ಸಂಪುಟ

ನಾಗಪುರದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಅಕಾಡಮಿಯಲ್ಲಿ ಹಿರಿಯ ಆಡಳಿತಾಧಿಕಾರಿ ಶ್ರೇಣಿಯ (ಎಸ್.ಎ.ಜಿ.) ನಿರ್ದೇಶಕರ ಒಂದು ಹುದ್ದೆಯ ಸೃಷ್ಟಿಗೆ ಸಂಪುಟದ ಅನುಮೋದನೆ

Posted On: 25 MAY 2021 1:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನಾಗಪುರದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಅಕಾಡಮಿಯಲ್ಲಿ ಹಿರಿಯ ಆಡಳಿತಾಧಿಕಾರಿ ಶ್ರೇಣಿಯ (ಎಸ್..ಜಿ.) ನಿರ್ದೇಶಕರ ಒಂದು (01) ಹುದ್ದೆಯನ್ನು ಸೃಷ್ಟಿಸುವ ಗೃಹ ವ್ಯವಹಾರಗಳ ಸಚಿವಾಯದ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.

ಎನ್.ಡಿ.ಆರ್.ಎಫ್. ಅಕಾಡಮಿಯಲ್ಲಿ ನಿರ್ದೇಶಕರ ಹುದ್ದೆ ಸೃಷ್ಟಿಯೊಂದಿಗೆ, ಸಂಸ್ಥೆಯ ಕಮಾಂಡ್ ಮತ್ತು ನಿಯಂತ್ರಣವನ್ನು ಹಿರಿಯ ಮತ್ತು ಅನುಭವಿ ಅಧಿಕಾರಿಗೆ ವಹಿಸಲಾಗುವುದು, ಅವರು ನಿರೀಕ್ಷಿತ ಉದ್ದೇಶಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ಮುನ್ನಡೆಸಬಹುದು. ಅಕಾಡಮಿ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್, ಸಿ.ಡಿ. ಸ್ವಯಂಸೇವಕರು, ಇತರ ಬಾಧ್ಯಸ್ಥರು ಮತ್ತು ಸಾರ್ಕ್ ರಾಷ್ಟ್ರಗಳ ವಿಪತ್ತು ಸ್ಪಂದನಾ ಸಂಸ್ಥೆಗಳ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಪ್ರತಿ ವರ್ಷ  ಕೌಶಲ ಆಧಾರಿತ ಪ್ರಾಯೋಗಿಕ ತರಬೇತಿಯನ್ನು ನೀಡಲಿದೆ. ಬದಲಾಗುತ್ತಿರುವ ಅಗತ್ಯಗಳು ಮತ್ತು ಬಾಧ್ಯಸ್ಥರ ಅಗತ್ಯಕ್ಕೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು ಇದು ಸಹಕರಿಸುತ್ತದೆ. ಇದು ಎನ್‌.ಡಿ.ಆರ್‌.ಎಫ್., ಎಸ್‌.ಡಿ.ಆರ್‌.ಎಫ್, ಸಿಬ್ಬಂದಿ ಮತ್ತು ಇತರ ಬಾಧ್ಯಸ್ಥರಿಗೆ ವಿಪತ್ತು ಸ್ಬಂದನೆಯ ಬಗ್ಗೆ ನೀಡುವ ತರಬೇತಿಯ ಗುಣಮಟ್ಟವನ್ನು ಅಪಾರವಾಗಿ ಹೆಚ್ಚಿಸುತ್ತದೆ.

ಹಿನ್ನೆಲೆ:

ರಾಷ್ಟ್ರೀಯ ನಾಗರಿಕ ರಕ್ಷಣಾ ಕಾಲೇಜು (ಎನ್.ಸಿ.ಡಿ.ಸಿ.)ಯನ್ನು ವಿಲೀನಗೊಳಿಸುವ ಮೂಲಕ  2018ರಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಅಕಾಡಮಿಯನ್ನು  ನಾಗಪುರದಲ್ಲಿ ಸ್ಥಾಪಿಸಲಾಯಿತು. ಅಕಾಡಮಿಯ ಪ್ರಧಾನ ಕ್ಯಾಂಪಸ್ ನಿರ್ಮಾಣ ಹಂತದಲ್ಲಿದ್ದು, ಅದು ಪೂರ್ಣವಾಗುವವರೆಗೆ ಎನ್.ಸಿ.ಡಿ.ಸಿ. ಹಾಲಿ ಸಮುಚ್ಚಯದಲ್ಲಿ ಕಾರ್ಯ ನಿರ್ವಹಿಸಲಿದೆ. ಅಕಾಡಮಿ ಪ್ರಸ್ತುತ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್.ಡಿ.ಆರ್.ಎಫ್.)/ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್.ಡಿ.ಆರ್.ಎಫ್.)/ನಾಗರಿಕ ರಕ್ಷಣಾ ಸ್ವಯಂಸೇಕರು ಮತ್ತು ಇತರ ಬಾಧ್ಯಸ್ಥರಿಗೆ ತರಬೇತಿ ನೀಡುತ್ತಿದೆ ಮತ್ತು  ಅಂತಾರಾಷ್ಟ್ರೀಯ ಖ್ಯಾತಿಯ ಪ್ರಧಾನ ತರಬೇತಿ ಸಂಸ್ಥೆಯಾಗಿ ಬೆಳೆಯುತ್ತಿದೆ. ಇದು ಸಾರ್ಕ್ ಮತ್ತು ಇತರ ದೇಶಗಳ ವಿಪತ್ತು ಸ್ಪಂದನಾ ಸಿಬ್ಬಂದಿಗೂ ವಿಶೇಷ ತರಬೇತಿಯನ್ನು ನೀಡುತ್ತಿದೆ.

***


(Release ID: 1721519) Visitor Counter : 224