ಪ್ರಧಾನ ಮಂತ್ರಿಯವರ ಕಛೇರಿ

36ನೇ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ

Posted On: 24 FEB 2021 7:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಗತಿಯ 36ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ, ಎಂಟು ಯೋಜನೆಗಳು, ಒಂದು ಯೋಜನೆಗೆ ಸಂಬಂಧಿಸಿದ ಕುಂದುಕೊರತೆ ಮತ್ತು ಒಂದು ಕಾರ್ಯಕ್ರಮ ಸೇರಿದಂತೆ ಹತ್ತು ಕಾರ್ಯಸೂಚಿ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಎಂಟು ಯೋಜನೆಗಳ ಪೈಕಿ ಮೂರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ, ಎರಡು ರೈಲ್ವೆ ಸಚಿವಾಲಯದ, ತಲಾ ಒಂದು ವಿದ್ಯುತ್ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಗೃಹ ವ್ಯವಹಾರ ಸಚಿವಾಲಯಕ್ಕೆ ಸಂಬಂಧಿಸಿದ್ದಾಗಿದ್ದವು. ಈ ಎಂಟು ಯೋಜನೆಗಳ ಒಟ್ಟು ವೆಚ್ಚ ಸುಮಾರು 44,545 ಕೋಟಿ ರೂ.ಗಳಾಗಿದ್ದು, 12 ರಾಜ್ಯಗಳು ಅಂದರೆ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಒಡಿಶಾ, ಜಾರ್ಖಂಡ್, ಸಿಕ್ಕಿಂ, ಉತ್ತರ ಪ್ರದೇಶ, ಮಿಜೋರಾಂ, ಗುಜರಾತ್, ಮಧ್ಯಪ್ರದೇಶ, ಬಿಹಾರ ಮತ್ತು ಮೇಘಾಲಯಕ್ಕೆ ಸಂಬಂಧಿಸಿದ್ದಾಗಿದ್ದವು.
ಪ್ರಧಾನಮಂತ್ರಿಯವರು ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಎಲ್ಲ ಬಾಕಿ ಇರುವ ವಿಷಯಗಳನ್ನೂ ಕಾಲಮಿತಿಯ ಆಧಾರದಲ್ಲಿ ಮತ್ತು ಎಲ್ಲಿ ಸಾಧ್ಯವೋ ಅಲ್ಲಿ ಅಭಿಯಾನದೋಪಾದಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಸಂವಾದದ ವೇಳೆ ಪ್ರಧಾನಮಂತ್ರಿಯವರು ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಕ್ರಮದ ಪರಾಮರ್ಶೆ ನಡೆಸಿದರು. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯ ಕುಂದುಕೊರತೆಯನ್ನೂ ಪರಿಶೀಲನೆ ಕೈಗೆತ್ತಿಕೊಂಡರು. ಸೂಕ್ತ ಜಾಗೃತಿ ಅಭಿಯಾನದ ಮೂಲಕ ಜನರನ್ನು, ವಿಶೇಷವಾಗಿ ಯುವಕರನ್ನು ತೊಡಗಿಸಿಕೊಳ್ಳುವ ಅಗತ್ಯದ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗಳ ಗುಣಮಟ್ಟದ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಅವರು ಎಲ್ಲಾ ಅಧಿಕಾರಿಗಳಿಗೆ ಕರೆ ನೀಡಿದರು.
ಹಿಂದಿನ 35 ಪ್ರಗತಿ ಸಂವಾದಗಳಲ್ಲಿ 51 ಕಾರ್ಯಕ್ರಮಗಳು/ ಯೋಜನೆಗಳು ಮತ್ತು 17 ವಿವಿಧ ವಲಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳೂ ಸೇರಿದಂತೆ 13.60 ಲಕ್ಷ ಕೋಟಿ ರೂಪಾಯಿ ಮೌಲ್ಯದ 290 ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ.

****



(Release ID: 1700723) Visitor Counter : 146