ಗೃಹ ವ್ಯವಹಾರಗಳ ಸಚಿವಾಲಯ

ತೌಕ್ತೆ ಚಂಡಮಾರುತ ಕುರಿತು ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿಎಂಸಿ) ಸಭೆ


ಜೀವ ಮತ್ತು ಆಸ್ತಿ-ಪಾಸ್ತಿ ಹಾನಿ ಕನಿಷ್ಠಗೊಳಿಸುವುದು ಗುರಿಯಾಗಬೇಕು- ಶ್ರೀ ರಾಜೀವ್ ಗೌಬಾ

ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳು ಅಡೆತಡೆಯಿಲ್ಲದೆ ಕಾರ್ಯನಿರ್ವಹಣೆಗೆ ಎಲ್ಲ ಅಗತ್ಯ ಕ್ರಮ

Posted On: 16 MAY 2021 2:36PM by PIB Bengaluru

ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ(ಎನ್ ಸಿಎಂಸಿ) ಸಭೆ ನಡೆಸಿತು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಹಾಗೂ ದಾದ್ರ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯು ಆಡಳಿತಗಾರರ ಸಲಹೆಗಾರರು, ಹಲವು ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು ಕೈಗೊಂಡಿರುವ ಸಿದ್ಧತೆಗಳ ಕುರಿತು ಪರಾಮರ್ಶೆ ನಡೆಸಿದ ಶ್ರೀ ರಾಜೀವ್ ಗೌಬಾ ಅವರು, ಚಂಡಮಾರುತದಿಂದ ಬಾಧಿತವಾಗುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಲವಾಗಿ ಪ್ರತಿಪಾದಿಸಿ, ಆ ಮೂಲಕ ಕನಿಷ್ಠ ಪ್ರಮಾಣದ ಜೀವ ಹಾಗೂ ಆಸ್ತಿ-ಪಾಸ್ತಿ ಹಾನಿಯನ್ನು ಖಾತ್ರಿಪಡಿಸಬೇಕೆಂದರು. ವಿದ್ಯುತ್, ದೂರಸಂಪರ್ಕ ಮತ್ತು ಇತರೆ ಪ್ರಮುಖ ಸೇವೆಗಳ ಮರುಸ್ಥಾಪನೆಗೆ ಸಿದ್ಧತಾ ಕ್ರಮಗಳನ್ನು ಖಾತ್ರಿಪಡಿಸಬೇಕು. ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಕೇಂದ್ರಗಳ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯುಂಟಾಗದಂತೆ ಮತ್ತು ಅವುಗಳಿಗೆ ನಿರಂತರ ಆಮ್ಲಜನಕ ಪೂರೈಕೆ ಖಾತ್ರಿಪಡಿಸಬೇಕು ಎಂದು ಸಂಪುಟ ಕಾರ್ಯದರ್ಶಿ  ಒತ್ತಿ ಹೇಳಿದರು. ಆ ನಿಟ್ಟಿನಲ್ಲಿ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೌಕರ್ಯಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಮತ್ತು ದೇಶಾದ್ಯಂತ ಕೋವಿಡ್ ಸೌಕರ್ಯಗಳಿಗೆ ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆಯನ್ನು ಖಾತ್ರಿಪಡಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಗಳ ಆಡಳಿತಗಳೊಂದಿಗೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಮತ್ತು ಅವುಗಳಿಗೆ ಎಲ್ಲ ಅಗತ್ಯ ನೆರವು ನೀಡಬೇಕು ಎಂದು ಸಂಪುಟ ಕಾರ್ಯದರ್ಶಿ ಸಂಬಂಧಿಸಿದ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.  

ಸಂಬಂಧಿಸಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಚಂಡಮಾರುತವನ್ನು ಎದುರಿಸಲು ಕೈಗೊಂಡಿರುವ ಸಿದ್ಧತಾ ಕ್ರಮಗಳನ್ನು ಸಮಿತಿಗೆ ವಿವರಿಸಿದರು. ಅಗತ್ಯ ಆಹಾರ ಧಾನ್ಯಗಳು, ಕುಡಿಯುವ ನೀರು ಹಾಗೂ ಇತರೆ ಅಗತ್ಯ ಪೂರೈಕೆಗಳನ್ನು ಸಾಕಷ್ಟು ದಾಸ್ತಾನು ವ್ಯವಸ್ಥೆ ಮಾಡಲಾಗಿದೆ ಹಾಗೂ ವಿದ್ಯುತ್, ದೂರಸಂಪರ್ಕ ಮತ್ತಿತರ ಅಗತ್ಯ ಅತ್ಯವಶ್ಯಕ ಸೇವೆಗಳನ್ನು ಕಾಯ್ದುಕೊಳ್ಳಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್ ), ಚಂಡಮಾರುತದಿಂದ ಬಾಧಿತವಾಗುವ ರಾಜ್ಯಗಳಿಗೆ ಈಗಾಗಲೇ 79 ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಲಭ್ಯವಾಗುವಂತೆ ಮಾಡಲಾಗಿದೆ, ಜೊತೆಗೆ 22 ಹೆಚ್ಚುವರಿ ತಂಡಗಳನ್ನು ಸನ್ನದವಾಗಿಡಲಾಗಿದೆ ಎಂದು ಹೇಳಿತು.  ಸೇನೆ, ನೌಕಾಪಡೆ ಮತ್ತು ಕರಾವಳಿ ಪಡೆಯ ರಕ್ಷಣೆ ಮತ್ತು ಪರಿಹಾರ ತಂಡಗಳ ಜೊತೆಗೆ ವಿಮಾನಗಳು ಹಾಗೂ ಹಡಗುಗಳನ್ನೂ ಸಹ ನಿಯೋಜಿಸಲಾಗಿದೆ.

****



(Release ID: 1719124) Visitor Counter : 207