ಸಂಪುಟ
ಆಕಾಶ್ ಕ್ಷಿಪಣಿ ರಫ್ತು ಹಾಗೂ ತ್ವರಿತ ಅನುಮೋದನೆಗೆ ಸಮಿತಿ ರಚನೆಗೆ ಕೇಂದ್ರ ಸಂಪುಟ ನಿರ್ಧಾರ
Posted On:
30 DEC 2020 5:06PM by PIB Bengaluru
ಆತ್ಮ ನಿರ್ಭರ ಭಾರತ್ ಯೋಜನೆಯಡಿ, ಭಾರತದ ವಿವಿಧ ಬಗೆಯ ರಕ್ಷಣಾ ಉತ್ಪನ್ನಗಳು ಮತ್ತು ಕ್ಷಿಪಣಿ ಅಭಿವೃದ್ಧಿಯಲ್ಲಿ ತನ್ನ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದೆ. ಆಕಾಶ್, ದೇಶದ ಪ್ರಮುಖ ಕ್ಷಿಪಣಿಯಾಗಿದ್ದು, ಅದನ್ನು ಶೇ.96ರಷ್ಟು ದೇಶಿಯವಾಗಿ ಅಭಿವೃದ್ಧಿಗೊಳಿಸಲಾಗಿದೆ.
ಸುಮಾರು 25 ಕಿಲೋಮೀಟರ್ ದೂರದವರೆಗೆ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ಆಕಾಶ್ ಆಗಿದ್ದು, ಇದನ್ನು 2014ರಲ್ಲಿ ಭಾರತೀಯ ವಾಯುಪಡೆಗೆ ಮತ್ತು 2015ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.
ಸೇವೆಗೆ ಬಳಸಿಕೊಂಡ ನಂತರ, ಅಂತಾರಾಷ್ಟ್ರೀಯ ಪ್ರದರ್ಶನಗಳು/ರಕ್ಷಣಾ ಎಕ್ಸ್ ಪೋ, ಏರೋ ಇಂಡಿಯಾ ಮತ್ತಿತರ ವೇಳೆ ಹಲವು ಮಿತ್ರ ರಾಷ್ಟ್ರಗಳು ಆಕಾಶ್ ಕ್ಷಿಪಣಿ ಬಗ್ಗೆ ಆಸಕ್ತಿ ತೋರಿದ್ದವು. ಇದೀಗ ಸಚಿವ ಸಂಪುಟ ಅನುಮೋದನೆ ನೀಡಿರುವುದರಿಂದ ಭಾರತೀಯ ಉತ್ಪಾದಕರು ನಾನಾ ದೇಶಗಳಲ್ಲಿನ ಆರ್ ಎಫ್ ಐ/ಆರ್ ಎಫ್ ಪಿಗಳಲ್ಲಿ ಭಾಗವಹಿಸಲು ನೆರವಾಗಲಿದೆ.
ಈವರೆಗೆ ಭಾರತೀಯ ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ಬಿಡಿ ಭಾಗಗಳು/ಘಟಕಗಳು ಮತ್ತಿತರವು ಮಾತ್ರ ಸೇರ್ಪಡೆಯಾಗಿದ್ದವು. ದೊಡ್ಡ ಪ್ರಮಾಣದ ರಫ್ತು ಪ್ರಮಾಣ ಅತ್ಯಂತ ಕನಿಷ್ಠವಾಗಿತ್ತು. ಸಚಿವ ಸಂಪುಟದ ಈ ಉಪಕ್ರಮದಿಂದಾಗಿ ದೇಶ ತನ್ನ ರಕ್ಷಣಾ ಉತ್ಪನ್ನಗಳನ್ನು ಸುಧಾರಿಸಿಕೊಳ್ಳಲು ಮತ್ತು ಅವುಗಳು ಜಾಗತಿಕವಾಗಿ ಸ್ಪರ್ಧೆ ಎದುರಿಸಲು ನೆರವಾಗಲಿದೆ.
ರಫ್ತಾಗಲಿರುವ ಆಕಾಶ್ ಆವೃತ್ತಿ ಹಾಲಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನಿಯೋಜಿಸಲ್ಪಟ್ಟಿರುವ ವ್ಯವಸ್ಥೆಗಿಂತ ಭಿನ್ನವಾದುದು.
ಆಕಾಶ್ ಅಲ್ಲದೆ ಕರಾವಳಿ ಕಣ್ಗಾವಲು ವ್ಯವಸ್ಥೆ, ರಡಾರ್ ಗಳು, ಏರ್ ಪ್ಲಾಟ್ ಫಾರಂಗಳು ಮತ್ತಿತರ ಉತ್ಪನ್ನಗಳಿಗೂ ಇತರೆ ದೇಶಗಳಿಂದ ಆಸಕ್ತಿ ವ್ಯಕ್ತವಾಗುತ್ತಿದೆ. ಹಾಗಾಗಿ ಅಂತಹ ವೇದಿಕೆಗಳಿಗೆ ರಫ್ತು ಮಾಡಲು ತ್ವರಿತ ಅನುಮೋದನೆಗಳನ್ನು ನೀಡುವ ಸಲುವಾಗಿ ರಕ್ಷಣಾ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿ ದೇಶದ ಪ್ರಮುಖ ವೇದಿಕೆಗಳಲ್ಲಿ ಇತರೆ ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲು ಅಧಿಕೃತ ಅನುಮೋದನೆಗಳನ್ನು ನೀಡಲಿದೆ. ಅಲ್ಲದೆ ಸಮಿತಿ ಸರ್ಕಾರದಿಂದ ಸರ್ಕಾರ ಮಾರ್ಗ ಸೇರಿದಂತೆ ನಾನಾ ಲಭ್ಯ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ.
ಭಾರತ ಸರ್ಕಾರ, ಗರಿಷ್ಠ ಮೌಲ್ಯದ ರಕ್ಷಣಾ ಉತ್ಪನ್ನಗಳ ರಫ್ತು ಮಾಡುವ ಉದ್ದೇಶ ಹೊಂದಿದ್ದು, ಅದು ರಕ್ಷಣಾ ರಫ್ತಿನಿಂದ ಐದು ಬಿಲಿಯನ್ ಅಮೆರಿಕನ್ ಡಾಲರ್ ಗುರಿಯನ್ನು ಹೊಂದಿದೆ. ಹಾಗೂ ಮಿತ್ರ ವಿದೇಶಿ ರಾಷ್ಟ್ರಗಳೊಂದಿಗೆ ಕಾರ್ಯತಂತ್ರ ಪಾಲುದಾರಿಕೆಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಂಡಿದೆ.
****
(Release ID: 1684834)
Visitor Counter : 312
Read this release in:
Telugu
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Malayalam