ಪ್ರಧಾನ ಮಂತ್ರಿಯವರ ಕಛೇರಿ

‘ಮರುಭೂಮಿಕರಣ, ಭೂ ಸವಕಳಿ ಮತ್ತು ಬರ ಕುರಿತಂತೆ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಂವಾದ’ ಉದ್ದೇಶಿಸಿ ಪ್ರಧಾನಮಂತ್ರಿ ಅವರಿಂದ ಪ್ರಧಾನ ಭಾಷಣ


ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 3 ಮಿಲಿಯನ್ ಹೆಕ್ಟೇರ್ ಅರಣ್ಯ ವ್ಯಾಪ್ತಿ ಹೆಚ್ಚಳ, ದೇಶದ ಒಟ್ಟಾರೆ ಭೂಪ್ರದೇಶಕ್ಕೆ ನಾಲ್ಕನೇ ಒಂದರಷ್ಟು ಅರಣ್ಯ ವೃದ್ಧಿ: ಪ್ರಧಾನಮಂತ್ರಿ

ಭೂಸವಕಳಿ ತಟಸ್ಥತೆಯ ರಾಷ್ಟ್ರೀಯ ಬದ್ಧತೆ ಸಾಧಿಸುವ ನಿಟ್ಟಿನಲ್ಲಿ ಭಾರತ: ಪ್ರಧಾನಮಂತ್ರಿ

2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಸವಕಳಿಯಾಗಿರುವ ಭೂಮಿ ಪುನರ್ ಸ್ಥಾಪನೆ ಗುರಿ, ಇದರಿಂದ 2.5ರಿಂದ 3 ಬಿಲಿಯನ್ ಟನ್ ಇಂಗಾಲದ ಆಮ್ಲಕ್ಕೆ ಸಮನಾದ ಹೆಚ್ಚುವರಿ ಇಂಗಾಲ ಕಡಿತಗೊಳಿಸುವ ಭಾರತದ ಸಾಧನೆಗೆ ಸಹಕಾರಿ

ಭೂಸವಕಳಿ ಕುರಿತ ವಿಷಯಗಳಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಭಾರತದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪನೆ

ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿ ನೀಡುವುದು ನಮ್ಮ ಪವಿತ್ರ ಕರ್ತವ್ಯ: ಪ್ರಧಾನಮಂತ್ರಿ

Posted On: 14 JUN 2021 8:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮರುಭೂಮಿಕರಣ, ಭೂಸವಕಳಿ ಮತ್ತು ಬರ ಕುರಿತಂತೆ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಂವಾದಉದ್ದೇಶಿಸಿ ಪ್ರಧಾನ ಭಾಷಣ ಮಾಡಿದರು. ಮರುಭೂಮಿಕರಣ ನಿಗ್ರಹ ಕುರಿತ ವಿಶ್ವ ಸಂಸ್ಥೆಯ ಸದಸ್ಯರಾಷ್ಟ್ರಗಳ ಸಮಾವೇಶ (ಯುಎನ್ ಸಿಸಿಡಿ) 14ನೇ ಅಧಿವೇಶನದ ಅಧ್ಯಕ್ಷರಾಗಿ ತಮ್ಮ ಸಾಮರ್ಥ್ಯದಲ್ಲಿ ಅವರು ಆರಂಭಿಕ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಭೂಮಿ ಎಲ್ಲರ ಜೀವನ ಮತ್ತು ಜೀವನೋಪಾಯ ಬೆಂಬಲಿಸುವ ಮೂಲ ಆಧಾರಸ್ತಂಭವಾಗಿದೆ ಎಂದು ಬಣ್ಣಿಸಿದ ಶ್ರೀ ನರೇಂದ್ರ ಮೋದಿ ಅವರು, ಆದ್ದರಿಂದ ನಾವು ಭೂಮಿಯ ಮೇಲಿನ ಮತ್ತು ಅದರ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ತಗ್ಗಿಸಬೇಕಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಮುಂದೆ ಸಾಕಷ್ಟು ಕಾರ್ಯಗಳು ಇವೆ. ಆದರೆ ನಾವು ಅವೆಲ್ಲವನ್ನೂ ಮಾಡಬೇಕಿದೆ, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು, ಭೂಸವಕಳಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭೂಸವಕಳಿ ವಿಷಯವನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು. 2019 ದೆಹಲಿ ಘೋಷಣೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಉತ್ತಮ ಲಭ್ಯತೆ ಮತ್ತು ಉಸ್ತುವಾರಿ ವಹಿಸಬೇಕೆಂದು ಹಾಗೂ ಲಿಂಗ ಸಂವೇದಿ ಪರಿವರ್ತನಾ ಯೋಜನೆಗಳಿಗೆ ಒತ್ತು ನೀಡಬೇಕೆಂದು ಕರೆ ನೀಡಲಾಯಿತು. ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಮೂರು ಮಿಲಿಯನ್ ಹೆಕ್ಟೇರ್ ಅರಣ್ಯ ವ್ಯಾಪ್ತಿ ಸೇರ್ಪಡೆಯಾಗಿದೆ. ಇದರಿಂದಾಗಿ ದೇಶದ ಒಟ್ಟಾರೆ ಭೂಪ್ರದೇಶದ ನಾಲ್ಕನೇ ಒಂದರಷ್ಟು ಅರಣ್ಯ ವ್ಯಾಪ್ತಿ ವೃದ್ಧಿಯಾದಂತಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭೂಸವಕಳಿ ತಟಸ್ಥತೆಯ ನಮ್ಮ ರಾಷ್ಟ್ರೀಯ ಗುರಿ ಸಾಧನೆಯ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ನಾವು 2030 ವೇಳೆಗೆ 26 ಮಿಲಿಯನ್ ಹೆಕ್ಟೇರ್ ಸವಕಳಿಯಾಗಿರುವ ಭೂಮಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಇದು 2.5ರಿಂದ 3 ಬಿಲಿಯನ್ ಟನ್ ಇಂಗಾಲದ ಆಮ್ಲಕ್ಕೆ ಸಮನಾದ ಹೆಚ್ಚುವರಿ ಇಂಗಾಲ ಕಡಿತಗೊಳಿಸುವ ಭಾರತದ ಬದ್ಧತೆಗೆ ಸಹಕಾರಿಯಾಗಲಿದೆಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು, ಗುಜರಾತ್ ಕಚ್ ರಣ್ ಪ್ರದೇಶದ ಬನ್ನಿಯ ಉದಾಹರಣೆಯನ್ನು ನೀಡಿ, ಹೇಗೆ ಭೂಮಿಯ ಪುನಶ್ಚೇತನದಿಂದಾಗಿ ಉತ್ತಮ ಮಣ್ಣಿನ ಆರೋಗ್ಯ, ಭೂ ಇಳುವರಿ ಹೆಚ್ಚಳ, ಆಹಾರ ಭದ್ರತೆ ಮತ್ತು ಸುಧಾರಿತ ಜೀವನೋಪಾಯಗಳ ಒಂದು ಉತ್ತಮ ಚಕ್ರವನ್ನು ಪ್ರಾರಂಭಿಸಬಹುದು ಎಂಬುದನ್ನು ವಿವರಿಸಿದರು. ಬನ್ನಿ ಪ್ರದೇಶದಲ್ಲಿ ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭೂಸವಕಳಿಯಾಗುವುದನ್ನು ತಡೆಯಲಾಗುತ್ತಿದೆ. ಇದರಿಂದಾಗಿ ಭೂಸವಕಳಿ ತಟಸ್ಥತೆ ಸಾಧಿಸಲು ಸಹಾಯಕವಾಗುತ್ತಿದೆ. ಅಲ್ಲದೆ ಇದು ಗ್ರಾಮೀಣ ಚಟುವಟಿಕೆಗಳನ್ನು ಮತ್ತು ಜೀವನೋಪಾಯಗಳನ್ನು ಬೆಂಬಲಿಸಿ ಪಶುಸಂಗೋಪನೆಯನ್ನು ಉತ್ತೇಜಿಸುತ್ತದೆ. ಇದೇ ಪ್ರೇರಣೆಯೊಂದಿಗೆ ನಾವು ದೇಶೀಯ ತಂತ್ರಗಳನ್ನು ಉತ್ತೇಜಿಸುವ ಮೂಲಕ ಭೂಸವಕಳಿಗೆ ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆಎಂದು ಪ್ರಧಾನಮಂತ್ರಿ ಅವರು ಬಲವಾಗಿ ಪ್ರತಿಪಾದಿಸಿದರು.

ದಕ್ಷಿಣ-ದಕ್ಷಿಣ ಸಹಕಾರದ ಸ್ಫೂರ್ತಿಯೊಂದಿಗೆ ಭಾರತ ಭೂಸವಕಳಿ ತಡೆ ಕಾರ್ಯತಂತ್ರಗಳನ್ನು ಅಭಿವೃದ್ಧಿಗೊಳಿಸಲು ಅಭಿವೃದ್ಧಿ ಹೊಂದುತ್ತಿರುವ ತನ್ನ ಸಹ ರಾಷ್ಟ್ರಗಳಿಗೆ ನೆರವು ನೀಡುತ್ತಿದೆ. ಭೂಸವಕಳಿ ವಿಷಯಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಭಾರತದಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಾನವರ ಚಟುವಟಿಕೆಗಳಿಂದಾಗಿ ಭೂಮಿಗೆ ಆಗಿರುವ ಹಾನಿಯನ್ನು ಸರಿಪಡಿಸುವುದು ಮನುಕುಲದ ಸಾಮೂಹಿಕ ಹೊಣೆಗಾರಿಕೆಯಾಗಿದೆ. ನಮ್ಮ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ನೀಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು

***(Release ID: 1727153) Visitor Counter : 433