ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

XIIನೇ ತರಗತಿ ಪರೀಕ್ಷೆಗಳು ಮತ್ತು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ಕುರಿತು ಚರ್ಚಿಸಲು ಕೇಂದ್ರ ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಮಾಲೋಚನಾ ಸಭೆ


ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಶ್ರೇಯಸ್ಸು ಹಾಗೂ ಶಿಕ್ಷಣ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯನ್ನು ಕಾಯ್ದುಕೊಳ್ಳಲು ಇಡೀ ದೇಶವು ಒಗ್ಗೂಡಿದೆ - ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್'

Posted On: 23 MAY 2021 5:51PM by PIB Bengaluru

ಕೇಂದ್ರ ಶಿಕ್ಷಣ ಸಚಿವಾಲಯವು  ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳೊಂದಿಗೆ ಇಂದು ರಾಷ್ಟ್ರೀಯ ಸಮಾಲೋಚನೆ ಏರ್ಪಡಿಸಿತ್ತು. ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್‌ ಸಿಂಗ್ ಅವರು ಸಮಾಲೋಚನೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್', ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜವಳಿ ಖಾತೆ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್‌ ಇರಾನಿಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹಾಗೂ ಶಿಕ್ಷಣ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಧೋತ್ರೆಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಶಾಲಾ ಶಿಕ್ಷಣ ಕಾರ್ಯದರ್ಶಿ ಶ್ರೀಮತಿ ಅನಿತಾ ಕಾರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ  ಭಾಗವಹಿಸಿದ್ದರು.  

ಟ್ವೀಟ್‌: ಡಾ. ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌

ಗೌರವಾನ್ವಿತ ರಕ್ಷಣಾ ಸಚಿವರಾದ ಶ್ರೀ ರಾಜನಾಥ್‌ ಸಿಂಗ್‌ @rajnathsingh ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು ಮತ್ತು ವಿಶ್ವದ ಅತಿದೊಡ್ಡ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.

ಸಭೆಯ ಆರಂಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ʻನಿಶಾಂಕ್ʼ ಅವರು ಇಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರತ ಸರಕಾರದ ಸಂಪುಟ ದರ್ಜೆ ಸಚಿವರಿಗೆ ಈ ಸಮಾಲೋಚನೆಗೆ ಕಾರಣವಾದ ಪ್ರಾಥಮಿಕ ಚರ್ಚೆಗಳಲ್ಲಿ ಪಾಲ್ಗೊಂಡು ವ್ಯಾಪಕ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಜೊತೆಗೆ ಪ್ರಸ್ತುತ ಸಮಾಲೋಚನೆಯಲ್ಲಿ ಅವರ ಉಪಸ್ಥಿತಿಗಾಗಿಯೂ ಕೃತಜ್ಞತೆ ಸಲ್ಲಿಸಿದರು. Xನೇ ಮತ್ತು XIIನೇ ತರಗತಿಗೆ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಮತ್ತು ಅಖಿಲ ಭಾರತ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚರ್ಚಿಸಲು ಮೇ 21 2021ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಒಂಬತ್ತು ಕೇಂದ್ರ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತಮ್ಮ ಅಮೂಲ್ಯ ಸಲಹೆ ಹಾಗೂ ಸಮಯವನ್ನು ನೀಡಿದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರಿಗೆ ಸಚಿವ ಪೋಖ್ರಿಯಾಲ್‌ ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ, ಸಹಾಯಕ ಶಿಕ್ಷಣ ಸಚಿವರಿಗೆ ಧನ್ಯವಾದ ಅರ್ಪಿಸಿದರು.  ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಆದ್ಯತೆ ಎನ್ನುವ ಮೂಲಕ ಈ ಬಗ್ಗೆ ಸರಕಾರದ ಬದ್ಧತೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಶ್ರೇಯಸ್ಸು ಮತ್ತು ಶಿಕ್ಷಣ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯನ್ನು ಕಾಯ್ದುಕೊಳ್ಳಲು ಇಡೀ ದೇಶವೇ ಒಗ್ಗೂಡಿದೆ ಎಂದು ಸಚಿವರು ಹೇಳಿದರು. ಕೋವಿಡ್-19 ಮುಂದಿಟ್ಟ ಸವಾಲುಗಳ ಹೊರತಾಗಿಯೂ, ಶಿಕ್ಷಣವನ್ನು ಆನ್‌ಲೈನ್ ಮಾದರಿಗೆ ಯಶಸ್ವಿಯಾಗಿ ವರ್ಗಾಯಿಸಲು ಸರಕಾರ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ನಡೆಸಿತು ಎಂದು ಅವರು ಹೇಳಿದರು.  ಮನೆಗಳನ್ನೇ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.

ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ವಿದ್ಯಾರ್ಥಿಗಳ ವೃತ್ತಿಜೀವನವನ್ನು ವ್ಯಾಖ್ಯಾನಿಸುವಲ್ಲಿ ಹನ್ನೆರಡನೇ ತರಗತಿ ಪರೀಕ್ಷೆ ಮತ್ತು ಅಖಿಲ ಭಾರತ ಪ್ರವೇಶ ಪರೀಕ್ಷೆಗಳ ಮಹತ್ವವ ಎಷ್ಟು ಎಂಬುದರ ಬಗ್ಗೆ ಸಚಿವರು ಚರ್ಚಿಸಿದರು. ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸಿಬಿಎಸ್‌ಇ ಮಂಡಳಿಯ Xನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲು ಮತ್ತು ಆಂತರಿಕ ಮೌಲ್ಯಾಂಕನದ ಮೂಲಕ ಮೌಲ್ಯಮಾಪನ ಮಾಡಲು ನಿರ್ಧರಿಸಿದ್ದೇವೆ. ಆದರೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸಲು ಹನ್ನೆರಡನೇ ತರಗತಿಯ ಪರೀಕ್ಷೆಗಳು ಬಹಳ ಮುಖ್ಯ ಎಂದರು.

ಸಮಾಲೋಚನೆ ಪ್ರಕ್ರಿಯೆಯ ಮೂಲಕ ಪ್ರಸ್ತುತ ಸವಾಲಿನ ಸಂದರ್ಭಗಳಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳನ್ನು ಪರಿಶೀಲಿಸಲು ಕೇಂದ್ರ ಮತ್ತು ರಾಜ್ಯ ಮಂಡಳಿಗಳು ಮತ್ತು ಇತರ ಪರೀಕ್ಷಾ ಸಂಸ್ಥೆಗಳಿಗೆ ಅನುವು ಮಾಡಿಕೊಡಲು ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಸಂಬಂಧಪಟ್ಟ ಸಕಲ ಪಾಲುದಾರರೊಂದಿಗೆ ಚರ್ಚೆ ನಡೆಸುವುದರಿಂದ ವಿದ್ಯಾರ್ಥಿಗಳ ಎಲ್ಲಾ ಹಿತದೃಷ್ಟಿಯಿಂದ ಪರೀಕ್ಷೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಹಾಗೂ ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಖಾತರಿಪಡಿಸಲು ಸಹಾಯಕವಾಗುತ್ತದೆ ಎಂದು ಶ್ರೀ ಪೋಖ್ರಿಯಲ್ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಮತ್ತು ಇತರ ರಾಜ್ಯ ಮಂಡಳಿಗಳು XIIನೇ ತರಗತಿಗೆ ನಡೆಸಬೇಕಾದ ಬೋರ್ಡ್ ಪರೀಕ್ಷೆಗಳು ಮತ್ತು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಅಖಿಲ ಭಾರತ ಪ್ರವೇಶ ಪರೀಕ್ಷೆಗಳು ಎಂಬ ಎರಡು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪರೀಕ್ಷೆಗಳ ವಿಧಾನ, ಪ್ರಕ್ರಿಯೆ, ಅವಧಿ ಮತ್ತು ಸಮಯಕ್ಕೆ ಸಂಬಂಧಿಸಿದ ವಿವಿಧ ಆಯ್ಕೆಗಳನ್ನು ಚರ್ಚಿಸಲಾಯಿತು.  ಸಭೆಯಲ್ಲಿ ವ್ಯಾಪಕ ಒಮ್ಮತ ವ್ಯಕ್ತವಾದರೂ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ವಿಷಯದ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಿ ಮೇ 25, 2021ರ ಒಳಗಾಗಿ ತಮ್ಮ ಪ್ರತಿಕ್ರಿಯೆಯನ್ನು ಲಿಖಿತವಾಗಿ ಕಳುಹಿಸಬಹುದೆಂದು ನಿರ್ಧರಿಸಲಾಯಿತು.

ಸಭೆಯಲ್ಲಿ ಜಾರ್ಖಂಡ್ ಮತ್ತು ಗೋವಾದ ಮುಖ್ಯಮಂತ್ರಿಗಳು, ಉತ್ತರ ಪ್ರದೇಶ ಮತ್ತು ದೆಹಲಿಯ ಉಪಮುಖ್ಯಮಂತ್ರಿಗಳು ಮತ್ತು ರಾಜ್ಯ ಶಿಕ್ಷಣ ಸಚಿವರು, ರಾಜ್ಯ ಶಿಕ್ಷಣ ಕಾರ್ಯದರ್ಶಿಗಳು, ಪರೀಕ್ಷಾ ಮಂಡಳಿಗಳ ಅಧ್ಯಕ್ಷರು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು, ಕೇಂದ್ರದ ಉನ್ನತ ಶಿಕ್ಷಣ ಇಲಾಖೆ  ಮತ್ತು ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಸಿಬಿಎಸ್ಇ ಅಧ್ಯಕ್ಷರು, ಯುಜಿಸಿ ಮತ್ತು ಎಐಸಿಟಿಇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮಹಾ ನಿರ್ದೇಶಕರು, ಹಾಗೂ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು. 

ಅಂತಿಮವಾಗಿ, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪರೀಕ್ಷೆಗಳನ್ನು ನಡೆಸುವ ಪ್ರಸ್ತಾಪಗಳ ಬಗ್ಗೆ ಸಕಾರಾತ್ಮಕ ಸಲಹೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಈ ಮಂಗಳವಾರ ಅಂದರೆ ಮೇ 25 ರ ಒಳಗಾಗಿ ಇತರ ಸಲಹೆಗಳನ್ನು ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸುವಂತೆ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋರಿದರು. ಸಚಿವಾಲಯವು ಆ ಎಲ್ಲ ಸಲಹೆಗಳನ್ನು ಪರಿಗಣಿಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಎಲ್ಲಾ ಪರೀಕ್ಷೆಗಳನ್ನು ಸುರಕ್ಷಿತ ಮತ್ತು ಸುಭದ್ರ ವಾತಾವರಣದಲ್ಲಿ ನಡೆಸುವುದು ಸರಕಾರದ ಆದ್ಯತೆಯಾಗಿದೆ ಎಂದು ಅವರು ಪುನರುಚ್ಛರಿಸಿದರು.

ಇದಕ್ಕೂ ಮುನ್ನ, ಏಪ್ರಿಲ್‌ 14ರಂದು XIIನೇ ತರಗತಿ ಪರೀಕ್ಷೆಯನ್ನು ಮುಂದೂಡಿ ಸಿಬಿಎಸ್‌ಇ ಪ್ರಕಟಣೆ ಹೊರಡಿಸಿತ್ತು. ಅಲ್ಲದೆ, XIIನೇ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ ಜೂನ್ 1ರಂದು ಮತ್ತಷ್ಟು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ, ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನಾ ಸಭೆಯ ನಂತರ, ಭಾರತ ಸರಕಾರವು ಈ ವಾರ ವಿವಿಧ ರಾಜ್ಯ ಸರಕಾರಗಳಿಂದ ಪಡೆದ ಸಲಹೆಗಳನ್ನು ಪರಿಶೀಲಿಸಿ 2021 ರ ಜೂನ್ 1 ರೊಳಗೆ ಅಥವಾ ಅದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಿದೆ.

***



(Release ID: 1721224) Visitor Counter : 211