ಸಂಪುಟ

ವೈಟ್ ಗೂಡ್ಸ್(ಹವಾನಿಯಂತ್ರಿತ ಯಂತ್ರಗಳು ಮತ್ತು ಎಲ್ಇಡಿ ದೀಪ)ಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ (ಪಿಎಲ್ಐ) ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ


ಭಾರತದಲ್ಲಿ ಉತ್ಪಾದನೆಯಾಗುವ ಈ ಉತ್ಪನ್ನಗಳಿಗೆ ಐದು ವರ್ಷಗಳ ಅವಧಿಗೆ 6,238 ಕೋಟಿ ರೂ. ಮೌಲ್ಯದ ಪ್ರೋತ್ಸಾಹ ಧನ ಲಭ್ಯ


ಐದು ವರ್ಷಗಳಲ್ಲಿ  ಅಂದಾಜು 1.68 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಮತ್ತು  64,400 ಕೋಟಿ ರೂ. ಮೌಲ್ಯದ ರಫ್ತು ವೃದ್ಧಿ


ಇದರಿಂದಾಗಿ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ 7,920 ಕೋಟಿ ರೂ. ಹೂಡಿಕೆ ಉತ್ತೇಜನಕ್ಕೆ ನೆರವು; 49,300 ಕೋಟಿ ರೂ. ಪ್ರತ್ಯಕ್ಷ ಮತ್ತು ಪರೋಕ್ಷ ಆದಾಯವೃದ್ಧಿ ಹಾಗೂ ನಾಲ್ಕು ಲಕ್ಷ ಉದ್ಯೋಗ ಸೃಷ್ಟಿ

Posted On: 07 APR 2021 3:55PM by PIB Bengaluru

  ‘ಆತ್ಮನಿರ್ಭರ ಭಾರತ’ ಕನಸು ಸಾಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು , ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ವೈಟ್ ಗೂಡ್ಸ್(ಹವಾನಿಯಂತ್ರಿತ ಯಂತ್ರಗಳು ಮತ್ತು ಎಲ್ಇಡಿ ದೀಪ)ಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ(ಪಿಎಲ್ಐ) ಯೋಜನೆಯಡಿ 6,238 ಕೋಟಿ ರೂ. ಬಜೆಟ್ ಅನುದಾನ ಒದಗಿಸಲು ಅನುಮೋದನೆ ನೀಡಿದೆ.

          ಈ ಪಿಎಲ್ಐ ಯೋಜನೆಯ ಪ್ರಮುಖ ಉದ್ದೇಶವೆಂದರೆ ಭಾರತವನ್ನು ಉತ್ಪಾದನಾ ವಲಯದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು ಮತ್ತು ವಲಯವಾರು ನ್ಯೂನತೆಗಳನ್ನು ತೊಡೆದು ಹಾಕುವುದು, ಆರ್ಥಿಕತೆಯ ವ್ಯಾಪ್ತಿಯನ್ನು ಹೆಚ್ಚಿಸಿ ದಕ್ಷತೆಯನ್ನು ಖಾತ್ರಿಪಡಿಸುವುದಾಗಿದೆ. ಇದನ್ನು ಭಾರತದಲ್ಲಿನ ಪೂರಕ ವ್ಯವಸ್ಥೆಯ ಸಂಪೂರ್ಣ ಭಾಗವನ್ನಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಜಾಗತಿಕ ಪೂರೈಕೆ ಸರಣಿಯ ಅವಿಭಾಜಿತ ಅಂಗವನ್ನಾಗಿ ಭಾರತವನ್ನು ರೂಪಿಸುವುದಾಗಿದೆ. ಈ ಯೋಜನೆಯಿಂದಾಗಿ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಬಹುದು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಸುತ್ತದೆ ಮತ್ತು ರಫ್ತು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

          ವೈಟ್ ಗೂಡ್ಸ್ ಗಳಿಗೆ ಪಿಎಲ್ಐ ಯೋಜನೆಯನ್ನು ಭಾರತದಲ್ಲಿ ತಯಾರಿಸಿದ ವಸ್ತುಗಳ ಮಾರಾಟದ ಮೇಲೆ ಶೇ. 4 ರಿಂದ 6ರಷ್ಟು ಪ್ರೋತ್ಸಾಹ ಧನ ವಿಸ್ತರಿಸಲಾಗುವುದು. ಇದು ಹವಾನಿಯಂತ್ರಿತ ಯಂತ್ರಗಳು ಮತ್ತು ಎಲ್ಇಡಿ ಬಲ್ಬ್ ಗಳ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳಿಗೆ ಐದು ವರ್ಷಗಳ ಅವಧಿವರೆಗೆ ನೀಡಲಾಗುವುದು. ಜಾಗತಿಕ ಹೂಡಿಕೆಗಳನ್ನು ಅಪೇಕ್ಷಿತ ವಲಯಗಳಲ್ಲಿ ವಿಶೇಷವಾಗಿ ಆಕರ್ಷಿಸಲು ಭಿನ್ನ ವಲಯಗಳಲ್ಲಿ ವಿಭಿನ್ನ ವರ್ಗದ ಬಿಡಿ ಭಾಗಗಳನ್ನು ಗುರುತಿಸಲಾಗಿದೆ. ಈ ಯೋಜನೆಗೆ ಕಂಪನಿಗಳನ್ನು ಆಯ್ಕೆ ಮಾಡಲಾಗುವುದು. ಸದ್ಯ ಸೂಕ್ತ ಸಾಮರ್ಥ್ಯವಿಲ್ಲದೆ ಭಾರತದಲ್ಲಿ ಉತ್ಪಾದನೆ ಮಾಡದಿರುವಂತಹ ಬಿಡಿ ಭಾಗಗಳು ಅಥವಾ ಉಪ ಬಿಡಿ ಭಾಗಗಳ ಉತ್ಪಾದನೆಗೆ ಪ್ರೋತ್ಸಾಹಧನ ನೀಡಲು ಈ ಯೋಜನೆ ಅಡಿಯಲ್ಲಿ ಕಂಪನಿಗಳನ್ನು ಆಯ್ಕೆ ಮಾಡಲಾಗುವುದು. ಸಿದ್ಧ ವಸ್ತುಗಳ ಜೋಡಣೆಗೆ ಪ್ರೋತ್ಸಾಹಧನ ನೀಡಲಾಗದು.

ಈ ಯೋಜನೆಯಲ್ಲಿ ಭಾಗವಹಿಸಲು ವಿಭಿನ್ನ ಗುರಿ ನಿಗದಿಪಡಿಸಿದ ವಲಯಗಳಲ್ಲಿ ಪೂರ್ವ ಅರ್ಹತಾ ಮಾನದಂಡಗಳನ್ನು ಕಂಪನಿಗಳು ಪೂರೈಸಬೇಕಾಗುತ್ತದೆ. ಕಂಪನಿಗಳು ಬ್ರೌನ್ ಫೀಲ್ಡ್ ಅಥವಾ ಗ್ರೀನ್ ಫೀಲ್ಡ್ ಹೂಡಿಕೆಗಳನ್ನು ಮಾಡುವಂತಹ ಕಂಪನಿಗಳಿಗೆ ಪ್ರೋತ್ಸಾಹಧನ ಪಡೆಯುವುದು ಮುಕ್ತವಾಗಿರುತ್ತದೆ. ಪ್ರೋತ್ಸಾಹಕ ಹಕ್ಕು ಪಡೆಯಲು ಸಂಚಿತ ಹೆಚ್ಚುತ್ತಿರುವ ಹೂಡಿಕೆಯ ಮಿತಿ ಮತ್ತು ಮೂಲ ವರ್ಷಗಳಲ್ಲಿ ಉತ್ಪಾದಿತ ಸರಕುಗಳ ಹೆಚ್ಚುತ್ತಿರುವ ಮಾರಾಟ ಮತ್ತು ಹೂಡಿಕೆಯನ್ನು ವೃದ್ಧಿಸುತ್ತದೆ.

          ಭಾರತ ಸರ್ಕಾರದ ಇತರೆ ಯಾವುದೇ ಪಿಎಲ್ಐ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಿರುವ ಸಂಸ್ಥೆಗಳು ಪ್ರಸ್ತುತ ಯೋಜನೆಯಡಿ ಪ್ರಯೋಜನಕ್ಕೆ ಅರ್ಹವಾಗುವುದಿಲ್ಲ. ಆದರೆ ಅದೇ ಘಟಕಗಳು ಬೇರೆ ಬಗೆಯ ಉತ್ಪನ್ನಗಳಿಗೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಪ್ರಯೋಜನ ಪಡೆಯಬಹುದು. ಈ ಯೋಜನೆಯನ್ನು ಭಾರತದಾದ್ಯಂತ ಜಾರಿಗೊಳಿಸಲಾಗುವುದು ಮತ್ತು ಅದು ಯಾವುದೇ ಸ್ಥಳ, ಪ್ರದೇಶ ಅಥವಾ ಒಂದು ಜನಸಂಖ್ಯೆ ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಸಾಕಷ್ಟು ಸಂಖ್ಯೆಯ ಎಂಎಸ್ಎಂಇಗಳು ಸೇರಿದಂತೆ ಹಲವು ಜಾಗತಿಕ ಮತ್ತು ದೇಶೀಯ ಕಂಪನಿಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ.

          ಈ ಯೋಜನೆಯಿಂದ ಹಾಲಿ ಹವಾನಿಯಂತ್ರಿತ ಯಂತ್ರ ಮತ್ತು ಎಲ್ಇಡಿ ಕೈಗಾರಿಕೆಗಳಲ್ಲಿ ಸದ್ಯ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಗತಿ ದರ ಸಾಧಿಸುವ ನಿರೀಕ್ಷೆ ಇದೆ. ಭಾರತದಲ್ಲಿ ಸಂಪೂರ್ಣ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಭಾರತದಲ್ಲಿ ಜಾಗತಿಕ ಉತ್ಪಾದನಾ ಚಾಂಪಿಯನ್ ಗಳನ್ನು ಸೃಷ್ಟಿಸುವ ಉದ್ದೇಶವಿದೆ. ಆ ಕಂಪನಿಗಳು ಕಡ್ಡಾಯವಾಗಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಐಎಸ್ ಮತ್ತು ಬಿಇಇ ಗುಣಮಟ್ಟ ಮಾನದಂಡಗಳನ್ನು ಕಾಯ್ದುಕೊಳ್ಳಬೇಕಾಗಿದೆ ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ಅರ್ಹ ಮಾನದಂಡಗಳನ್ನು ಸಹ ಕಾಯ್ದುಕೊಳ್ಳಬೇಕು. ಇದರಿಂದಾಗಿ ನಾವಿನ್ಯ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹೂಡಿಕೆಗಳು ಹೆಚ್ಚಾಗುವುದಲ್ಲದೆ, ತಂತ್ರಜ್ಞಾನ ಉನ್ನತೀಕರಣವೂ ಸಾಧ್ಯವಾಗಲಿದೆ.   

          ಮುಂದಿನ ಐದು ವರ್ಷಗಳಲ್ಲಿ ಪಿಎಲ್ಐ ಯೋಜನೆಯಿಂದ 7,920 ಕೋಟಿ ರೂ. ಹೂಡಿಕೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ, ಜೊತೆಗೆ 1,68,000 ಕೋಟಿ ರೂ. ಮೌಲ್ಯದ ಉತ್ಪಾದನೆ ಹೆಚ್ಚಾಗಲಿದೆ,  64,400 ಕೋಟಿ ರೂ. ಮೌಲ್ಯದ ರಫ್ತು ವೃದ್ಧಿಯಾಗಲಿದ್ದು, 49,300 ಕೋಟಿ ರೂ. ಪ್ರತ್ಯಕ್ಷ ಮತ್ತು ಪರೋಕ್ಷ ಆದಾಯ ಗಳಿಸಲಿದೆ ಮತ್ತು ಹೆಚ್ಚುವರಿಯಾಗಿ ನಾಲ್ಕು ಲಕ್ಷ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

****

 

 


(Release ID: 1710220) Visitor Counter : 375