ಪ್ರಧಾನ ಮಂತ್ರಿಯವರ ಕಛೇರಿ
ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2 ನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿಯವರಿಂದ ಭೂಮಿ ಪೂಜೆ
ಸೂರತ್ ಮತ್ತು ಗಾಂಧಿನಗರ ಕಳೆದ ಎರಡು ದಶಕಗಳಲ್ಲಿ ಕಂಡಿರುವ ಬದಲಾವಣೆಯು ಯೋಜಿತ ನಗರೀಕರಣವು ಜನರಿಗೆ, ವಿಶೇಷವಾಗಿ ಯುವಕರಿಗೆ ಹೇಗೆ ಪ್ರಯೋಜನವಾಗಿದೆ ಎಂಬುದನ್ನು ತೋರಿಸಿದೆ: ಪ್ರಧಾನಿ
ಗ್ರಾಮೀಣ ಗುಜರಾತ್ನ ಪರಿವರ್ತನೆಯನ್ನು ಪ್ರತಿಯೊಬ್ಬರೂ ನೋಡಬಹುದಾಗಿದೆ: ಪ್ರಧಾನಿ
ರಾಷ್ಟ್ರೀಯ ಪ್ರಗತಿಗೆ ಬಲವಾದ ಎಂಎಸ್ಎಂಇ ವಲಯ ಅಗತ್ಯವಾಗಿದೆ: ಪ್ರಧಾನಿ
Posted On:
18 JAN 2021 2:02PM by PIB Bengaluru
ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2ನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲರು, ಕೇಂದ್ರ ಗೃಹ ಸಚಿವರು, ಗುಜರಾತ್ ಮುಖ್ಯಮಂತ್ರಿ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಅಹಮದಾಬಾದ್ ಮತ್ತು ಸೂರತ್ ನಗರಗಳು ಮೆಟ್ರೋ ಯೋಜನೆಗಳನ್ನು ಪಡೆಯುತ್ತಿರುವುದಕ್ಕೆ ಅಭಿನಂದನೆ ಹೇಳಿದರು. ಈ ಸೇವೆಯು ದೇಶದ ಎರಡು ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಸಂಪರ್ಕ ವ್ಯಸವ್ಥೆಯನ್ನುನ್ನು ಸುಧಾರಿಸುತ್ತದೆ ಎಂದರು. ಅಹಮದಾಬಾದ್‌ನಿಂದ ಕೆವಾಡಿಯಾವರೆಗಿನ ಆಧುನಿಕ ಜನ ಶತಾಬ್ದಿ ಸೇರಿದಂತೆ ಕೆವಾಡಿಯಾಕ್ಕೆ ಹೊಸ ರೈಲುಗಳು ಮತ್ತು ರೈಲ್ವೆ ಮಾರ್ಗಗಳನ್ನು ಪಡೆದ ಗುಜರಾತ್ ಜನರನ್ನು ಅವರು ಅಭಿನಂದಿಸಿದರು. ಇಂದು 17 ಸಾವಿರ ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಯೋಜನೆಗಳ ಕಾಮಗಾರಿ ಪ್ರಾರಂಭವಾಗಿದೆ ಎಂದು ಪ್ರಧಾನಿ ಮಾಹಿತಿ ಹೇಳಿದರು. ಕೊರೊನ ಸಮಯದಲ್ಲಿಯೂ ಸಹ, ಮೂಲಸೌಕರ್ಯ ನಿರ್ಮಾಣ ಕೆಲಸಗಳು ವೇಗವನ್ನು ಪಡೆದುಕೊಳ್ಳುತ್ತಿರುವುದನ್ನು ಇದು ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಅಥವಾ ಹೊಸ ಯೋಜನೆಗಳ ಕೆಲಸ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಅಹಮದಾಬಾದ್ ಮತ್ತು ಸೂರತ್ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವ ನಗರಗಳೆಂದು ಹೇಳಿದ ಅವರು, ಅಹಮದಾಬಾದ್ ನಗರದಲ್ಲಿ ಮೆಟ್ರೋ ಉದ್ಘಾಟನೆಯಾದಾಗ ಇದ್ದ ಸಂಭ್ರಮ ಮತ್ತು ಅಹಮದಾಬಾದ್ ತನ್ನ ಕನಸುಗಳನ್ನು ಮತ್ತು ಗುರುತನ್ನು ಮೆಟ್ರೊದೊಂದಿಗೆ ಹೇಗೆ ಜೋಡಿಸಿದೆ ಎಂಬುದನ್ನು ಪ್ರಧಾನಿ ನೆನಪಿಸಿಕೊಂಡರು. ಎರಡನೇ ಹಂತದ ಮೆಟ್ರೋ ಜನರಿಗೆ ಅನುಕೂಲವಾಗಲಿದ್ದು, ಇದು ನಗರದ ಹೊಸ ಪ್ರದೇಶಗಳನ್ನು ಆರಾಮದಾಯಕ ಸಾರಿಗೆಯೊಂದಿಗೆ ಸಂಪರ್ಕಿಸುತ್ತದೆ. ಹಾಗೆಯೇ, ಸೂರತ್ ಸಹ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಪಡೆಯುತ್ತದೆ. ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಮೆಟ್ರೊ ವಿಸ್ತರಣೆಯನ್ನು ಕುರಿತಂತೆ ಹಿಂದಿನ ಸರ್ಕಾರಗಳು ಮತ್ತು ಇಂದಿನ ಸರ್ಕಾರದ ನಡುವಿನ ವ್ಯತ್ಯಾಸದ ಬಗ್ಗೆ ಪ್ರಧಾನಿ ಗಮನಸೆಳೆದರು. 2014 ಕ್ಕಿಂತ ಮೊದಲು 10-12 ವರ್ಷಗಳಲ್ಲಿ 200 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ ಮಾತ್ರ ಇತ್ತು, ಕಳೆದ 6 ವರ್ಷಗಳಲ್ಲಿ 400 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗವನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದರು. 27 ನಗರಗಳಲ್ಲಿ 1000 ಕಿಲೋಮೀಟರ್ ಹೊಸ ಮಾರ್ಗಗಳಲ್ಲಿ ಕೆಲಸ ನಡೆಯುತ್ತಿದೆ. ಈ ಮೊದಲು ಸಮಗ್ರ ಆಧುನಿಕ ಚಿಂತನೆಯೇ ಇರಲಿಲ್ಲ ಎಂದು ಅವರು ವಿಷಾದಿಸಿದರು. ಮೆಟ್ರೊಗೆ ಯಾವುದೇ ರಾಷ್ಟ್ರೀಯ ನೀತಿ ಇರಲಿಲ್ಲ. ಪರಿಣಾಮವಾಗಿ, ವಿವಿಧ ನಗರಗಳಲ್ಲಿ ಮೆಟ್ರೊದ ತಂತ್ರ ಮತ್ತು ವ್ಯವಸ್ಥೆಗಳಲ್ಲಿ ಯಾವುದೇ ಏಕರೂಪತೆಯಿರಲಿಲ್ಲ. ನಗರದ ಉಳಿದ ಸಾರಿಗೆ ವ್ಯವಸ್ಥೆಯೊಂದಿಗೆ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಇಂದು ಈ ನಗರಗಳಲ್ಲಿ ಸಾರಿಗೆಯನ್ನು ಸಮಗ್ರ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಇದರಲ್ಲಿ ಮೆಟ್ರೋ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ, ಬದಲಿಗೆ ಸಾಮೂಹಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಏಕೀಕರಣವನ್ನು ಇತ್ತೀಚೆಗೆ ಪ್ರಾರಂಭಿಸಲಾದ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಸೂರತ್ ಮತ್ತು ಗಾಂಧಿನಗರಗಳ ಉದಾಹರಣೆಯನ್ನು ಪ್ರಸ್ಥಾಪಿಸಿದ ಪ್ರಧಾನಿಯವರು, ನಗರೀಕರಣದ ಬಗ್ಗೆ ಸರ್ಕಾರದ ಚಿಂತನೆಯನ್ನು ವಿವರಿಸಿದರು. ಈಗ ನಗರೀಕರಣವು ಪ್ರತಿಕ್ರಿಯಾತ್ಮಕವಾದುದಲ್ಲ, ಬದಲಿಗೆ ಸಕ್ರಿಯವಾದುದಾಗಿದೆ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಎಂದರು. ಕೇವಲ ಎರಡು ದಶಕಗಳ ಹಿಂದೆ, ಸೂರತ್ ನಗರವನ್ನು ಅದರ ಬೆಳವಣಿಗೆಗಿಂತ ಪ್ಲೇಗ್ ಸಾಂಕ್ರಾಮಿಕ ರೋಗಕ್ಕಾಗಿ ಹೆಸರಿಸಲಾಗುತ್ತಿತ್ತು. ಸರ್ಕಾರ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸಿತು, ಈಗ ಸೂರತ್ ಜನಸಂಖ್ಯೆಯಲ್ಲಿ ದೇಶದ 8 ನೇ ಅತಿದೊಡ್ಡ ನಗರ ಮಾತ್ರವಲ್ಲದೆ ವಿಶ್ವದ 4 ನೇ ವೇಗವಾಗಿ ಬೆಳೆಯುತ್ತಿರುವ ನಗರವೂ ಆಗಿದೆ. ಪ್ರತಿ 10 ವಜ್ರಗಳಲ್ಲಿ 9 ನ್ನು ಸೂರತ್‌ನಲ್ಲಿ ಕತ್ತರಿಸಿ ಹೊಳಪು ನೀಡಲಾಗುತ್ತದೆ. ಅಂತೆಯೇ, ದೇಶದ ಶೇ .40 ರಷ್ಟು ಮಾನವ ನಿರ್ಮಿತ ಬಟ್ಟೆಯನ್ನು ಸೂರತ್‌ನಲ್ಲಿ ತಯಾರಿಸಲಾಗುತ್ತಿದ್ದು, ಅಲ್ಲಿ ಶೇ 30 ರಷ್ಟು ಮಾನವ ನಿರ್ಮಿತ ಫೈಬರ್ ಉತ್ಪಾದನೆಯಾಗುತ್ತಿದೆ. ಸೂರತ್, ಇಂದು ದೇಶದ ಎರಡನೇ ಅತಿ ಸ್ವಚ್ಛ ನಗರವಾಗಿದೆ. ನಗರ ವಾಸಿಗಳ ಸುಗಮ ಜೀವನವನ್ನು ಹೆಚ್ಚಿಸುವ ಬಡವರಿಗೆ ವಸತಿ, ಸಂಚಾರ ನಿರ್ವಹಣೆ, ರಸ್ತೆಗಳು ಮತ್ತು ಸೇತುವೆಗಳು, ಒಳಚರಂಡಿ ಸಂಸ್ಕರಣೆ ಮತ್ತು ಆಸ್ಪತ್ರೆಗಳು ಮುಂತಾದ ಪ್ರಯತ್ನಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ಉತ್ತಮ ಯೋಜನೆ ಮತ್ತು ಸಮಗ್ರ ಚಿಂತನೆಯಿಂದ ಇದು ಸಾಧ್ಯವಾಯಿತ. ಸೂರತ್ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಗೆ ಉತ್ತಮ ಉದಾಹರಣೆಯಾಗಿದೆ, ಏಕೆಂದರೆ ಇದು ದೇಶದ ಎಲ್ಲಾ ಭಾಗಗಳ ಉದ್ಯಮಿಗಳು ಮತ್ತು ಕಾರ್ಮಿಕರ ನೆಲೆಯಾಗಿದೆ ಎಂದು ಪ್ರಧಾನಿ ಹೇಳಿದರು.
ಅಂತೆಯೇ, ಸರ್ಕಾರಿ ನೌಕರರು ಮತ್ತು ನಿವೃತ್ತರ ನಗರವಾಗಿದ್ದ ಗಾಂಧಿನಗರವು ಯುವ ರೋಮಾಂಚಕ ನಗರವಾಗಿ ಪರಿವರ್ತನೆಗೊಂಡ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಇಂದು, ಗಾಂಧಿನಗರವನ್ನು ಐಐಟಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಎನ್ಐಎಫ್ಟಿ, ನ್ಯಾಷನಲ್ ಫೊರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ, ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೀಚರ್ ಎಜುಕೇಶನ್, ಧೀರುಭಾಯ್ ಅಂಬಾನಿ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್ಐಡಿ) ರಕ್ಷಾ ಶಕ್ತಿ ವಿಶ್ವವಿದ್ಯಾಲಯ ಇತ್ಯಾದಿಗಳಿಂದ ಗುರುತಿಸಲಾಗುತ್ತಿದೆ. ಈ ಸಂಸ್ಥೆಗಳು ನಗರದ ಶಿಕ್ಷಣದ ವ್ಯವಸ್ಥೆಯನ್ನೇ ಪರಿವರ್ತಿಸುವುದಲ್ಲದೆ, ಕಂಪನಿಗಳನ್ನು ಕ್ಯಾಂಪಸ್‌ಗಳಿಗೆ ಕರೆತಂದು, ನಗರದಲ್ಲಿ ಉದ್ಯೋಗಗಳನ್ನು ಹೆಚ್ಚಿಸಿವೆ ಎಂದರು. ಸಮ್ಮೇಳನ-ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿರುವ ಮಹಾತ್ಮ ಮಂದಿರವನ್ನು ಪ್ರಧಾನಿ ಉಲ್ಲೇಖಿಸಿದರು. ಆಧುನಿಕ ರೈಲ್ವೆ ನಿಲ್ದಾಣದಂತಹ ಯೋಜನೆಗಳು. ಗಿಫ್ಟ್ ಸಿಟಿ, ಸಬರಮತಿ ನದಿ ತೀರ, ಕಂಕರಿಯಾ ಲೇಕ್ ಫ್ರಂಟ್, ವಾಟರ್ ಏರೋಡ್ರೋಮ್, ಕ್ಷಿಪ್ರ ಬಸ್ ಸಾರಿಗೆ ವ್ಯವಸ್ಥೆ, ಮೊಟೆರಾದ ವಿಶ್ವದ ಅತಿದೊಡ್ಡ ಕ್ರೀಡಾಂಗಣ, ಆರು ಪಥಗಳ ಗಾಂಧಿನಗರ ಹೆದ್ದಾರಿ ಅಹಮದಾಬಾದ್‌ನ ಗುರುತಾಗಿವೆ. ನಗರವು ತನ್ನ ಹಳೆಯ ಲಕ್ಷಣಗಳನ್ನು ಬಿಟ್ಟುಕೊಡದೇ ಆಧುನಿಕವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಅಹಮದಾಬಾದ್ ಅನ್ನು ‘ವಿಶ್ವ ಪರಂಪರೆಯ ನಗರ’ ಎಂದು ಘೋಷಿಸಲಾಗಿದೆ ಮತ್ತು ಧೋಲೆರಾದಲ್ಲಿ ಹೊಸ ವಿಮಾನ ನಿಲ್ದಾಣ ಬರುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ವಿಮಾನ ನಿಲ್ದಾಣವು ಈಗಾಗಲೇ ಅನುಮೋದಿತವಾಗಿರುವ ಮೊನೊ-ರೈಲಿನೊಂದಿಗೆ ಅಹಮದಾಬಾದ್‌ನೊಂದಿಗೆ ಸಂಪರ್ಕ ಪಡೆಯಲಿದೆ. ಅಹಮದಾಬಾದ್ ಮತ್ತು ಸೂರತ್‌ಗಳನ್ನು ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಸಂಪರ್ಕಿಸುವ ಬುಲೆಟ್ ರೈಲಿನ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ಕಳೆದ ಎರಡು ದಶಕಗಳ ಅವಧಿಯಲ್ಲಿ ಗುಜರಾತ್‌ನಲ್ಲಿ ರಸ್ತೆಗಳು, ವಿದ್ಯುತ್, ಕುಡಿಯುವ ನೀರಿನ ಸುಧಾರಣೆಗಳು ಗುಜರಾತ್‌ನ ಅಭಿವೃದ್ಧಿಯ ಪ್ರಯಾಣದಲ್ಲಿ ಪ್ರಮುಖ ಅಧ್ಯಾಯವಾಗಿವೆ ಎಂದು ಅವರು ಬಣ್ಣಿಸಿದರು. ಇಂದು, ಗುಜರಾತ್‌ನ ಪ್ರತಿಯೊಂದು ಹಳ್ಳಿಯು ಸರ್ವ ಋತು ರಸ್ತೆಯೊಂದಿಗೆ ಸಂಪರ್ಕ ಹೊಂದಿವೆ. ಬುಡಕಟ್ಟು ಗ್ರಾಮಗಳಲ್ಲಿಯೂ ಉತ್ತಮ ರಸ್ತೆಗಳಿವೆ. ಇಂದು, ಗುಜರಾತ್‌ನಲ್ಲಿ 80 ಪ್ರತಿಶತದಷ್ಟು ಕುಟುಂಬಗಳು ಕೊಳವೆ ಮೂಲಕ ನೀರು ಪಡೆಯುತ್ತಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ 10 ಲಕ್ಷ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ಶೀಘ್ರದಲ್ಲೇ ಪ್ರತಿ ಮನೆಯೂ ನಲ್ಲಿ ನೀರಿನ ಸಂಪರ್ಕ ಪಡೆಯುತ್ತಾರೆ ಎಂದು ಅವರು ಹೇಳಿದರು.
ಅಂತೆಯೇ, ಸರ್ದಾರ್ ಸರೋವರ್ ಸೌನಿ ಯೋಜನೆ ಮತ್ತು ವಾಟರ್ ಗ್ರಿಡ್ ನೆಟ್‌ವರ್ಕ್ ಒಣ ಪ್ರದೇಶಗಳಿಗೆ ನೀರೊದಗಿಸುವ ಮೂಲಕ ನೀರಾವರಿಯು ಹೊಸ ವೇಗವನ್ನು ಕಂಡಿದೆ. ನರ್ಮದಾ ನೀರು ಕಚ್ ತಲುಪಿದೆ. ಸಣ್ಣ ನೀರಾವರಿಯಲ್ಲಿ ಕೆಲಸ ಮಾಡಲಾಗಿದೆ. ವಿದ್ಯುತ್ ಕ್ಷೇತ್ರದ್ದು ಮತ್ತೊಂದು ಯಶೋಗಾಥೆಯಾಗಿದೆ. ಸೌರಶಕ್ತಿಯಲ್ಲಿ ಗುಜರಾತ್ ರಾಜ್ಯ ಮುಂಚೂಣಿಯಲ್ಲಿದೆ. ಇತ್ತೀಚೆಗೆ, ಕಚ್‌ನಲ್ಲಿ ವಿಶ್ವದ ಅತಿದೊಡ್ಡ ಸೌರ ಸ್ಥಾವರದ ಕೆಲಸ ಪ್ರಾರಂಭಿಸಲಾಯಿತು. ಸರ್ವೋದಯ ಯೋಜನೆಯಡಿ ನೀರಾವರಿಗಾಗಿ ಪ್ರತ್ಯೇಕ ವಿದ್ಯುತ್ ನೀಡಿದ ದೇಶದ ಮೊದಲ ರಾಜ್ಯ ಗುಜರಾತ್ ಎಂದು ಪ್ರಧಾನಿ ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಂತಹ ಕ್ರಮಗಳನ್ನು ಪ್ರಧಾನಿ ವಿವರಿಸಿದರು. ಈ ಯೋಜನೆಯೊಂದ ರಾಜ್ಯದ 21 ಲಕ್ಷ ಜನರಿಗೆ ಅನುಕೂಲವಾಗಿದೆ. 500 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಸ್ಥಳೀಯರಿಗೆ ಸುಮಾರು 100 ಕೋಟಿ ರೂ. ಉಳಿತಾಯ ಮಾಡಿವೆ. ಪಿಎಂ ಆವಾಸ್-ಗ್ರಾಮೀಣ ಯೋಜನೆಯಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಭಾರತವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅವುಗಳನ್ನು ವೇಗವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಭಾರತವು ದೊಡ್ಡದನ್ನು ಮಾತ್ರ ಮಾಡುತ್ತಿಲ್ಲ, ಉತ್ತಮವಾದದ್ದನ್ನೂ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಅತಿದೊಡ್ಡ ಪ್ರತಿಮೆ, ವಿಶ್ವದ ಅತಿದೊಡ್ಡ ಕೈಗೆಟುಕುವ ವಸತಿ ಕಾರ್ಯಕ್ರಮ, ಆರೋಗ್ಯ ರಕ್ಷಣೆ ಕಾರ್ಯಕ್ರಮ, 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್ ಸಂಪರ್ಕ, ಇತ್ತೀಚಿಗಿನ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಅವರು ಈ ಚಿಂತನೆಯ ಉದಾಹರಣೆಗಳಾಗಿ ಹೆಸರಿಸಿದರು.
ಹಜೀರಾ ಮತ್ತು ಘೋಘಾ ನಡುವಿನ ರೋ-ಪ್ಯಾಕ್ಸ್ ದೋಣಿ ಸೇವೆ ಮತ್ತು ಗಿರ್ನಾರ್ ರೋಪ್-ವೇ ಗಳನ್ನು ಅವರು ಉಲ್ಲೇಖಿಸಿ, ಇದು ತ್ವರಿತ ಅನುಷ್ಠಾನದ ಮೂಲಕ ಸ್ಥಳೀಯ ಜನಜೀವನವನ್ನು ಬದಲಾಯಿಸಿದೆ ಎಂದರು. ಘೋಂಗಾ ಮತ್ತು ಹಜೀರಾ ನಡುವಿನ ಅಂತರವನ್ನು ದೋಣಿ ಮೂಲಕ 375 ಕಿ.ಮೀ.ನಿಂದ 90 ಕಿ.ಮೀ.ಗೆ ಇಳಿಸಿದ್ದರಿಂದ ಈ ಯೋಜನೆಗಳು ಇಂಧನ ಮತ್ತು ಸಮಯವನ್ನು ಉಳಿಸಿವೆ. ಈ ಸೇವೆಯನ್ನು ಎರಡು ತಿಂಗಳಲ್ಲಿ 50 ಸಾವಿರ ಜನರು ಬಳಸಿದ್ದಾರೆ ಮತ್ತು 14 ಸಾವಿರ ವಾಹನಗಳನ್ನು ಸಹ ಸೇವೆಯಯ ಮೂಲಕ ಸಾಗಿಸಲಾಯಿತು. ಇದು ಈ ಪ್ರದೇಶದ ರೈತರಿಗೆ ಮತ್ತು ಪಶುಸಂಗೋಪನೆಗೆ ಸಹಾಯ ಮಾಡಿದೆ. ಅಂತೆಯೇ, ಗಿರ್ನಾರ್ ರೋಪ್-ವೇ ಅನ್ನು ಎರಡೂವರೆ ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಬಳಸಿದ್ದಾರೆ ಎಂದರು.
ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು ವೇಗವಾಗಿ ಕೆಲಸ ಮಾಡುವುದರಿಂದ ಮಾತ್ರ ನವ ಭಾರತದ ಗುರಿಯನ್ನು ಸಾಧಿಸಬಹುದು ಎಂದು ಪ್ರಧಾನಿ ಹೇಳಿದರು. ಪ್ರಗತಿ (PRAGATI) ವ್ಯವಸ್ಥೆಯು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಅವರು ಹೇಳಿದರು. ಪ್ರಗತಿ ಪ್ರಧಾನಿಯವರ ಅಧ್ಯಕ್ಷತೆಯಲ್ಲಿರುವುದರಿಂದ ದೇಶದ ಅನುಷ್ಠಾನ ಸಂಸ್ಕೃತಿಗೆ ಹೊಸ ಆವೇಗವನ್ನು ತಂದಿದೆ. ಕಳೆದ 5 ವರ್ಷಗಳಲ್ಲಿ ನಾವು 13 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಪರಿಶೀಲಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
ದೀರ್ಘಾವಧಿಯಿಂದ ಬಾಕಿ ಇದ್ದ ಯೋಜನೆಗಳ ಅನುಷ್ಠಾನದಿಂದ, ಸೂರತ್‌ನಂತಹ ನಗರಗಳು ಹೊಸ ಶಕ್ತಿಯನ್ನು ಪಡೆಯುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ನಮ್ಮ ಉದ್ಯಮ, ವಿಶೇಷವಾಗಿ ಸಣ್ಣ-ಪ್ರಮಾಣದ ಉದ್ಯಮ, ಎಂಎಸ್‌ಎಂಇಗಳು ಉತ್ತಮ ಮೂಲಸೌಕರ್ಯಗಳ ಬೆಂಬಲದಿಂದ ಜಾಗತಿಕವಾಗಿ ಸ್ಪರ್ಧಿಸುವ ವಿಶ್ವಾಸವನ್ನು ಪಡೆಯುತ್ತವೆ. ಆತ್ಮನಿರ್ಭರ ಭಾರತ್ ಅಭಿಯಾನದಡಿಯಲ್ಲಿ, ಈ ಸಣ್ಣ ಕೈಗಾರಿಕೆಗಳು ಸಂಕಷ್ಟದ ಸಮಯಗಳನ್ನು ನಿಭಾಯಿಸಲು ಸಾವಿರಾರು ಕೋಟಿ ರೂ. ಮೌಲ್ಯದ ಸುಲಭ ಸಾಲಗಳನ್ನು ಒದಗಿಸುವ ಮೂಲಕ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವ್ಯಾಖ್ಯಾನಿಸಿರುವ ಮಿತಿಗಿಂತ ದೊಡ್ಡದಾಗಿ ಬೆಳೆದರೆ ತಮ್ಮ ಪ್ರಯೋಜನಗಳನ್ನು ಕಳೆದುಕೊಳ್ಳುವ ವಿಸ್ತರಣೆಯ ಭಯವನ್ನು ಹೋಗಲಾಡಿಸಲು ಎಂಎಸ್‌ಎಂಇಯನ್ನು ಮರು ವ್ಯಾಖ್ಯಾನಿಸುವ ಮೂಲಕ ಅವರಿಗೆ ಉತ್ತಮ ಅವಕಾಶಗಳನ್ನು ನೀಡಲಾಗುತ್ತಿದೆ. ಸರ್ಕಾರ ನಿರ್ಬಂಧಗಳನ್ನು ತೆಗೆದುಹಾಕಿದೆ ಮತ್ತು ಅವರಿಗೆ ಹೊಸ ಮಾರ್ಗಗಳನ್ನು ತೆರೆದಿದೆ. ಅಂತೆಯೇ, ಈ ಪುನರ್ ವ್ಯಾಖ್ಯಾನವು ಉತ್ಪಾದನೆ ಮತ್ತು ಸೇವಾ ಉದ್ಯಮದ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿದೆ, ಇದು ಸೇವಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ಸರ್ಕಾರದ ಖರೀದಿಯಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತಿದೆ. ಸಣ್ಣ ಉದ್ಯಮಗಳ ಪ್ರವರ್ಧಮಾನಕ್ಕೆ ಬರಲು ಅವಕಾಶಗಳನ್ನು ಒದಗಿಸಲು ಮತ್ತು ಈ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಜೀವನ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿಯವರು ತಿಳಿಸಿದರು.
****
(Release ID: 1689699)
Visitor Counter : 182
Read this release in:
Malayalam
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu