ಕಾನೂನು ಮತ್ತು ನ್ಯಾಯ ಸಚಿವಾಲಯ
ಭಾರತದ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಶ್ರೀ ನೂಥಲಪತಿ ವೆಂಕಟ ರಮಣ ನೇಮಕ
Posted On:
06 APR 2021 10:58AM by PIB Bengaluru
ಭಾರತದ ರಾಷ್ಟ್ರಪತಿಯವರು, ಭಾರತೀಯ ಸಂವಿಧಾನದ ವಿಧಿ 124ರ ಅನುಚ್ಛೇದ (2)ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಶ್ರೀ ನೂಥಲಪತಿ ವೆಂಕಟ ರಮಣ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ್ದಾರೆ. ಈ ಸಂಬಂಧ ಅಧಿಸೂಚನೆಯನ್ನು ಇಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯಾಂಗ ಇಲಾಖೆ ಹೊರಡಿಸಿದೆ. ನ್ಯಾಯಮೂರ್ತಿ ಶ್ರೀ ಎನ್.ವಿ. ರಮಣ ಅವರಿಗೆ ನೇಮಕಾತಿಯ ಅಧಿಸೂಚನೆ ಮತ್ತು ನೇಮಕಾತಿಯ ಆದೇಶದ ಪ್ರತಿಯನ್ನು ಸಲ್ಲಿಸಲಾಯಿತು.
ನ್ಯಾಯಮೂರ್ತಿ ನೂಥಲಪತಿ ವೆಂಕಟ ರಮಣ ಅವರು 2021ರ ಏಪ್ರಿಲ್ 24ರಂದು ಭಾರತದ ಸರ್ವೋನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ.
ಅವರು ಮೊದಲ ಪೀಳಿಗೆಯ ನ್ಯಾಯವಾದಿಗಳಾಗಿದ್ದು, ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಇವರು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೂನಾವರಂ ಗ್ರಾಮದವರು. ಅವರು ಉತ್ತಮ ಓದುಗರಾಗಿದ್ದು, ಸಾಹಿತ್ಯ ಮತ್ತು ಕರ್ನಾಟಕ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದಾರೆ.
ಅವರನ್ನು 10.02.1983ರಂದು ವಕೀಲ ವೃತ್ತಿಗೆ ಬಂದರು. ಅವರು ಆಂಧ್ರಪ್ರದೇಶದ ಹೈಕೋರ್ಟ್ ನಲ್ಲಿ ಮತ್ತು ಕೇಂದ್ರೀಯ ಮತ್ತು ಆಂಧ್ರಪ್ರದೇಶ ಆಡಳಿತಾತ್ಮಕ ನ್ಯಾಯಮಂಡಳಿಗಳಲ್ಲಿ ಹಾಗೂ ಭಾರತದ ಸುಪ್ರೀಂಕೋರ್ಟ್ ನಲ್ಲಿ ವಕೀಲವೃತ್ತಿ ಮಾಡಿದರು. ಅವರು ಸಾಂವಿಧಾನಿಕ, ಸಿವಿಲ್, ಕಾರ್ಮಿಕ, ಸೇವಾ ಮತ್ತು ಚುನಾವಣೆ ಪ್ರಕರಣಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಅವರು ಅಂತರ ರಾಜ್ಯ ನದಿ ನ್ಯಾಯಾಧಿಕರಣಗಳಲ್ಲೂ ತಮ್ಮ ವೃತ್ತಿ ನಡೆಸಿದರು.
ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ವರ್ಷಗಳಲ್ಲಿ, ಅವರು ಹಲವು ಸರ್ಕಾರಿ ಸಂಸ್ಥೆಗಳಿಗೆ ಪ್ಯಾನಲ್ ವಕೀಲರಾಗಿ ಮತ್ತು ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸುವ ಮುನ್ನ, ಹೈದ್ರಾಬಾದ್ ನ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ರೈಲ್ವೆಯ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.
ನ್ಯಾಯಮೂರ್ತಿ ನೂಥಲಪತಿ ವೆಂಕಟ ರಮಣ ಅವರು 17.02.2014ರಿಂದ ಸರ್ವೋನ್ನತ ನ್ಯಾಯಾಲಯದ ಕಿರಿಯ ನ್ಯಾಯಮೂರ್ತಿಯಾಗಿ ಸೇವೆ ಆರಂಭಿಸಿದರು. ಅವರು 2019ರ ಮಾರ್ಚ್ 7ರಿಂದ 2019ರ ನವೆಂಬರ್ 26ರವರೆಗೆ ಸರ್ವೋನ್ನತ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 27.11.2019ರಿಂದ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್.ಎ.ಎಲ್.ಎಸ್.ಎ.)ಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಪ್ರಾಥಮಿಕವಾಗಿ ಅವರು 27.06.2000ದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನ ಕಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. 10.3.2013 ರಿಂದ 20.5.2013ರವರೆಗೆ ಅವರು ಆಂಧ್ರಪ್ರದೇಶ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸೇವೆ ಸಲ್ಲಿಸಿದ್ದರು.
****
(Release ID: 1709860)
Visitor Counter : 352
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Odia
,
Tamil
,
Telugu
,
Malayalam