ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಲು ಆಂಫೊಟೆರಿಸಿನ್-ಬಿ ಶಿಲೀಂಧ್ರ ನಿಗ್ರಹ ಔಷಧ ಲಭ್ಯತೆ ಮತ್ತು ಪೂರೈಕೆ ಹೆಚ್ಚಳಕ್ಕೆ ಭಾರತ ಸರ್ಕಾರದಿಂದ ಸಕ್ರಿಯ ಸರ್ವ ಪ್ರಯತ್ನ


ದೇಶದೊಳಗೆ ಔಷಧ ಉತ್ಪಾದನೆಗೆ ಐದು ಹೆಚ್ಚುವರಿ ಉತ್ಪಾದಕರಿಗೆ ಲೈಸನ್ಸ್ ಮಂಜೂರು

ಹಾಲಿ ಇರುವ ಐದು ಉತ್ಪಾದಕರಿಂದ ಉತ್ಪಾದನೆ ಗಣನೀಯ ಹೆಚ್ಚಳ

Posted On: 21 MAY 2021 2:02PM by PIB Bengaluru

ಭಾರತ ಸರ್ಕಾರ ‘ಒಟ್ಟು ಸರ್ಕಾರ’ ಮನೋಭಾವದೊಂದಿಗೆ ಕೋವಿಡ್-19 ನಿರ್ವಹಣೆಗೆ ಔಷಧಗಳು ಮತ್ತು ಸೋಂಕು ಪತ್ತೆ ಸಾಧನಗಳ ಖರೀದಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಬೆಂಬಲ ನೀಡುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಕ್ರಿಯ ಬೆಂಬಲ ನೀಡುವ ಮೂಲಕ ಕಳೆದ ಏಪ್ರಿಲ್ 20ರಿಂದೀಚೆಗೆ ಔಷಧಗಳು, ವೈದ್ಯಕೀಯ ಸಾಮಗ್ರಿಗಳು, ಪಿಪಿಇ ಕಿಟ್, ಮಾಸ್ಕ್ ಇತ್ಯಾದಿಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದನ್ನು ಖಾತ್ರಿಪಡಿಸಿದೆ.

ಕೋವಿಡ್ ನಿಂದ ಬಾಧಿತವಾಗಿರುವ ರೋಗಿಗಳಲ್ಲಿ ಅಡ್ಡಪರಿಣಾಮದಿಂದಾಗಿ ಉಂಟಾಗಿರುವ ಬ್ಲಾಕ್ ಫಂಗಸ್ ಎಂದು ಜನಪ್ರಿಯವಾಗಿರುವ ಕರೆಯಲ್ಪಡುತ್ತಿರುವ ಮ್ಯೂಕರ್ ಮೈಕೋಸಿಸ್ ನಿಂದ ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚು ರೋಗಿಗಳು ಬಳಲುತ್ತಿರುವುದು ವರದಿಯಾಗಿದೆ. ಬ್ಲಾಕ್ ಫಂಗಸ್ ರೋಗದ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ ಫಂಗಸ್ ನಿಗ್ರಹ ಔಷಧ ಕೊರತೆ ಇರುವುದಾಗಿ ವರದಿಯಾಗಿದೆ.

ಕೇಂದ್ರ ಆರೋಗ್ಯ ಇಲಾಖೆ, ಫಾರ್ಮಸುಟಿಕಲ್ಸ್ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ದೇಶೀಯವಾಗಿ  ಆಂಫೊಟೆರಿಸಿನ್-ಬಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಮಹತ್ವದ ಸಕ್ರಿಯ ಪ್ರಯತ್ನಗಳನ್ನು ಕೈಗೊಂಡಿವೆ. ಕೇಂದ್ರ ಸರ್ಕಾರ ದೇಶಿಯ ಲಭ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಜೊತೆಗೆ ಪೂರಕವಾಗಿ ಜಾಗತಿಕ ಉತ್ಪಾದಕರಿಂದ ಪೂರೈಕೆ ಹೆಚ್ಚಳಕ್ಕೂ  ಕ್ರಮಗಳನ್ನು ಕೈಗೊಳ್ಳುತ್ತಿದೆ.

 

ದೇಶದಲ್ಲಿ ಸದ್ಯ ಐವರು ಆಂಫೊಟೆರಿಸಿನ್-ಬಿ ಉತ್ಪಾದಕರು ಮತ್ತು ಓರ್ವ ಆಮದುದಾರರಿದ್ದಾರೆ, ಅವರೆಂದರೆ, 

1.     ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್

2.     ಬಿಡಿಆರ್ ಫಾರ್ಮಸುಟಿಕಲ್ಸ್ ಲಿಮಿಟೆಡ್

3.     ಸನ್ ಫಾರ್ಮಾ ಲಿಮಿಟೆಡ್

4.     ಸಿಪ್ಲಾ ಲಿಮಿಟೆಡ್

5.     ಲೈಫ್ ಕೇರ್ ಇನ್ನೋವೇಷನ್ಸ್

6.     ಮೈ ಲ್ಯಾಬ್ಸ್ (ಆಮದುದಾರರು)

 

ಏಪ್ರಿಲ್ 2021ರಲ್ಲಿ ಈ ಕಂಪನಿಗಳ ಉತ್ಪಾದನೆ ಅತ್ಯಂತ ಸೀಮಿತವಾಗಿತ್ತು. ಆದರೆ ಭಾರತ ಸರ್ಕಾರ ದೇಶೀಯ ಉತ್ಪಾದಕರ ಕೈಹಿಡಿದ ಪರಿಣಾಮ, ಈ ದೇಶೀಯ ಉತ್ಪಾದಕರು ಮೇ 2021ರಲ್ಲಿ ಒಟ್ಟಾರೆ 1,63,752 ವಯಲ್ಸ್ ಆಂಫೊಟೆರಿಸಿನ್-ಬಿ ಉತ್ಪಾದಿಸಿವೆ. ಈ ಪ್ರಮಾಣ 2021ರ ಜೂನ್ ತಿಂಗಳಲ್ಲಿ ಮತ್ತಷ್ಟು ಹೆಚ್ಚಳ ಮಾಡಿ 2,55,114 ವಯಲ್ಸ್ ಉತ್ಪಾದಿಸಲಾಗುವುದು.

ಅಲ್ಲದೆ, ಆಮದು ಮೂಲಕ ಫಂಗಲ್ ನಿಗ್ರಹ ಔಷಧ ದೇಶೀಯ ಲಭ್ಯತೆಯನ್ನು ಹೆಚ್ಚಿಸಲೂ ಕ್ರಮ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇ 2021ರಲ್ಲಿ 3,63,000 ವಯಲ್ಸ್  ಆಂಫೊಟೆರಿಸಿನ್-ಬಿ ಔಷಧವನ್ನು ಆಮದು ಮಾಡಿಕೊಳ್ಳಲಾಗಿದೆ, ಇದರಿಂದಾಗಿ ಒಟ್ಟಾರೆ ದೇಶದಲ್ಲಿ ಲಭ್ಯತೆ (ದೇಶೀಯ ಉತ್ಪಾದನೆ ಸೇರಿ) ಪ್ರಮಾಣ 5,26,752ಕ್ಕೆ ಏರಿಕೆಯಾಗಿದೆ.

ಜೂನ್ 2021ರಿಂದ 3,15,000 ವಯಲ್ಸ್ ಅನ್ನು ಆಮದು ಮಾಡಿಕೊಳ್ಳಲಾಗುವುದು. ಹಾಗಾಗಿ ದೇಶೀಯ ಪೂರೈಕೆಯಿಂದಾಗಿ ದೇಶಾದ್ಯಂತ ಜೂನ್ 2021ರಲ್ಲಿ ಆಂಫೊಟೆರಿಸಿನ್-ಬಿ ಲಭ್ಯತೆ ಪ್ರಮಾಣ 5, 70,114 ವಯಲ್ಸ್ ಗೆ ಹೆಚ್ಚಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಸಕ್ರಿಯ ಪ್ರಯತ್ನಗಳ ಪರಿಣಾಮದಿಂದಾಗಿ, ಶಿಲೀಂಧ್ರ ನಿಗ್ರಹ ಔಷಧವನ್ನು ದೇಶದೊಳಗೆ ಉತ್ಪಾದಿಸಲು ಹೊಸದಾಗಿ ಐವರು ಉತ್ಪಾದಕರಿಗೆ ಪರವಾನಗಿ ನೀಡಲಾಗಿದೆ.

ಅವುಗಳೆಂದರೆ

1.     ನ್ಯಾಟ್ಕೋ ಫಾರ್ಮಸುಟಿಕಲ್ಸ್, ಹೈದರಾಬಾದ್

2.    ಅಲೆಂಬಿಕ್ ಫಾರ್ಮಸುಟಿಕಲ್ಸ್, ವಡೋದರ

3.    ಗುಫಿಕ್ ಬೈಯೋ ಸೈನ್ಸ್ ಲಿಮಿಟೆಡ್, ಗುಜರಾತ್

4.   ಎಮ್ ಕ್ಯೂರ್ ಫಾರ್ಮಸುಟಿಕಲ್ಸ್, ಪುಣೆ

5.    ಲೈಕಾ, ಗುಜರಾತ್

ಒಟ್ಟಾರೆ ಈ ಕಂಪನಿಗಳು ಜುಲೈ 2021ರಿಂದ ಪ್ರತಿ ತಿಂಗಳು 1,11,000 ವೈಯಲ್ಸ್ ಆಂಫೊಟೆರಿಸಿನ್-ಬಿ ಉತ್ಪಾದನೆ ಆರಂಭಿಸಲಿವೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಫಾರ್ಮಸುಟಿಕಲ್ಸ್ ಇಲಾಖೆ ಜೊತೆಗೂಡಿ ಈ ಐದು ಕಂಪನಿಗಳು ಆದಷ್ಟು ಬೇಗ ತಮ್ಮ ಉತ್ಪಾದನೆಯನ್ನು ಆರಂಭಿಸುವಂತೆ ಮತ್ತು ಆ ಮೂಲಕ ಜೂನ್ 2021ರಲ್ಲಿಯೇ ಹೆಚ್ಚುವರಿ ಪೊರೈಕೆಗೆ ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

 ಇದೆಲ್ಲಕ್ಕೂ ಮಿಗಿಲಾಗಿ, ಕೇಂದ್ರ ಆರೋಗ್ಯ ಸಚಿವಾಲಯ, ಎಂಇಎ ಸಹಯೋಗದಲ್ಲಿ ಹೇಗೆ ಜಾಗತಿಕ ಮೂಲಗಳಿಂದ ಆಂಫೊಟೆರಿಸಿನ್-ಬಿ ಔಷಧ ಆಮದು ಮಾಡಿಕೊಳ್ಳಬಹುದು ಎಂಬ ಕುರಿತು ಸಕ್ರಿಯವಾಗಿ ಕಾರ್ಯೋನ್ಮುಖವಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಬ್ಲಾಕ್ ಫಂಗಸ್  ಗೆ ಚಿಕಿತ್ಸೆ ನೀಡಲು ಇತರೆ ಶಿಲೀಂಧ್ರ ನಿಗ್ರಹ ಔಷಧಗಳ ಖರೀದಿಗೂ ಸಹ ಪ್ರಯತ್ನ ನಡೆಸಿದೆ.

****



(Release ID: 1720654) Visitor Counter : 240