋಜನೆಗಳನ್ನು ರೂಪಿಸಲಿದೆ.

***



(Release ID: 1727913) Visitor Counter : 203