ಹಣಕಾಸು ಸಚಿವಾಲಯ

ಕ್ಲೈಮುಗಳ ತ್ವರಿತ ಇತ್ಯರ್ಥ ಕುರಿತು ವಿಮಾ ಕಂಪನಿಗಳ ಮುಖ್ಯಸ್ಥರೊಂದಿಗೆ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಭೆ


ಕ್ಲೈಮುಗಳ ತ್ವರಿತ ವಿತರಣೆಯನ್ನು ಸಕ್ರಿಯಗೊಳಿಸುವ ಯೋಜನೆಯ ಅಡಿಯಲ್ಲಿ ಪ್ರಕ್ರಿಯೆ ಮತ್ತು ದಾಖಲಾತಿ ಅವಶ್ಯಕತೆಗಳನ್ನು ಸುಗಮಗೊಳಿಸಲು ಒತ್ತುಕೊಡುವಂತೆ ಸಚಿವರ ಸೂಚನೆ

ಪಿಎಂಜೆಜೆಬಿವೈ ಅಡಿಯಲ್ಲಿ 2020 ರ ಏಪ್ರಿಲ್ 1 ರಿಂದ ಇದುವರೆಗೆ ಶೇ.99 ವಿಲೇವಾರಿ ದರದೊಂದಿಗೆ 1.2 ಲಕ್ಷ ಕ್ಲೈಮುಗಳಿಗೆ 2,403 ಕೋಟಿ ರೂ. ಪಾವತಿ

Posted On: 05 JUN 2021 4:51PM by PIB Bengaluru

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿನ ವಿಮೆ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಬಾಕಿ ಇರುವ ಕ್ಲೈಮುಗಳ ವಿತರಣೆಯನ್ನು ವೇಗಗೊಳಿಸುವ ಕುರಿತು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ವಿಮಾ ಕಂಪನಿಗಳ ಮುಖ್ಯಸ್ಥರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಕ್ಲೈಮುಗಳನ್ನು ತ್ವರಿತವಾಗಿ ವಿತರಿಸಲು ಯೋಜನೆಗಳ ಅಡಿಯಲ್ಲಿ ಪ್ರಕ್ರಿಯೆ ಮತ್ತು ದಾಖಲಾತಿ ಅವಶ್ಯಕತೆಗಳನ್ನು ಸುಗಮಗೊಳಿಸುವ ಪ್ರಾಮುಖ್ಯವನ್ನು ಅವರು ಒತ್ತಿಹೇಳಿದರು.

ಪಿಎಂಜಿಕೆಪಿ ಯೋಜನೆಯಡಿ ಒಟ್ಟು 419 ಕ್ಲೈಮ್‌ಗಳನ್ನು ಇದುವರೆಗೆ ಪಾವತಿಸಲಾಗಿದ್ದು, ಕ್ಲೈಮುದಾರರ ನಾಮನಿರ್ದೇಶಿತರ ಖಾತೆಗಳಿಗೆ 209.5 ಕೋಟಿ ರೂ. ಪಾವತಿ ಮಾಡಲಾಗಿರುವ ಬಗ್ಗೆ ಹಣಕಾಸು ಸಚಿವರು ಪರಿಶೀಲಿಸಿದರು.. ದಾಖಲೆಗಳನ್ನು ಕಳುಹಿಸಬೇಕಾದ ರಾಜ್ಯಗಳಿಂದ ಉಂಟಾಗುವ ವಿಳಂಬದ ಸಮಸ್ಯೆಯನ್ನು ಪರಿಹರಿಸಲು, ಜಿಲ್ಲಾಧಿಕಾರಿಯಿಂದ ಸರಳ ಪ್ರಮಾಣಪತ್ರ ಮತ್ತು ನೋಡಲ್ ರಾಜ್ಯ ಆರೋಗ್ಯ ಪ್ರಾಧಿಕಾರದಿಂದ ಅನುಮೋದನೆಯ ಮೂಲಕ ಕ್ಲೈಮುಗಳ ಪ್ರಕ್ರಿಯೆ ಆರಂಭಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಯೋಜನೆಯನ್ನು ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿರುವ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಜಿಲ್ಲಾಧಿಕಾರಿ ಪ್ರಮಾಣಪತ್ರವನ್ನು ಪಡೆದ 4 ಗಂಟೆಗಳಲ್ಲಿಯೇ ಕ್ಲೈಮು ಇತ್ಯರ್ಥಗೊಂಡ ಲಡಾಖ್ ಉದಾಹರಣೆಯನ್ನು ಉಲ್ಲೇಖಿಸಿದರು. ಮುಂದೆಯೂ ಇದೇ ರೀತಿಯ ಮಾರ್ಗವನ್ನು ಕಾಯ್ದುಕೊಳ್ಳುವಂತೆ ಅವರು ಸೂಚಿಸಿದರು.  ಆರೋಗ್ಯ ಕಾರ್ಯಕರ್ತರ ಕೋವಿಡ್ ಕ್ಲೈಮುಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳುವಂತೆ ಮತ್ತು ಜಾರಿಗೆ ತಂದಿರುವ ಈ ಸರಳೀಕೃತ ಕಾರ್ಯವಿಧಾನವನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಹಣಕಾಸು ಸಚಿವರು ರಾಜ್ಯಗಳಿಗೆ ನಿರ್ದೇಶನ ನೀಡಿದರು.

ಪಿಎಂಜೆಜೆಬಿವೈ ಅಡಿಯಲ್ಲಿ ಒಟ್ಟು 4.65 ಲಕ್ಷ ಕ್ಲೈಮ್‌ಗಳಿಗೆ 9,307 ಕೋಟಿ ರೂ. ಮತ್ತು ಸಾಂಕ್ರಾಮಿಕ ರೋಗದ ಆರಂಭದಿಂದ ಅಂದರೆ 2020 ರ ಏಪ್ರಿಲ್ 1 ರಿಂದ ಇಲ್ಲಿಯವರೆಗೆ 1.2 ಲಕ್ಷ ಕ್ಲೈಮ್‌ಗಳಿಗೆ ಶೇ. 99 ರಷ್ಟು ವಿಲೇವಾರಿ ದರದಲ್ಲಿ 2,403 ಕೋಟಿ ರೂ. ಪಾವತಿಸಲಾಗಿರುವುದನ್ನು ಸಚಿವರು ಗಮನಿಸಿದರು. ಪಾಲಿಸಿದಾರರ ನಾಮನಿರ್ದೇಶಿತರಿಗೆ ಸೇವೆಗಳನ್ನು ಒದಗಿಸುವಾಗ, ವಿಶೇಷವಾಗಿ ಸಾಂಕ್ರಾಮಿಕ ಅವಧಿಯಲ್ಲಿ ವಿಮಾ ಕಂಪನಿಯ ಅಧಿಕಾರಿಗಳು ಸಹಾನುಭೂತಿಯನ್ನು ತೋರಿಸಬೇಕು ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಕ್ಲೈಮುಗಳ ತ್ವರಿತ ಪ್ರಕ್ರಿಯೆಯಲ್ಲಿ ವಿಮಾ ಕಂಪನಿಗಳು ಮತ್ತು ಬ್ಯಾಂಕುಗಳು ಇತ್ತೀಚೆಗೆ ಮಾಡಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹಣಕಾಸು ಸಚಿವರು ಪಿಎಂಎಸ್‌ಬಿವೈ ಯೋಜನೆಯಡಿ ಮಾಡಿದ ಕ್ಲೈಮುಗಳ ವಿಲೇವಾರಿಯನ್ನು ಬಗ್ಗೆ ಸಹ ಪರಿಶೀಲಿಸಿದರು. 2021 ರ ಮೇ 31 ರ ವೇಳೆಗೆ ಒಟ್ಟು 82,660 ಕ್ಲೈಮ್‌ಗಳಿಗೆ 1,629 ಕೋಟಿ ರೂ. ಪಾವತಿಸಲಾಗಿದೆ ಎಂದರು.

ಸಾಂಕ್ರಾಮಿಕ ಸಮಯದಲ್ಲಿ ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಅಡಿಯಲ್ಲಿ ಕ್ಲೈಮುಗಳ ಪ್ರಕ್ರಿಯೆಗೆ ಅನುಕೂಲವಾಗುವಂತೆ ಇತ್ತೀಚೆಗೆ ಕೈಗೊಂಡ ಈ ಕೆಳಗಿನ ಉಪಕ್ರಮಗಳ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು:

  • ವಿಮಾದಾರರು ಕ್ಲೈಮುಗಳ ಪ್ರಕ್ರಿಯೆಯನ್ನು 30 ದಿನಗಳ ಬದಲು 7 ದಿನಗಳಲ್ಲಿ ಪೂರ್ಣಗೊಳಿಸಬೇಕು
  • ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ನಡುವಿನ ಕ್ಲೈಮು ಇತ್ಯರ್ಥ ಪ್ರಕ್ರಿಯೆ ಆರಂಭದಿಂದ ಕೊನೆಯವರೆಗೆ ಡಿಜಿಟಲೀಕರಣ
  • ಇಮೇಲ್ / ಆ್ಯಪ್ ಮೂಲಕ ಕ್ಲೈಮ್ ದಾಖಲೆಗಳನ್ನು ಒದಗಿಸಿ ವಿಳಂಬವನ್ನು ನಿವಾರಿಸುವುದು
  • ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಜೂನ್ 2021 ರೊಳಗೆ ಕ್ಲೈಮುಗಳಿಗಾಗಿ ಎಪಿಐ ಆಧಾರಿತ ಅಪ್ಲಿಕೇಶನ್ ಅನ್ನು ಕಾರ್ಯಗತಗೊಳಿಸಲಿವೆ
  • ಮರಣ ಪ್ರಮಾಣಪತ್ರದ ಬದಲಾಗಿ ವೈದ್ಯರ ಪ್ರಮಾಣಪತ್ರ ಮತ್ತು ಜಿಲ್ಲಾಧಿಕಾರಿ / ಅಧಿಕೃತ ಅಧಿಕಾರಿ ನೀಡಿದ ಪ್ರಮಾಣಪತ್ರವನ್ನು ಪರಿಗಣಿಸುವುದು
  • ತರ್ಕಬದ್ಧಗೊಳಿಸಿದ ಅರ್ಜಿಗಳು ಮತ್ತು ಸರಳೀಕೃತ ಕ್ಲೈಮುಗಳ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಕಟಿಲಾಗುವುದು

ಈ ಕ್ಲೈಮುಗಳ ಮೊತ್ತವು ತಮ್ಮ ಹತ್ತಿರದವರನ್ನು ಕಳೆದುಕೊಂಡಿರುವ ನಾಮಿನಿಗಳಿಗೆ ಹೆಚ್ಚು ಅಗತ್ಯವಾದ ಆರ್ಥಿಕ ಪರಿಹಾರವನ್ನು ಒದಗಿಸುತ್ತದೆ ಮತ್ತು ಸರ್ಕಾರದ ಕ್ರಮಗಳು ಈ ಪ್ರಕ್ರಿಯೆಯನ್ನು ಸರಳ ಮತ್ತು ವೇಗಗೊಳಿಸುತ್ತವೆ

ಯೋಜನೆಯ ಮುಖ್ಯಾಂಶಗಳು

ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಯೋಜನೆಗಳನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ತಮ್ಮ ಬ್ಯಾಂಕ್ ಮೂಲಕ ಕ್ರಮವಾಗಿ ವಾರ್ಷಿಕ ಪ್ರೀಮಿಯಂ 330 ರೂ. ಮತ್ತು 12 ರೂ. ಪಾವತಿಸಿ ಯೋಜನೆಗಳ ಅಡಿಯಲ್ಲಿ ದಾಖಲಾದ ಎಲ್ಲಾ ಫಲಾನುಭವಿಗಳಿಗೆ ತಲಾ 2 ಲಕ್ಷ ರೂ. ಜೀವ ವಿಮೆ ಮತ್ತು ಅಪಘಾತ ವಿಮೆಯ ರಕ್ಷಣೆಯನ್ನು ನೀಡಲಾಗುತ್ತದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ಭದ್ರತೆಯನ್ನು ಒದಗಿಸಲು ದಿನಕ್ಕೆ 1 ರೂ ಗಿಂತ ಕಡಿಮೆ ಪ್ರೀಮಿಯಂನಲ್ಲಿ ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ಅಡಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವವರಿಗೆ  4 ಲಕ್ಷ ರೂ. ವಿಮೆಯ ಭದ್ರತೆ ಒದಗಿಸಲಾಗುತ್ತದೆ.

ಸರ್ಕಾರದ ಹಣಕಾಸು ಸೇರ್ಪಡೆ ಕಾರ್ಯಕ್ರಮದ ಮೂಲಕ, ಪ್ರಧಾನ ಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ 42 ಕೋಟಿಗೂ ಹೆಚ್ಚು ಬ್ಯಾಂಕ್-ಖಾತೆಗಳನ್ನು ತೆರೆಯಲಾಗಿದ್ದು, ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಅಡಿಯಲ್ಲಿ ಒಟ್ಟು ದಾಖಲಾತಿಗಳು ಕ್ರಮವಾಗಿ 10 ಕೋಟಿ ಮತ್ತು 23 ಕೋಟಿಗಳಾಗಿವೆ. ಜನ ಧನ್-ಆಧಾರ್-ಮೊಬೈಲ್ ಜೋಡಣೆ ಮೂಲಕ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ತಮ್ಮ ಬ್ಯಾಂಕ್-ಖಾತೆಗಳಿಗೆ ನೇರವಾಗಿ ಸರ್ಕಾರದ ನೆರವನ್ನು ಪಡೆಯುತ್ತಿದ್ದಾರೆ.

****



(Release ID: 1724834) Visitor Counter : 208