ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರ ಜೊತೆ ಪ್ರಧಾನಿ ಸಂವಾದ

Posted On: 25 JAN 2021 9:12PM by PIB Bengaluru

ಎಲ್ಲಕ್ಕಿಂತ ಮೊದಲು, ನಿಮ್ಮೆಲ್ಲರಿಗೂಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಪುರಸ್ಕಾರಪಡೆದಿರುವುದಕ್ಕಾಗಿ ಬಹಳ ಬಹಳ ಅಭಿನಂದನೆಗಳು. ನೀವು ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ತಿಳಿದ ಬಳಿಕ ನಿಮ್ಮ ಉತ್ಸಾಹ ಇನ್ನಷ್ಟು ತೀವ್ರಗೊಂಡಿರಬಹುದು. ನಿಮ್ಮ ಪೋಷಕರು, ಸ್ನೇಹಿತರು, ಶಿಕ್ಷಕರು-ಇವರೆಲ್ಲಾ ನಿಮ್ಮಷ್ಟೇ ತವಕದಿಂದ ಇರಬಹುದು. ನಿಮ್ಮಂತೆ, ನಾನು ಕೂಡಾ ನಿಮ್ಮನ್ನು ಭೇಟಿಯಾಗಲು ಬಹಳ ತವಕದಿಂದಿದ್ದೆ, ಆದರೆ ಕೊರೊನಾದಿಂದಾಗಿ ನಾವು ವರ್ಚುವಲ್ ಮೂಲಕ ಭೇಟಿಯಾಗುತ್ತಿದ್ದೇವೆ.

ಪ್ರೀತಿಯ ಮಕ್ಕಳೇ,

ನೀವು ಎಲ್ಲಾ ಕೆಲಸಗಳನ್ನು ಕೊರೊನಾ ಅವಧಿಯಲ್ಲಿ ಮಾಡಿರುವುದರಿಂದ ನೀವು ಪಡೆದಿರುವ ಪ್ರಶಸ್ತಿ ಬಹಳ ವಿಶೇಷವಾದದ್ದು. ನಿಮ್ಮ ಕೆಲಸಗಳು, ಇಂತಹ ಸಣ್ಣ ವಯಸ್ಸಿನಲ್ಲಿ, ಬಹಳ ಆಶ್ಚರ್ಯ ತರಿಸುವಂತಹವು. ಕೆಲವರು ಕ್ರೀಡೆಯಲ್ಲಿ ದೇಶವನ್ನು ಉನ್ನತಿಗೆ ಕೊಂಡೊಯ್ಯುತ್ತಿದ್ದರೆ, ಇನ್ನು ಕೆಲವರು ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಭಾರತದ ಹೆಮ್ಮೆಯನ್ನು ಎತ್ತರಿಸುವ ಕೆಲಸ, ನಿಮ್ಮಲ್ಲಿಯವರೊಬ್ಬರು ಭವಿಷ್ಯದಲ್ಲಿ ಆಟಗಾರ, ವಿಜ್ಞಾನಿ, ರಾಜಕೀಯ ನಾಯಕ ಅಥವಾ ಸಿ... ಆಗುವ ಮೂಲಕವೂ ಸಾಧ್ಯವಾಗಲಿದೆ. ಇಲ್ಲಿ ತೋರಿಸಲಾದ ವೀಡಿಯೋ ಚಲನಚಿತ್ರ ನಿಮ್ಮ ಸಾಧನೆಗಳನ್ನು ವಿವರವಾಗಿ ಚರ್ಚಿಸಿದೆ. ನನಗೆ ಕೆಲವು ಮಕ್ಕಳ ಬಗ್ಗೆ ಕೇಳಿ ತಿಳಿದಿದೆ. ಉದಾಹರಣೆಗೆ ಮುಂಬಯಿಯ ಪುತ್ರಿ ಕಾಮ್ಯ ಕಾರ್ತಿಕೇಯನ್. ನಿಮಗೆ ನೆನಪಿರಬಹುದು ನಾನು ಆಕೆಯನ್ನು ಒಮ್ಮೆಮನ್ ಕಿ ಬಾತ್ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೆ. ಕಾಮ್ಯ ಪರ್ವತಾರೋಹಣ ಕ್ಷೇತ್ರದಲ್ಲಿ ದೇಶದ ಹೆಮ್ಮೆಯನ್ನು ಎತ್ತರಕ್ಕೇರಿಸಿದುದಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ನಾವು ಮೊದಲು ಕಾಮ್ಯರಲ್ಲಿ ಮಾತನಾಡೋಣ, ನಾನು ಆಕೆಯಲ್ಲಿ ಏನನ್ನೋ ಕೇಳಲಿಕ್ಕಿದೆ

ಪ್ರಶ್ನೆ: ಕಾಮ್ಯ, ಇತ್ತೀಚಿನ ಕೆಲವು ದಿನಗಳಲ್ಲಿ ನೀವು ಖಾಲಿ ಕುಳಿತಿದ್ದೀರಿ ಎಂದು ನಾನು ಭಾವಿಸುವುದಿಲ್ಲ, ನೀವು ಏನನ್ನಾದರೂ ಮಾಡುತ್ತಿದ್ದಿರಬೇಕು, ಹಾಗಾಗಿ ನೀವು ಯಾವ ಹೊಸ ಪರ್ವತವನ್ನು ಗೆದ್ದಿದ್ದೀರಿ? ದಿನಗಳಲ್ಲಿ ನೀವು ಏನು ಮಾಡಿದ್ದೀರಿ? ಅಥವಾ ಕೊರೊನಾದಿಂದಾಗಿ ನೀವು ಸಮಸ್ಯೆಗಳನ್ನೇನಾದರೂ ಎದುರಿಸಬೇಕಾಯಿತೇ?

ಉತ್ತರ: ಸರ್, ಕೊರೊನಾವು ಇಡೀ ದೇಶಕ್ಕೆ ಹಲವು ಸಮಸ್ಯೆಗಳನ್ನು ತಂದೊಡ್ಡಿತು. ಆದರೆ, ತಾವು ಹೇಳಿದಂತೆ, ನಾವು ಸೋಮಾರಿಯಾಗಿ ಕುಳಿತುಕೊಳ್ಳುವಂತಿಲ್ಲ. ನಾವು ಕೊರೊನಾ ಬಳಿಕ ಇನ್ನಷ್ಟು ಬಲಿಷ್ಟವಾಗಿ ರೂಪುಗೊಳ್ಳಬೇಕು. ಆದುದರಿಂದ ನಾನು ನನ್ನ ತರಬೇತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಜೊತೆಗೆ ದೈನಂದಿನ ಕೆಲಸ ಕಾರ್ಯಗಳನ್ನು ಕೊರೊನಾ ಕಾಲದಲ್ಲಿಯೂ ನಡೆಸಿಕೊಂಡು ಬಂದಿದ್ದೇನೆ. ಮತ್ತು ನಾವು ಈಗ ಜಮ್ಮು ಕಾಶ್ಮೀರದ ಗುಲಮಾರ್ಗ್ ನಲ್ಲಿ ತರಬೇತಿಯಲ್ಲಿದ್ದೇವೆ, ನನ್ನ ಮುಂದಿನ ಆರೋಹಣ ಉತ್ತರ ಅಮೇರಿಕಾದಲ್ಲಿರುವ ಮೌಂಟ್ ದೇನಾಲಿಯನ್ನು ಏರುವುದಾಗಿದ್ದು, ಅದು ವರ್ಷದ ಜೂನ್ ತಿಂಗಳಿಗೆ ನಿಗದಿಯಾಗಿದೆ.

ಪ್ರಶ್ನೆ: ಹಾಗಾಗಿ, ನೀವೀಗ ಬಾರಾಮುಲ್ಲಾದಲ್ಲಿದ್ದೀರೋ?

ಉತ್ತರ: ಹೌದು ಸರ್, ನಿಮ್ಮ ಕಚೇರಿ ನಮಗೆ ಬಹಳ ಸಹಾಯ ಮಾಡಿದೆ, ಮತ್ತು ಅದು ಕಳೆದ ಮೂರು ದಿನಗಳಿಂದ 24*7 ಅವಧಿ ಕೆಲಸ ಮಾಡಿದೆ. ಮತ್ತು ಅದರಿಂದಾಗಿ ನಾವು ಇಲ್ಲಿ ಬಾರಾಮುಲ್ಲಾಕ್ಕೆ ಬಂದು, ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗಿದೆ.

ಪ್ರಶ್ನೆ: ನಿಮ್ಮೊಂದಿಗೆ ಬೇರೆ ಯಾರೆಲ್ಲಾ ಇದ್ದಾರೆ, ಅವರನ್ನೆಲ್ಲ ಪರಿಚಯಿಸಿ.

ಉತ್ತರ; ನನ್ನ ಪೋಷಕರು ಸರ್.

ತಂದೆ: ನಮಸ್ಕಾರ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ: ನಿಮಗೆ ಶುಭಾಶಯಗಳು, ನೀವು ನಿಮ್ಮ ಮಗಳಿಗೆ ಪ್ರೋತ್ಸಾಹ ನೀಡಿದ್ದೀರಿ ಮತ್ತು ಸಹಾಯ ಕೂಡಾ ಮಾಡಿದ್ದೀರಿ, ಪೋಷಕರಿಗೆ ನಾನು ವಿಶೇಷವಾಗಿ ಗೌರವವನ್ನು ಸಲ್ಲಿಸುತ್ತೇನೆ.

ಪ್ರಶ್ನೆ: ಬಹಳ ದೊಡ್ಡ ಪ್ರಶಸ್ತಿ ಎಂದರೆ ನಿಮ್ಮ ಕಠಿಣ ದುಡಿಮೆ ಮತ್ತು ನಿಮ್ಮ ನೈತಿಕ ಶಕ್ತಿ, ಬಲ. ನೀವು ಪರ್ವತಗಳನ್ನು ಆರೋಹಣ ಮಾಡುತ್ತೀರಿ, ಟ್ರೆಕ್ಕಿಂಗ್ ಮಾಡುತ್ತೀರಿ ಮತ್ತು ಇಡೀ ವಿಶ್ವವನ್ನು ಸುತ್ತುತ್ತೀರಿ. ನೀವು ವರ್ಷವನ್ನು ಹೇಗೆ ಕಳೆಯುತ್ತೀರಿ, ಕೊರೊನಾದಲ್ಲಿ ಪ್ರತಿಯೊಂದೂ ಮುಚ್ಚಲ್ಪಟ್ಟಿರುವಾಗ ನೀವು ಏನು ಮಾಡಿದಿರಿ?

ಉತ್ತರ: ಸರ್, ನಾನು ಕೊರೊನಾದಲ್ಲಿ ಅವಕಾಶಗಳನ್ನು ಅರಸಿದೆ.

ಪ್ರಶ್ನೆ: ಅಂದರೆ, ನೀವು ಪ್ರತಿಕೂಲ ಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿರಾ?

ಉತ್ತರ: ಹೌದು ಸರ್.

ಪ್ರಶ್ನೆ: ವಿವರಿಸಿ.

ಉತ್ತರ: ಸರ್, ನಾನು ಈಗ ಪರ್ವತಗಳನ್ನು ಹತ್ತಲಾರೆ, ಆದರೆ, ನಾನು ಅವಧಿಯಲ್ಲಿ ಇತರರನ್ನು ಪ್ರೇರೇಪಿಸಬಹುದು ಎಂದು ಭಾವಿಸಿದೆ. ಇದರಿಂದಾಗಿ ನಾನು ಬಹಳಷ್ಟು ಶಾಲೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ವೆಬಿನಾರುಗಳನ್ನು ಆಯೋಜಿಸಿದೆ ಮತ್ತು ನಾನು ನನ್ನ ಉದ್ದೇಶದ ಬಗ್ಗೆಯೂ ತಿಳಿಸಿದೆ ಹಾಗು ಬಗ್ಗೆ ಸಂದೇಶ ಹರಡುವುದು ನನ್ನ ಇರಾದೆಯಾಗಿದೆ

ಪ್ರಶ್ನೆ: ಆದರೆ, ನೀವು ದೈಹಿಕ ಕ್ಷಮತೆಗಾಗಿ ಏನನ್ನಾದರೂ ಮಾಡಬೇಕಿತ್ತಲ್ಲವೇ?

ಉತ್ತರ: ಹೌದು ಸರ್, ಸಾಮಾನ್ಯವಾಗಿ, ನಾವು ಓಡಲು ಇಲ್ಲವೇ ಸೈಕ್ಲಿಂಗ್ ಮಾಡಲು ಹೋಗುತ್ತೇವೆ. ಆದರೆ ಮೊದಲ ಬಾರಿಗೆ ಲಾಕ್ ಡೌನ್ ಜಾರಿ ಮಾಡಿದಾಗ ಇದಕ್ಕೆಲ್ಲ ಆವಕಾಶ ಇರಲಿಲ್ಲ. ಆದುದರಿಂದ ನಾವು ಮುಂಬಯಿಯ ನಮ್ಮ 21 ಮಹಡಿಯ ಮೆಟ್ಟಿಲನ್ನು ಹತ್ತುವ ಮೂಲಕ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುತ್ತಿದ್ದೆವು. ಬಳಿಕ ಲಾಕ್ ಡೌನ್ ನಲ್ಲಿ ಕೆಲವು ಪ್ರಮಾಣದ ರಿಯಾಯತಿಗಳು ಲಭ್ಯವಾದವು. ನಾವು ಮುಂಬಯಿಗೆ ಸ್ಥಳಾಂತರಗೊಂಡದ್ದು ಅನುಕೂಲವಾಯಿತು, ಇದರಿಂದ ನಮಗೆ ವಾರಾಂತ್ಯದಲ್ಲಿ ಸಹ್ಯಾದ್ರಿಯ ಸಣ್ಣ ಟ್ರ್ಯಾಕ್ ಗಳಲ್ಲಿ ನಡೆದಾಡಲು ಅನುಕೂಲತೆಗಳು ಲಭಿಸಿದವು.

ಪ್ರಶ್ನೆ: ಮುಂಬಯಿಯಲ್ಲಿ ನಿಮಗೆ ಚಳಿಗಾಲದ ಬಗ್ಗೆ ತಿಳಿದಿರಲಿಕ್ಕಿಲ್ಲ, ಬಾರಾಮುಲ್ಲಾದಲ್ಲಿ ಬಹಳ ಚಳಿ.

ಉತ್ತರ: ಹೌದು ಸರ್.

ಗೌರವಾನ್ವಿತ ಪ್ರಧಾನ ಮಂತ್ರಿಗಳ ಪ್ರತಿಕ್ರಿಯೆ: ನೋಡಿ, ಕೊರೊನಾ ಖಂಡಿತವಾಗಿಯೂ ಪ್ರತಿಯೊಬ್ಬರನ್ನೂ ಬಾಧಿಸಿದೆ. ಆದರೆ ನಾನು ಗಮನಿಸಿದ ಒಂದು ಸಂಗತಿ ಎಂದರೆ, ದೇಶದ ಮಕ್ಕಳು, ದೇಶದ ಭವಿಷ್ಯದ ಜನಾಂಗ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡುವಲ್ಲಿ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಿದೆ. ಮಕ್ಕಳು 20 ಸೆಕೆಂಡ್ ಗಳ ಕಾಲ ಸಾಬೂನಿನಿಂದ ಕೈಗಳನ್ನು ತೊಳೆಯುವುದನ್ನು ಶುರು ಮಾಡಿದರು. ಮತ್ತು ಬಳಿಕ ನಾನು ಸಾಮಾಜಿಕ ತಾಣಗಳಲ್ಲಿ ಮಕ್ಕಳು ಪರಿಹಾರಗಳ ಬಗ್ಗೆ ಹೇಳುತ್ತಿರುವ ಹಲವಾರು ವೀಡಿಯೋಗಳನ್ನು ನೋಡಿದೆ. ಇಂದು, ಅಂತಹ ಪ್ರತೀ ಮಗುವೂ ಪ್ರಶಸ್ತಿಯನ್ನು ಪಡೆದಿದೆ. ಮಕ್ಕಳಿಂದ ಕಲಿಯುವ ಸಂಸ್ಕೃತಿ ಇರುವ ಕುಟುಂಬ ಮತ್ತು ಸಮಾಜದಲ್ಲಿ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಬಹಳಷ್ಟು ಅವಕಾಶ ಇರುವ ಬಗ್ಗೆ ಮತ್ತು ಹಿರಿಯರು ನಿಂತ ನೀರಾಗುವ ಸ್ಥಿತಿ ಇರುವುದಿಲ್ಲ ಎಂಬ ಬಗ್ಗೆ ಸಂಶಯವೇ ಬೇಡ. ಅವರಲ್ಲಿ ಕಲಿಯುವ ಆಸಕ್ತಿ ಇರುತ್ತದೆ ಮತ್ತು ಉತ್ಸಾಹವೂ ಇರುತ್ತದೆ. ಹಿರಿಯರು ಕೂಡಾನಮ್ಮ ಮಕ್ಕಳು ಹೇಳಿದ್ದಾರೆ, ನಾವದನ್ನು ಖಂಡಿತವಾಗಿ ಮಾಡಬೇಕುಎಂದು ಹೇಳುತ್ತಾರೆ. ನಾವಿದನ್ನು ಕೊರೊನಾ ಅವಧಿಯಲ್ಲಿ ಮತ್ತು ಸ್ವಚ್ಛ ಭಾರತ್ ಆಂದೋಲನದಲ್ಲಿ ಕೂಡಾ ನೋಡಿದ್ದೇವೆ. ಮಕ್ಕಳು ಒಂದು ನಿರ್ದಿಷ್ಟ ವಿಷಯಕ್ಕೆ ಸಂಪರ್ಕಿಸಲ್ಪಟ್ಟರೆ, ಅದು ಸದಾ ಯಶಸ್ವಿಯಾಗುತ್ತದೆ. ಕಾಮ್ಯ, ನಾನು ನಿಮಗೆ, ನಿಮ್ಮ ಪೋಷಕರಿಗೆ, ನಿಮ್ಮ ತರಬೇತಿದಾರರಿಗೆ, ಮತ್ತು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಎಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ಮತ್ತು ನೀವು ಕೂಡಾ ಕಾಶ್ಮೀರವನ್ನು ಆನಂದಿಸಿ ಮತ್ತು ನಿಮ್ಮು ಗುರಿ, ಉದ್ದೇಶದಲ್ಲಿ ಹೊಸ ಧೈರ್ಯದೊಂದಿಗೆ ಮುಂದುವರೆಯಿರಿ. ನಿಮ್ಮ ಆರೋಗ್ಯದ ಬಗ್ಗೆ, ನಿಮ್ಮ ದೈಹಿಕ ಕ್ಷಮತೆಯ ಬಗ್ಗೆ ಮತ್ತು ಹೊಸ ಎತ್ತರಗಳನ್ನು ತಲುಪುವ ಬಗ್ಗೆ ಕಾಳಜಿ ವಹಿಸಿರಿ. ಹೊಸ ಹೊಸ ಶಿಖರಗಳನ್ನು ಆರೋಹಣ ಮಾಡಿ. ಪ್ರೀತಿಯ ಮಕ್ಕಳೇ, ಜಾರ್ಖಂಡದ ಪುತ್ರಿ, ಸವಿತಾ ಕುಮಾರಿ ಕೂಡಾ ಇಂದು ನಮ್ಮೊಂದಿಗೆ ಇದ್ದಾರೆ. ಅವರು ಕ್ರೀಡಾ ಕ್ಷೇತ್ರದಲ್ಲಿಯ ಶ್ರೇಷ್ಟ ಸಾಧನೆಗಾಗಿ ಪ್ರಶಸ್ತಿಯನ್ನು ಗಳಿಸಿದ್ದಾರೆ

ಪ್ರಶ್ನೆ: ಸವಿತಾ ಜೀ, ನೀವು ಬಿಲ್ಲುಗಾರಿಕೆಯಲ್ಲಿ ಅಥವಾ ಶೂಟಿಂಗ್ ನಲ್ಲಿ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ? ನಿಮಗೆ ಚಿಂತನೆ ಹೇಗೆ ಬಂದಿತು ಮತ್ತು ನಿಮ್ಮ ಕುಟುಂಬದಿಂದ ಬೆಂಬಲ ದೊರೆಯಿತೇ? ದೂರದ ಜಾರ್ಖಂಡದ ಕಾಡಿನ ನಮ್ಮ ಪುತ್ರಿಯರಲ್ಲೊಬ್ಬರು ಶೌರ್ಯದ ಕೃತ್ಯವನ್ನು ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ದೇಶದ ಮಕ್ಕಳಿಗೆ ತಿಳಿಯಪಡಿಸಲೋಸುಗ ನಾನು ನಿಮ್ಮಿಂದ ವಿವರವನ್ನು ಕೇಳಬಯಸುತ್ತೇನೆ. ಇದರಿಂದ ದೇಶದ ಮಕ್ಕಳಿಗೆ ಪ್ರೇರಣೆ ದೊರೆಯಲಿದೆ. ನನಗೆ ಹೇಳಿ.

ಉತ್ತರ: ಸರ್ ನಾನು ಕಸ್ತೂರ್ಬಾ ಗಾಂಧಿ ಹೆಣ್ಣುಮಕ್ಕಳ ಶಾಲೆಯಲ್ಲಿ ಕಲಿಯುತ್ತಿದ್ದೆ ಮತ್ತು ನನಗೆ ಅಲ್ಲಿಂದಲೇ ಬಿಲ್ಲುಗಾರಿಕೆ ಕಲಿಯಲು ಪ್ರೇರಣೆ ದೊರೆಯಿತು.

ಪ್ರಶ್ನೆ: ನೀವು ದೇಶಕ್ಕೆ ಪದಕಗಳನ್ನು ತಂದುಕೊಡಲು ಆರಂಭ ಮಾಡಿದಿರಿ. ನಿಮಗೆ ದೇಶದ ಶುಭಾಶಯಗಳು. ನಿಮ್ಮ ಭವಿಷ್ಯದ ಯೋಜನೆಗಳು ಮತ್ತು ಗುರಿಗಳು ಏನು? ನೀವು ಎಷ್ಟು ಮುಂದೆ ಹೋಗಲು ಇಚ್ಛಿಸುತ್ತೀರಿ?.

ಉತ್ತರ: ಸರ್, ನಾನು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆಲ್ಲಬೇಕಿದೆ, ಯಾಕೆಂದರೆ, ರಾಷ್ಟ್ರಗೀತೆ ನುಡಿಸುವಾಗ ನಾನು ಬಹಳ ಸಂತೋಷಪಡುತ್ತೇನೆ.

ಪ್ರಶ್ನೆ: ಬಹಳ ಉತ್ತಮ! ನಿಮ್ಮೊಂದಿಗೆ ಬೇರೆ ಯಾರೆಲ್ಲ ಇದ್ದಾರೆ.

ಉತ್ತರ: ನನ್ನ ಪೋಷಕರು ಇಲ್ಲಿದ್ದಾರೆ.

ಪ್ರಶ್ನೆ: ಸರಿ, ಅವರು ಆಟವಾಡಿದ್ದರೋ? ನಿಮ್ಮ ತಂದೆ ಎಂದಾದರೂ ಕ್ರೀಡೆಗಳಲ್ಲಿ ಭಾಗವಹಿಸಿದ್ದರೋ?

ಉತ್ತರ: ಇಲ್ಲ ಸರ್.

ಪ್ರಶ್ನೆ: ಸರಿ, ನೀವು ಮೊದಲು ಆರಂಭ ಮಾಡಿದಿರೋ?

ಉತ್ತರ: ಹೌದು ಸರ್.

ಪ್ರಶ್ನೆ: ಆದರೆ, ನಿಮ್ಮ ಪೋಷಕರು ನೀವು ಹೊರಗೆ ಹೋಗಬೇಕಾದಾಗ ಚಿಂತಿಸುವುದಿಲ್ಲವೇ

ಉತ್ತರ: ಸರ್, ನಮ್ಮೊಂದಿಗೆ ಕೋಚ್ ಇರುತ್ತಾರೆ.

ಪ್ರಶ್ನೆ: ಆಗಬಹುದು

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ: ನೀವು ಒಲಿಂಪಿಕ್ಸ್ ಗೆ ಹೋಗಬಹುದು ಮತ್ತು ಚಿನ್ನದ ಪದಕ ತನ್ನಿ. ನಿಮ್ಮ ಕನಸು ನಿಜವಾಗಿಯೂ ಭಾರತದ ಪ್ರತಿಯೊಂದು ಮಗುವಿಗೂ ಹೊಸ ಕನಸುಗಳನ್ನು ಪೋಷಿಸಿಕೊಳ್ಳಲು ಪ್ರೇರಣೆ ಒದಗಿಸಬಲ್ಲದು. ನನ್ನ ಶುಭ ಹಾರೈಕೆಗಳು ಸದಾ ನಿಮ್ಮೊಂದಿಗಿವೆ. ಕ್ರೀಡಾ ಕ್ಷೇತ್ರದಲ್ಲಿ ಜಾರ್ಖಂಡದ ಪ್ರತಿಭೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ನಾನು ನೋಡಿದ್ದೇನೆ- ಜಾರ್ಖಂಡದ ಪುತ್ರಿಯರು ಬಹಳ ಅದ್ಭುತ, ಮತ್ತು ಅವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಹೇಗೆ ಮೂಡಿಸುತ್ತಿದ್ದಾರೆ ಎಂಬುದನ್ನುಕ್ರೀಡಾ ಕ್ಷೇತ್ರದಲ್ಲಿ ಸಣ್ಣ ಗ್ರಾಮಗಳಿಂದ, ಪಟ್ಟಣಗಳಿಂದ ನಿಮ್ಮಂತಹ ಪ್ರತಿಭೆ ಉದ್ಭವಿಸಿದರೆ, ಅದು ದೇಶದ ಹೆಸರನ್ನು ವಿಶ್ವದಾದ್ಯಂತ ಬೆಳಗುವಂತೆ ಮಾಡುತ್ತದೆ. ಸವಿತಾ, ನಿಮಗೆ ನನ್ನ ಶುಭಾಶೀರ್ವಾದಗಳಿವೆ. ಮುಂದೆ ನಡೆಯಿರಿ.

ಉತ್ತರ: ಧನ್ಯವಾದಗಳು ಸಾರ್.

ಪ್ರಧಾನ ಮಂತ್ರಿ ಮೋದಿ: ಒಳ್ಳೆಯದು, ಸ್ನೇಹಿತರೇ, ಬಾರಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಗಳಲ್ಲಿ ವೈವಿಧ್ಯ ಇರುವುದು ಬಹಳ ಒಳ್ಳೆಯ ಸಂಗತಿ. ಬಿಲ್ಲುಗಾರಿಕೆಯಿಂದ ನಾವು ಈಗ ಕಲಾ ಜಗತ್ತಿಗೆ ಹೋಗೋಣ. ಮಣಿಪುರದಿಂದ ನಮ್ಮ ಮಗಳು, ಕುಮಾರಿ ನವೀಶ್ ಕೀಶಾಂ ಅವರು ಇಂದು ಅವರ ಭವ್ಯವಾದ ಪೈಂಟಿಂಗ್ ಗಳಿಗಾಗಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಶ್ನೆ: ನವೀಶ್ ಹೇಳಿ ನನಗೆ, ನಾವು ನಿಮ್ಮಿಂದ ಕೇಳಲಿಚ್ಛಿಸುತ್ತೇವೆ. ನೀವು ಅತ್ಯುತ್ತಮ ಪೈಂಟಿಂಗ್ ಗಳನ್ನು ರಚಿಸಿದ್ದೀರಿ. ಬಣ್ಣಗಳಲ್ಲಿ ಬಹಳ ಶಕ್ತಿ ಇದೆ. ಮತ್ತು ಈಶಾನ್ಯವೇ ತನ್ನೊಳಗೆ ಬಹಳ ವರ್ಣಮಯವಾದ ಲೋಕವನ್ನು ಹೊಂದಿದೆ. ಇಂತಹ ವರ್ಣಗಳು ಅಲಂಕೃತಗೊಂಡರೆ ಅದು ಜೀವನವನ್ನು ಕೊಟ್ಟಂತೆ. ನೀವು ಪೈಂಟಿಂಗ್ ಗಳನ್ನು ಪರಿಸರ ಮತ್ತು ಹಸಿರಿನ ಬಗ್ಗೆ ಮಾಡುತ್ತಿರುತ್ತೀರಿ ಎಂದು ನನಗೆ ತಿಳಿಸಲಾಗಿದೆ. ಮತ್ತು ವಿಷಯ ನಿಮಗೆ ಯಾಕೆ ಆಕರ್ಷಣೀಯವಾಯಿತು?

ಉತ್ತರ: ಎಲ್ಲಕ್ಕಿಂತ ಮೊದಲು ಶುಭ ಮಧ್ಯಾಹ್ನ ಸರ್. ನಿಮ್ಮೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸುವುದು ನಿಜವಾಗಿಯೂ ಒಂದು ದೊಡ್ಡ ಗೌರವ ಮತ್ತು ಮೊದಲು, ನನ್ನ ಹೆಸರು ವನೀಶ್ ಕೀಶಾಮಂದ್. ನಾನು ಪರಿಸರವನ್ನು ಆಧರಿಸಿದ ಪೈಂಟಿಂಗ್ ಗಳನ್ನು ಪ್ರೀತಿಸುತ್ತೇನೆ. ಯಾಕೆಂದರೆ ಈಗ ನಮ್ಮ ಪರಿಸರ ದಿನದಿಂದ ದಿನಕ್ಕೆ ಕೊಳಕಾಗುತ್ತಿದೆ. ಇಂಫಾಲಾದಲ್ಲಿಯೂ ಬಹಳ ಮಾಲಿನ್ಯ ಇದೆ. ಇದರಿಂದಾಗಿ ಭಾರೀ ಮಾಲಿನ್ಯ ಅಲ್ಲಿದೆ. ಇದನ್ನು ನಾನು ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಮತ್ತು ಪರಿಸರವನ್ನು, ನಮ್ಮ ಗಿಡಗಳನ್ನು ಮತ್ತು ಪ್ರಾಣಿಗಳನ್ನು  ರಕ್ಷಿಸುವ ಮೂಲಕ ಅದನ್ನು ಪರಿವರ್ತಿಸಲು ಆಶಿಸುತ್ತೇನೆನಮ್ಮ ವನ್ಯ ಸ್ಥಳಗಳು...ಅವುಗಳನ್ನು ರಕ್ಷಿಸಲು ಇಚ್ಛಿಸುತ್ತೇನೆ. ಹಾಗಾಗಿ ಸಂದೇಶವನ್ನು ಜನತೆಗೆ ಮುಟ್ಟಿಸಲು.. ಓರ್ವ ಕಲಾವಿದೆಯಾಗಿ ನಾನಿದನ್ನು ಮಾಡುತ್ತಿದ್ದೇನೆ.

ಪ್ರಶ್ನೆ: ಡ್ರಾಯಿಂಗ್ ಮಾಡುವ ಬೇರೆ ಯಾರಾದರೂ ನಿಮ್ಮ ಕುಟುಂಬದಲ್ಲಿ ಇದ್ದಾರೆಯೇ?. ನಿಮ್ಮ ತಂದೆ, ತಾಯಿ, ಸಹೋದರ, ಮಾವ ಅಥವಾ ಬೇರೆ ಯಾರಾದರೂ!.

ಉತ್ತರ: ಇಲ್ಲ ಸರ್. ನನ್ನ ತಂದೆ ವ್ಯಾಪಾರೋದ್ಯಮಿ ಮತ್ತು ನನ್ನ ತಾಯಿ ಗೃಹಿಣಿ ಮತ್ತು ನಾನೊಬ್ಬಳೇ ಕಲಾವಿದೆ.

ಪ್ರಶ್ನೆ: ನಿಮ್ಮ ಪೋಷಕರು ನಿಮ್ಮೊಂದಿಗೆ ಇದ್ದಾರೆಯೇ?

ಉತ್ತರ: ಹೌದು.

ಪ್ರಶ್ನೆ: ಅವರು ನಿಮಗೆ ಬೈಯ್ಯುವುದಿಲ್ಲವೇ? “ನೀನು ಯಾಕೆ ಇಡೀ ದಿನ ಪೈಂಟಿಂಗ್ ಮಾಡಿಕೊಂಡಿರುತ್ತಿ? ಯಾಕೆ ಓದುವುದಿಲ್ಲ, ನೀನ್ಯಾಕೆ ಅಡಿಗೆ ಮಾಡುವುದಿಲ್ಲ, ಕೆಲವಾದರೂ ಮನೆ ಕೆಲಸಗಳನ್ನು ನೀನ್ಯಾಕೆ ಮಾಡುವುದಿಲ್ಲ? ಎಂದು ರೀತಿಯಲ್ಲಿ ಅವರು ನಿಮಗೆ ಬೈಯ್ಯುವುದಿಲ್ಲವೇ?

ಉತ್ತರ: ಇಲ್ಲ ಸರ್, ಅವರು ನನಗೆ ಬಹಳ ಬೆಂಬಲ ಕೊಡುತ್ತಾರೆ.

ಪ್ರಶ್ನೆ: ಹಾಗಾದರೆ, ನೀವು ತುಂಬಾ ಅದೃಷ್ಟಶಾಲಿ. ಒಳ್ಳೆಯದು, ನೀವು ಬಹಳ ಕಿರಿ ವಯಸ್ಸಿನವರು, ಆದರೆ ನಿಮ್ಮ ಚಿಂತನೆಗಳು ಬಹಳ ದೊಡ್ಡವು. ಪೈಂಟಿಂಗ್ ಹೊರತುಪಡಿಸಿದರೆ ನಿಮ್ಮ ಇತರ ಹವ್ಯಾಸಗಳು ಯಾವುವು?

ಉತ್ತರ: ಸರ್, ನಾನು ಹಾಡುವುದನ್ನು ಇಷ್ಟಪಡುತ್ತೇನೆ, ನಾನು ಹಾಡುತ್ತೇನೆ ಮತ್ತು ಗಾರ್ಡನಿಂಗ್ ಕೂಡಾ ಮಾಡುತ್ತೇನೆ.

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ:

ನವೀಶ್, ನಾನು ಹಲವು ಬಾರಿ ಮಣಿಪುರಕ್ಕೆ ಬಂದಿದ್ದೇನೆ. ಮತ್ತು ಅಲ್ಲಿಯ ಪ್ರಕೃತಿ ನನ್ನನ್ನು ಬಹಳ ಆಕರ್ಷಿಸಿದೆ, ಇದು ನನ್ನ ಅನುಭವ. ಮತ್ತು ಅಲ್ಲಿಯ ಜನರಲ್ಲಿ ಪ್ರಕೃತಿಯ ಬಗ್ಗೆ ಪೂಜ್ಯ ಭಾವನೆ ಇದೆ. ಮತ್ತು ಈಶಾನ್ಯದಲ್ಲಿಯ ಪ್ರತಿಯೊಬ್ಬರೂ ಪ್ರಕೃತಿಯನ್ನು ರಕ್ಷಿಸುತ್ತ ಬದುಕುತ್ತಿದ್ದಾರೆ. ಇದು ಮಣಿಪುರದಲ್ಲಿಯೂ ಕಂಡುಬರುತ್ತದೆ. ಇದು ಶ್ರೇಷ್ಟ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಾನು ನಂಬುತ್ತೇನೆ.

ಪ್ರಶ್ನೆ: ಆಯಿತು, ನೀವು ಹಾಡುತ್ತೀರಿ ಕೂಡಾ, ನೀವು ಈಗಾಗಲೇ ಹೇಳಿದಂತೆ, ನೀವು ಏನಾದರೂ ಹಾಡುತ್ತೀರೋ?

ಉತ್ತರ: ಆಯಿತು ಸರ್, ಅಂದರೆ ನಾನು ವೃತ್ತಿಪರ ಗಾಯಕಿ ಅಲ್ಲ, ಆದರೆ ನಾನು ಹಾಡುವಿಕೆಯನ್ನು ಪ್ರೀತಿಸುತ್ತೇನೆ. ಇದು ನಮ್ಮ ಜನಪದ ಪದ್ಯ.

ಉತ್ತರ: ಅದ್ಭುತ. ನಾನು ನಿಮ್ಮ ಪೋಷಕರಿಗೂ ಅಭಿನಂದನೆಗಳನ್ನು ಹೇಳಲಿಚ್ಚಿಸುತ್ತೇನೆ ಮತ್ತು ನೀವು ಸಂಗೀತದಲ್ಲಿ ಏನಾದರೂ ಮಾಡಬಹುದೆಂದು ನಂಬುತ್ತೇನೆ. ನಿಮಗೆ ಒಳ್ಳೆಯ ಶಕ್ತಿ ಶಾಲೀ ಕಂಠವಿದೆ. ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಗೊತ್ತಿಲ್ಲದಿದ್ದರೂ, ನನಗೆ ಉತ್ತಮವೆಂದು ಕಂಡಿದೆ. ಅದು ಕೇಳಲು ಬಹಳ ಹಿತವಾಗಿತ್ತು. ಹಾಗಾಗಿ ನೀವು ಅದರ ಬಗ್ಗೆ ಕಠಿಣ ಪರಿಶ್ರಮ ಹಾಕಬೇಕು. ನಿಮಗೆ ನನ್ನ ಶುಭಾಶೀರ್ವಾದಗಳಿವೆ.

ಸ್ನೇಹಿತರೇ,

ನಮ್ಮ ದೇಶದ ಮಕ್ಕಳು ತಮ್ಮ ಜೀವನದಲ್ಲಿ ಬಹಳಷ್ಟು ಪ್ರತಿಭೆಯಿಂದ ಬದುಕುತ್ತಿದ್ದಾರೆ, ಅವರನ್ನು ಶ್ಲಾಘಿಸಿದಷ್ಟು ಸಾಲದು. ಒಂದೆಡೆ ಅದ್ಭುತ ಪೈಂಟಿಂಗ್ ಗಳನ್ನು ರಚಿಸುವ ನವೀಶ್ ನಮ್ಮೊಂದಿಗಿದ್ದರೆ, ಅಲ್ಲಿ ಕರ್ನಾಟಕದಿಂದ ರಾಕೇಶ್ ಕೃಷ್ಣ ಇದ್ದಾರೆ. ರಾಕೇಶ್ ಅವರು ಕೃಷಿ ಕ್ಷೇತ್ರದಲ್ಲಿಯ ಅನ್ವೇಷಣೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ರಾಕೇಶ್, ನಾನು ನಿಮ್ಮನ್ನು ಬಹಳ ಬಹಳ ಅಭಿನಂದಿಸುತ್ತೇನೆ. ಮತ್ತು ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಮಾತನಾಡಲು ಇಚ್ಛಿಸುತ್ತೇನೆ.

ಪ್ರಶ್ನೆ: ರಾಕೇಶ್, ನಾನು ನಿಮ್ಮ ವ್ಯಕ್ತಿ ಚಿತ್ರವನ್ನು ನೋಡುತ್ತಾ ಹೋಗುವಾಗ, ಅದನ್ನು ಬಹಳ ಮೆಚ್ಚಿಕೊಂಡೆ. ನೀವು ಬಹಳ ಸಣ್ಣ ವಯಸ್ಸಿನಲ್ಲಿ ಅನ್ವೇಷಣೆಗಳನ್ನು ಮಾಡುತ್ತಾ ಬಂದಿದ್ದೀರಿ, ಅದೂ ನೀವು ನಮ್ಮ ರೈತರ ಬಗ್ಗೆ ಯೋಚಿಸುತ್ತಿದ್ದೀರಿ. ನೀವು ವಿಜ್ಞಾನದ ವಿದ್ಯಾರ್ಥಿ, ಹಾಗಾಗಿ ಸಂಶೋಧನೆ ಮತ್ತು ಅನ್ವೇಷಣೆಗಳು ಸಹಜ. ಆದರೆ ಕೃಷಿಕರಿಗಾಗಿ ಅನ್ವೇಷಣೆಗಳು ಕ್ಷುಲ್ಲಕ ಸಂಗತಿಗಳಲ್ಲ. ಹಾಗಾಗಿ, ನಾನು ಖಂಡಿತವಾಗಿಯೂ, ನೀವು ಕೆಲಸದಲ್ಲಿ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ ಎಂಬುದನ್ನು ಕೇಳಲು ಇಚ್ಛಿಸುತ್ತೇನೆ?

ಉತ್ತರ: ಸರ್, ಎಲ್ಲಕ್ಕಿಂತ ಮೊದಲು ನಮಸ್ಕಾರ. ಸರ್, ನಾನು ವಿಜ್ಞಾನ ಮತ್ತು ಅನ್ವೇಷಣೆಯಲ್ಲಿ ಮೊದಲಿನಿಂದಲೂ ಆಸಕ್ತನಾಗಿದ್ದೆ, ಆದರೆ ನನ್ನ ತಂದೆ ರೈತರು ಮತ್ತು ನಾನು ರೈತ ಕುಟುಂಬಕ್ಕೆ ಸೇರಿದವನು. ಇಲ್ಲಿ ನನ್ನ ತಂದೆ ಮತ್ತು ತಾಯಿ ಇದ್ದಾರೆ. ನಾನು ಕೃಷಿ ಪದ್ದತಿಯಲ್ಲಿ ಅನೇಕ ಸಮಸ್ಯೆಗಳು ಇರುವುದನ್ನು ಗಮನಿಸಿದೆ, ಹಾಗಾಗಿ ಏನಾದರೊಂದು ಮಾಡಬೇಕು ಎಂದುಕೊಂಡೆ. ಆದುದರಿಂದ ನಾನು, ನಮ್ಮ ರೈತರಿಗೆ ಏನಾದರೂ ಕೊಡುಗೆ ಕೊಡಬೇಕು ಎಂದು ಆಶಿಸಿದೆ. ಸರ್, ನಾನು ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲು ಹೊರಟೆ, ನಾನು ಅಭಿವೃದ್ಧಿ ಮಾಡಿದ ಯಂತ್ರಗಳು ಈಗಿರುವ ಸಲಕರಣೆಗಳಿಗೆ ಹೋಲಿಸಿದರೆ 50 ಶೇಖಡಾ ಹೆಚ್ಚು ಪ್ರಯೋಜನಕಾರಿ.

ಪ್ರಶ್ನೆ: ನೀವಿದನ್ನು ನಿಮ್ಮ ತಂದೆಯವರ ಜೊತೆಗೂಡಿ ಕೃಷಿ ಕ್ಷೇತ್ರದಲ್ಲಿ ಪ್ರಯೋಗಿಸಿದ್ದೀರೋ?

ಉತ್ತರ: ಹೌದು ಸರ್, ನಾನದನ್ನು ಬಳಸಿದ್ದೇನೆ. ಸರ್, ನನ್ನ ಯಂತ್ರವು 10-15 ಶೇಖಡಾದಷ್ಟು ಕಡಿಮೆ ಸಮಯವನ್ನು ಬಳಸುತ್ತದೆ. ಪರೀಕ್ಷೆಗಳು ನನ್ನ ಯಂತ್ರ ಹೆಚ್ಚು ಲಾಭದಾಯಕ ಮತ್ತು ಅದು ಹೆಚ್ಚು ಮೊಳಕೆಯೊಡೆಯುವಿಕೆ ದರವನ್ನು ಹೊಂದಿವೆ. ಕೃಷಿ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ಕಾರ್ಮಿಕರ ಕೂಲಿ ದರ ಗಗನಕ್ಕೇರಿದೆ ಮತ್ತು ನಮಗೆ ಕೌಶಲ್ಯಯುಕ್ತ ಕಾರ್ಮಿಕರು ದೊರೆಯುತ್ತಿಲ್ಲ. ಆದುದರಿಂದ, ನಾನು ಬಹು ಉದ್ದೇಶಿತ ಯಂತ್ರವನ್ನು, ಕೃಷಿಕರೊಬ್ಬರು ಏಕ ಕಾಲಕ್ಕೆ ಹಲವಾರು ಕೆಲಸಗಳನ್ನು ನಡೆಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಿದೆ. ಇದು ಹಣ ಮತ್ತು ಸಮಯವನ್ನು ಉಳಿತಾಯ ಮಾಡುತ್ತದೆ.

ಪ್ರಶ್ನೆ: ಆಯಿತು, ಅದನ್ನು ನೀವು ಯಾವಾಗ ಅಭಿವೃದ್ಧಿ ಮಾಡಿದಿರಿ ಮತ್ತು ಅದು ಸುದ್ದಿ ಪತ್ರಿಕೆಗಳಲ್ಲಿ ಯಾವಾಗ ಬಂತು ಮತ್ತು ಜನರು ಯಾವಾಗ ಅದರ ಬಗ್ಗೆ ತಿಳಿದುಕೊಂಡರು. ಉತ್ಪಾದನಾಕಾರರು ಅಥವಾ ವ್ಯಾಪಾರೋದ್ಯಮ ಕಂಪೆನಿಗಳು ಅಥವಾ ನವೋದ್ಯಮಗಳು ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ತಮ್ಮನ್ನು ಸಂಪರ್ಕಿಸಿವೆಯೇ? ಇಂತಹದೇನಾದರೂ ನಡೆದಿದೆಯೇ?

ಉತ್ತರ: ಹೌದು ಸರ್, ಎರಡುಮೂರು ಕಂಪೆನಿಗಳು ಬಗ್ಗೆ ವಿಚಾರಣೆ ಮಾಡಿವೆ ಮತ್ತು ನಾನು ರಾಷ್ಟ್ರಪತಿ ಭವನದಲ್ಲಿ ಅನ್ವೇಷಣಾ ಮೇಳದಲ್ಲಿ ಪಾಲ್ಗೊಂಡಿದ್ದಾಗ ಅವುಗಳು ನನ್ನನ್ನು ಭೇಟಿಯಾಗಿವೆ. ಆದರೆ ನನ್ನ ಮೂಲ ಮಾದರಿ ಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ನಾನು ಇನ್ನು ಕೂಡಾ ಅದರಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಅದನ್ನು ಇನ್ನಷ್ಟು ಉತ್ತಮ ಆವೃತ್ತಿಯಾಗಿಸಲು ಇಚ್ಛಿಸುತ್ತೇನೆ.

ಪ್ರಶ್ನೆ: ಸರಿ, ನಿಮ್ಮ ಶಿಕ್ಷಕರು ಇದರಲ್ಲಿ ಆಸಕ್ತಿ ಹೊಂದಿದ್ದಾರೆಯೇ ಮತ್ತು ನಿಮಗೆ ಸಹಾಯ ಮಾಡುತ್ತಿದ್ದಾರೆಯೇ ಅಥವಾ ಕೆಲವು ವಿಜ್ಞಾನಿಗಳು ಅಥವಾ ಜಗತ್ತಿನ ಇನ್ಯಾರಾದರೂ ನಿಮಗೆ ಸಹಾಯ ಮಾಡುತ್ತಿದ್ದಾರೆಯೇ? ಆನ್ ಲೈನ್ ಮೂಲಕ ನಿಮ್ಮನ್ನು ಯಾರಾದರೂ ಸಂಪರ್ಕಿಸಿದ್ದಾರೆಯೇ?

ಉತ್ತರ: ಹೌದು ಸರ್, ಹೈಸ್ಕೂಲಿನಲ್ಲಿ ನನ್ನ ಶಿಕ್ಷಕರು ಮತ್ತು ಪಿ.ಯೂ.ಸಿ.ಯಲ್ಲಿ ನನ್ನ ಉಪನ್ಯಾಸಕರು ನನಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಮತ್ತು ಪ್ರೇರಣೆ ನೀಡುತ್ತಿದ್ದಾರೆ. ನನ್ನ ಪ್ರಯಾಣದ ಪ್ರತೀ ಹೆಜ್ಜೆಯೂ ನನ್ನ ಪರಿಶ್ರಮಿ ಪೋಷಕರಿಂದ ಮತ್ತು ಶಿಕ್ಷಕರಿಂದ ಪ್ರೇರಣೆ ಪಡೆದಿದೆ ಸರ್. ನಾನು ಇಂದು ಏನಾಗಿದ್ದೇನೋ ಅದಕ್ಕೆ ಅವರು ಕಾರಣ ಮತ್ತು ನಾನು ಅವರ ಪ್ರೇರಣೆಯಿಂದ ಮಟ್ಟಕ್ಕೆ ಬಂದಿದ್ದೇನೆ.

ಉತ್ತರ: ನಿಮ್ಮ ಪೋಷಕರು ಕೃಷಿಯನ್ನು ಪೂರ್ಣ ಮನಸ್ಸಿನಿಂದ ಮಾಡಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು ಮತ್ತು ಅವರ ಮಗನನ್ನು ಅವರು ಕೃಷಿಯೊಂದಿಗೆ ಜೋಡಿಸಿದ್ದಾರೆ. ಮಗನ ಪ್ರತಿಭೆ ಕೃಷಿಯಲ್ಲಿ ಬಳಕೆಯಾಗುತ್ತಿದೆ, ಆದುದರಿಂದ ನಿಮಗೆ ದುಪ್ಪಟ್ಟು ಶ್ಲಾಘನೆಗಳು ಸಲ್ಲಬೇಕು.

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ:

ರಾಕೇಶ್, ಇಂದು ನಮ್ಮ ದೇಶಕ್ಕೆ ಆಧುನಿಕ ಕೃಷಿ ತಕ್ಷಣದ ಆವಶ್ಯಕತೆ. ಮತ್ತು ನೀವು ಇದನ್ನು ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಅರ್ಥ ಮಾಡಿಕೊಂಡಿರುವುದು ಮಾತ್ರವಲ್ಲ ಅದನ್ನು ಆಧುನೀಕರಿಸಲು ತಂತ್ರಜ್ಞಾನದ ಜೊತೆ ಜೋಡಿಸಲು ಪ್ರಯತ್ನಿಸಿರುವುದನ್ನು ನೋಡಲು ಬಹಳ ಸಂತೋಷವಾಗುತ್ತದೆ. ನಿಮ್ಮ ಯಶೋಗಾಥೆ ಮುಂದುವರಿಯಲಿ. ನಿಮಗೆ ನನ್ನ ಕಡೆಯಿಂದ ಬಹಳ ಬಹಳ ಶುಭಾಶಯಗಳು, ಮತ್ತು ನಾನು ನಿಮ್ಮ ಪೋಷಕರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಅವರು ತಮ್ಮ ಮಗನನ್ನು ದೇಶದ ರೈತರಿಗೆ ಸಹಾಯವಾಗುವಂತಹ ಕಾರ್ಯ ಮಾಡಲು ಉತ್ತೇಜಿಸಿದ್ದಾರೆ. ನಾವೀಗ ಉತ್ತರ ಪ್ರದೇಶಕ್ಕೆ ಹೋಗೋಣ. ನಾವು ಮಹಮ್ಮದ್ ಶಾದಾಬ್ ರೊಂದಿಗೆ ಮಾತನಾಡುವ, ಅವರು ಉತ್ತರ ಪ್ರದೇಶದ ಅಲಿಘರದ ವಾಸಿ. ಇಲ್ಲಿ ಪ್ರಸ್ತಾಪಿಸಿದಂತೆ, ಮಹಮ್ಮದ್ ಶಾದಾಬ್ ಅಮೆರಿಕಾದಲ್ಲಿ ಭಾರತದ ಖ್ಯಾತಿಯನ್ನು ಮೆರೆದಿದ್ದಾರೆ

ಪ್ರಶ್ನೆ: ಶಾದಾಬ್, ನೀವು ಅಮೆರಿಕಾದಲ್ಲಿ ಕಿರಿಯ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದೀರಿ. ನೀವು ವಿದ್ಯಾರ್ಥಿ ವೇತನ ಪಡೆದ ಬಳಿಕ ಅಲಿಘರದಿಂದ ಅಮೆರಿಕಾಕ್ಕೆ ಹೋದಿರಿ. ನೀವು ಹಲವಾರು ಪ್ರಶಸ್ತಿಗಳನ್ನು ಗಳಿಸಿದಿರಿ ಮತ್ತು ಮಹಿಳಾ ಸಶಕ್ತೀಕರಣದಲ್ಲಿಯೂ ಕೆಲಸ ಮಾಡುತ್ತಿರುವಿರಿ. ಇಷ್ಟೆಲ್ಲ ಮಾಡುವುದಕ್ಕೆ ನೀವು ಪ್ರೇರಣೆ ಎಲ್ಲಿಂದ ಪಡೆದಿರಿ?.

ಉತ್ತರ: ನಮಸ್ಕಾರ, ಗೌರವಾನ್ವಿತ ಪ್ರಧಾನ ಮಂತ್ರಿ ಅವರೇ, ಎಲ್ಲಕ್ಕಿಂತ ಮೊದಲು ನಾನು ಹೇಳಲು ಇಚ್ಛಿಸುವುದೇನೆಂದರೆ ನಾನು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ 11 ನೇ ತರಗತಿ ವಿದ್ಯಾರ್ಥಿ. ಮತ್ತು ನಾನು ಇದನ್ನೆಲ್ಲ ಮಾಡಲು ನನ್ನ ಪೋಷಕರಿಂದ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಶಿಕ್ಷಕರಿಂದ ಪ್ರೇರಣೆಯನ್ನು ಪಡೆದಿರುತ್ತೇನೆ. ನಾವೆಲ್ಲ ತಿಳಿದಿರುವಂತೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಜಗತ್ತಿಗೆ ಹಲವಾರು ಶ್ರೇಷ್ಟ ವ್ಯಕ್ತಿಗಳನ್ನು ನೀಡಿದೆ. ನಾನು ಕೂಡಾ ಅಲಿಘರ್ ವಿಶ್ವವಿದ್ಯಾಲಯದ ಹೆಸರನ್ನು ಇನ್ನಷ್ಟು ಉಜ್ವಲಗೊಳಿಸಲು ಮತ್ತು ದೇಶಕ್ಕೆ ಏನಾದರೂ ಮಾಡಬೇಕು ಎಂಬ ಆಶಯವನ್ನು ಹೊಂದಿದ್ದೇನೆ.

ಪ್ರಶ್ನೆ: ನಿಮ್ಮ ಪೋಷಕರೂ ನೀವು ಮಾಡುವಂತಹ ಕೆಲಸಗಳನ್ನು ಮಾಡುತ್ತಿರುವರೇ ಅಥವಾ ನೀವು ಒಬ್ಬರೇ ಕೆಲಸ ಮಾಡುತ್ತಿದ್ದೀರಾ?.

ಉತ್ತರ: ಇಲ್ಲ, ಆದರೆ ನನ್ನ ಪೋಷಕರು ಆರಂಭದಿಂದಲೂ ಸದಾ ನನಗೆ ಬೆಂಬಲ ಕೊಟ್ಟಿದ್ದಾರೆ.ನನ್ನ ಪೋಷಕರು ಡಾ. .ಪಿ.ಜೆ.ಅಬ್ದುಲ್ ಕಲಾಂ ಅವರು ದೇಶಕ್ಕೆ ಕ್ಷಿಪಣೆಗಳನ್ನು ಕೊಟ್ಟರು, ಆದುದರಿಂದ, ನಮ್ಮ ದೇಶ ಈಗ ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಹೇಳುತ್ತಿದ್ದರು. ನನ್ನ ಪೋಷಕರು ಕೂಡಾ ದೇಶಕ್ಕಾಗಿ ಏನನ್ನಾದರೂ ಮಾಡಬೇಕು, ಅದರಿಂದ ದೇಶ ನನ್ನನ್ನು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತಿರಬೇಕು ಎಂದು ಉತ್ತೇಜನ ಕೊಡುತ್ತಿದ್ದಾರೆ.

ಪ್ರಶ್ನೆ: ನೋಡಿ, ನೀವು ಈಗಾಗಲೇ ಭಾರತಕ್ಕೆ ಹೆಸರು ತಂದುಕೊಟ್ಟಿದ್ದೀರಿ. ಭವಿಷ್ಯದಲ್ಲಿ ನಿಮ್ಮ ಚಿಂತನೆ ಏನು, ದೊಡ್ಡದನ್ನೇನಾದರೂ ಮಾಡುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನಾದರೂ ಇರಬೇಕಲ್ಲವೇ?.

ಉತ್ತರ: ಹೌದು ಸರ್, ನನಗೆ ..ಎಸ್. ಅಧಿಕಾರಿಯಾಗುವ ಮತ್ತು ನನ್ನ ಸಮಾಜಕ್ಕೆ ಸೇವೆ ಸಲ್ಲಿಸುವ ಕನಸಿದೆ. ಮತ್ತು ನಾನು ಇಲ್ಲಿಗೇ ಸ್ಥಗಿತಗೊಳ್ಳುವುದಿಲ್ಲ. ಭವಿಷ್ಯದಲ್ಲಿ, ನಾನು ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಕೆಲಸ ಮಾಡಲು ಇಚ್ಛಿಸುತ್ತೇನೆ. ವಿಶ್ವ ಸಂಸ್ಥೆಯಲ್ಲಿ ನನ್ನ ದೇಶದ ಧ್ವಜವನ್ನು ಅರಳಿಸುವುದು ನನ್ನ ಕನಸು ಮತ್ತು ಮೂಲಕ ನನ್ನ ದೇಶಕ್ಕೆ ಹೆಸರು ತರಬೇಕು ಎಂಬುದು ನನ್ನಾಸೆ.

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ:

ಅಬ್ಬಾ!. ನಮ್ಮ ದೇಶದ ಯುವಕರ ಮೇಲೆ ಭಾರತದ ಕೀರ್ತಿಯನ್ನು ಹರಡುವ ಬಹಳ ದೊಡ್ಡ ಜವಾಬ್ದಾರಿ ಇದೆ ಮತ್ತು ಭಾರತದ ಗುರುತಿಸುವಿಕೆಯನ್ನು ಬಲಪಡಿಸುವ ಜವಾಬ್ದಾರಿ ಇದೆ. ಮತ್ತು ಶಾದಾಬ್, ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ.ನೀವು ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಸ್ಪಷ್ಟತೆಯನ್ನು ಹೊಂದಿದ್ದೀರಿ ಮತ್ತು ನಿಮ್ಮ ಪೋಷಕರು, ಕುಟುಂಬದವರು ನಿಮ್ಮ ಬಾಲ್ಯದಿಂದಲೇ ನಿಮ್ಮಲ್ಲಿ ಕಲಾಂಜೀ ಅವರಂತಾಗುವ ಕನಸನ್ನು ಬಿತ್ತಿದ್ದಾರೆ. ನಿಮಗೆ ಸರಿಯಾದ ದಾರಿಯನ್ನು ತೋರಿಸಿದುದಕ್ಕಾಗಿ, ನಾನು ನಿಮ್ಮ ಪೋಷಕರನ್ನು ಅಭಿನಂದಿಸುತ್ತೇನೆ. ನೀವು ಈಗ ಹೇಗೆ ಹೀರೋ ಆಗಬೇಕು ಎಂಬುದರ ಬಗೆಗೆ ತಿಳಿದುಕೊಂಡಿದ್ದೀರಿ ಮತ್ತು ನಿಮ್ಮ ಆದರ್ಶಗಳು ಏನಿರಬೇಕು ಎಂಬ ಬಗ್ಗೆ ಬಾಲ್ಯಾವಸ್ಥೆಯಿಂದಲೇ ಅರಿತುಕೊಂಡಿದ್ದೀರಿ. ಅವುಗಳು ನಿಮ್ಮ ಜೀವನವನ್ನು ರೂಪಿಸಿವೆ. ಮತ್ತು ನೀವು ನಿಮ್ಮ ಪೋಷಕರ ಮಂತ್ರಕ್ಕೆ ಅನುಗುಣವಾಗಿ ಬದುಕುತ್ತಿದ್ದೀರಿ. ಆದುದರಿಂದ, ನಾನು ನಿಮ್ಮನ್ನು ಬಹಳ ಬಹಳ ಅಭಿನಂದಿಸುತ್ತೇನೆ ಮತ್ತು ನಿಮಗೆ ಶುಬವನ್ನು ಹಾರೈಸುತ್ತೇನೆ

ನಾವಿನ್ನು ಗುಜರಾತಿಗೆ ಹೋಗೋಣ, ನಾವು ಗುಜರಾತಿನ ಮಂತ್ರ ಜಿತೇಂದ್ರ ಹರ್ಕಾನಿ ಜೊತೆ ಮಾತನಾಡೋಣ. ಮಂತ್ರ ಜಿತೇಂದ್ರ ಅವರು ಈಜು ಕ್ರೀಡೆಯಲ್ಲಿ ತಮ್ಮ ಅದ್ಭುತ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಪ್ರಶ್ನೆ: ಮಂತ್ರ ನೀವು ಹೇಗಿದ್ದೀರಿ? ಎಲ್ಲರೂ ಕ್ಷೇಮವೇ! ಬೇರೆ ಯಾರೆಲ್ಲ ಇದ್ದಾರೆ ನಿಮ್ಮ ಜೊತೆ?

ಉತ್ತರ: ನನ್ನ ಪೋಷಕರು ನನ್ನೊಂದಿಗೆ ಇದ್ದಾರೆ.

ಪ್ರಶ್ನೆ: ಹೇಳಿ ಮಂತ್ರ, ದೇಶಾದ್ಯಂತ ಜನರು ಇಂದು ನಿಮ್ಮನ್ನು ನೋಡುತ್ತಿದ್ದಾರೆ. ನೀವು ಬಹಳ ದೈರ್ಯದ ಕೆಲಸ ಮಾಡುವ ಮೂಲಕ ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ. ನೋಡಿ, ನಾನು ಬಾಲ್ಯದಲ್ಲಿದ್ದಾಗ, ನಮ್ಮ ಹಳ್ಳಿ ವಾದ್ ನಗರದಲ್ಲಿ ದೊಡ್ಡ ಕೊಳವೊಂದಿತ್ತು. ಆಗ, ನಾವೆಲ್ಲ ಅಲ್ಲಿ ಈಜಾಡುತ್ತಿದ್ದೆವು. ಆದರೆ ಈಜಾಟದಲ್ಲಿ ಮತ್ತು ನೀವು ಮಾಡುವ ಈಜಿನಲ್ಲಿ ಬಹಳ ದೊಡ್ಡ ವ್ಯತ್ಯಾಸಗಳಿವೆ. ನೀವು ಬಹಳಷ್ಟು ತರಬೇತಿ ಪಡೆಯಬೇಕಾಗುತ್ತದೆ ಮತ್ತು ಬಹಳಷ್ಟು ಪರಿಶ್ರಮ ಹಾಕಬೇಕಾಗುತ್ತದೆ. ನೀವು ಈಜಿನಲ್ಲಿ ದಾಖಲೆಗಳನ್ನು ಮಾಡುತ್ತಿರುವುದರಿಂದ ನೀವು ಒಂದು ಪ್ರೇರಣೆಯ ಪ್ರತೀಕವಾಗಿದ್ದೀರಿ. ನೀವು ಓರ್ವ ಅಥ್ಲೀಟ್ ಮತ್ತು ಅಥ್ಲೀಟ್ ಗಳು ಅವರ ಗುರಿಯತ್ತ ಬಹಳ ಗಮನ ನೆಟ್ಟಿರುತ್ತಾರೆ. ನಾನು ನಿಮ್ಮ ಗುರಿಗಳು ಏನು ಎಂಬುದನ್ನು ತಿಳಿಯಲು ಇಚ್ಛಿಸುತ್ತೇನೆ. ನೀವು ಏನು ಮಾಡಲು ಇಚ್ಛಿಸುತ್ತೀರಿ?. ನೀವು ಹೇಗೆ ಮುಂದೆ ಸಾಗಲು ಇಚ್ಛಿಸುತ್ತೀರಿ? ನನಗೆ ಹೇಳಿ

ಉತ್ತರ: ಶುಭೋದಯ ಸರ್.

ಪ್ರಧಾನ ಮಂತ್ರಿ: ಶುಭೋದಯ

ಉತ್ತರ: ನಾನು ವಿಶ್ವದ ಅತ್ಯಂತ ಶ್ರೇಷ್ಟ ಈಜು ಪಟು ಆಗಲು ಇಚ್ಛಿಸುತ್ತೇನೆ ಮತ್ತು ನಾನು ನಿಮ್ಮಂತೆ ಆಗಲು ಹಾಗು ದೇಶ ಸೇವೆ ಮಾಡಲು ಇಚ್ಛಿಸುತ್ತೇನೆ.

ಪ್ರಶ್ನೆ: ನೋಡಿ, ನಿಮ್ಮ ಮನಸ್ಸಿನಲ್ಲಿ ನೀವು ಬಹಳ ದೊಡ್ಡ ಕನಸನ್ನು ಹೊಂದಿದ್ದೀರಿ.ನಿಮ್ಮ ಪೋಷಕರು ಸಂಪೂರ್ಣ ಅರ್ಪಣಾಭಾವದಿಂದ ನಿಮ್ಮ ಮೇಲೆ ಬಹಳ ಹೂಡಿಕೆ ಮಾಡುತ್ತಿದ್ದಾರೆ, ನೀವು ಅವರ ಬದುಕಿನ ಕನಸಾಗಿದ್ದೀರಿ ಎಂಬುದು ನನಗೆ ಖಚಿತವಾಗಿದೆ. ನೀವು ಅವರ ಬದುಕಿನ ಮಂತ್ರವಾಗಿದ್ದೀರಿ.ಮತ್ತು ನೀವು ಮಾಡುತ್ತಿರುವ ಪ್ರಯತ್ನ ಹಾಗು ಹಾಕುತ್ತಿರುವ ಶ್ರಮ, ನೀವು ಮಾತ್ರವಲ್ಲ, ಜೊತೆಗೆ ನಿಮ್ಮ ಪೋಷಕರು ಹಾಕುತ್ತಿರುವ ಶ್ರಮ ಇತರ ಮಕ್ಕಳ ಪೋಷಕರಿಗೂ ಒಂದು ಪ್ರೇರಣೆ. ಆದುದರಿಂದ ನಾನು ನಿಮ್ಮನ್ನು ಬಹಳ ಬಹಳ ಅಭಿನಂದಿಸುತ್ತೇನೆ. ನೀವು ಬಹಳ ಉತ್ಸಾಹದಿಂದ ಮಾತನಾಡುತ್ತೀರಿ. ಇದು ಬಹಳ ದೊಡ್ಡ ಸಂಗತಿ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಮತ್ತು ನನಗೆ ಯಾರೋ ತಿಳಿಸಿದ್ದಾರೆ, ಏನೆಂದರೆ ನಿಮ್ಮ ಕೋಚ್ ನಿಮಗೆ ನನ್ನ ಜೊತೆ ಸಭೆಯನ್ನು ಖಾತ್ರಿ ಮಾಡುವುದಾಗಿ ಭರವಸೆ ನೀಡಿದ್ದರು ಎಂಬುದಾಗಿ. ನಿಮ್ಮ ಕೋಚ್ ಇದುವರೆಗೂ ನನ್ನ ಜೊತೆ ನಿಮ್ಮ ಪರಿಚಯ ಮಾಡಿಸದಿರುವುದಕ್ಕೆ ಯಾಕೆ ನೀವು ಜಗಳ ಮಾಡಲಿಲ್ಲ?

ಉತ್ತರ: ನೀವು ಇಲ್ಲಿಗೆ ಬನ್ನಿ, ನಾನು ಚಹಾ ಕೊಡುತ್ತೇನೆ.

ಪ್ರಶ್ನೆ: ಮುಂದಿನ ಬಾರಿ ನಾನು ಗುಜರಾತಿಗೆ ಬಂದಾಗ, ನೀವು ನನ್ನನ್ನು ಭೇಟಿಯಾಗಲು ಬರುತ್ತೀರೋ?

ಉತ್ತರ: ಖಂಡಿತ.

ಪ್ರಶ್ನೆ: ರಾಜಕೋಟಿನ ಘತಿಯಾಮ್ಕೀನ್ ನೊಂದಿಗೆ ನೀವು ಬರಬೇಕು, ಅವರು ಏನು ಹೇಳುತ್ತಾರೆ?

ಉತ್ತರ: ಸರ್, ನೀವು ಯಾವಾಗ ಬರುತ್ತೀರೋ, ಆಗ ಅವರು ಜಿಲೇಬಿ, ಗಥಿಯಾ ಮತ್ತು ನೀವು ಆಶಿಸುವ ಎಲ್ಲವನ್ನೂ ತರುತ್ತಾರಂತೆ, ಚಹಾವನ್ನೂ ತಮಗೆ ಕೊಡುತ್ತಾರಂತೆ.

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ:

ನಿಮ್ಮೆಲ್ಲರಿಗೂ ಬಹಳ ಬಹಳ ಅಭಿನಂದನೆಗಳು. ನೀವೆಲ್ಲರೂ ಬಹಳ ಉತ್ತಮ ಸಂಗತಿಗಳನ್ನು ಹೇಳಿದ್ದೀರಿ!. ಪ್ರೀತಿಯ ಮಕ್ಕಳೇ, ಸಂಭಾಷಣೆ ಮತ್ತು ನೀವು ಎಲ್ಲರೂ ಪಡೆದುಕೊಂಡಿರುವ ಪ್ರಶಸ್ತಿ, ಸ್ಪಷ್ಟಪಡಿಸುತ್ತದೆ- ಏನೆಂದರೆ ಒಂದು ಸಣ್ಣ ಚಿಂತನೆ ಸರಿಯಾದ ಕ್ರಿಯೆಯ ಜೊತೆ ಜೋಡಿಸಲ್ಪಟ್ಟಾಗ, ಅದು ಬಹಳ ಪರಿಣಾಮಕಾರಿಯಾದಂತಹ, ಮನಕ್ಕೆ ಮುಟ್ಟುವಂತಹ ಫಲಿತಾಂಶಗಳನ್ನು ನೀಡುತ್ತದೆ. ನೀವೆಲ್ಲರೂ ಎಂತಹ ಶ್ರೇಷ್ಟ ಉದಾಹರಣೆಗಳು. ಇಂದಿನ ನಿಮ್ಮ ಸಾಧನೆಗಳು ಒಂದು ಚಿಂತನೆಯೊಂದಿಗೆ ಆರಂಭಗೊಂಡಿರಬೇಕು. ಉದಾಹರಣೆಗೆ ಪಶ್ಚಿಮ ಬಂಗಾಳದ ಸೌಹಾರ್ದ್ಯ ಡೇ !. ಅವರು ಪುರಾಣಗಳ ಬಗ್ಗೆ ಬರೆಯುತ್ತಾರೆ ಮತ್ತು ದೇಶದ ವೈಭವದ ಚರಿತ್ರೆಯ ಬಗ್ಗೆ ಬರೆಯುತ್ತಾರೆ. ಮೊದಲು ಇದು ಅವರ ಮನಸ್ಸಿಗೆ ಬಂದಾಗ, ಅವರು ದಿಕ್ಕಿನಲ್ಲಿ ಮುಂದುವರೆದು ಬರೆಯಲಾರಂಭಿಸಿದರು. ಅವರು ಬಳಿಕ ಸೋಮಾರಿಯಾಗಿ ಕುಳಿತುಕೊಳ್ಳಲಿಲ್ಲ. ಅವರು ಸರಿಯಾದ ದಿಕ್ಕಿನಲ್ಲಿ ಮುಂದುವರೆದರು.ಸರಿಯಾದ ಕ್ರಮ ಕೈಗೊಂಡರು, ಬರೆಯಲು ಆರಂಭಿಸಿದರು, ಮತ್ತು ಇಂದು ನಾವು ಅದರ ಫಲಿತಾಂಶ ಕಾಣುತ್ತಿದ್ದೇವೆ. ಅದೇ ರೀತಿ ಅಸ್ಸಾಂನ ತನುಜ್ ಸಾಮ್ದಾರ್, ಬಿಹಾರದ ಜ್ಯೋತಿ ಕುಮಾರಿ, ಎರಡು ಮಕ್ಕಳ ಜೀವ ಉಳಿಸಿದ ಮಹಾರಾಷ್ಟ್ರದ ಕಾಮೇಶ್ವರ ಜಗನ್ನಾಥ ವಾಗ್ಮಾರೆ, ಸಿಕ್ಕಿಂನ ಆಯುಷ್ ರಂಜನ್, ಪಂಜಾಬಿನ ಪುತ್ರಿ ನಮ್ಯಾ ಜೋಶಿ ಇದ್ದಾರೆ. ಪ್ರತೀ ಮಗುವಿನ ಪ್ರತಿಭೆ ದೇಶವನ್ನು ವೈಭವೀಕರಿಸುತ್ತದೆ. ನಾನು ನಿಮ್ಮೆಲ್ಲರ ಜೊತೆ ಮಾತನಾಡಬೇಕೆಂದಿದ್ದೆ. ನೀವು ಏಕ ಭಾರತ್ ಶ್ರೇಷ್ಟ ಭಾರತ್ ಅತಿ ಸುಂದರ ಅಭಿವ್ಯಕ್ತಿಗಳು. ಆದರೆ ಸಮಯಾಭಾವದಿಂದ ಅದು ಸಾಧ್ಯವಾಗಿಲ್ಲ.

ಸ್ನೇಹಿತರೇ,

ಸಂಸ್ಕೃತದಲ್ಲೊಂದು ಬಹಳ ಶ್ರೇಷ್ಟ ಶ್ಲೋಕವಿದೆ ಮತ್ತು ನಾವು ಯುವಕರಿದ್ದಾಗ, ನಮ್ಮ ಶಿಕ್ಷಕರು ಅದನ್ನು ಪದೇ ಪದೇ ಹೇಳುತ್ತಿದ್ದರು ಮತ್ತು ನಾವೂ ಹೇಳುತ್ತಿದ್ದೆವು: उद्यमेन हि सिध्यन्ति कार्याणि मनोरथै:” ಅಂದರೆಯಾವುದೇ ಕೆಲಸವನ್ನು ಕಲ್ಪನಾ ಮಾತ್ರದಿಂದ  ಮಾಡುವುದಕ್ಕೆ ಸಾಧ್ಯವಿಲ್ಲ. ಅದನ್ನು ಉದ್ಯಮದ ಮೂಲಕ ಮಾಡಿದರೆ ಮತ್ತು ಕಠಿಣ ದುಡಿಮೆ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆಚಿಂತನೆಯೊಂದು ಕ್ರಿಯೆಯ ಜೊತೆಗೂಡಿದಾಗ, ಇನ್ನು ಹಲವು ಕ್ರಿಯೆಗಳು ಜರಗುತ್ತವೆ, ನಿಮ್ಮ ಯಶಸ್ಸು ಕೂಡಾ ಅನೇಕ ಮಂದಿಗೆ ಪ್ರೇರಣೆ ನೀಡುವಂತಾಗುತ್ತದೆ. ನಿಮ್ಮ ಸ್ನೇಹಿತರು, ಜೊತೆಗಾರರು ಮತ್ತು ದೇಶದ ಇತರ ಮಕ್ಕಳೂ ನಿಮ್ಮನ್ನು ಟಿ.ವಿಯಲ್ಲಿ ನೋಡುತ್ತಿದ್ದಾರೆ, ಸುದ್ದಿಪತ್ರಿಕೆಗಳಲ್ಲಿ ನಿಮ್ಮ ವಿಷಯವನ್ನು ಓದುತ್ತಾರೆ, ಅವರು ನಿಮ್ಮಿಂದ ಕೂಡಾ ಪ್ರೇರಣೆ ಪಡೆಯುತ್ತಾರೆ. ಹೊಸ ನಿರ್ಧಾರಗಳನ್ನು ಕೈಗೊಳ್ಳಿ ಮತ್ತು ಅವುಗಳನ್ನು ಸಾಕಾರಗೊಳಿಸಲು ಉತ್ತಮವಾದುದನ್ನು ಮಾಡಿ. ಅದೇ ರೀತಿ ಅದು ಇತರ ಹಲವರನ್ನು ಉತ್ತೇಜಿಸುತ್ತದೆ. ರೀತಿಯ ವರ್ತುಲ ಮುಂದುವರೆಯುತ್ತಾ ಹೋಗುತ್ತದೆ. ಆದರೆ ಪ್ರೀತಿಯ ಮಕ್ಕಳೇ, ನಾನು ಒಂದು ವಿಷಯವನ್ನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ, ಪ್ರಶಸ್ತಿ ನಿಮ್ಮ ಬದುಕಿನಲ್ಲಿ ಸಣ್ಣ ಮೈಲಿಗಲ್ಲು ಎಂಬುದನ್ನು ಸದಾ ನೆನಪಿಡಿ. ಯಶಸ್ಸಿನ ವೈಭವದಲ್ಲಿ ನೀವು ಕಳೆದು ಹೋಗಬಾರದು. ನೀವು ಇಲ್ಲಿಂದ ಹೋಗುವಾಗ ಜನರು ನಿಮಗೆ ಚಪ್ಪಾಳೆ ಹಾಕುತ್ತಾರೆ, ಶ್ಲಾಘಿಸುತ್ತಾರೆ. ಸುದ್ದಿ ಪತ್ರಿಕೆಗಳಲ್ಲಿ ನಿಮ್ಮ ಹೆಸರುಗಳು ಪ್ರಕಟವಾಗುತ್ತವೆ. ನಿಮ್ಮನ್ನು ಸಂದರ್ಶಿಸಲಾಗುತ್ತದೆ. ಆದರೆ ನೀವು ಒಂದು ವಿಷಯವನ್ನು ಮನಸ್ಸಿನಲ್ಲಿಡಬೇಕು, ಚಪ್ಪಾಳೆಗಳು ಮತ್ತು ಶ್ಲಾಘನೆಗಳು ನಿಮ್ಮ ಕ್ರಿಯೆಯಿಂದ ಮತ್ತು ಬದ್ದತೆಯಿಂದಾಗಿ ಬಂದಿವೆ. ನಿಮ್ಮ ಕೆಲಸಗಳು ಸ್ಥಗಿತಗೊಂಡರೆ  ಅಥವಾ ನೀವು ಅವುಗಳಿಂದ ಸಂಪರ್ಕ ಕಡಿದುಕೊಂಡರೆ, ಅವೇ ಶ್ಲಾಘನೆಗಳು ನಿಮಗೆ ಅಡ್ಡಿ ಆತಂಕಗಳನ್ನು ತರಬಹುದು. ನೀವು ಬದುಕಿನಲ್ಲಿ ಇದಕ್ಕಿಂತ ದೊಡ್ಡ ಯಶಸ್ಸನ್ನು ಸಂಪಾದಿಸಬೇಕು.

ಮತ್ತು ನಾನು ನಿಮಗೆ ಮತ್ತೊಂದು ಸಲಹೆ ನೀಡಬಯಸುತ್ತೇನೆ. ನೀವು ಏನನ್ನಾದರೂ ಒದುತ್ತಿರಬೇಕು. ಆದರೆ ನೀವು ಏನನ್ನೇ ಮೆಚ್ಚಿಕೊಳ್ಳಿ, ನೀವು ಪ್ರತೀ ವರ್ಷ ಜೀವನ ಚರಿತ್ರೆಯನ್ನು ಓದಬೇಕು. ಅದು ವಿಜ್ಞಾನಿಯದ್ದಾಗಿರಬಹುದು, ಆಟಗಾರರು, ದೊಡ್ಡ ಕೃಷಿಕಹೀಗೆ ಯಾರಾದರೂ ಆಗಿರಬಹುದು. ನಿಮ್ಮ ಮನಸ್ಸಿನಲ್ಲಿರುವ ಯಾರಾದರೂ ಸರಿ, ಶ್ರೇಷ್ಟ ತತ್ವಜ್ಞಾನಿ ಅಥವಾ ಬರಹಗಾರರ ಜೀವನ ಚರಿತ್ರೆಯನ್ನು ವರ್ಷಕ್ಕೊಮ್ಮೆ ಓದಲು ನಿರ್ಧರಿಸಿ. ಕನಿಷ್ಟ ಒಂದು ಜೀವನ ಚರಿತ್ರೆ! ನೀವು ನೋಡಿ, ಆಗ ಜೀವನದಲ್ಲಿ ಹೊಸ ಪ್ರೇರಣೆ ದೊರೆಯುತ್ತದೆ.

ನನ್ನ ಯುವ ಸ್ನೇಹಿತರೇ,

ಎಲ್ಲಾ ವಿಷಯಗಳ ಬಗ್ಗೆ ನೀವು ಆದ್ಯತೆ ಕೊಡಬೇಕು ಎಂದು ನಾನು ಆಶಿಸುತ್ತೇನೆ, ಆದರೆ ನಾನು ಮತ್ತೆ ಮೂರು ಸಂಗತಿಗಳನ್ನು ಸೇರಿಸಲು ಇಚ್ಛಿಸುತ್ತೇನೆ.

ಮೊದಲನೆಯದ್ದು, ನಿರಂತರತೆಯ ನಿರ್ಧಾರ!

ಅಂದರೆ ನಿಮ್ಮ ಕೆಲಸದ ವೇಗ ಎಂದೂ ನಿಲ್ಲಬಾರದು. ಅದೆಂದೂ ವೇಗ ಕಳೆದುಕೊಳ್ಳಬಾರದು. ಒಂದು ಕೆಲಸ ಪೂರ್ಣಗೊಂಡಾಗ, ಅಲ್ಲಿ ಅದರ ಮುಂದೆ ಇನ್ನೊಂದು ಹೊಸ ಚಿಂತನೆ ಇರಬೇಕು

ಎರಡನೆಯದ್ದು, ದೇಶಕ್ಕಾಗಿ ನಿರ್ಧಾರ!

ನೀವು ಏನೇ ಮಾಡಿದರೂ, ಅದು ಬರೇ ನಿಮಗಾಗಿ ಎಂದಿರಬಾರದು. ನನ್ನ ಕೆಲಸ, ನನಗಾಗಿ ಕೆಲಸ ಎಂಬ ಚಿಂತನೆ ನಮ್ಮ ವ್ಯಾಪ್ತಿಯನ್ನು ಕಡಿಮೆ ಮಾಡುತ್ತದೆ. ನೀವು ದೇಶಕ್ಕಾಗಿ ಕೆಲಸ ಮಾಡುವಾಗ, ನಿಮ್ಮ ಕೆಲಸ ಬಹಳ ದೊಡ್ಡದಾಗಿ ಬೆಳೆಯುತ್ತದೆ. ನಿಮ್ಮ ಕೆಲಸಕ್ಕೆ ಹಲವು ಮಂದಿ ಹಲವು ರೀತಿಯಲ್ಲಿ ಕೈಜೋಡಿಸಿದ್ದಾರೆ ಎಂಬ ಭಾವನೆ ನಿಮಗೆ ಬರುತ್ತದೆ. ನಿಮ್ಮ ಚಿಂತನಾ ಕ್ರಮ ಬದಲಾಗುತ್ತದೆ. ವರ್ಷ ನಮ್ಮ ದೇಶ ಸ್ವಾತಂತ್ರ್ಯದ 75 ನೇ ವರ್ಷದತ್ತ ಸಾಗುತ್ತಿದೆ. ನೀವೆಲ್ಲರೂ ದೇಶ ಮುನ್ನಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕು.

ಮತ್ತು ಮೂರನೇಯದ್ದು, ವಿನೀತತೆಯ ನಿರ್ಧಾರ!

ನೀವು ಪ್ರತೀ ಯಶಸ್ಸನ್ನು ವಿನೀತ ಭಾವದಿಂದ ಸ್ವೀಕರಿಸಬೇಕು. ಯಾಕೆಂದರೆ ನಿಮ್ಮಲ್ಲಿ ವಿನಯ ಇದ್ದರೆ ನೂರಾರು, ಮತ್ತು ಸಾವಿರಾರು ಜನರು ಕೂಡಾ ನಿಮ್ಮೊಂದಿಗೆ ನಿಮ್ಮ ಯಶಸ್ಸನ್ನು ಆಚರಿಸುತ್ತಾರೆ. ನಿಮ್ಮ ಯಶಸ್ಸು ತನ್ನಿಂದ ತಾನೇ ಬೆಳೆಯುತ್ತದೆ. ಹಾಗಾಗಿ ನೀವು ಮೂರು ನಿರ್ಧಾರಗಳನ್ನು ನೆನಪಿಟ್ಟುಕೊಳ್ಳುತ್ತೀರಿ ಎಂದು ನಾನು ನಂಬುತ್ತೇನೆ. ನನಗೆ ಖಂಡಿತವಿದೆ, ಯಾಕೆಂದರೆ ನೀವು ಬಹಳ ಗಮನ ಕೊಟ್ಟಿದ್ದೀರಿ ಮತ್ತು ಮತ್ತು ಅವುಗಳನ್ನು ಎಂದೂ ಮರೆಯಲಾರಿರಿ. ಮತ್ತು ನೀವು ಮರೆಯುವುದಿಲ್ಲ ಮತ್ತು ಬೇರೆಯವರಿಗೂ ಮರೆಯಲು ಬಿಡುವುದಿಲ್ಲ ಮತ್ತು ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಸಂಗತಿಗಳನ್ನು ಸಾಧಿಸಲಿದ್ದೀರಿ. ನಿಮ್ಮ ಭವಿಷ್ಯದ ಕನಸುಗಳು ಸಾಕಾರಗೊಳ್ಳಲಿ ಮತ್ತು ಎಲ್ಲಾ ಮಕ್ಕಳು ಮತ್ತು ಯುವ ಜನತೆ ಸಾಧನೆಗಳೊಂದಿಗೆ ದೇಶವನ್ನು ಮುಂದಕ್ಕೆ ಕೊಂಡೊಯ್ಯಲಿ!. ಆಶಯಗಳೊಂದಿಗೆ, ನಾನು ನಿಮ್ಮೆಲ್ಲರ ಕುಟುಂಬ ಸದಸ್ಯರಿಗೆ ಮತ್ತು ಶಿಕ್ಷಕರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಮತ್ತು ಎಲ್ಲಾ ಮಕ್ಕಳಿಗೆ ಆಶೀರ್ವಾದಗಳು.

ಬಹಳ ಬಹಳ ಧನ್ಯವಾದಗಳು!

***


(Release ID: 1692887) Visitor Counter : 247