ರೈಲ್ವೇ ಸಚಿವಾಲಯ

ಉತ್ತರ ಪ್ರದೇಶ, ಮಹಾರಾಷ್ಟ್ರ, ದಿಲ್ಲಿ ಮತ್ತು ಮಧ್ಯಪ್ರದೇಶಗಳಿಗೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಒಟ್ಟು 510 ಎಂ.ಟಿ. ಆಮ್ಲಜನಕ ಪೂರೈಕೆ


ಹರ್ಯಾಣಾಕ್ಕೆ ಅದರ ಮೊದಲ ಆಮ್ಲಜನಕ ಎಕ್ಸ ಪ್ರೆಸ್ ರವಾನೆ, ಫರಿದಾಬಾದಿನಿಂದ ರೂರ್ಕೆಲಾಕ್ಕೆ ಹೋಗಲಿವೆ 5 ಖಾಲಿ ಕಂಟೈನರ್ ಗಳು

ಮಧ್ಯಪ್ರದೇಶಕ್ಕೆ ಮೊದಲ ತಂಡದ ಸರಕನ್ನು ಪೂರೈಸಿದ ಆಮ್ಲಜನಕ ಎಕ್ಸ್ ಪ್ರೆಸ್

प्रविष्टि तिथि: 28 APR 2021 4:00PM by PIB Bengaluru

ಭಾರತೀಯ ರೈಲ್ವೇಯು ದೇಶದ ವಿವಿಧ ಭಾಗಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆಯ ತನ್ನ ಪ್ರಯಾಣವನ್ನು ಮುಂದುವರೆಸಿದೆ.ಇದುವರೆಗೆ 510 ಮೆಟ್ರಿಕ್ ಟನ್ನಿಗೂ ಅಧಿಕ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್.ಎಂ.ಒ.) ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ದಿಲ್ಲಿಗಳಿಗೆ ಪೂರೈಕೆ ಮಾಡಲಾಗಿದೆ.

ಹರ್ಯಾಣಾ ಸರಕಾರವು ಆಮ್ಲಜನಕ ಎಕ್ಸ್ ಪ್ರೆಸ್ ಗಾಗಿ ರೈಲ್ವೇಗೆ ಕೋರಿಕೆ ಮಂಡಿಸಿದೆ. ಪ್ರಸ್ತುತ ಫರಿದಾಬಾದಿನಲ್ಲಿ ಟ್ಯಾಂಕರುಗಳನ್ನು ತುಂಬಿಸಲಾಗುತ್ತಿದೆ. ಅವುಗಳನ್ನು ಪೂರಣಕ್ಕಾಗಿ (ಆಮ್ಲಜನಕ ತುಂಬಿಸುವುದಕ್ಕಾಗಿ) ರೂರ್ಕೆಲಾಕ್ಕೆ ಕಳುಹಿಸಲಾಗುತ್ತದೆ. ಈಗಿರುವ ಯೋಜನೆಯಂತೆ ತಲಾ 5 ಟ್ಯಾಂಕರುಗಳ ಸಾಮರ್ಥ್ಯದ 2 ಆಮ್ಲಜನಕ ರೈಲುಗಳನ್ನು ಹರ್ಯಾಣಾಕ್ಕಾಗಿ ವಿಶೇಷವಾಗಿ ಓಡಿಸಲು ನಿರ್ಧರಿಸಲಾಗಿದೆ.

ಮಧ್ಯ ಪ್ರದೇಶವು ಇಂದು ಬೆಳಿಗ್ಗೆ 64 ಮೆಟ್ರಿಕ್ ಟನ್ನಿಗೂ ಅಧಿಕ ಪ್ರಮಾಣದ ದ್ರವ ರೂಪದ ವೈದ್ಯಕೀಯ ಆಮ್ಲಜನಕವನ್ನು ಹೊತ್ತ ತನ್ನ ಮೊದಲ ಆಮ್ಲಜನಕ ಎಕ್ಸ್ ಪ್ರೆಸ್ ನ್ನು ಬರಮಾಡಿಕೊಂಡಿದೆ. ಈ ಟ್ಯಾಂಕರುಗಳನ್ನು ಮಧ್ಯಪ್ರದೇಶದ ವಿವಿಧ ಸ್ಥಳಗಳಲ್ಲಿ ಇಳಿಸಲಾಗಿದೆ. ಜಬಲ್ಪುರ (1 ಟ್ಯಾಂಕರ್), ಭೋಪಾಲ (2 ಟ್ಯಾಂಕರ್) ಮತ್ತು ಸಾಗರ (3 ಟ್ಯಾಂಕರ್) ನಗರಗಳಲ್ಲಿ ಇವುಗಳನ್ನು ಇಳಿಸಲಾಗಿದೆ.

ಲಕ್ನೋಗೆ ತೆರಳುತ್ತಿರುವ 4ನೇ ಆಮ್ಲಜನಕ ಎಕ್ಸ್ ಪ್ರೆಸ್ ಇಂದು ಲಕ್ನೋ ತಲುಪಲಿದೆ. ಅದು 3 ಟ್ಯಾಂಕರ್ ಎಲ್.ಎಂ.ಒ.ಗಳನ್ನು ಹೊತ್ತುಕೊಂಡಿದೆ. ಇನ್ನೊಂದು (ಆರನೇ) ಖಾಲಿ ರೇಕ್ ಲಕ್ನೋದಿಂದ ಬೊಕಾರೋಗೆ ಸಾಗುತ್ತಿದೆ. ಅದು ಉತ್ತರ ಪ್ರದೇಶಕ್ಕೆ ಆಮ್ಲಜನಕ ಪೂರೈಕೆ ಮಾಡುವ ಮತ್ತೊಂದು ತಂಡದ ಆಮ್ಲಜನಕ ಟ್ಯಾಂಕರುಗಳನ್ನು ತರಲಿದೆ. ಉತ್ತರ ಪ್ರದೇಶಕ್ಕೆ ನಿರಂತರ ಆಮ್ಲಜನಕ ಎಕ್ಸ್ ಪ್ರೆಸ್ ನಿಂದಾಗಿ ಉತ್ತರ ಪ್ರದೇಶದ ನಿವಾಸಿಗಳಿಗೆ ತಡೆರಹಿತ ಆಮ್ಲಜನಕ ಮರುಪೂರಣವನ್ನು ಖಾತ್ರಿಪಡಿಸಲಾಗುತ್ತಿದೆ.

ಇದುವರೆಗೆ, ಭಾರತೀಯ ರೈಲ್ವೇಯು ಉತ್ತರ ಪ್ರದೇಶಕ್ಕೆ 202 ಮೆಟ್ರಿಕ್ ಟನ್, ಮಹಾರಾಷ್ಟ್ರಕ್ಕೆ 174 ಮೆಟ್ರಿಕ್ ಟನ್, ದಿಲ್ಲಿಗೆ 70 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 64 ಮೆಟ್ರಿಕ್ ಟನ್ ಗಳನ್ನು ಪೂರೈಕೆ ಮಾಡಿದೆ.

***


(रिलीज़ आईडी: 1714686) आगंतुक पटल : 306
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Punjabi , Tamil , Telugu