ಉಪರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್-19 ಪತ್ತೆಗೆ ಕೊಳಚೆನೀರು ಮತ್ತು ವಾಯು ಕಣ್ಗಾವಲು ವ್ಯವಸ್ಥೆಯ ಬಗ್ಗೆ ಸಿಎಸ್ಐಆರ್ ಮಹಾನಿರ್ದೇಶಕರಿಂದ ಉಪ ರಾಷ್ಟ್ರಪತಿಯವರಿಗೆ ಪ್ರಾತ್ಯಕ್ಷಿಕೆ


ವಿವಿಧ ಸಿಎಸ್‌ಐಆರ್ ಪ್ರಯೋಗಾಲಯಗಳು ಕೈಗೊಂಡಿರುವ ಚಟುವಟಿಕೆಗಳ ಬಗ್ಗೆಯೂ ಉಪ ರಾಷ್ಟ್ರಪತಿಯವರಿಗೆ ವಿವರಣೆ

ಭಾರತದ ಸಂಸತ್ತಿನಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಮಹಾನಿರ್ದೇಶಕರ ಸಲಹೆ

ಈ ಕುರಿತು ಲೋಕಸಭಾಧ್ಯಕ್ಷರು ಮತ್ತು ಸರ್ಕಾರದೊಂದಿಗೆ ಚರ್ಚಿಸುವುದಾಗಿ ಉಪ ರಾಷ್ಟ್ರಪತಿಯವರ ಭರವಸೆ

Posted On: 30 MAR 2021 11:46AM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಪತ್ತೆ ಹಚ್ಚಲು  ಕೊಳಚೆ ನೀರು ಮತ್ತು ವಾಯು ಕಣ್ಗಾವಲು ವ್ಯವಸ್ಥೆಯನ್ನು ಭಾರತದ ಸಂಸತ್ತಿನಲ್ಲಿ ಸ್ಥಾಪಿಸುವ ಕುರಿತ ಪ್ರಾತ್ಯಕ್ಷಿಕೆಯನ್ನು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿಯವರಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರಿಗೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್)  ಮಹಾನಿರ್ದೇಶಕ  ಡಾ.ಶೇಖರ್ ಸಿ ಮಾಂಡೆ ಅವರು ಇಂದು ಪ್ರಸ್ತುತ ಪಡಿಸಿದರು.

ಡಾ. ಮಾಂಡೆ ಅವರೊಂದಿಗೆ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ನಿರ್ದೇಶಕ ಡಾ.ರಾಕೇಶ್ ಮಿಶ್ರಾ, ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ನಿರ್ದೇಶಕ ಡಾ.ಎಸ್.ಚಂದ್ರಶೇಖರ್, ಐ.ಐ.ಸಿ.ಟಿಯ ಡಾ.ವೆಂಕಟ ಮೋಹನ್ ಮತ್ತು ನಾಗಪುರದ ನೀರಿ ಸಂಸ್ಥೆಯ ಡಾ. ಆತ್ಯಾ ಕಪ್ಲೆ ಇದ್ದರು.

ಸಿಎಸ್ಐಆರ್ ನ ವಿವಿಧ ಪ್ರಯೋಗಾಲಯಗಳು ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಡಾ. ಮಾಂಡೆ ಉಪ ರಾಷ್ಟ್ರಪತಿಯವರಿಗೆ ವಿವರಿಸಿದರು.

ಒಳಚರಂಡಿ ಕಣ್ಗಾವಲು ವ್ಯವಸ್ಥೆಯು ಸೋಂಕಿತರ ಸಂಖ್ಯೆಯ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಅಂದಾಜನ್ನು ಒದಗಿಸುತ್ತದೆ ಮತ್ತು ವ್ಯಕ್ತಿಗಳಿಗೆ ಸಾಮೂಹಿಕ ಪರೀಕ್ಷೆಗಳು ಸಾಧ್ಯವಾಗದಿದ್ದರೂ ಸಹ ಕೋವಿಡ್-19ರ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಇದನ್ನು ಬಳಸಬಹುದು ಎಂದು ಸಿಎಸ್ಐಆರ್ ಮಹಾ ನಿರ್ದೇಶಕರು ಉಪ ರಾಷ್ಟ್ರಪತಿಯವರಿಗೆ ಮಾಹಿತಿ ನೀಡಿದರು. ಇದು ನೈಜ ಸಮಯದಲ್ಲಿ ಸಮುದಾಯಗಳಲ್ಲಿ ರೋಗದ ಹರಡುವಿಕೆಯನ್ನು ಸಮಗ್ರವಾಗಿ ಮೇಲ್ವಿಚಾರಣೆ ಮಾಡುವ ಅಳತೆಗೋಲಾಗಿದೆ.

ಒಳಚರಂಡಿ ಕಣ್ಗಾವಲಿನ ಪ್ರಸ್ತುತತೆಯ ಬಗ್ಗೆ ವಿವರಿಸಿದ ಡಾ. ಮಾಂಡೆ, ಕೋವಿಡ್-19 ರೋಗಿಗಳು SAR-CoV-2 ಅನ್ನು ಮಲದ ಮೂಲಕ ಹೊರ ಹಾಕುತ್ತಾರೆ ಎಂದು ಹೇಳಿದರು. ರೋಗಲಕ್ಷಣಗಳಿರುವ ವ್ಯಕ್ತಿಗಳಲ್ಲದೇ, ಲಕ್ಷಣರಹಿತರೂ ಸಹ ತಮ್ಮ ಮಲದ ಮೂಲಕ ವೈರಾಣುವನ್ನು ಹೊರ ಹಾಕುತ್ತಾರೆ ಎಂದು ಅವರು ಹೇಳಿದರು.

ಹೈದರಾಬಾದ್, ಪ್ರಯಾಗರಾಜ್ (ಅಲಹಾಬಾದ್), ದೆಹಲಿ, ಕೋಲ್ಕತಾ, ಮುಂಬೈ, ನಾಗ್ಪುರ, ಪುದುಚೇರಿ ಮತ್ತು ಚೆನ್ನೈನಲ್ಲಿ ಸೋಂಕಿನ ಪ್ರವೃತ್ತಿಯನ್ನು ಪತ್ತೆ ಮಾಡಲು ನಡೆಸಿದ ಕೊಳಚೆನೀರಿನ ಕಣ್ಗಾವಲಿನ ಅಂಕಿ ಆಂಶವನ್ನು ಪ್ರಸ್ತುತಪಡಿಸಿದ ಅವರು, ವೈಯಕ್ತಿಕ ಮಟ್ಟದಲ್ಲಿ ಮಾದರಿ ಪರೀಕ್ಷೆ ಮಾಡದಿರುವುದರಿಂದ ಇದು ನಿಷ್ಪಕ್ಷಪಾತ ಸಂಖ್ಯೆಗಳನ್ನು ಒದಗಿಸುತ್ತದೆ ಎಂದರು. ಮತ್ತೊಂದೆಡೆ, ನಿಯಮಿತ ಪರೀಕ್ಷೆಗಳಿಂದ ಪಡೆದ ಸಂಖ್ಯೆಗಳು ಪರೀಕ್ಷಿಸಲ್ಪಟ್ಟ ವ್ಯಕ್ತಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ೆಂದು ಅವರು ಹೇಳೀದರು.
ಕೋವಿಡ್-19 ರ ಕೊಳಚೆನೀರಿನ ಕಣ್ಗಾವಲು ವ್ಯವಸ್ಥೆಯು ರೋಗದ ಪ್ರಸ್ತುತ ಸೋಂಕಿನ ಬಗ್ಗೆ ತಿಳಿದುಕೊಳ್ಳಲು ಮಾತ್ರವಲ್ಲದೆ, ಭವಿಷ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ಆರಂಭದಲ್ಲಿಯೇ ಸುಲಭವಾಗಿ ಪತ್ತೆಹಚ್ಚಲು ಅತ್ಯಗತ್ಯ ಸಾಧನವಾಗಿದೆ ಎಂದು ಡಾ. ಮಾಂಡೆ ಹೇಳಿದರು.

ವೈರಾಣುಗಳು ಮತ್ತು ಸಂಭಾವ್ಯ ಸಾಂಕ್ರಾಮಿಕದ ಅಪಾಯವನ್ನು ಮೇಲ್ವಿಚಾರಣೆ ಮಾಡಲು ವಾಯು ಮಾದರಿ ವ್ಯವಸ್ಥೆಯನ್ನು ಸ್ಥಾಪಿಸಲು ಅವರು ಸಲಹೆ ನೀಡಿದರು.
ಉಪ ರಾಷ್ಟ್ರಪತಿಯವರು ವಿಜ್ಞಾನಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಮತ್ತು ಸರ್ಕಾರದೊಂದಿಗೆ ಚರ್ಚಿಸುವುದಾಗಿ ಅವರು ನಿಯೋಗಕ್ಕೆ ಭರವಸೆ ನೀಡಿದರು.

***


(Release ID: 1708595) Visitor Counter : 227