ರಾಷ್ಟ್ರಪತಿಗಳ ಕಾರ್ಯಾಲಯ

ಏರೋ ಇಂಡಿಯಾ -2021ರ ಸಮಾರೋಪ ಸಮಾರಂಭ ಉದ್ದೇಶಿಸಿ ರಾಷ್ಟ್ರಪತಿಯವರ ಭಾಷಣ


ಭಾರತ ಇಂದು ಕೇವಲ ಮಾರುಕಟ್ಟೆಯಷ್ಟೇ ಅಲ್ಲ, ವಿಶ್ವಕ್ಕೆ ರಕ್ಷಣಾ ವಲಯ ಸೇರಿದಂತೆ ಅಪಾರ ಅವಕಾಶಗಳನ್ನು ನೀಡುವ ತಾಣವಾಗಿದೆ: ರಾಷ್ಟ್ರಪತಿ ರಾಮನಾಥ ಕೋವಿಂದ್

Posted On: 05 FEB 2021 6:28PM by PIB Bengaluru

ಇಂದು ಭಾರತ ಕೇವಲ ಒಂದು ಮಾರುಕಟ್ಟೆಯಾಗಷ್ಟೇ ಉಳಿದಿಲ್ಲ, ಬದಲಾಗಿ ರಕ್ಷಣಾ ವಲಯ  ಸೇರಿದಂತೆ ವಿವಿಧ ವಲಯಗಳಲ್ಲಿ ಅಪಾರ ಅವಕಾಶಗಳನ್ನು ನೀಡುವ ತಾಣವಾಗಿದೆ ಎಂದು ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ (2021ರ ಫೆಬ್ರವರಿ 5ರಂದು) ಏರೋ ಇಂಡಿಯಾ -21 ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಾಗತಿಕ ಮಟ್ಟದಲ್ಲಿ ನಿರಂತರ ವೃದ್ಧಿಸುತ್ತಿರುವ ಭಾರತದ ರಕ್ಷಣಾ ಮತ್ತು ವಾಯು ಪ್ರದೇಶದ ಸಾಮರ್ಥ್ಯಕ್ಕೆ ಏರೋ ಇಂಡಿಯಾ 2021 ಜ್ವಲಂತ ಉದಾಹರಣೆಯಾಗಿದೆ ಎಂದರು. ಈ ಕಾರ್ಯಕ್ರಮ ಭಾರತದ ಸಾಮರ್ಥ್ಯದ ಮೇಲೆ ಸ್ಥಿರವಾಗಿ ಹೆಚ್ಚುತ್ತಿರುವ ಜಾಗತಿಕ ವಿಶ್ವಾಸವನ್ನು ಬಿಂಬಿಸಿದೆ ಎಂದರು. 

ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ಕೈಗೊಳ್ಳಲಾಗಿರುವ ಸುಧಾರಣೆಗಳು ವಾಯು ಪ್ರದೇಶ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆದಾರರಿಗೆ ಮತ್ತು ಖಾಸಗಿ ಕಂಪನಿಗಳಿಗೆ ಅಭೂತಪೂರ್ವ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದು ರಾಷ್ಟ್ರಪತಿ ತಿಳಿಸಿದರು. ನಾವು ಸ್ವಾವಲಂಬನೆ ಮತ್ತು ರಫ್ತು ಉತ್ತೇಜನದ ಎರಡು ಉದ್ದೇಶಗಳೊಂದಿಗೆ ರಕ್ಷಣಾ ವಲಯವನ್ನು ಅಗ್ರ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಗುರಿಯೊಂದಿಗೆ ಹಲವಾರು ನೀತಿ ಉಪಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು. 

ಉತ್ಪಾದಕರು ಭಾರತದಲ್ಲಿ ಘಟಕ ಸ್ಥಾಪಿಸಲು ಸುಗಮ ವಾಣಿಜ್ಯವನ್ನು ಉತ್ತೇಜಿಸಲು ಸರ್ಕಾರ ಗಮನ ಹರಿಸಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ರಕ್ಷಣಾ ವಲಯ ಸಹ ಸ್ಥಿರವಾದ ಉದಾರೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಕೈಗಾರಿಕಾ ಪರವಾನಗಿ ಅವಶ್ಯಕತೆಗಳನ್ನು ಹಲವಾರು ವಸ್ತುಗಳಿಗೆ ತೆಗೆದುಹಾಕಲಾಗಿದೆ. ಕೈಗಾರಿಕಾ ಪರವಾನಗಿ ಮತ್ತು ರಫ್ತು ದೃಢೀಕರಣಗಳ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ ಮತ್ತು ಆನ್‌ ಲೈನ್‌  ಮಾಡಲಾಗಿದೆ. ರಕ್ಷಣಾ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮತ್ತು ಎಂ.ಎಸ್‌.ಎಂ.ಇ.ಗಳಿಗೆ ಪ್ರಚೋದನೆ ನೀಡಲು ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎರಡು ರಕ್ಷಣಾ ಕಾರಿಡಾರ್‌ ಗಳನ್ನು ಸ್ಥಾಪಿಸಲಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬನೆಯ ಹಾದಿಗೆ ಕೊಂಡೊಯ್ಯುವ ಈ ಎಲ್ಲಾ ಪ್ರಯತ್ನಗಳು ದೇಶದಲ್ಲಿ ಉದ್ಯೋಗ ಸೃಷ್ಟಿಯ ದೊಡ್ಡ ಸಾಮರ್ಥ್ಯವನ್ನು ತೆರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಏರೋ ಇಂಡಿಯಾ 2021 ವೇಳೆ ಆಯೋಜಿಸಲಾಗಿದ್ದ 'ಹಿಂದೂ ಮಹಾಸಾಗರದಲ್ಲಿ ವರ್ಧಿತ ಶಾಂತಿ, ಭದ್ರತೆ ಮತ್ತು ಸಹಕಾರ' ಎಂಬ ವಿಷಯ ಕುರಿತು ಹಿಂದೂ ಮಹಾಸಾಗರ ಪ್ರದೇಶದ ರಕ್ಷಣಾ ಸಚಿವರುಗಳ ಸಮಾವೇಶವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿಯವರು, ಭಾರತ ಸದಾ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯ ಬಗ್ಗೆ ವಕಾಲತ್ತು ವಹಿಸಿದೆ ಎಂದರು. ಹಿಂದೂಮಹಾಸಾಗರ ವಲಯ ತನ್ನ ಪ್ರಾಕೃತಿಕ ಸಂಪನ್ಮೂಲ ಮತ್ತು ವ್ಯೂಹಾತ್ಮಕ ತಾಣದಿಂದಾಗಿ ಒಂದು ಮಹತ್ವದ ವಲಯವಾಗಿದೆ.  ನಾವು ‘ಸಾಗರ್’, ಕಲ್ಪನೆಗೆ ಚಾಲನೆ ನೀಡಿದ್ದೇವೆ, ಇದು ಹಿಂದೂ ಮಹಾಸಾಗರ ವಲಯದಲ್ಲಿ ಸಹಕಾರ ಉತ್ತೇಜಿಸಲು ವಲಯದ ಎಲ್ಲರ ಭದ್ರತೆ ಮತ್ತು ಪ್ರಗತಿಗಾಗಿ ಇರುವುದಾಗಿದೆ ಎಂದರು. ಹಿಂದೂ ಮಹಾಸಾಗರ ವಲಯ ರಾಷ್ಟ್ರಗಳು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ರಕ್ಷಣಾ ಸಹಕಾರವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದರು. 

ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಲ್ಲಿ ಯೋಜನೆ ಮತ್ತು ಸಮನ್ವಯಕ್ಕಾಗಿ ನಮ್ಮ ಪರಿಣತಿ ಮತ್ತು ಸಂಪನ್ಮೂಲಗಳನ್ನು ಎಲ್ಲಾ ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಭಾರತ ಸದಾ ಸಿದ್ಧವಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಕೋವಿಡ್ -19 ಸಾಂಕ್ರಾಮಿಕದ ತರುವಾಯ, ಸಾಗರ್ -1 ಕಾರ್ಯಾಚರಣೆಯಡಿ ನಾವು ನಮ್ಮ ನೆರೆಯವರನ್ನು ತಲುಪಿ, ಅವರಿಗೆ ಔಷಧ, ತಪಾಸಣೆ ಕಿಟ್, ವೆಂಟಿಲೇಟರ್, ಮಾಸ್ಕ್, ಕೈಗವಸು, ಇತರ ವೈದ್ಯಕೀಯ ಪೂರೈಕೆ ಮತ್ತು  ವೈದ್ಯಕೀಯ ತಂಡದ ನೆರವು ಒದಗಿಸಿದ್ದೇವೆ ಎಂದರು. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಡೀ ಮಾನವ ಕುಲಕ್ಕೆ ನೆರವಾಗಲು, ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಬಳಸುವ ಭಾರತದ ಬದ್ಧತೆಗೆ ಅನುಗುಣವಾಗಿ, ನಮ್ಮ ಸ್ನೇಹಪರ ವಿದೇಶಿ ರಾಷ್ಟ್ರಗಳಿಗೆ ಅನುದಾನದ ಸಹಾಯದಡಿಯಲ್ಲಿ ಸರಬರಾಜು ಈಗಾಗಲೇ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದರು.

***



(Release ID: 1695693) Visitor Counter : 223