ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಜನ್ಮ ವಾರ್ಷಿಕೋತ್ಸವ(ಪ್ರಕಾಶ್ ಪುರಬ್) ಆಚರಣೆ ಕುರಿತ ಉನ್ನತ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿದ  ಪ್ರಧಾನಮಂತ್ರಿ

Posted On: 08 APR 2021 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಜನ್ಮ ವಾರ್ಷಿಕೋತ್ಸವ(ಪ್ರಕಾಶ್ ಪುರಬ್) ಆಚರಣೆ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿತ್ತು.

ಸಭೆಯಲ್ಲಿ ಪಾಲ್ಗೊಂಡಿದ್ದವರು ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಅನ್ನು ಅದ್ಧೂರಿಯಾಗಿ ಆಚರಿಸುವ ಕನಸು ಹೊಂದಿರುವುದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳಿದರು. ಶ್ರೀ ಗುರು ತೇಜ್ ಬಹಾದೂರ್ ಜಿ ಅವರು ಧಾರ್ಮಿಕ ಸ್ವಾತಂತ್ರ್ಯಕ್ಕೆ ನೀಡಿದ ತ್ಯಾಗ ಮತ್ತು ಹಲವು ಕೊಡುಗೆಗಳನ್ನು ಸ್ಮರಿಸಲಾಯಿತು. ಸಭೆಯಲ್ಲಿ ಭಾಗವಹಿಸಿದವರು ಸ್ಮಾರಕ ಉತ್ಸವ ಆಚರಣೆಗೆ ಹಲವು ಸಲಹೆಗಳನ್ನು ಮತ್ತು ಮಾಹಿತಿಗಳನ್ನು ನೀಡಿದರು ಹಾಗೂ ಗುರು ಜಿ ಅವರ ಜೀವನದ ಹಲವು ಆಯಾಮಗಳನ್ನು ತಿಳಿಸಿಕೊಡುವ ಪ್ರಾಮುಖ್ಯವನ್ನು ಉಲ್ಲೇಖಿಸಿದರು. ಕೇಂದ್ರ ಗೃಹ ಸಚಿವರು ಶ್ರೀ ಗುರು ತೇಜ್ ಬಹಾದೂರ್ ಜಿ ಅವರ ಸಂದೇಶ ಎಲ್ಲರಿಗೂ ತಲುಪುವಂತೆ ಮಾಡುವುದನ್ನು ಖಾತ್ರಿಪಡಿಸಲು ಸಾಮೂಹಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಸಂಸ್ಕೃತಿ ಕಾರ್ಯದರ್ಶಿ ಉತ್ಸವ ಆಚರಣೆಗೆ ಈವರೆಗೆ ಬಂದಿರುವ ಸಲಹೆಗಳ ಸ್ಥೂಲ ನೋಟವನ್ನು ಪ್ರಸ್ತುತಪಡಿಸಿದರು

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಸಭೆಯಲ್ಲಿ ಪಾಲ್ಗೊಂಡಿರುವವರು ನೀಡಿರುವ ಸಲಹೆಗಳಿಗಾಗಿ ಧನ್ಯವಾದಗಳನ್ನು ಹೇಳಿದರು. ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆ ಒಂದು ಆಧ್ಯಾತ್ಮಿಕ  ಹೆಮ್ಮೆ ಅಷ್ಟೇ ಅಲ್ಲ, ಅದು ರಾಷ್ಟ್ರೀಯ ಕರ್ತವ್ಯವೂ ಸಹ ಆಗಿದೆ ಎಂದರು. ಅವರು ಶ್ರೀ ಗುರು ತೇಜ್ ಬಹಾದೂರ್ ಜಿ ಅವರ ಜೀವನದಿಂದ ಕಲಿತ ಹಲವು ಪಾಠಗಳು ಮತ್ತು ಬೋಧನೆಗಳನ್ನು ಹಂಚಿಕೊಂಡರು ಹಾಗೂ ತಾವು ಸದಾ ಗುರೂಜಿಯಿಂದ  ಸ್ಫೂರ್ತಿ ಪಡೆಯುತ್ತಿರುವುದಾಗಿ ತಿಳಿಸಿದರು. ನಮ್ಮ ಯುವ ಪೀಳಿಗೆ ಪಾಠಗಳನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದ ಅವರು, ಡಿಜಿಟಲ್ ಮಾಧ್ಯಮದ ಮೂಲಕ ಜಗತ್ತಿನಾದ್ಯಂತ ಇರುವ ಯುವ ಪೀಳಿಗೆಗೆ ಸಂದೇಶಗಳನ್ನು  ಸುಲಭವಾಗಿ ತಲುಪಿಸಬಹುದಾಗಿದೆ ಎಂದು ಹೇಳಿದರು.

ಸಿಖ್ ಗುರು ಪರಂಪರೆಯೇ ಒಂದು ಸಂಪೂರ್ಣ ಜೀವನ ಸಿದ್ಧಾಂತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಗುರು ನಾನಕ್ ದೇವ್ ಜಿ ಅವರ 550ನೇ ಪ್ರಕಾಶ್ ಪುರಬ್, ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಮತ್ತು ಶ್ರೀ ಗುರು ಗೋವಿಂದ್ ಸಿಂಗ್ ಅವರ 350ನೇ ಪ್ರಕಾಶ್ ಪುರಬ್ ಆಚರಣೆಗೆ ತಮ್ಮ ಸರ್ಕಾರಕ್ಕೆ ಅವಕಾಶ ಲಭ್ಯವಾಗಿರುವುದು ಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ವಿಸ್ತೃತವಾಗಿ ತಿಳಿಸಿದ ಪ್ರಧಾನಮಂತ್ರಿ, ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸುವಂತೆ ಮಾಡಬೇಕು. ಅದಕ್ಕಾಗಿ ವರ್ಷವಿಡೀ ನಾನಾ ಬಗೆಯ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದರು. ಶ್ರೀ ಗುರು ತೇಜ್ ಬಹಾದೂರ್ ಜಿ ಅವರ ಜೀವನ ಮತ್ತು ಬೋಧನೆಗಳ ಕುರಿತಂತೆ ಮಾತ್ರ ಚಟುವಟಿಕೆಗಳನ್ನು ಕೈಗೊಳ್ಳದೆ ಇಡೀ ಗುರು ಪರಂಪರೆಯನ್ನು ವಿಶ್ವ ವ್ಯಾಪಿ ಪ್ರಚುರಗೊಳಿಸಬೇಕು ಎಂದು ಹೇಳಿದರು. ಸಿಖ್ ಸಮುದಾಯ ಮತ್ತು ಜಗತ್ತಿನಾದ್ಯಂತ ಇರುವ ಸಿಖ್ ಸಮುದಾಯ ಮತ್ತು ಗುರುದ್ವಾರಗಳು ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಕುರಿತಂತೆ ಸಿಖ್ ಪರಂಪರೆಯ ಬಗ್ಗೆ ಸೂಕ್ತ ಸಂಶೋಧನೆ ಮತ್ತು ದಾಖಲೀಕರಣ ಆಗಬೇಕು ಎಂದರು

ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್; ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ; ಲೋಕಸಭಾ ಸ್ಪೀಕರ್ ಶ್ರೀ ಒಂ ಬಿರ್ಲಾ; ರಾಜ್ಯಸಭಾ ಉಪಸಭಾಪತಿ ಹರಿವಂಶ್; ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ; ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್; ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್; ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್; ಅಮೃತಸರದ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಅಧ್ಯಕ್ಷರಾದ ಬಿಬಿ ಜಗಿರ್ ಕೌರ್; ಸಂಸದರಾದ ಶ್ರೀ ಸುಖಬೀರ್ ಸಿಂಗ್ ಬಾದಲ್ ಮತ್ತು ಶ್ರೀ ಸುಖದೇವ್ ಸಿಂಗ್ ಧಿಂಡ್ಸಾ; ಮಾಜಿ ಸಂಸದ ಶ್ರೀ ತರ್ ಲೋಚನ್ ಸಿಂಗ್; ಅಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆರ್.ಎಸ್. ಸೋಧಿ; ಖ್ಯಾತ ವಿದ್ವಾಂಸ ಶ್ರೀ ಅಮರ್ ಜಿತ್ ಸಿಂಗ್ ಗ್ರೆವಾಲ್ ಮತ್ತಿತರರು ಭಾಗವಹಿಸಿದ್ದರು.

***


(Release ID: 1710413) Visitor Counter : 189