ಪ್ರಧಾನ ಮಂತ್ರಿಯವರ ಕಛೇರಿ

ಜಿ7 ಶೃಂಗಸಭೆಯ ಮೊದಲ ವಿಸ್ತೃತ (ಔಟ್ರೀಚ್) ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ಜಾಗತಿಕ ಆರೋಗ್ಯ ಕಾಪಾಡಲು ಒಗ್ಗಟ್ಟು ಪ್ರದರ್ಶಿಸುವಂತೆ ಜಿ7 ರಾಷ್ಟ್ರಗಳಿಗೆ ಪ್ರಧಾನ ಮಂತ್ರಿ ಕರೆ

Posted On: 12 JUN 2021 11:07PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಿ7 ಶೃಂಗಸಭೆಯ ಮೊದಲ ವಿಸ್ತೃತ (ಔಟ್|ರೀಚ್) ಅಧಿವೇಶನದಲ್ಲಿ ಪಾಲ್ಗೊಂಡರು.
‘ಬಲಿಷ್ಠ ಆರೋಗ್ಯ ಮರುನಿರ್ಮಾಣ’ ಹೆಸರಿನಲ್ಲಿ ಆರಂಭವಾಗಿರುವ ಈ ಅಧಿವೇಶನದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕಿನಿಂದ ಮನುಕುಲವನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧ ಜಾಗತಿಕ ಸಾಮರ್ಥ್ಯವನ್ನು ಬಲಗೊಳಿಸುವ ಕುರಿತು ಅರ್ಥಪೂರ್ಣ ಚರ್ಚೆ ನಡೆಸಲು ವಿಶೇಷ ಒತ್ತು ನೀಡಲಾಗಿದೆ.
ಭಾರತದ ಮೇಲೆ ಇತ್ತೀಚೆಗೆ ಕೋವಿಡ್-19 ಸೋಂಕಿನ 2ನೇ ಅಲೆ ಅಪ್ಪಳಿಸಿದಾಗ ಜಿ7 ರಾಷ್ಟ್ರಗಳು ಮತ್ತು ಸದಸ್ಯ (ಅತಿಥಿ) ರಾಷ್ಟ್ರಗಳು ನೀಡಿದ ಬೆಂಬಲ ಮತ್ತು ಸಹಾಯಹಸ್ತವನ್ನು ನೆನೆದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಲ್ಲ ರಾಷ್ಟ್ರಗಳ ನೆರವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭಾರತ  ಸರ್ಕಾರ, ಕೈಗಾರಿಕಾ ರಂಗ ಮತ್ತು ನಾಗರಿಕ ಸಮಾಜ(ಸಿವಿಲ್ ಸೊಸೈಟಿ)ಗಳ ಎಲ್ಲಾ ಹಂತದ ಪ್ರಯತ್ನಗಳಿಗೆ, ಇಡೀ ಸಮಾಜವೇ ಹೆಗಲು ನೀಡಿದ ಬಗೆ ಮತ್ತು ವಿಧಾನಗಳ ಕುರಿತು ಅವರು ಬೆಳಕು ಚೆಲ್ಲಿದರು.
ಕೊರೊನಾ ಸೋಂಕಿತರ ಜತೆಗಿನ ಸಂಪರ್ಕಿತರ ಪತ್ತೆ ಹಚ್ಚುವಿಕೆ ಮತ್ತು ಕೋವಿಡ್-19 ಲಸಿಕೆ ನಿರ್ವಹಣೆಗಾಗಿ ಭಾರತವು ಮುಕ್ತ ಮೂಲದ ಡಿಜಿಟಲ್ ಪರಿಕರಗಳನ್ನು ಯಶಸ್ವಿಯಾಗಿ ಬಳಸಿದ ಪರಿಯನ್ನು ಅವರು ಸಭೆಯಲ್ಲಿ  ವಿವರಿಸಿದರು. ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ನಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಭಾರತ ಇಚ್ಛೆ ಮತ್ತು ಒಲವು ಹೊಂದಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ಜಾಗತಿಕ ಆರೋಗ್ಯ ಆಡಳಿತವನ್ನು ಸುಧಾರಣೆಗೆ ತರುವ ಸಂಘಟಿತ ಪ್ರಯತ್ನಗಳಿಗೆ ಮನ ತುಂಬಿ ಬೆಂಬಲ ನೀಡಲು ಭಾರತ ಸದಾ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಘೋಷಿಸಿದರು. ‘ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ವಿಚಾರ(ಟ್ರಿಪ್ಸ್) ಗಳಿಗೆ ಅನ್ವಯವಾಗುವಂತೆ, ಕೋವಿಡ್ ಸಂಬಂಧಿತ ತಂತ್ರಜ್ಞಾನ’ಗಳಿಗೆ ವಿಧಿಸಿರುವ ಕಟ್ಟುಪಾಡುಗಳನ್ನು ಮನ್ನಾ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್ಒ)ಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಂಡಿಸಿರುವ ಮಹತ್ವದ ಪ್ರಸ್ತಾವನೆಗೆ ಜಿ7 ರಾಷ್ಟ್ರಗಳು ಬೆಂಬಲ ನೀಡಬೇಕು ಎಂದು ಶ್ರೀ ನರೇಂದ್ರ ಮೋದಿ ಮನವಿ ಮಾಡಿದರು.
ಈ ಶೃಂಗಸಭೆಯು ‘ಇರುವುದೇ ಒಂದೇ ಪೃಥ್ವಿ, ಒಂದು ಆರೋಗ್ಯ’ ಎಂಬ ಪ್ರಬಲ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಜಾಗತಿಕ ಏಕತೆ, ನಾಯಕತ್ವ, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಭವಿಷ್ಯದ ಸಾಂಕ್ರಾಮಿಕ ಸೋಂಕುಗಳನ್ನು ಸಮರ್ಥವಾಗಿ ನಿಯಂತ್ರಿಸಲು ಒಗ್ಗೂಡಬೇಕು ಎಂದು ಕರೆ ನೀಡಿದ ಪ್ರಧಾನ ಮಂತ್ರಿ ಅವರು, ಈ ಗುರಿ ಸಾಧಿಸಲು ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಸಮಾಜಗಳಿಗೆ ವಿಶೇಷ ಜವಾಬ್ದಾರಿ ಇದೆ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ನಡೆಯಲಿರುವ ಜಿ7 ಶೃಂಗಸಭೆಯ ಅಂತಿಮ ದಿನದ ಅಧಿವೇಶನದ 2 ಕಲಾಪಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

***



(Release ID: 1726802) Visitor Counter : 229