ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಆಮ್ಲಜನಕ ಸಾಂದ್ರಕಗಳ ಮೇಲಿನ ಲಾಭದ ಅಂತರಕ್ಕೆ ಮಿತಿ ವಿಧಿಸಿದ ಸರ್ಕಾರ


ಲಾಭದ ಅಂತರ ಶೇ.70ಕ್ಕೆ

ವಾರದೊಳಗೆ ಎಂ.ಆರ್.ಪಿ.ಯ ಮಾಹಿತಿ ನೀಡಲಿರುವ ಎನ್.ಪಿ.ಪಿ.ಎ

Posted On: 04 JUN 2021 12:41PM by PIB Bengaluru

ಕೋವಿಡ್ ಸಾಂಕ್ರಾಮಿಕದಿಂದ ಉದ್ಭವಿಸಿರುವ ಅಸಾಧಾರಣ ಪರಿಸ್ಥಿತಿಯ ಕಾರಣದಿಂದ ಆಮ್ಲಜನಕ ಸಾಂದ್ರಕಗಳ ಗರಿಷ್ಠ ಮಾರಾಟ ಬೆಲೆ (ಎಂ.ಆರ್.ಪಿ.)ಯಲ್ಲಿ ಉಂಟಾದ ಏರಿಳಿತದ ಹಿನ್ನೆಲೆಯಲ್ಲಿ ಸರ್ಕಾರ ಆಮ್ಲಜನಕ ಸಾಂಧ್ರಕಗಳ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸರ್ಕಾರ ಸಂಗ್ರಹಿಸಿರುವ ಮಾಹಿತಿಯ ರೀತ್ಯ ವಿತರಕರ ಹಂತದಲ್ಲಿ ಪ್ರಸ್ತುತ ಮಾರಾಟದ ಅಂತರ (ಲಾಭ) ಶೇ.198ರವರೆಗೆ ಇದೆ. ಎನ್.ಪಿ.ಪಿ.ಎ.  ಸಾರ್ವಜನಿಕ ಹಿತದ ದೃಷ್ಟಿಯಿಂದ ಡಿಪಿಸಿಓ, 2013ರ ಪರಿಚ್ಛೇದ 19ರಡಿಯಲ್ಲಿ ವಿಶೇಷ ಅಧಿಕಾರ ಚಲಾಯಿಸಿ, ಆಕ್ಸಿಜನ್ ಸಾಂದ್ರಕದ ಮೇಲಿನ ಈ ಲಾಭದ ಮಿತಿಯನ್ನು ವಿತರಕರ ದರ (ಪಿಡಿಟಿ)ಕ್ಕೆ ಶೇ.70ರವರೆಗೆ ಮಿತಿ ಹೇರಿದೆ. ಇದಕ್ಕೂ ಮುನ್ನ 2019ರ ಫೆಬ್ರವರಿಯಲ್ಲಿ ಎನ್.ಪಿಪಿಎ ಯಶಸ್ವಿಯಾಗಿ ಕ್ಯಾನ್ಸರ್ ನಿಗ್ರಹ ಔಷಧಗಳ ಮೇಲೆ ಮಾರಾಟದ ಮಿತಿ ಹೇರಿತ್ತು. ಅಧಿಸೂಚಿತ ಮಾರಾಟದ ಅಂತರ ಆಧರಿಸಿ, ಪರಿಷ್ಕೃತ ಎಂ.ಆರ್‌.ಪಿ. ಕುರಿತು ಮೂರು ದಿನಗಳಲ್ಲಿ ವರದಿ ಮಾಡುವಂತೆ ಎನ್‌.ಪಿ.ಪಿ.ಎ. ತಯಾರಕರು/ಆಮದುದಾರರಿಗೆ ಸೂಚನೆ ನೀಡಿದೆ. ಪರಿಷ್ಕೃತ ಎಂ.ಆರ್‌.ಪಿ.ಯ ಕುರಿತ ಮಾಹಿತಿಯನ್ನು ಎನ್‌.ಪಿ.ಪಿ.ಎ. ಒಂದು ವಾರದೊಳಗೆ ಸಾರ್ವಜನಿಕರಿಗೆ ತಿಳಿಸಲಿದೆ.


ಪ್ರತಿಯೊಬ್ಬ ಚಿಲ್ಲರೆ ಮಾರಾಟಗಾರರು, ವ್ಯಾಪಾರಸ್ಥರು, ಆಸ್ಪತ್ರೆಗಳು ಮತ್ತು ಸಂಸ್ಥೆಗಳು ತಯಾರಕರು ಒದಗಿಸಿರುವಂತೆ ದರಪಟ್ಟಿಯನ್ನು ಯಾವುದೇ ವ್ಯಕ್ತಿಗೆ ಸುಲಭವಾಗಿ ನೋಡಲು ಲಭ್ಯವಾಗುವಂತೆ ವ್ಯಾಪಾರದ ಆವರಣದ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕು.  ವ್ಯಾಪಾರದ ಅಂತರದ ಮಿತಿಯ ಬಳಿಕ ಪರಿಷ್ಕೃತ ಎಂ.ಆರ್.ಪಿ.ಯನ್ನು ಅನುಸರಣೆ ಮಾಡದ ಉತ್ಪಾದಕರು/ಆಮದುದಾರರು ಅಗತ್ಯ ಸರಕುಗಳ ಕಾಯ್ದೆ, 1955ರ ಅಡಿ ಅಧಿಕ ಲಾಭದ ಮೊತ್ತವನ್ನು ಶೇ.15ರ ಬಡ್ಡಿಯೊಂದಿಗೆ ಮತ್ತು ಶೇ.100 ವರೆಗೆ ದಂಡವನ್ನು ಔಷಧ (ದರ ನಿಯಂತ್ರಣ) ಆದೇಶ, 2013 ರ ನಿಬಂಧನೆಗಳ ಅಡಿಯಲ್ಲಿ ಠೇವಣಿ ಇಡಲು ಬಾಧ್ಯರಾಗಿರುತ್ತಾರೆ. ರಾಜ್ಯ ಔಷಧ ನಿಯಂತ್ರಕರುಗಳು (ಎಸ್.ಡಿ.ಸಿ.ಗಳು) ಉತ್ಪಾದಕರು, ವಿತರಕರು, ಚಿಲ್ಲರೆ ಮಾರಾಟಗಾರರು ಆಮ್ಲಜನಕ ಸಾಂದ್ರಕಗಳನ್ನು ಯಾವುದೇ ಖರೀದಿದಾರರಿಗೆ ಪರಿಷ್ಕೃತ ಎಂ.ಆರ್.ಪಿ.ಗಳಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು, ಕಾಳಸಂತೆಯ ಮಾರಾಟ ನಿಗ್ರಹಕ್ಕಾಗಿ ನಿಗಾ ಇಡಬೇಕು.


ಈ ಆದೇಶವು 2021ರ ನವೆಂಬರ್ 30ರವರೆಗೆ ಅನ್ವಯವಾಗುತ್ತದೆ ಮತ್ತು ಪರಾಮರ್ಶೆಗೆ ಒಳಪಟ್ಟಿರುತ್ತದೆ. 


ದೇಶದಲ್ಲಿ ಕೋವಿಡ್ 2.0 ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ವೈದ್ಯಕೀಯ ಆಮ್ಲಜನಕದ ಬೇಡಿಕೆ ಗಣನೀಯವಾಗಿ ಹೆಚ್ಚಾಯಿತು. ಸಾಂಕ್ರಾಮಿಕದ ಸಮಯದಲ್ಲಿ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಮತ್ತು ಆಮ್ಲಜನಕ ಸಾಂದ್ರಕದ ನಿರಂತರ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಆಮ್ಲಜನಕ ಸಾಂದ್ರಕದ ಪರಿಶಿಷ್ಟವಲ್ಲದ ಔಷಧವಾಗಿದೆ ಮತ್ತು ಪ್ರಸ್ತುತ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್.ಸಿ.ಓ.) ನ ಸ್ವಯಂಪ್ರೇರಿತ ಪರವಾನಗಿ ಚೌಕಟ್ಟಿನಲ್ಲಿದೆ. ಡಿಪಿಸಿಒ 2013ರ ನಿಬಂಧನೆಗಳ ಅಡಿಯಲ್ಲಿ ಇದರ ಬೆಲೆಯ ಮೇಲೆ ನಿಗಾ ಇಡಲಾಗುತ್ತಿದೆ.

***



(Release ID: 1724369) Visitor Counter : 194