ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೋವಿಡ್ ಲಸಿಕೆ ನೀಡಿಕೆಯ ಪ್ರಗತಿ ಪರಾಮರ್ಶೆ ನಡೆಸಿದ ಕೇಂದ್ರ ಸರ್ಕಾರ


ರಾಜ್ಯಗಳು 2ನೇ ಡೋಸ್ ಗೆ ಆದ್ಯತೆ ನೀಡಬೇಕು; ಭಾರತ ಸರ್ಕಾರದ ಮೂಲಕ ಹಂಚಿಕೆಯಾದ ಲಸಿಕೆಯ ಕನಿಷ್ಠ ಶೇ.70ರಷ್ಟನ್ನು 2ನೇ ಡೋಸ್ ಗೆ ಬಳಕೆ ಮಾಡಬೇಕು

ರಾಜ್ಯಗಳು ಕನಿಷ್ಠ ಲಸಿಕೆ ವ್ಯರ್ಥ (ವೇಸ್ಟೇಜ್) ತಗ್ಗಿಸಲು ಒತ್ತು ನೀಡಬೇಕು; ಲಸಿಕೆ ಉತ್ಪಾದಕರೊಂದಿಗೆ ನಿರಂತರ ಮಾತುಕತೆ ; ಜನರಿಗೆ 2ನೇ ಡೋಸ್ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು

Posted On: 11 MAY 2021 2:58PM by PIB Bengaluru

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಮತ್ತು ಕೋವಿಡ್-19 ನಿಯಂತ್ರಣ ಕುರಿತ ದತ್ತಾಂಶ ನಿರ್ವಹಣೆ ಮತ್ತು ತಂತ್ರಜ್ಞಾನ ಕುರಿತ ಉನ್ನತ ಸಮಿತಿಯ ಅಧ್ಯಕ್ಷರು ಡಾ. ಆರ್.ಎಸ್. ಶರ್ಮಾ ಮತ್ತು ಕೋವಿಡ್-19 ಲಸಿಕೆ ಆಡಳಿತದ ಕುರಿತಾದ ರಾಷ್ಟ್ರೀಯ ತಜ್ಞರ ಸಮಿತಿಯ ಸದಸ್ಯರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕೋವಿಡ್ ಲಸಿಕೆ ನೀಡಿಕೆಯ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿದರು. ಜಾಗತಿಕವಾಗಿ ಕೈಗೊಂಡಿರುವ ಅತಿ ದೊಡ್ಡ ಅಭಿಯಾನವಾಗಿರುವ ದೇಶವ್ಯಾಪಿ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನವನ್ನು 2021 ಜನವರಿ 16ರಂದು ಆರಂಭಿಸಲಾಯಿತು. ಇದನ್ನು ವ್ಯಾಪಕವಾಗಿ ವಿಸ್ತರಿಸಲಾಗಿದ್ದು, 2021 ಮೇ 1 ರಿಂದೀಚೆಗೆ 18 ವರ್ಷ ಮೇಲ್ಪಟ್ಟ ವ್ಯಕ್ತಿಗಳನ್ನೂ ಸಹ ಸೇರಿಸಲಾಗಿದೆ. ಜೊತೆಗೆ ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ಕೋವಿಡ್-19 ಲಸಿಕೆ ಕಾರ್ಯತಂತ್ರದೊಂದಿಗೆ ಅನುಷ್ಠಾನ ಗೊಳಿಸಲಾಗುತ್ತಿದೆ

ರಾಜ್ಯಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಯನ್ನೊಳಗೊಂಡ ಲಸಿಕಾ ಅಭಿಯಾನದ ನಾನಾ ಆಯಾಮಗಳ ಪ್ರಮುಖಾಂಶಗಳ ಕುರಿತಂತೆ ವಿಸ್ತೃತ ಪ್ರಾತ್ಯಕ್ಷಿಕೆಯ ನಂತರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು:

ಯಾವ ಫಲಾನುಭವಿಗಳು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೋ ಅಂತಹವರಿಗೆ ಆದ್ಯತೆಯ ಮೇರೆಗೆ ಎರಡನೇ ಡೋಸ್ ಲಸಿಕೆಯನ್ನು ಖಾತ್ರಿಪಡಿಸಲು ರಾಜ್ಯಗಳು ಕ್ರಮ ಕೈಗೊಳ್ಳಬೇಕು. ಅಧಿಕ ಸಂಖ್ಯೆಯ ಫಲಾನುಭವಿಗಳು 2ನೇ ಡೋಸ್ ಲಸಿಕೆಗಾಗಿ ಕಾಯುತ್ತಿರುವುದರಿಂದ ಅವರಿಗೆ ಲಸಿಕೆ ಒದಗಿಸುವ ತುರ್ತು ಅಗತ್ಯಕ್ಕೆ ಒತ್ತು ನೀಡಬೇಕು.     

ನಿಟ್ಟಿನಲ್ಲಿ ರಾಜ್ಯಗಳು, ಭಾರತ ಸರ್ಕಾರದ ಮೂಲಕ(ಉಚಿತವಾಗಿ ನೀಡುವ) ಪೂರೈಕೆಯಾಗುವ ಕನಿಷ್ಠ ಶೇ.70ರಷ್ಟು ಲಸಿಕೆಗಳನ್ನು 2ನೇ ಡೋಸ್ ಲಸಿಕೆಗಾಗಿ ಮೀಸಲಿಡಬೇಕು ಮತ್ತು ಉಳಿದ ಶೇ.30ರಷ್ಟನ್ನು ಮೊದಲ ಡೋಸ್ ಗೆ ಬಳಸಿಕೊಳ್ಳಬೇಕು. ಆದಾಗ್ಯೂ ಇದು ಸೂಚನೆಯಷ್ಟೇ, ರಾಜ್ಯಗಳು ಇದನ್ನು ಶೇ.100ಕ್ಕೆ ಹೆಚ್ಚಿಸಿಕೊಳ್ಳುವ ಸ್ವಾತಂತ್ರ್ಯವೂ ಇದೆ. ರಾಜ್ಯಗಳಿಗೆ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ಕೋವಿನ್ ನಲ್ಲಿನ ರಾಜ್ಯವಾರು ಅಂಕಿ-ಅಂಶಗಳನ್ನು ಹಂಚಿಕೊಳ್ಳಲಾಗಿದೆ.

ಎರಡು ಡೋಸ್ ಲಸಿಕೆ ಪಡೆಯುವ ಮೂಲಕ ಸಂಪೂರ್ಣ ಲಸಿಕೆ ನೀಡಿಕೆ ಪ್ರಾಮುಖ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಗಳು ಮುಂದಾಗಬೇಕು ಎಂದು ಸೂಚಿಸಲಾಯಿತು.

ಆದ್ಯತಾ ವರ್ಗಗಳಿಗೆ(ಅಂದರೆ 45 ವರ್ಷ ಮೇಲ್ಪಟ್ಟವರು, ಎಫ್ಎಲ್ ಡಬ್ಲ್ಯೂ ಮತ್ತು ಎಚ್ ಸಿಡಬ್ಲ್ಯೂ) ಮತ್ತು ಇತರರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿರುವ ರಾಜ್ಯಗಳ ಅಂಕಿ-ಅಂಶಗಳನ್ನು ಹಂಚಿಕೊಳ್ಳಲಾಯಿತು. ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಆದ್ಯತಾ ವರ್ಗಕ್ಕೆ ಲಸಿಕೆ ನೀಡಿಕೆ ಆದ್ಯತೆ ಖಾತ್ರಿಪಡಿಸಬೇಕು ಎಂದು ಸೂಚಿಸಿದರು.

ಭಾರತ ಸರ್ಕಾರದ ಮೂಲಕ ಲಭ್ಯವಾಗುವ ಕೋವಿಡ್ ಲಸಿಕೆ ಬಳಕೆ ಕುರಿತು ರಾಜ್ಯಗಳು ಪಾರದರ್ಶಕ ರೀತಿಯಲ್ಲಿ ಮೊದಲೇ ಮಾಹಿತಿಯನ್ನು ಹಂಚಿಕೊಳ್ಳಬೇಕು. ಮುಂದಿನ ಪಾಕ್ಷಿಕದಲ್ಲಿ ಕೈಗೊಳ್ಳಲಿರುವ ಲಸಿಕೆ ನೀಡಿಕೆ ಕುರಿತು ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಮುಂಚಿತವಾಗಿಯೇ ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿ ಬಳಕೆ ಸಾಧ್ಯವಾಗಲಿದೆ. ಮುಂದಿನ ಹಂಚಿಕೆಗೆ ಅಂದರೆ ಮೇ 15ರಿಂದ 31 ಅವಧಿಗೆ ಬೇಕಾಗುವ ಲಸಿಕೆಯ ಕುರಿತು ಮೇ 14ರೊಳಗೆ ಮಾಹಿತಿ ನೀಡಬೇಕು. ರಾಜ್ಯಗಳು ಮುಂದಿನ 15 ದಿನಗಳಿಗೆ ಹಂಚಿಕೆಯಾಗಿರುವ ಲಸಿಕೆ ಡೋಸ್  ಮಾಹಿತಿಯನ್ನು ಆಧರಿಸಿ ಲಸಿಕೆ ನೀಡಿಕೆ ಯೋಜನೆಗಳನ್ನು ಮಾಡಿಕೊಳ್ಳತಕ್ಕದ್ದು.

ಕನಿಷ್ಠ ಪ್ರಮಾಣದ ಲಸಿಕೆ ವ್ಯರ್ಥ (ವೇಸ್ಟ್ ) ಆಗುವುದನ್ನು ತಡೆಯಲು ರಾಜ್ಯಗಳು ಮುಂದಾಗಬೇಕು. ಒಟ್ಟಾರೆ ಎಲ್ಲಾ ಹಂತಗಳಲ್ಲಿ ಲಸಿಕೆ ವ್ಯರ್ಥವಾಗುವುದನ್ನು ತಗ್ಗಿಸಿದ್ದರೂ ಕೂಡ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಇನ್ನೂ ಹಲವು ರಾಜ್ಯಗಳು ಲಸಿಕೆ ವ್ಯರ್ಥವಾಗುವುದನ್ನು ಗಣನೀಯವಾಗಿ ತಗ್ಗಿಸಬೇಕು ಎಂದು ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನು ನ್ಯಾಯಯುತವಾಗಿ ಬಳಕೆ ಮಾಡುವುದನ್ನು ಖಾತ್ರಿಪಡಿಸಲು ಲಸಿಕಾಕಾರರಿಗೆ ಪುನರ್ ತರಬೇತಿ ಮತ್ತು ಪುನರ್ ಮನನ ಮಾಡಬೇಕು ಎಂದು ಸಲಹೆ ನೀಡಲಾಯಿತು. ವ್ಯರ್ಥವಾಗುವ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾದರೆ ಅದನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಂದಿನ ಲಸಿಕೆ ಹಂಚಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು

ನಿಟ್ಟಿನಲ್ಲಿ ಕೆಲವು ರಾಜ್ಯಗಳಲ್ಲಿ ನೆಗೆಟಿವ್ ವೇಸ್ಟೇಜ್ ಆಗಿರುವ ವರದಿಗಳು ಬಂದಿದ್ದು, ಅದಕ್ಕೆ ಆರೋಗ್ಯ ಕಾರ್ಯಕರ್ತರಿಗೆ ಪ್ರತಿ ವಯಲ್ ನಿಂದ ಕನಿಷ್ಠ ಡೋಸ್ ತೆಗೆಯುವ ಕುರಿತು  ಉತ್ತಮ ತರಬೇತಿ ನೀಡಿರುವುದು ಕಾರಣವಾಗಿದೆ

ಉದಾರೀಕೃತ ಮೂರನೇ ಹಂತದ ಲಸಿಕೆನೀಡಿಕೆಯಲ್ಲಿ ಭಾರತ ಸರ್ಕಾರದ ಮಾರ್ಗ(ಒಜಿಒಐ) ಹೊರತುಪಡಿಸಿ ಇತರೆ ಮೂಲಕವೂ ಲಸಿಕೆ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಹಿನ್ನೆಲೆಯಲ್ಲಿ ಖಾಸಗಿ ಲಸಿಕಾ ಉತ್ಪಾದಕರಿಗೆ ರಾಜ್ಯಗಳಿಂದ ಪಾವತಿ ಬಾಕಿ ಇದೆ. ಹಾಗಾಗಿ ಪ್ರತಿ ದಿನ ಲಸಿಕಾ ಉತ್ಪಾದಕರೊಂದಿಗೆ ಸಮನ್ವಯ ನಡೆಸಲು ಮತ್ತು ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಲಸಿಕೆ ಪೂರೈಕೆ ಮಾಡಲು ರಾಜ್ಯ ಮಟ್ಟದಲ್ಲಿ ಇಬ್ಬರು ಅಥವಾ ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ನಿರ್ದಿಷ್ಟ ತಂಡವನ್ನು ರಚಿಸಬೇಕು ಎಂದು ಸೂಚಿಸಲಾಯಿತು. ತಂಡ ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ, ಅವರಿಗೆ ಲಸಿಕೆ ಖರೀದಿಗೆ ನೆರವು ನೀಡುವ ಜೊತೆಗೆ ರಾಜ್ಯದಲ್ಲಿ ಒಟ್ಟಾರೆ ಲಸಿಕೆ ನೀಡಿಕೆ ಪ್ರಕ್ರಿಯೆ ವೇಗ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.

ಕೋವಿನ್ ವೇದಿಕೆಯನ್ನೂ ಸಹ ಪರಿಷ್ಕರಿಸಲಾಗಿದ್ದು, ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಅದನ್ನು ರೂಪಿಸಲಾಗಿದೆ. ರಾಜ್ಯಗಳು ನಿಗದಿತ ವರ್ಗಗಳಿಗೆ ಲಸಿಕೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯಾರಿಗೆ ಎರಡನೇ ಡೋಸ್ ಲಸಿಕೆ ಬಾಕಿ ಇದೆ ಎಂಬ ವರದಿಯನ್ನು ಡೌನ್ ಲೋಡ್ ಮಾಡಿಕೊಂಡು ಉತ್ತಮ ಯೋಜನೆಯನ್ನು ರೂಪಿಸಬಹುದಾಗಿದೆ. ಜಿಲ್ಲಾ ಇಮ್ಯುನೈಜೇಷನ್ ಅಧಿಕಾರಿ(ಡಿಐಒ) ಮತ್ತು ಕೋವಿಡ್ ಲಸಿಕಾ ಕೇಂದ್ರ(ಸಿವಿಸಿ) ವ್ಯವಸ್ಥಾಪಕರು ಬೇಡಿಕೆಗೆ ತಕ್ಕಂತೆ( ಮೊದಲು 100ಕ್ಕೆ ಮಿತಿಗೊಳಿಸಲಾಗಿತ್ತು) ಲಸಿಕಾ ಸೆಷನ್ಸ್ ಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಮುಂದಿನ ಸೆಷನ್ ಗಳಲ್ಲಿ ನಿರ್ದಿಷ್ಟ ವರ್ಗಗಳನ್ನು ಕುರಿತು ಅಂದಾಜಿಸಬಹುದು. ಫಲಾನುಭವಿಗಳಲ್ಲಿ ವೃದ್ಧರ ಆರೈಕೆ ಕೇಂದ್ರಗಳಲ್ಲಿರುವ ಹಿರಿಯ ನಾಗರಿಕರು ಮತ್ತಿತರರಿಗೆ ಫೋಟೋಸಹಿತ ಐಡಿ ಕಾರ್ಡ್ ಗಳು ಇಲ್ಲದಿದ್ದರೂ ಅಂತಹವರನ್ನೂ ಸಹ ನೋಂದಾಯಿಸಿಕೊಳ್ಳಬೇಕು. ಡಿಐಒಗಳು ಮತ್ತು ಸಿವಿಸಿ ವ್ಯವಸ್ಥಾಪಕರು ಲಸಿಕೆ ಬಳಕೆ ವರದಿ(ವಿಯುಆರ್)ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು, ಕೋವಿನ್ ಸದ್ಯದಲ್ಲೇ ಮತ್ತಷ್ಟು ಸರಳೀಕರಣಗೊಳ್ಳಲಿದೆ. 2ನೇ ಡೋಸ್ ಸ್ಲಾಟ್ ಅವಧಿಯನ್ನು ರಿವರ್ಸ್ ಗೊಳಿಸುವ ಅಂಶವೂ ಬರಲಿದೆ. ಸಾಧ್ಯವಾದಷ್ಟು ಮಟ್ಟಿಗೆ ಕೋವಿನ್   ಬಳಕೆ ಕಸ್ಟಮೈಸ್ ಮಾಡಲಾಗುತ್ತಿದೆ ಮತ್ತು ನಾವು ಎಪಿಐಗಳನ್ನೂ ಕೂಡ ತೆರೆಯುತ್ತೇವೆ ಎಂದರು. ಜನರು ಎರಡು ಡೋಸ್ ಲಸಿಕೆಗೂ ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಬೇಕು, ಅದು ಅವರ ಪ್ರಮಾಣ ಪತ್ರಗಳಲ್ಲಿ ಪ್ರತಿಫಲನಗೊಳ್ಳಲಿದೆ ಎಂಬ ಕುರಿತು ಐಇಸಿ ಜಾಗೃತಿ ಅಭಿಯಾನ ಅಗತ್ಯವಿದೆ ಎಂದರು. ಡಾ. ಶರ್ಮಾ ಅವರು ದತ್ತಾಂಶದ ಸತ್ಯಾಸತ್ಯತೆ ಮತ್ತು ಖಚಿತತೆಯ ನಿರ್ಣಾಯಕ ಮಹತ್ವವನ್ನು ಪುನರುಚ್ಚರಿಸಿದರುಯಾರಿಗಾದರೂ, ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಾದರೂ ಲಸಿಕೆ ನೀಡುವ ಕೋವಿಡ್ ಮಂತ್ರವನ್ನು ಎತ್ತಿಹಿಡಿಯಲು ನಿರ್ಬಂಧಿತ ಮಾನದಂಡಗಳ ಬಳಕೆಯನ್ನು ತಗ್ಗಿಸಬೇಕು ಎಂದು ಅವರು ರಾಜ್ಯಗಳಿಗೆ ಕರೆ ನೀಡಿದರು

***



(Release ID: 1718053) Visitor Counter : 231