ಪ್ರಧಾನ ಮಂತ್ರಿಯವರ ಕಛೇರಿ

ದೇಶದ ಪ್ರಮುಖ ಆಮ್ಲಜನಕ ತಯಾರಕರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಮೋದಿ

Posted On: 23 APR 2021 5:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಪ್ರಮುಖ ಆಮ್ಲಜನಕ ತಯಾರಕರೊಂದಿಗೆ ಸಭೆ ನಡೆಸಿದರು. ಈ ಬಾರಿ ಸವಾಲುಗಳನ್ನು ಎದುರಿಸುವುದು ಮಾತ್ರವಲ್ಲದೆ, ಅತ್ಯಂತ ಕಡಿಮೆ ಸಮಯದಲ್ಲಿ ಪರಿಹಾರಗಳನ್ನು ಒದಗಿಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸರಕಾರ ಮತ್ತು ಆಮ್ಲಜನಕ ಉತ್ಪಾದಕರ ನಡುವೆ ಉತ್ತಮ ಸಮನ್ವಯವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಳೆದ ಕೆಲವು ವಾರಗಳಲ್ಲಿ ಆಮ್ಲಜನಕ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ಶ್ಲಾಘಿಸಿದರು. ದ್ರವ ರೂಪದ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅವರು ಸಮ್ಮತಿ ವ್ಯಕ್ತಪಡಿಸಿದರು. ದೇಶದಲ್ಲಿ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ಕೈಗಾರಿಕಾ ಆಮ್ಲಜನಕವನ್ನು ವೈದ್ಯಕೀಯ ಬಳಕೆಯತ್ತ ತಿರುಗಿಸಿದ ಉದ್ಯಮಕ್ಕೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು.

ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು. ಆಮ್ಲಜನಕ ಸಿಲಿಂಡರ್‌ಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಆಮ್ಲಜನಕದ ಸಾಗಣೆಗಾಗಿ ಸಾಗಣೆ ಸೌಲಭ್ಯಗಳನ್ನು ನವೀಕರಿಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಗಮನ ಸೆಳೆದರು. ಆಮ್ಲಜನಕ ಪೂರೈಕೆಗಾಗಿ ಇತರ ಅನಿಲಗಳನ್ನು ಸಾಗಿಸಲು ಉದ್ದೇಶಿಸಿರುವ ಟ್ಯಾಂಕರುಗಳನ್ನು ಬಳಸಿಕೊಳ್ಳುವಂತೆ ಅವರು ಉದ್ಯಮವನ್ನು ಒತ್ತಾಯಿಸಿದರು.

ಆಮ್ಲಜನಕಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಮತ್ತು ವಾಯುಪಡೆಯ ಪರಿಣಾಮಕಾರಿ ಬಳಕೆಗೆ ಸರಕಾರ ಕಾರ್ಯೋನ್ಮುಖವಾಗಿದೆ. ಇದರಿಂದ ಟ್ಯಾಂಕರುಗಳು ಆದಷ್ಟು ಬೇಗ ಉತ್ಪಾದನಾ ಕೇಂದ್ರವನ್ನು ತಲುಪಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಹೇಳಿದರು.

ಸರಕಾರ, ರಾಜ್ಯಗಳು, ಉದ್ಯಮ ಮತ್ತು ಸಾಗಾಣಿಕೆದಾರರು ಮತ್ತು ಎಲ್ಲಾ ಆಸ್ಪತ್ರೆಗಳು ಒಗ್ಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸಮನ್ವಯ ಮತ್ತು ಸಹಕಾರ ಉತ್ತಮವಾದಷ್ಟೂ ಈ ಸವಾಲನ್ನು ಎದುರಿಸಲು ಸುಲಭವಾಗುತ್ತದೆ ಎಂದರು.

ಆಮ್ಲಜನಕ ತಯಾರಕರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರಿಗೆ ಸರಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು ಮತ್ತು ಬಿಕ್ಕಟ್ಟನ್ನು ಎದುರಿಸುವಲ್ಲಿ ದೇಶ ಶೀಘ್ರದಲ್ಲೇ ಯಶಸ್ವಿಯಾಗಲಿದೆ ಎಂದು ಆಶಿಸಿದರು.

ʻಆರ್‌ಐಎಲ್‌ʼನ ಸಿಎಂಡಿ ಶ್ರೀ ಮುಖೇಶ್ ಅಂಬಾನಿ,  ʻಎಸ್ಎಐಎಲ್ʼನ ಅಧ್ಯಕ್ಷರಾದ ಶ್ರೀಮತಿ ಸೋಮ ಮೊಂಡಲ್, ಜೆಎಸ್ ಡಬ್ಲ್ಯೂನ ಶ್ರೀ ಸಜ್ಜನ್ ಜಿಂದಾಲ್, ಟಾಟಾ ಸ್ಟೀಲ್‌ನ ಶ್ರೀ ನರೇಂದ್ರನ್, ʻಜೆಎಸ್‌ಪಿಎಲ್‌ʼನ ಶ್ರೀ ನವೀನ್ ಜಿಂದಾಲ್, ʻಎಎಂಎನ್‌ಎಸ್‌ʼನ ಶ್ರೀ ದಿಲೀಪ್ ಉಮ್ಮನ್, ʻಎಲ್ಐಎನ್‌ಡಿʼಯ ಶ್ರೀ ಎಂ. ಬ್ಯಾನರ್ಜೀ, ʻಐನಾಕ್ಸ್‌ʼನ ಶ್ರೀ ಸಿದ್ಧಾರ್ಥ್ ಜೈನ್, ಏರ್ ವಾಟರ್ ಜಮ್ ಶೆಡ್‌ಪುರದ ಎಂಡಿ ಶ್ರೀ ನೋರಿಯೋ ಶಿಬುಯಾ, ರಾಷ್ಟ್ರೀಯ ಆಕ್ಸಿಜನ್ ಲಿಮಿಟೆಡ್‌ನ ಶ್ರೀ ರಾಜೇಶ್ ಕುಮಾರ್ ಸರಾಫ್ ಮತ್ತು ಅಖಿಲ ಭಾರತ ಕೈಗಾರಿಕಾ ಅನಿಲ ತಯಾರಕರ ಸಂಘದ ಅಧ್ಯಕ್ಷರಾದ ಶ್ರೀ ಸಾಕೇತ್ ಟಿಕು ಅವರು ಸಭೆಯಲ್ಲಿ ಹಾಜರಿದ್ದರು.

*****



(Release ID: 1713710) Visitor Counter : 207