ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹಿರಿಯ ನಾಗರಿಕರು ಮತ್ತು ವಿಕಲಾಂಗಚೇತನರಿಗಾಗಿ ಮನೆಗೆ ಹತ್ತಿರದ ಕೋವಿಡ್ ಲಸಿಕಾ ಕೇಂದ್ರಗಳಿಗೆ (ಎನ್ಎಚ್ಸಿವಿಸಿ) ಮಾರ್ಗಸೂಚಿಗಳು
ಸಮುದಾಯ ಕೇಂದ್ರ, ಆರ್ ಡಬ್ಲ್ಯೂ ಎ ಕೇಂದ್ರ, ಗ್ರೂಪ್ ಹೌಸಿಂಗ್ ಸೊಸೈಟಿ ಸೆಂಟರ್, ಪಂಚಾಯತ್ ಕಟ್ಟಡ, ಶಾಲಾ ಕಟ್ಟಡಗಳು ಮುಂತಾದ ಮನೆಗೆ ಹತ್ತಿರದ ಸೌಲಭ್ಯಗಳಲ್ಲಿ ಸಮುದಾಯ ಆಧಾರಿತ ವಿಧಾನದಲ್ಲಿ ಲಸಿಕೆ ನೀಡಿಕೆ
ಇದುವರೆಗೂ ಲಸಿಕೆ ಪಡೆಯದ ಅಥವಾ ಮೊದಲ ಡೋಸ್ ಲಸಿಕೆ ಪಡೆದ ಎಲ್ಲಾ 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಕಲಾಂಗಚೇತನರು ಎನ್ಎಚ್ಸಿವಿಸಿಯಲ್ಲಿ ಕೋವಿಡ್-19 ಲಸಿಕೆಗೆ ಅರ್ಹರು
ಎನ್ಎಚ್ಸಿವಿಸಿ ಅಡಿಯಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಾಂಗಚೇತನರನ್ನು ತಲುಪಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪ್ರಮುಖ ಅಂಶಗಳ ಬಳಕೆ
Posted On:
27 MAY 2021 4:47PM by PIB Bengaluru
ಕೇಂದ್ರ ಆರೋಗ್ಯ ಸಚಿವಾಲಯದ ತಾಂತ್ರಿಕ ತಜ್ಞರ ಸಮಿತಿ ಹಿರಿಯ ನಾಗರಿಕರು ಮತ್ತು ವಿಕಲಾಂಗಚೇತನರಿಗೆ ಮನೆಯ ಹತ್ತಿರ ಲಸಿಕೆ ನೀಡುವ ಕೇಂದ್ರಗಳಿಗೆ (ಎನ್ಎಚ್ಸಿವಿಸಿ) ಪ್ರಸ್ಥಾಪಿಸಿರುವ ಮಾರ್ಗಸೂಚಿಗಳನ್ನು ಕೋವಿಡ್ -19 ಲಸಿಕೆ ಕುರಿತ (ಎನ್ಇಜಿವಿಎಸಿ) ರಾಷ್ಟ್ರೀಯ ತಜ್ಞರ ತಂಡ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಅಂಗೀಕರಿಸಿದೆ. ಹಿರಿಯರು ನಾಗರಿಕರು ಮತ್ತು ವಿಕಲಾಂಗ ಚೇತನ ನಾಗರಿಕರಿಗಾಗಿ ಎನ್ಎಚ್ಸಿವಿಸಿಯು ಸಮುದಾಯ ಆಧಾರಿತ, ಹೊಂದಾಣಿಕೆಯ ಮತ್ತು ಜನ ಕೇಂದ್ರಿತ ವಿಧಾನವನ್ನು ಅನುಸರಿಸುತ್ತದೆ, ಇದು ಮನೆಗಳಿಗೆ ಹತ್ತಿರದಲ್ಲಿ ಕೋವಿಡ್ ಲಸಿಕೆ ಕೇಂದ್ರಗಳನ್ನು ತರುತ್ತದೆ.
ತಾಂತ್ರಿಕ ತಜ್ಞರ ಸಮಿತಿಯ ಶಿಫಾರಸುಗಳು ಹಿರಿಯ ನಾಗರಿಕರಿಗೆ ಮತ್ತು ದೈಹಿಕ ಸ್ಥಿತಿಯ ಕಾರಣದಿಂದಾಗಿ ಸೀಮಿತ ಚಲನಶೀಲತೆಯನ್ನು ಹೊಂದಿರುವ ವಿಕಲಾಂಗ ಚೇತನರಿಗೆ ನೀಡುವುದನ್ನು ಖಚಿತಪಡಿಸುತ್ತವೆ. ಕಾಲಕಾಲಕ್ಕೆ ಹೊರಡಿಸಲಾದ ಕಾರ್ಯಕಾರಿ ಮಾರ್ಗಸೂಚಿಗಳು ಮತ್ತು ಸಲಹೆಗಳ ಪ್ರಕಾರ, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಲಸಿಕೆಯ ಸೇವೆಗಳನ್ನು ಜನಸಮುದಾಯಕ್ಕೆ ಹತ್ತಿರ ತರುವ ಮೂಲಕ ಲಸಿಕೆಯ ಲಭ್ಯತೆಯನ್ನು ಹೆಚ್ಚಿಸುವುದು ಈ ಶಿಫಾರಸುಗಳ ಉದ್ದೇಶವಾಗಿದೆ. ಮನೆಗೆ ಹತ್ತಿರವಿರುವ ಕೋವಿಡ್ ಲಸಿಕಾ ಕೇಂದ್ರಗಳನ್ನು ಈ ಕೆಳಗಿನ ಅರ್ಹರಿಗೆ ವಿಶೇಷವಾಗಿ ಆಯೋಜಿಸಲಾಗುವುದು ಮತ್ತು ಇತರ ಎಲ್ಲ ವಯಸ್ಸಿನವರಿಗೆ ಲಸಿಕಾ ಕಾರ್ಯಕ್ರಮವು ಅಸ್ತಿತ್ವದಲ್ಲಿರುವ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮುಂದುವರಿಯುತ್ತದೆ.
ಎನ್ಎಚ್ಸಿವಿಸಿಯಲ್ಲಿ ಕೋವಿಡ್ -19 ಲಸಿಕೆ ಪಡೆಯಲು ಅರ್ಹರಾದವರು.
- ಯಾವುದೇ ಲಸಿಕೆ ಪಡೆಯದ ಅಥವಾ ಮೊದಲ ಡೋಸ್ ಲಸಿಕೆ ಪಡೆದಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳು.
- ದೈಹಿಕ ಅಥವಾ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಅಂಗವೈಕಲ್ಯ ಹೊಂದಿರುವ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ವ್ಯಕ್ತಿಗಳು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಮಾರ್ಗಸೂಚಿಯ ಕೆಲವು ಅಂಶಗಳು
- ಮನೆಗೆ ಹತ್ತಿರವಿರುವ ಆರೋಗ್ಯ ಆಧರಿತ ಸೌಲಭ್ಯಗಳಲ್ಲದ ಇತರ ಸೌಲಭ್ಯಗಳಲ್ಲಿ ಉದಾ. ಸಮುದಾಯ ಕೇಂದ್ರ, ಆರ್ಡಬ್ಲ್ಯೂಎ ಕೇಂದ್ರ / ಕಚೇರಿ, ಪಂಚಾಯತ್ ಕಟ್ಟಡ, ಶಾಲಾ ಕಟ್ಟಡಗಳು, ವೃದ್ಧಾಶ್ರಮಗಳು ಇತ್ಯಾದಿಗಳಲ್ಲಿ ಸಮುದಾಯ ಆಧಾರಿತ ವಿಧಾನವನ್ನು ಅನುಸರಿಸುವ ಮೂಲಕ ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಸಬಹುದು.
- ಲಸಿಕೆ ಪಡೆಯುವ ಅರ್ಹರ ಸಂಖ್ಯೆಯ ಆಧಾರದ ಮೇಲೆ, ಜಿಲ್ಲಾ ಕಾರ್ಯಪಡೆ (ಡಿಟಿಎಫ್) / ನಗರ ಕಾರ್ಯಪಡೆ (ಯುಟಿಎಫ್) ಎನ್ಎಚ್ಸಿವಿಸಿಯ ಸ್ಥಳವನ್ನು ಉದ್ದೇಶಿತ ಜನರ ಸೇವೆಗಳ ವ್ಯಾಪ್ತಿಯನ್ನು ಗರಿಷ್ಠಗೊಳಿಸಲು ನಿರ್ಧರಿಸುತ್ತದೆ, ಇದು ಲಸಿಕೆಯು ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಅಸ್ತಿತ್ವದಲ್ಲಿರುವ ಆರೋಗ್ಯ ಸೇವೆಗಳ.ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
- ಲಸಿಕೆಯ ಉದ್ದೇಶಕ್ಕಾಗಿ ಎನ್ಎಚ್ಸಿವಿಸಿಯನ್ನು ಅಸ್ತಿತ್ವದಲ್ಲಿರುವ ಕೋವಿಡ್ ಲಸಿಕಾ ಕೇಂದ್ರ (ಸಿವಿಸಿ) ಕ್ಕೆ ಲಿಂಕ್ ಮಾಡಲಾಗುತ್ತದೆ; ಲಸಿಕೆ, ಲಾಜಿಸ್ಟಿಕ್ಸ್ ಮತ್ತು ಲಸಿಕೆ ನಿಡಿಕೆಗೆ ಅಗತ್ಯವಾದ ಮಾನವ ಸಂಪನ್ಮೂಲಗಳನ್ನು ಒದಗಿಸುವ ಜವಾಬ್ದಾರಿಯನ್ನು ಸಿವಿಸಿ ನಿರ್ವಹಿಸುತ್ತದೆ.
- ಸಮುದಾಯ ಗುಂಪುಗಳು ಮತ್ತು ಆರ್ಡಬ್ಲ್ಯೂಎಗಳ ಸಹಯೋಗದೊಂದಿಗೆ ಎನ್ಎಚ್ಸಿವಿಸಿಯ ಸ್ಥಳವನ್ನು ಮೊದಲೇ ಗುರುತಿಸಲಾಗುತ್ತದೆ. ಪಂಚಾಯತ್ ಭವನ, ಉಪ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಸಮುದಾಯ ಭವನಗಳು, ಆರ್ಡಬ್ಲ್ಯೂಎ ಆವರಣ, ಮತದಾನ ಕೇಂದ್ರಗಳು, ಶಾಲೆಗಳು ಇತ್ಯಾದಿಗಳು ಅಂತಹ ಸ್ಥಳಗಳಾಗಿರಬಹುದು. ಇವುಗಳು ಗಾಲಿ ಕುರ್ಚಿ ಪ್ರವೇಶಕ್ಕಾಗಿ ರಾಂಪ್ ಮತ್ತು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ 30 ನಿಮಿಷಗಳ ಕಾಯುವಿಕೆಗಾಗಿ ಲಸಿಕೆ ನೀಡುವ ಕೊಠಡಿ ಮತ್ತು ಕಾಯುವ ಪ್ರದೇಶವನ್ನು ಹೊಂದಿರಬೇಕು.
- ಸಿವಿಸಿ ಮಾನದಂಡಗಳಿಗೆ ಅನುಗುಣವಾಗಿ ಗುರುತಿಸಿ, ಪರಿಶೀಲಿಸಿದ ಅಂತಹ ಎಲ್ಲಾ ಸ್ಥಳಗಳನ್ನು ಕೋವಿನ್ ಪೋರ್ಟಲ್ನಲ್ಲಿ ಎನ್ಎಚ್ಸಿವಿಸಿ ಎಂದು ನೋಂದಾಯಿಸಲಾಗುತ್ತದೆ.
- ಎನ್ಎಚ್ಸಿವಿಸಿಯಲ್ಲಿ ಲಸಿಕೆ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪರಿಸ್ಥಿತಿಗಳು ಮತ್ತು ಅಗತ್ಯಕ್ಕೆ ಅನುಗುಣವಾಗಿ ಪ್ರಸ್ತಾವಿತ ಯೋಜನೆಯನ್ನು ಹೊಂದಾಣಿಕೆ ಮಾಡಿಕೊಳ್ಳಲು ಡಿಟಿಎಫ್ / ಯುಟಿಎಫ್ ಜವಾಬ್ದಾರವಾಗಿರುತ್ತವೆ.
- ಎನ್ಎಚ್ಸಿವಿಸಿಯಲ್ಲಿನ ಪ್ರತಿ ತಂಡವು ಐದು ಸದಸ್ಯರನ್ನು ಒಳಗೊಂಡಿರುತ್ತದೆ - ತಂಡದ ನಾಯಕ (ವೈದ್ಯರು), ಲಸಿಕೆ ನೀಡುವವರು, ಕೋವಿನ್ ನೋಂದಣಿ ಮತ್ತು / ಅಥವಾ ಫಲಾನುಭವಿಗಳ ಪರಿಶೀಲನೆಗಾಗಿ ಲಸಿಕಾ ಅಧಿಕಾರಿ 1 ಮತ್ತು ಗುಂಪಿನ ನಿಯಂತ್ರಣ, ಲಸಿಕೆ ಪಡೆದ ನಂತರ ಫಲಾನುಭವಿಗಳ 30 ನಿಮಿಷಗಳ ಕಾಯುವಿಕೆಯನ್ನು ಖಾತರಿಪಡಿಸಲು. ಮತ್ತು ಎಇಎಫ್ಐ ಗೆ ಇತರ ಯಾವುದೇ ನೆರವಿಗಾಗಿ ಲಸಿಕಾ ಅಧಿಕಾರಿ -2 ಮತ್ತು 3.
- ವೃದ್ಧಾಶ್ರಮ ಮುಂತಾದ ಒಂದೇ ಸೂರಿನಡಿ ಫಲಾನುಭವಿಗಳ ಗುಂಪು ಇರುವ ಸನ್ನಿವೇಶದಲ್ಲಿ, ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಕಾರ ಎನ್ಎಚ್ಸಿವಿಸಿಯನ್ನು ಆ ಸ್ಥಳದಲ್ಲಿ ಆಯೋಜಿಸಬಹುದು.
ಮಾರ್ಗಸೂಚಿಗಳು ಈ ಕೆಳಗಿನ ವಿವರಗಳನ್ನು ಸಹ ಒಳಗೊಂಡಿವೆ:
- ಫಲಾನುಭವಿಗಳ ನೋಂದಣಿ ಮತ್ತು ಸಮಯ ನಿಗದಿ - ಮುಂಚಿತವಾಗಿ, ಸ್ಥಳದಲ್ಲಿ ಅಥವಾ ಕೋ-ವಿನ್ ನಲ್ಲಿ ನೋಂದಣಿ ಪ್ರಕ್ರಿಯೆ
- ಫಲಾನುಭವಿಗಳ ಪಟ್ಟಿ
- ಎನ್ಎಚ್ಸಿವಿಸಿ ಸ್ಥಳ ಗುರುತಿಸುವಿಕೆ ಮತ್ತು ಅಸ್ತಿತ್ವದಲ್ಲಿರುವ ಸಿವಿಸಿಯೊಂದಿಗೆ ಸಂಪರ್ಕ
- ಎನ್ಎಚ್ಸಿವಿಸಿಯಲ್ಲಿ ಲಸಿಕೆ ನೀಡಿಕೆಗೆ ಮೈಕ್ರೋ ಪ್ಲ್ಯಾನಿಂಗ್
- ಹಿರಿಯ ನಾಗರಿಕರು ಮತ್ತು ವಿಶೇಷ ಅಗತ್ಯವಿರುವ ವ್ಯಕ್ತಿಗಳಿಗೆ ಅಗತ್ಯವಿರುವ ಕಡೆಗಳಲ್ಲಿ ಪ್ರಯಾಣದ ವ್ಯವಸ್ಥೆ ಮಾಡುವುದು
- ಲಸಿಕೆ ಕೇಂದ್ರವನ್ನು ವೃದ್ಧರಿಗೆ ಮತ್ತು ವಿಶೇಷ ಅಗತ್ಯವಿರುವ ವ್ಯಕ್ತಿಗಳಿಗೆ ಸ್ನೇಹಪರವಾಗಿಸುವುದು.
ಈ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮತ್ತು ರಾಷ್ಟ್ರೀಯ ಕೋವಿಡ್ -19 ಲಸಿಕಾ ಅಭಿಯಾನದ ಅಡಿಯಲ್ಲಿ ಅವುಗಳ ವಿವರವಾದ ಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಡಾಳಿತ ಪ್ರದೇಶಗಳಿಗೆ ಸೂಚಿಸಿದೆ.
***
(Release ID: 1722283)
Visitor Counter : 283