ಪ್ರಧಾನ ಮಂತ್ರಿಯವರ ಕಛೇರಿ

ಡಾ. ಹರೇಕೃಷ್ಣ ಮಹ್ತಾಬ್‌ ಅವರ ಒಡಿಶಾ ಇತಿಹಾಸ್‌ ಪುಸ್ತಕದ ಹಿಂದಿ ಆವೃತ್ತಿ ಲೋಕಾರ್ಪಣೆ ಮಾಡಿದ ಪ್ರಧಾನಿ


ʻಉತ್ಕಲ್ ಕೇಶರಿʼ ಅವರ ಅಪಾರ ಕೊಡುಗೆಯನ್ನು ಸ್ಮರಿಸಿದರು

ಸ್ವಾತಂತ್ರ್ಯ ಹೋರಾಟಕ್ಕೆ ಒಡಿಶಾ ನೀಡಿದ ಕೊಡುಗೆಗೆ ಗೌರವ ವಂದನೆ ಸಲ್ಲಿಸಿದರು

ಇತಿಹಾಸವು ಜನರೊಂದಿಗೆ ವಿಕಸನಗೊಂಡಿತು, ವಿದೇಶಿ ಚಿಂತನೆ ಪ್ರಕ್ರಿಯೆಯು ರಾಜವಂಶಗಳ ಮತ್ತು ಅರಮನೆಗಳ ಕಥೆಗಳನ್ನು ಇತಿಹಾಸವಾಗಿ ಪರಿವರ್ತಿಸಿತು: ಪ್ರಧಾನಿ

ಒಡಿಶಾದ ಇತಿಹಾಸ ಇಡೀ ಭಾರತದ ಐತಿಹಾಸಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ: ಪ್ರಧಾನಿ

Posted On: 09 APR 2021 2:02PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 'ಉತ್ಕಲ್ ಕೇಶರಿ' ಡಾ. ಹರೇಕೃಷ್ಣ ಮಹ್ತಾಬ್‌ ಅವರು ರಚಿಸಿರುವ 'ಒಡಿಶಾ ಇತಿಹಾಸ್' ಪುಸ್ತಕದ ಹಿಂದಿ ಅನುವಾದವನ್ನು ಲೋಕಾರ್ಪಣೆ ಮಾಡಿದರು. ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಇಲ್ಲಿಯವರೆಗೆ ಲಭ್ಯವಿದ್ದ ಪುಸ್ತಕವನ್ನು ಶ್ರೀ ಶಂಕರ್‌ಲಾಲ್‌ ಪುರೋಹಿತ್‌ ಅವರು ಹಿಂದಿಗೆ ಅನುವಾದಿಸಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕಟಕ್ ಸಂಸದರಾದ ಶ್ರೀ ಭರ್ತೃಹರಿ ಮಹ್ತಾಬ್‌ ಅವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಸುಮಾರು ಒಂದೂವರೆ ವರ್ಷದ ಹಿಂದೆ ದೇಶವು 'ಉತ್ಕಲ್ ಕೇಶರಿ' ಡಾ. ಹರೇಕೃಷ್ಣ ಮಹ್ತಾಬ್‌ ಅವರ 120ನೇ ಜನ್ಮ ದಿನವನ್ನು ಆಚರಿಸಿತು ಎಂದು ಸ್ಮರಿಸಿದರು. ಹರೇಕೃಷ್ಣ ಅವರ ಪ್ರಸಿದ್ಧ 'ಒಡಿಶಾ ಇತಿಹಾಸ್' ಹಿಂದಿ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ ಶ್ರೀ ಮೋದಿ ಅವರು, ಒಡಿಶಾದ ವೈವಿಧ್ಯಮಯ ಮತ್ತು ಸಮಗ್ರ ಇತಿಹಾಸವು ದೇಶದ ಜನರನ್ನು ತಲುಪುವುದು ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ಮಹ್ತಾಬ್‌ ಅವರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ, ಸಮಾಜದಲ್ಲಿ ಸುಧಾರಣೆಗಾಗಿ ಅವರು ನಡೆಸಿದ ಹೋರಾಟವನ್ನು ಶ್ಲಾಘಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಡಾ. ಮಹ್ತಾಬ್‌ ಅವರು ತಮ್ಮನ್ನು ಮುಖ್ಯ ಮಂತ್ರಿಯನ್ನಾಗಿಸಿದ್ದ ಪಕ್ಷವನ್ನೇ ವಿರೋಧಿಸಿ ಜೈಲಿಗೆ ಹೋಗಿದ್ದರು ಎಂದು ಮೋದಿ ಸ್ಮರಿಸಿದರು. "ಸ್ವಾತಂತ್ರ್ಯಕ್ಕಾಗಿ ಮತ್ತು ದೇಶದ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ - ಎರಡೂ ಕಾರಣಗಳಿಗೆ ಅವರು ಜೈಲಿಗೆ ಹೋದರು" ಎಂದು ಪ್ರಧಾನಿ ಹೇಳಿದರು.

ಭಾರತೀಯ ಇತಿಹಾಸ ಕಾಂಗ್ರೆಸ್‌ನಲ್ಲಿ ಡಾ. ಮಹ್ತಾಬ್‌ ಅವರು ವಹಿಸಿದ ಪ್ರಮುಖ ಪಾತ್ರ ಹಾಗೂ  ಒಡಿಶಾದ ಇತಿಹಾಸವನ್ನು ರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯುವಲ್ಲಿ ಅವರ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಅವರ ಕೊಡುಗೆಯಿಂದಾಗಿಯೇ ಒಡಿಶಾದಲ್ಲಿ ವಸ್ತುಸಂಗ್ರಹಾಲಯ, ಪತ್ರಾಗಾರಗಳು ಮತ್ತು ಪುರಾತತ್ವ ವಿಭಾಗಗಳು ಹುಟ್ಟಿಕೊಂಡವು ಎಂದರು.

ಇತಿಹಾಸದ ಬಗ್ಗೆ  ವ್ಯಾಪಕ ಅಧ್ಯಯನದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಇತಿಹಾಸವು ಕೇವಲ ಗತಕಾಲದ ಪಾಠವಾಗಿರದೆ, ಭವಿಷ್ಯಕ್ಕೆ ಕನ್ನಡಿಯೂ ಆಗಿರಬೇಕು ಎಂದರು. ಭಾರತದ ʻಸ್ವಾತಂತ್ರ್ಯದ ಅಮೃತ ಮಹೋತ್ಸವʼ ಆಚರಣೆ ವೇಳೆ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹುರಿದುಂಬಿಸುವಾಗ ದೇಶವು ನಿಟ್ಟಿನಲ್ಲಿ ಗಮನ ಹರಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಅನೇಕ ಪ್ರಮುಖ ಘಟನಾವಳಿಗಳು ಮತ್ತು ಕಥೆಗಳನ್ನು ಸರಿಯಾದ ರೂಪದಲ್ಲಿ ದೇಶದ ಜನರ ಮುಂದೆ ಇಡಲು ಸಾಧ್ಯವಾಗಿಲ್ಲ ಎಂದು ಮೋದಿ ಅವರು ವಿಷಾದಿಸಿದರು. ಭಾರತೀಯ ಸಂಪ್ರದಾಯದಲ್ಲಿ ಇತಿಹಾಸವು ಕೇವಲ ರಾಜರು ಮತ್ತು ಅರಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಸಾವಿರಾರು ವರ್ಷಗಳಿಂದ ಜನರೊಂದಿಗೆ ವಿಕಸನಗೊಂಡಿತು ಎಂದರು. ವಿದೇಶಿ ಚಿಂತನಾ ಪ್ರಕ್ರಿಯೆಯು ರಾಜವಂಶಗಳು ಮತ್ತು ಅರಮನೆಗಳ ಕಥೆಗಳನ್ನು ಇತಿಹಾಸವಾಗಿ ಪರಿವರ್ತಿಸಿತು ಎಂದು ಪ್ರಧಾನಿ ಹೇಳಿದರು. ಸಾಮಾನ್ಯ ಜನರ ಕುರಿತಾಗಿಯೇ ಹೆಚ್ಚಿನ ವಿವರಣೆಯನ್ನು ಹೊಂದಿರುವ ರಾಮಾಯಣ ಮತ್ತು ಮಹಾಭಾರತವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು ನಮ್ಮ ಜೀವನದಲ್ಲಿ, ಸಾಮಾನ್ಯ ವ್ಯಕ್ತಿಯೇ ನಮ್ಮ ಗಮನದ ಕೇಂದ್ರಬಿಂದು ಎಂದು ಹೇಳಿದರು.

ಪೈಕಾ ದಂಗೆ, ಗಂಜಾಂ ದಂಗೆಸಂಬಲ್‌ಪುರ ಹೋರಾಟದಂತಹ ಚಳವಳಿಗಳೊಂದಿಗೆ ಒಡಿಶಾದ ನೆಲವು ಬ್ರಿಟಿಷ್ ಆಡಳಿತದ ವಿರುದ್ಧ ಬಂಡಾಯದ ಕಿಡಿಗೆ ಸದಾ ಹೊಸ ಶಕ್ತಿಯನ್ನು ಒದಗಿಸಿತು ಎಂದು ಪ್ರಧಾನಿ ಒತ್ತಿ ಹೇಳಿದರುಸಂಬಲ್‌ಪುರ ಆಂದೋಲನದ ಸುರೇಂದ್ರ ಸಾಯಿ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದರು. ಪಂಡಿತ್ ಗೋಪಬಂಧು, ಆಚಾರ್ಯ ಹರಿಹರ್‌ ಮತ್ತು ಡಾ. ಹರಿಕೃಷ್ಣ ಮಹ್ತಬ್‌ ಅವರಂತಹ ನಾಯಕರ ಅಪಾರ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದರು. ರಮಾದೇವಿ, ಮಾಲ್ತಿ ದೇವಿ, ಕೋಕಿಲಾ ದೇವಿ ಮತ್ತು ರಾಣಿ ಭಾಗ್ಯವತಿ ಅವರ ಕೊಡುಗೆಗೆ ಶ್ರೀ ಮೋದಿ ಗೌರವ ಸಲ್ಲಿಸಿದರು. ತಮ್ಮ ದೇಶಭಕ್ತಿ ಮತ್ತು ಶೌರ್ಯದಿಂದ ಬ್ರಿಟಿಷರನ್ನು ಸದಾ ಕಾಡುತ್ತಿದ್ದ ಬುಡಕಟ್ಟು ಸಮುದಾಯದ ಕೊಡುಗೆಯತ್ತಲೂ ಪ್ರಧಾನಿ ಗಮನ ಸೆಳೆದರು. ಕ್ವಿಟ್ ಇಂಡಿಯಾ ಚಳುವಳಿಯ ಮಹಾನ್ ಬುಡಕಟ್ಟು ನಾಯಕ ಲಕ್ಷ್ಮಣ್ ನಾಯಕ್ ಜೀ ಅವರನ್ನು ಪ್ರಧಾನಿ ಸ್ಮರಿಸಿದರು.

ಒಡಿಶಾದ ಇತಿಹಾಸವು ಇಡೀ ಭಾರತದ ಐತಿಹಾಸಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇತಿಹಾಸದಲ್ಲಿ ಪ್ರತಿಫಲಿಸುವ ಬಲವು ಪ್ರಸ್ತುತ ಮತ್ತು ಭವಿಷ್ಯದ ಸಾಧ್ಯತೆಗಳೊಂದಿಗೆ ನಂಟು ಹೊಂದಿದೆ ಮತ್ತು ನಮಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಪ್ರಧಾನಿಯವರು, ವ್ಯಾಪಾರ ಮತ್ತು ಕೈಗಾರಿಕೆಗೆ ಮೂಲಸೌಕರ್ಯವೇ ಮೊದಲ  ಅವಶ್ಯಕತೆ ಎಂದರು. ಒಡಿಶಾದಲ್ಲಿ ಸಾವಿರಾರು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳು, ಕರಾವಳಿ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಇದು ರಾಜ್ಯದ ವಿವಿಧ ಭಾಗಗಳ ನಡುವೆ ಸಂಪರ್ಕಕ್ಕೆ ಕಾರಣವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ, ಕಳೆದ 6-7 ವರ್ಷಗಳಲ್ಲಿ ರಾಜ್ಯಗಳಲ್ಲಿ ನೂರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗಗಳನ್ನು ಸಹ ನಿರ್ಮಿಸಲಾಗಿದೆ. ಮೂಲಸೌಕರ್ಯದ ನಂತರ, ಉದ್ಯಮದ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ. ನಿಟ್ಟಿನಲ್ಲಿ ಕೈಗಾರಿಕೆಗಳು ಮತ್ತು ಕಂಪನಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ರಾಜ್ಯದಲ್ಲಿ ತೈಲ ವಲಯ ಮತ್ತು ಉಕ್ಕು ವಲಯದಲ್ಲಿನ ಅಪಾರ ಸಾಧ್ಯತೆಗಳನ್ನು ಅರಿತುಕೊಳ್ಳಲು ಸಾವಿರಾರು ಕೋಟಿ ಹೂಡಿಕೆ ಮಾಡಲಾಗಿದೆ. ಅದೇ ರೀತಿ, ನೀಲಿ ಕ್ರಾಂತಿಯ ಮೂಲಕ ಒಡಿಶಾದ ಮೀನುಗಾರರ ಜೀವನವನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕೌಶಲ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳ ಬಗ್ಗೆಯೂ ಪ್ರಧಾನಿಯವರು ಪ್ರಸ್ತಾಪಿಸಿದರು. ರಾಜ್ಯದ ಯುವಜನರ ಅನುಕೂಲಕ್ಕಾಗಿ ಐಐಟಿ ಭುವನೇಶ್ವರ, ʻಐಐಎಸ್ಇಆರ್ʼ ಬೆಹರಾಂಪುರ್‌, ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್ ಸ್ಕಿಲ್ಸ್, ಐಐಟಿ ಸಂಬಲ್‌ಪುರ್‌ ನಂತಹ ಸಂಸ್ಥೆಗಳಿಗೆ ಅಡಿಪಾಯ ಹಾಕಲಾಗಿದೆ ಎಂದರು.

ಒಡಿಶಾದ ಇತಿಹಾಸ ಹಾಗೂ ಅದರ ಭವ್ಯತೆಯನ್ನು ವಿಶ್ವದ ಎಲ್ಲ ಭಾಗಗಳಿಗೆ ಪಸರಿಸುವಂತೆ ಪ್ರಧಾನಿ ಕರೆ ನೀಡಿದರು. ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವನ್ನು ನೈಜ ಜನಾಂದೋಲನವನ್ನಾಗಿ ಮಾಡಲು ಅವರು ಕರೆ ನೀಡಿದರು. ಜೊತೆಗೆ ಅಭಿಯಾನವು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಂಡಂಥದ್ದೇ ಶಕ್ತಿಯ ಹರಿವಿಗೆ ಕಾರಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1710668) Visitor Counter : 206