ಸಂಪುಟ
ಔಷಧ ಉತ್ಪನ್ನಗಳಿಗೆ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆಗೆ ಸಂಪುಟದ ಅನುಮೋದನೆ
Posted On:
24 FEB 2021 3:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಔಷಧೀಯ ವಸ್ತುಗಳಿಗೆ 2020-21ರಿಂದ 2028-29ರ ಹಣಕಾಸು ವರ್ಷದ ಅವಧಿಗೆ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿ.ಎಲ್.ಐ.) ಯೋಜನೆಗೆ ತನ್ನ ಅನುಮೋದನೆ ನೀಡಿದೆ.
ಈ ಯೋಜನೆ ದೇಶೀಯ ಉತ್ಪಾದಕರಿಗೆ ಉಪಯುಕ್ತವಾಗಿದ್ದು, ಉದ್ಯೋಗ ಸೃಷ್ಟಿಗೂ ನೆರವಾಗಲಿದೆ, ಜೊತೆಗೆ ಗ್ರಾಹಕರಿಗೆ ಅಗ್ಗದ ದರದಲ್ಲಿ ವಿಸ್ತೃತ ಶ್ರೇಣಿಯ ಔಷಧ ಲಭ್ಯವಾಗುವಂತೆ ಮಾಡಲು ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಯೋಜನೆ, ದೇಶದಲ್ಲಿ ಉನ್ನತ ಮೌಲ್ಯದ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ರಫ್ತಿನಲ್ಲಿ ಮೌಲ್ಯವರ್ಧನೆಯನ್ನು ಹೆಚ್ಚಿಸಲಿದೆ. 2022-23 ರಿಂದ 2027-28ರವರೆಗಿನ ಆರು ವರ್ಷಗಳಲ್ಲಿ ಒಟ್ಟು ಹೆಚ್ಚಾಗಲಿರುವ ಮಾರಾಟ ರೂ. 2,94,000 ಕೋಟಿ ಆಗಲಿದ್ದು, ಒಟ್ಟು ರಫ್ತು 1,96,000 ಕೋಟಿ ರೂ. ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಈ ಯೋಜನೆ ನುರಿತ ಮತ್ತು ನಿಪುಣತೆ ಇಲ್ಲದ ಸಿಬ್ಬಂದಿಗೂ ಉದ್ಯೋಗ ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದ್ದು, 20,000 ಪ್ರತ್ಯಕ್ಷ ಮತ್ತು 80 ಸಾವಿರ ಪರೋಕ್ಷ ಉದ್ಯೋಗಗಳು ಈ ವಲಯದಲ್ಲಿ ಸೃಷ್ಟಿಯಾಗುವ ಅಂದಾಜಿದೆ.
ಇದು ಹೊಸಚಿಕಿತ್ಸಾ ವಿಧಾನಗಳು ಮತ್ತು ಇನ್-ವಿಟ್ರೊ ರೋಗ ಪತ್ತೆ ಸಾಧನಗಳು, ಪ್ರಮುಖ ಔಷಧಗಳಲ್ಲಿ ಸ್ವಾವಲಂಬನೆ ಸೇರಿದಂತೆ ಸಂಕೀರ್ಣ ಮತ್ತು ಉನ್ನತ ತಂತ್ರಜ್ಞಾನದ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಅನುಶೋಧನೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು ಭಾರತೀಯ ಜನಸಂಖ್ಯೆಗೆ ಆರ್ಫನ್ ಡ್ರಗ್‌ಗಳು ಸೇರಿದಂತೆ ವೈದ್ಯಕೀಯ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ದರದ ಸುಧಾರಣೆ ಮಾಡುವ ನಿರೀಕ್ಷೆಯಿದೆ. ಈ ಯೋಜನೆಯು ಔಷಧೀಯ ವಲಯದಲ್ಲಿ 15 ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡುವ ನಿರೀಕ್ಷೆಯಿದೆ.
ಈ ಯೋಜನೆ ಔಷಧೀಯ ಉದ್ಯಮದ ಅಭಿವೃದ್ಧಿಗೆ ಸುರಕ್ಷಾ ಯೋಜನೆ (umbrella scheme) ಭಾಗವಾಗಲಿದೆ. ವಲಯದಲ್ಲಿ ಹೂಡಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಔಷಧ ವಲಯದಲ್ಲಿ ಉನ್ನತ ಮೌಲ್ಯದ ಉತ್ಪನ್ನ ವೈವಿಧ್ಯಕ್ಕೆ ಕೊಡುಗೆ ನೀಡುವ ಮೂಲಕ ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗಾತ್ರ ಮತ್ತು ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಜಾಗತಿಕ ಚಾಂಪಿಯನ್ ಗಳನ್ನು ಭಾರತದ ಹೊರಗೆ ರೂಪಿಸುವುದು ಮತ್ತು ಆ ಮೂಲಕ ಜಾಗತಿಕ ಮೌಲ್ಯ ಸರಪಳಿಗಳನ್ನು ಭೇದಿಸುವುದು ಯೋಜನೆಯ ಮುಂದಿನ ಉದ್ದೇಶಗಳಲ್ಲಿ ಒಂದಾಗಿದೆ.
ಯೋಜನೆಯ ಪ್ರಮುಖ ಲಕ್ಷಣಗಳು ಹೀಗಿವೆ: -
ಗುರಿಯ ಗುಂಪುಗಳು:
ಭಾರತದ ಔಷಧೀಯ ಉದ್ಯಮಗಳಾದ್ಯಂತ ಯೋಜನೆಯ ವ್ಯಾಪಕ ಆನ್ವಯಿಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದೇ ಸಮಯದಲ್ಲಿ ಯೋಜನೆಯ ಉದ್ದೇಶಗಳನ್ನು ಈಡೇರಿಸಲು ಭಾರತದಲ್ಲಿ ನೋಂದಾಯಿಸಲಾದ ಔಷಧೀಯ ಉತ್ಪನ್ನಗಳ ತಯಾರಕರನ್ನು ಅವರ ಜಾಗತಿಕ ಉತ್ಪಾದನಾ ಆದಾಯ (ಜಿಎಂಆರ್) ಆಧರಿಸಿ ವರ್ಗೀಕರಿಸಲಾಗುತ್ತದೆ. ಅರ್ಜಿದಾರರ ಮೂರು ಗುಂಪುಗಳಿಗೆ ಅರ್ಹತಾ ಮಾನದಂಡಗಳು ಈ ಕೆಳಕಂಡಂತಿರುತ್ತವೆ:-
- ಗುಂಪು ಎ: 5,000 ಕೋಟಿ ರೂ.ಗಳಿಗಿಂತ ಹೆಚ್ಚು ಅಥವಾ ಸಮನಾದ ಔಷಧೀಯ ವಸ್ತುಗಳ ಜಾಗತಿಕ ಉತ್ಪಾದನಾ ಆದಾಯ (ಹಣಕಾಸು ವರ್ಷ 2019-20) ಹೊಂದಿರುವ ಅರ್ಜಿದಾರರು.
b) ಗಂಪು ಬಿ: 500 (ಸಮಗ್ರ) ಕೋಟಿ ರೂ. ಮತ್ತು 5,000 ಕೋಟಿ ರೂ. ನಡುವೆ ಔಷಧೀಯ ವಸ್ತುಗಳ ಜಾಗತಿಕ ಉತ್ಪಾದನಾ ಆದಾಯ (ಹಣಕಾಸು ವರ್ಷ 2019-20) ಹೊಂದಿರುವ ಅರ್ಜಿದಾರರು.
(c) ಗುಂಪು ಸಿ: 500 ಕೋಟಿ ರೂ.ಗಳಿಗಿಂತ ಕಡಿಮೆ ಔಷಧೀಯ ವಸ್ತುಗಳ ಜಾಗತಿಕ ಉತ್ಪಾದನಾ ಆದಾಯ (ಹಣಕಾಸು ವರ್ಷ 2019-20) ಹೊಂದಿರುವ ಅರ್ಜಿದಾರರು. ಅವರ ನಿರ್ದಿಷ್ಟ ಸವಾಲುಗಳು ಮತ್ತು ಸಂದರ್ಭಗಳನ್ನು ಗಮನಿಸಿ, ಎಂ.ಎಸ್.ಎಂ.ಇ. ಕೈಗಾರಿಕೆಗಾಗಿ ಈ ಗುಂಪಿನೊಳಗೆ ಉಪ-ಗುಂಪನ್ನು ಮಾಡಲಾಗುವುದು.
ಪ್ರೋತ್ಸಾಹಕದ ಪ್ರಮಾಣ:
ಯೋಜನೆಯಡಿಯಲ್ಲಿ ಒಟ್ಟು ಪ್ರೋತ್ಸಾಹಕದ ಪ್ರಮಾಣ (ಆಡಳಿತಾತ್ಮಕ ವೆಚ್ಚವೂ ಸೇರಿದಂತೆ) ಸುಮಾರು 15,000 ಕೋಟಿ ರೂ. ಆಗಿರುತ್ತದೆ. ಗುರಿ ಗುಂಪುಗಳಲ್ಲಿ ಪ್ರೋತ್ಸಾಹಕದ ಹಂಚಿಕೆ ಈ ಕೆಳಕಂಡಂತಿರುತ್ತದೆ:
a. ರೂ 11,000 ಕೋಟಿ.
- ಗುಂಪು ಬಿ: ರೂ. 2,250 ಕೋಟಿ.
- ಗುಂಪು ಸಿ: ರೂ. 1,750 ಕೋಟಿ.
ಗುಂಪು ಎ ಮತ್ತು ಗುಂಪು ಸಿ ಅರ್ಜಿದಾರರಿಗೆ ಪ್ರೋತ್ಸಾಹಕ ಹಂಚಿಕೆಯನ್ನು ಬೇರೆ ಯಾವುದೇ ಪ್ರವರ್ಗಕ್ಕೆ ಸೇರಿಸಲಾಗುವುದಿಲ್ಲ. ಆದಾಗ್ಯೂ, ಗುಂಪು ಬಿ ಅರ್ಜಿದಾರರಿಗೆ ಹಂಚಿಕೆಯಾದ ಪ್ರೋತ್ಸಾಹಕವನ್ನು ಬಳಸದೆ ಹೋದರೆ ಗುಂಪು ಎ ಅರ್ಜಿದಾರರಿಗೆ ವರ್ಗಾಯಿಸಬಹುದು.
ತಯಾರಿಸಿದ ಸರಕುಗಳ ಹೆಚ್ಚುತ್ತಿರುವ ಮಾರಾಟದ ಲೆಕ್ಕಾಚಾರಕ್ಕೆ ಹಣಕಾಸು ವರ್ಷ 2019-20ನ್ನು ಆಧಾರ ವರ್ಷವಾಗಿ ಪರಿಗಣಿಸಲಾಗುತ್ತದೆ.
ಸರಕುಗಳ ಪ್ರವರ್ಗ:
ಈ ಯೋಜನೆ ಈ ಕೆಳಗೆ ನಮೂದಿಸಲಾಗಿರುವ ಮೂರು ಪ್ರವರ್ಗದ ಔಷಧೀಯ ಸರಕುಗಳನ್ನು ಒಳಗೊಂಡಿರುತ್ತದೆ:
(ಎ) ಪ್ರವರ್ಗ 1
ಜೈವಿಕ ಔಷಧಗಳು; ಸಂಕೀರ್ಣ ಜನೌಷಧಗಳು; ಪೇಟೆಂಟ್ ಪಡೆದ ಔಷಧಗಳು ಅಥವಾ ಪೇಟೆಂಟ್ ಅವಧಿ ಮುಗಿಯಲು ಬಂದಿರುವ ಔಷಧಗಳು; ಕೋಶ ಆಧಾರಿತ ಅಥವಾ ತಳಿ ಚಿಕಿತ್ಸೆಯ ಔಷಧಗಳು; ಆರ್ಫನ್ ಡ್ರಗ್‌ಗಳು; ವಿಶೇಷ ಖಾಲಿ ಕ್ಯಾಪ್ಸೂಲ್ ಗಳು, ಅಂದರೆ ಎಚ್.ಪಿ.ಎಂ.ಸಿ, ಪುಲ್ಲುಲಾನ್, ಎಂಟರಿಕ್ ಇತ್ಯಾದಿಗಳು; ಕಾಂಪ್ಲೆಕ್ಸ್ ಎಕ್ಸಿಪೈಂಟ್ಸ್; ಫೈಟೊ-ಫಾರ್ಮಾಸ್ಯುಟಿಕಲ್ಸ್: ಇತರೆ ಔಷಧಗಳಿಗೆ ಅನುಮೋದನೆ.
(ಬಿ) ಪ್ರವರ್ಗ 2
ಸಕ್ರಿಯ ಔಷಧ ಉತ್ಪನ್ನಗಳ ಪರಿಕರಗಳು / ಪ್ರಮುಖ ಆರಂಭಿಕ ಸಾಮಗ್ರಿಗಳು / ಔಷಧ ಮಧ್ಯಸ್ಥಿಕೆಗಳು.
(ಸಿ) ಪ್ರವರ್ಗ 3 (ಪ್ರವರ್ಗ 1ಮತ್ತು ಪ್ರವರ್ಗ 2ರ ಅಡಿಯಲ್ಲಿ ವ್ಯಾಪ್ತಿಗೆ ಬಾರದ ಔಷಧಗಳು)
ಪುನರಾವರ್ತಿತ ಔಷಧಗಳು; ಸ್ವಯಂ ಪ್ರತಿರಕ್ಷಣಾ ಔಷಧಗಳು, ಕ್ಯಾನ್ಸರ್ ನಿಗ್ರಹ ಔಷಧಗಳು, ಮಧುಮೇಹ ನಿಗ್ರಹ ಔಷಧಗಳು, ಸೋಂಕು ನಿರೋಧಕ ಔಷಧಗಳು, ಹೃದಯರಕ್ತನಾಳದ ಔಷಧಗಳು, ಸೈಕೋಟ್ರೋಪಿಕ್ ಔಷಧಗಳು ಮತ್ತು ಆಂಟಿ-ರೆಟ್ರೊವೈರಲ್ ಔಷಧಗಳು; ವಿಟ್ರೊ ಡಯಾಗ್ನೋಸ್ಟಿಕ್ ಸಾಧನಗಳು; ಅನುಮೋದನೆಯಂತೆ ಇತರ ಔಷಧಗಳು; ಇತರ ಔಷಧಗಳನ್ನು ಭಾರತದಲ್ಲಿ ಉತ್ಪಾದಿಸಲಾಗುವುದಿಲ್ಲ.
ಪ್ರೋತ್ಸಾಹಕ ದರವು ಮೊದಲ ನಾಲ್ಕು ವರ್ಷಗಳಲ್ಲಿ ಪ್ರವರ್ಗ 1 ಮತ್ತು ಪ್ರವರ್ಗ 2 ಉತ್ಪನ್ನಗಳಿಗೆ ಶೇ.10 (ಹೆಚ್ಚುತ್ತಿರುವ ಮಾರಾಟ ಮೌಲ್ಯದ), ಯೋಜನೆಯಡಿ ಐದನೇ ವರ್ಷಕ್ಕೆ ಶೇ.8 ಮತ್ತು ಯೋಜನೆಯ ಆರನೇ ವರ್ಷದ ಉತ್ಪಾದನೆಗೆ ಶೇ. 6 ಆಗಿರುತ್ತದೆ.
ಪ್ರೋತ್ಸಾಹಕ ದರವು ಮೊದಲ ನಾಲ್ಕು ವರ್ಷಗಳು ಪ್ರವರ್ಗ 3 ಉತ್ಪನ್ನಗಳಿಗೆ ಶೇ.5 (ಹೆಚ್ಚುತ್ತಿರುವ ಮಾರಾಟ ಮೌಲ್ಯದ), ಯೋಜನೆಯಡಿ ಉತ್ಪಾದನೆಯ ಆರನೇ ವರ್ಷಕ್ಕೆ ಶೇ.4 ಮತ್ತು ಐದನೇ ವರ್ಷಕ್ಕೆ ಶೇ.3 ಆಗಿರುತ್ತದೆ.
ಯೋಜನೆಯ ಅವಧಿ 2020-21ರ ಆರ್ಥಿಕ ವರ್ಷದಿಂದ 2028-29ರವರೆಗೆ ಇರುತ್ತದೆ. ಅರ್ಜಿಗಳ ಪ್ರಕ್ರಿಯೆಯ ಅವಧಿ (ಹಣಕಾಸು ವರ್ಷ 2020-21), ಒಂದು ವರ್ಷದ ಐಚ್ಛಿಕ ಗರ್ಭಾವಸ್ಥೆಯ ಅವಧಿ (ಹಣಕಾಸು ವರ್ಷ 2021-22), 6 ವರ್ಷಗಳ ಪ್ರೋತ್ಸಾಹ ಮತ್ತು ಹಣಕಾಸು ವರ್ಷ 2028-29 ಹಣಕಾಸು ವರ್ಷ 2027-28ರ ಮಾರಾಟಕ್ಕೆ ಪ್ರೋತ್ಸಾಹ ಧನ ವಿತರಣೆಯನ್ನು ಒಳಗೊಂಡಿರುತ್ತದೆ.
ಹಿನ್ನೆಲೆ:
ಭಾರತೀಯ ಔಷಧೀಯ ಉದ್ಯಮವು ಗಾತ್ರದ ದೃಷ್ಟಿಯಿಂದ ವಿಶ್ವದ 3ನೇ ಅತಿ ದೊಡ್ಡದು ಮತ್ತು ಮೌಲ್ಯದ ದೃಷ್ಟಿಯಿಂದ 40 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಒಟ್ಟು ಔಷಧಕ್ಕೆ ಮತ್ತು ಜಾಗತಿಕವಾಗಿ ರಫ್ತಾಗುವ ಔಷಧಕ್ಕೆ ಶೇ.3.5 ಕೊಡುಗೆಯನ್ನು ದೇಶವು ನೀಡುತ್ತದೆ. ಅಮೆರಿಕ, ಯುಕೆ, ಐರೋಪ್ಯ ಒಕ್ಕೂಟ, ಕೆನಡಾ ಮುಂತಾದ ಹೆಚ್ಚು ನಿಯಂತ್ರಿತ ಮಾರುಕಟ್ಟೆಗಳೂ ಸೇರಿದಂತೆ 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಿಗೆ ಭಾರತ ರಫ್ತು ಮಾಡುತ್ತದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ಹೆಚ್ಚು ನುರಿತ / ತಾಂತ್ರಿಕ ಮಾನವಶಕ್ತಿ ಹೊಂದಿರುವ ಕಂಪನಿಗಳೊಂದಿಗೆ ಭಾರತವು ಔಷಧಗಳ ಅಭಿವೃದ್ಧಿ ಮತ್ತು ಉತ್ಪಾದನೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ದೇಶವು ಹಲವಾರು ಪ್ರಸಿದ್ಧ ಔಷಧೀಯ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳನ್ನೂ ಹೊಂದಿದೆ ಮತ್ತು ಪೂರಕ ಉದ್ಯಮಗಳ ದೃಢವಾದ ಬೆಂಬಲವನ್ನೂ ಹೊಂದಿದೆ.
ಪ್ರಸ್ತುತ, ಅಗ್ಗ ದರದ ಜನೌಷಧಗಳು ಭಾರತದ ರಫ್ತಿನ ಪ್ರಮುಖ ಅಂಶವಾಗಿದೆ, ಆದರೆ ಪೇಟೆಂಟ್ ಪಡೆದ ಔಷಧಗಳ ದೇಶೀಯ ಬೇಡಿಕೆಯ ಹೆಚ್ಚಿನ ಭಾಗವನ್ನು ಆಮದು ಮೂಲಕ ಪೂರೈಸಲಾಗುತ್ತದೆ. ಏಕೆಂದರೆ ಭಾರತೀಯ ಔಷಧೀಯ ವಲಯವು ಅಗತ್ಯವಾದ ಔಷಧ ಸಂಶೋಧನೆ ಮತ್ತು ಅಭಿವೃದ್ಧಿ ಜೊತೆಗೆ ಹೆಚ್ಚಿನ ಮೌಲ್ಯದ ಉತ್ಪಾದನೆಯಲ್ಲಿ ಕೊರತೆಯನ್ನು ಹೊಂದಿದೆ. ವೈವಿಧ್ಯಮಯ ಉತ್ಪನ್ನ ವಿಭಾಗಗಳಲ್ಲಿ ಹೂಡಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಜಾಗತಿಕ ಮತ್ತು ದೇಶೀಯ ಉತ್ಪಾದಕರನ್ನು ಉತ್ತೇಜಿಸುವ ಸಲುವಾಗಿ, ಜೈವಿಕ ಔಷಧಗಳು, ಸಂಕೀರ್ಣ ಜನೌಷಧಗಳು, ಪೇಟೆಂಟ್ ಪಡೆದ ಔಷಧಗಳು ಅಥವಾ ಪೇಟೆಂಟ್ ಅವಧಿ ಮುಗಿಯುವ ಹಂತದಲ್ಲಿರುವ ಔಷಧಗಳು ಮತ್ತು ಕೋಶ ಆಧಾರಿತ ಅಥವಾ ಜೀನ್ ಥೆರಪಿ ಉತ್ಪನ್ನಗಳು ಮುಂತಾದ ನಿರ್ದಿಷ್ಟ ಉನ್ನತ ಮೌಲ್ಯದ ಸರಕುಗಳನ್ನು ಉತ್ತೇಜಿಸಲು ಒಂದು ಉತ್ತಮ ವಿನ್ಯಾಸಿತ ಮತ್ತು ಸೂಕ್ತ ಗುರಿಯ ಮಧ್ಯಸ್ಥಿಕೆಯ ಅಗತ್ಯವಿದೆ.
***
(Release ID: 1700538)
Visitor Counter : 387
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam