ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ - 19 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ 

Posted On: 27 DEC 2020 11:40AM by PIB Bengaluru

ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಇಂದು ಡಿಸೆಂಬರ್ 27. ನಾಲ್ಕು ದಿನಗಳ ನಂತರ 2021 ಆರಂಭವಾಗಲಿದೆ. ಇಂದಿನ ಮನದ ಮಾತು ಒಂದು ರೀತಿಯಲ್ಲಿ 2020 ಕೊನೆಯ ಮನದ ಮಾತಾಗಿದೆ. ಮುಂದಿನ ಮನದ ಮಾತು 2021 ರಲ್ಲಿ ಆರಂಭವಾಗುತ್ತದೆ. ಸ್ನೇಹಿತರೆ, ನನ್ನ ಮುಂದೆ ನೀವು ಬರೆದಂತಹ ಹಲವಾರು ಪತ್ರಗಳಿವೆ. ಮೈ ಗೌ ನಲ್ಲಿ ನೀವು ಕಳುಹಿಸುವಂತಹ ಸಲಹೆಗಳು ಕೂಡ ನನ್ನ ಮುಂದಿವೆ. ಅದೆಷ್ಟೋ ಜನರು ಫೋನ್ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಸಂದೇಶಗಳಲ್ಲಿ ಕಳೆದ ವರ್ಷದ ಅನುಭವ, ಮತ್ತು 2021 ಸಂಕಲ್ಪದ ಬಗ್ಗೆ ಬರೆಯಲಾಗಿದೆ. ಕೊಲ್ಹಾಪುರದಿಂದ ಅಂಜಲಿಯವರು ಹೀಗೆ ಬರೆದಿದ್ದಾರೆ, ನೂತನ ವರ್ಷಕ್ಕೆ ನಾವು ಬೇರೆಯವರಿಗೆ ಶುಭಾಷಯ ಕೋರುತ್ತೇವೆ, ಬಾರಿ ನಾವು ಹೊಸದೊಂದು ಕೆಲಸ ಮಾಡೋಣ. ನಾವು ನಮ್ಮ ದೇಶಕ್ಕೆ ಏಕೆ ಶುಭಕೋರಬಾರದು? ಅಂಜಲಿಯವರೇ, ನಿಮ್ಮದು ನಿಜಕ್ಕೂ ತುಂಬಾ ಒಳ್ಳೆಯ ವಿಚಾರ. ನಮ್ಮ ದೇಶ 2021 ರಲ್ಲಿ ಸಫಲತೆಯ ಹೊಸ ಶಿಖರವನ್ನು ಮುಟ್ಟಲಿ, ಭಾರತ ಸಶಕ್ತವಾಗಲಿ ಮತ್ತು ವಿಶ್ವದಲ್ಲಿ ಅದನ್ನು ಗುರುತಿಸುವಂತಾಗಲಿ. ಇದಕ್ಕಿಂತ ದೊಡ್ಡ ಹಾರೈಕೆ ಇನ್ನಾವುದಿರಲು ಸಾಧ್ಯ.  

ಸ್ನೇಹಿತರೆ ನಮೊ ಆಪ್ ನಲ್ಲಿ ಮುಂಬೈಯ ಅಭಿಷೇಕ್ ಅವರು ಒಂದು ಸಂದೇಶವನ್ನು ಕಳುಹಿಸಿದ್ದಾರೆ. 2020 ನಮಗೆ ಏನೆಲ್ಲ ತೋರಿಸಿತು, ಏನೆಲ್ಲಾ ಕಲಿಸಿತು ಅದನ್ನು ನಾವೆಂದೂ ಊಹಿಸಿರಲೂ ಇಲ್ಲ. ಕೊರೊನಾಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಅವರು ಬರೆದಿದ್ದಾರೆ. ಪತ್ರಗಳಲ್ಲಿ, ಸಂದೇಶಗಳಲ್ಲಿ ನನಗೆ ಒಂದು ಸಾಮಾನ್ಯ ಸಂಗತಿ ಕಂಡುಬರುತ್ತಿದೆ. ವಿಶೇಷವೆನಿಸುತ್ತಿದೆ ಅದನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಹೆಚ್ಚಿನ ಪತ್ರಗಳಲ್ಲಿ ಜನರು ದೇಶದ ಸಾಮರ್ಥ್ಯ, ದೇಶವಾಸಿಗಳ ಸಾಮೂಹಿಕ ಶಕ್ತಿಯನ್ನು ಮನಃದುಂಬಿ ಹೊಗಳಿದ್ದಾರೆ. ಜನತಾ ಕರ್ಫ್ಯೂದಂತಹ ಹೊಚ್ಚಹೊಸ ಪ್ರಯೋಗ ಸಂಪೂರ್ಣ ವಿಶ್ವಕ್ಕೆ ಸ್ಪೂರ್ತಿಯಾಯಿತು. ಜನರು ಚಪ್ಪಾಳೆ, ತಟ್ಟೆ, ಜಾಗಟೆ ಬಾರಿಸಿ ನಮ್ಮ ಕೊರೊನಾ ಯೋಧರಿಗೆ ಗೌರವ ಸಲ್ಲಿಸಿದರು, ಒಗ್ಗಟ್ಟನ್ನು ತೋರ್ಪಡಿಸಿದರು ಅದನ್ನು ಕೂಡ ಬಹಳಷ್ಟು ಜನರು ನೆನಪಿಸಿಕೊಂಡಿದ್ದಾರೆ.

ಸ್ನೇಹಿತರೆ, ದೇಶದ ಸಾಮಾನ್ಯ ಜನರು ಕೂಡ ಬದಲಾವಣೆಯನ್ನು ಅನುಭವಿಸಿದ್ದಾರೆ. ನಾನು ದೇಶದಲ್ಲಿ ಒಂದು ಸದಾಶಯದ ಪ್ರವಾಹವನ್ನೂ ಕಂಡಿದ್ದೇನೆ. ಹಲವಾರು ಸವಾಲುಗಳು ಎದುರಾದವು. ಹಲವಾರು ಸಂಕಷ್ಟಗಳು ಎದುರಾದವು. ಅನೇಕ ತೊಂದರೆಗಳು ಎದುರಾದವು. ಕೊರೊನದಿಂದಾಗಿ ವಿಶ್ವದಲ್ಲಿ ಸರಬರಾಜು ಸರಪಳಿಯಲ್ಲಿ ಅನೇಕ ತೊಂದರೆಗಳು ಎದುರಾದವು. ಆದರೆ ನಾವು ಪ್ರತಿಯೊಂದು ಸಂಕಷ್ಟದಿಂದಲೂ ಹೊಸತೊಂದು ಪಾಠವನ್ನು ಕಲಿತೆವು. ದೇಶದಲ್ಲಿ ಹೊಸ ಸಾಮರ್ಥ್ಯವೂ ಸೃಷ್ಟಿಯಾಯಿತು. ಶಬ್ದಗಳಲ್ಲಿ ಹೇಳಬೇಕೆಂದರೆ ಸಾಮರ್ಥ್ಯದ ಹೆಸರು ಸ್ವಾವಲಂಬನೆ.    

ಸ್ನೇಹಿತರೆ, ದಿಲ್ಲಿಯ ಅಭಿನವ್ ಬ್ಯಾನರ್ಜಿಯವರು ನನಗೆ ಬರೆದು ಕಳುಹಿಸಿದ ತಮ್ಮ ಅನುಭವ ಬಹಳ ರೋಚಕವಾಗಿದೆ. ಅಭಿನವ್ ಅವರಿಗೆ ತಮ್ಮ ಸಂಬಂಧಿಕರ ಮಕ್ಕಳಿಗೆ ಉಡುಗೊರೆ ನೀಡಲು ಕೆಲ ಆಟಿಕೆಗಳನ್ನು ಖರೀದಿಸಬೇಕಿತ್ತಂತೆ. ಹಾಗಾಗಿ ಅವರು ದೆಹಲಿಯ ಝಂಡೆವಾಲಾ ಮಾರುಕಟ್ಟೆಗೆ ಹೋಗಿದ್ದರು. ದೆಹಲಿಯಲ್ಲಿ ಮಾರುಕಟ್ಟೆ ಸೈಕಲ್ ಗಳು ಮತ್ತು ಆಟಿಕೆಗಳಿಗೆ ಬಹಳ ಪ್ರಸಿದ್ಧ ಎಂಬುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರಬಹುದು. ಹಿಂದೆ ಅಲ್ಲಿ ದುಬಾರಿ ಆಟಿಕೆಗಳು ಎಂದರೆ ವಿದೇಶಿ ಆಟಿಕೆಗಳು ಎಂಬುದಾಗಿತ್ತು. ಅಗ್ಗದ ಆಟಿಕೆಗಳು ಕೂಡಾ ಹೊರದೇಶದಿಂದಲೇ ಬರುತ್ತಿದ್ದವು. ಆದರೆ ಇಂದು ಅಲ್ಲಿಯ ಅಂಗಡಿಕಾರರು ಗ್ರಾಹಕರಿಗೆ ಒಳ್ಳೆ ಗುಣಮಟ್ಟದ ಆಟಿಕೆ ಏಕೆಂದರೆ ಇದು ಭಾರತದಲ್ಲಿ ಸಿದ್ಧವಾದದ್ದು ಮೇಡ್ ಇನ್ ಇಂಡಿಯಾ ಎಂದು ಕೂಗಿ ಕೂಗಿ ಮಾರಾಟ ಮಾಡುತ್ತಿದ್ದಾರೆ ಎಂದು ಅಭಿನವ್ ಅವರು ಪತ್ರದಲ್ಲಿ ಬರೆದಿದ್ದಾರೆ. ಗ್ರಾಹಕರು ಕೂಡಾ ಭಾರತದಲ್ಲಿ ತಯಾರಿಸಿದ ಆಟಿಕೆಗಳ ಬೇಡಿಕೆ ಇಡುತ್ತಿದ್ದಾರೆ. ಒಂದು ಆಲೋಚನೆಯಲ್ಲಿ ಎಂಥ ದೊಡ್ಡ ಪರಿವರ್ತನೆ ಆಗಿದೆ ಎಂಬುದ್ಕೆ ಇದು ಜ್ವಲಂತ ನಿದರ್ಶನವಾಗಿದೆ. ದೇಶದ ಜನತೆಯ ವಿಚಾರಗಳಲ್ಲಿ ಎಷ್ಟು ದೊಡ್ಡ ಬದಲವಣೆ ಆಗುತ್ತಿದೆ. ಅದು ಕೂಡಾ ಒಂದೇ ವರ್ಷದೊಳಗೆ. ಪರಿವರ್ತನೆಯನ್ನು ಅಳೆಯುವುದು ಅಷ್ಟು ಸುಲಭವಲ್ಲ. ಅರ್ಥಶಾಸ್ತ್ರಜ್ಞರೂ ಇದನ್ನು ತಮ್ಮ ಮಾಪಕಗಳಲ್ಲಿ ಅಳೆಯಲು ಸಾಧ್ಯವಿಲ್ಲ

ಸ್ನೇಹಿತರೇ, ವಿಶಾಖಪಟ್ಟಣಂ ನಿಂದ ವೆಂಕಟ್ ಮುರಳೀಪ್ರಸಾದ್ ಅವರು ನನಗೆ ಬರೆದಿರುವದರಲ್ಲೂ ವಿಭಿನ್ನವಾದ idea ಇದೆ. ನಿಮಗಾಗಿ twenty, twenty one ಗಾಗಿ, ಎರಡು ಸಾವಿರದ ಇಪ್ಪತ್ತೊಂದಕ್ಕಾಗಿ ನಾನು ABC ಲಗತ್ತಿಸುತ್ತಿದ್ದೇನೆ ಎಂದು ವೆಂಕಟ್ ಅವರು ಬರೆದಿದ್ದಾರೆ. ಇಷ್ಟಕ್ಕೂ ABC ಇಂದ ಜೊತೆಗೆ ಅವರಿಗಿರುವ ನಂಟೇನೆಂದು ನನಗೆ ಅರ್ಥವಾಗಲಿಲ್ಲ. ಆದರೆ, ವೆಂಕಟ್ ಅವರು ತಮ್ಮ ಪತ್ರದ ಜೊತೆಗೆ ಒಂದು ಚಾರ್ಟನ್ನೂ ಲಗತ್ತಿಸಿದಿರುವುದನ್ನು ನಾನು ನೋಡಿದೆ. ನಾನು ಚಾರ್ಟನ್ನು ನೋಡಿದೆ, ಆಗ ನನಗೆ ತಿಳಿಯಿತು ಅವರು ಹೇಳಿದ ABC ಅರ್ಥವೇನೆಂದುಸ್ವಾವಲಂಬಿ ಭಾರತದ ಚಾರ್ಟ್ – ABC (ಆತ್ಮ ನಿರ್ಭರ್ ಭಾರತ್ ಚಾರ್ಟ್). ಇದು ಬಹಳ ಆಸಕ್ತಿಕರವಾಗಿದೆ. ವೆಂಕಟ್ ಅವರು, ತಾವು ದಿನ ನಿತ್ಯ ಬಳಸುವಂಥ ಎಲ್ಲ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅದರಲ್ಲಿ, electronics, stationery, ವೈಯಕ್ತಿಕ ಬಳಕೆಯ ಸಾಮಗ್ರಿಗಳಲ್ಲದೇ, ಇನ್ನೂ ಹಲವಾರು ವಸ್ತುಗಳು ಪಟ್ಟಿಯಲ್ಲಿವೆ. ನಾವು ತಿಳಿದೋ-ತಿಳಿಯದೇನೋ, ಕೆಲವು ವಿದೇಶಿ ವಸ್ತುಗಳನ್ನು ಬಳಸುತ್ತಿದ್ದೇವೆ ಆದರೆ, ಅವುಗಳ ಪರ್ಯಾಯ ವಸ್ತುಗಳು ನಮ್ಮ ಭಾರತದಲ್ಲಿ ಸುಲಭವಾಗಿ ಲಭ್ಯವಿವೆ ಎಂದು ವೆಂಕಟ್ ಹೇಳಿದ್ದಾರೆ. ನಮ್ಮ ದೇಶವಾಸಿಗಳ ಪರಿಶ್ರಮ ಮತ್ತು ಪ್ರತಿಫಲ ಇರುವಂಥ ಉತ್ಪನ್ನಗಳನ್ನೇ ಬಳಸುವುದಾಗಿ ಅವರು ಪ್ರಮಾಣ ಮಾಡಿದ್ದಾರೆ.

ಗೆಳೆಯರೇ, ಆದರೆ ಅವರು ಇದರ ಜೊತೆಗೆ ಹೇಳಿದಂತಹ ಮತ್ತೊಂದು ವಿಷಯ ನನಗೆ ಬಹಳ ರೋಚಕವೆನಿಸಿತು. ನಾವು ಸ್ವಾವಲಂಬಿ ಭಾರತವನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ, ಆದರೆ, ನಮ್ಮ ಉತ್ಪಾದಕರು, ಅವರು ತಮ್ಮ ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಸಂದೇಶವೂ ಇರಬೇಕು ಎಂಬ ಮಾತನ್ನೂ ಅವರು ಹೇಳಿದ್ದಾರೆ. ಅವರು ಹೇಳಿದ್ದೂ ಸರಿಯೇ. Zero effect, zero defect ಯೋಚನೆಯೊಂದಿಗೆ ಕೆಲಸ ಮಾಡುವ ಸಮಯ ಇದಾಗಿದೆ. ನಾನು ದೇಶದ ಉದ್ಯಮಿಗಳು ಮತ್ತು ಸರಕು ಉತ್ಪಾದಕರಲ್ಲಿ ಆಗ್ರಹಿಸುವುದೇನೆಂದರೆ ದೇಶದ ಜನತೆ ದೃಢ ಸಂಕಲ್ಪಗೈದಿದ್ದಾರೆ, ದೃಢವಾದ ಹೆಜ್ಜೆ ಮುಂದಿಟ್ಟಿದ್ದಾರೆ. Vocal for local ಎಂಬುದು ಈಗ ಪ್ರತಿ ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಉತ್ಪನ್ನಗಳೂ ಅಂತಾರಾಷ್ಟ್ರೀಯ ಮಟ್ಟದ್ದಾಗಿವೆ ಎಂಬುದನ್ನ ನಾವು ಖಚಿತಪಡಿಸಿಕೊಳ್ಳಬೇಕು. ಜಾಗತಿಕವಾಗಿ ಅತ್ಯುತ್ತಮವಾಗಿರುವುದನ್ನ, ನಾವು ಭಾರತದಲ್ಲಿ ತಯಾರಿಸಿ ತೋರಿಸೋಣ. ಇದಕ್ಕಾಗಿ ನಮ್ಮ ಉದ್ಯಮಿ ಮಿತ್ರರೆಲ್ಲಾ ಮುಂದೆ ಬರಬೇಕು. Start-up ಗಳೂ ಮುಂದೆ ಬರಬೇಕು ಎಂದು ನಾನು ದೇಶದ ಸರಕು ಉತ್ಪಾದಕರನ್ನು ಆಗ್ರಹಿಸುತ್ತೇನೆ. ನಾನು ಮತ್ತೊಮ್ಮೆ ವೆಂಕಟ್ ಅವರ ಉತ್ತಮ ಪ್ರಯತ್ನಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ, ನಾವು ಭಾವನೆಯನ್ನು ನಿರಂತರವಾಗಿರಿಸಬೇಕು, ಜೋಪಾನವಾಗಿರಿಸಬೇಕು ಮತ್ತು ವೃದ್ಧಿಸುತ್ತಲೇ ಸಾಗಬೇಕು. ನಾನು ಹಿಂದೆಯೂ ಹೇಳಿದ್ದೆ. ಇಂದು ಮತ್ತೊಮ್ಮೆ ದೇಶದ ಜನತೆಯನ್ನು ಆಗ್ರಹಿಸುತ್ತಿದ್ದೇನೆ. ನೀವು ಒಂದು ಪಟ್ಟಿ ಮಾಡಿ. ನಾವು ದಿನಪೂರ್ತಿ ಬಳಸುವಂತಹ ವಸ್ತುಗಳ ಬಗ್ಗೆ ಆಲೋಚಿಸಿ ಮತ್ತು ನಮಗೆ ತಿಳಿಯದೆಯೇ ಯಾವ ವಿದೇಶದಲ್ಲಿ ಸಿದ್ಧವಾದ ವಸ್ತುಗಳು ನಮ್ಮ ಜೀವನದಲ್ಲಿ ಪ್ರವೇಶಿಸಿವೆ ಎಂಬುದನ್ನು ಗಮನಿಸಿ. ಒಂದು ರೀತಿಯಲ್ಲಿ ನಮ್ಮನ್ನು ಅವಲಂಬಿತರನ್ನಾಗಿ ಮಾಡಿವೆ. ಭಾರತದಲ್ಲಿ ಸಿದ್ಧಗೊಳ್ಳುವ ವಸ್ತುಗಳನ್ನು ಆಯ್ಕೆಮಾಡಿಕೊಳ್ಳಿ, ಮತ್ತು ಭಾರತದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ದುಡಿಯುವ ಜನರು ತಯಾರಿಸಿದ ಉತ್ಪನ್ನಗಳನ್ನು ನಾವು ಬಳಸಬೇಕೆಂದು ನಿರ್ಧರಿಸಿಕೊಳ್ಳಿ. ನೀವು ಪ್ರತಿವರ್ಷ ಹೊಸ ವರ್ಷದ ಸಂಕಲ್ಪ ಕೈಗೊಳ್ಳುತ್ತೀರಲ್ಲವೆ, ಬಾರಿ ನಿಮ್ಮ ದೇಶಕ್ಕೊಸ್ಕರವೂ ಒಂದು ಸಂಕಲ್ಪ ಕೈಗೊಳ್ಳಿ.    

ನನ್ನ ಪ್ರಿಯ ದೇಶಬಾಂಧವರೆ, ಭಯೋತ್ಪಾದಕರಿಂದ, ಅತ್ಯಾಚಾರಿಗಳಿಂದ, ದೇಶದ ಸಹಸ್ರಾರು ವರ್ಷಗಳ ಸಂಸ್ಕೃತಿ, ಸಭ್ಯತೆ, ನಮ್ಮ ರೀತಿ ನೀತಿಗಳನ್ನು ಉಳಿಸಿಕೊಳ್ಳಲು ಎಷ್ಟು ದೊಡ್ಡ ಬಲಿದಾನಗೈಯ್ಯಲಾಗಿದೆ ಎಂಬುದನ್ನು ನೆನೆಯುವ ದಿನವೂ ಇದಾಗಿದೆ. ಇಂದಿನ ದಿನವೇ ಗುರು ಗೋವಿಂದರ ಪುತ್ರರು, ಸಾಹಿಬ್ ಜಾದೆ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರನ್ನು ಗೋಡೆಯಲ್ಲಿ ಜೀವಂತ ಸಮಾಧಿ ಮಾಡಲಾಗಿತ್ತು. ಸಾಹಿಬ್ ಜಾದೆ ತಮ್ಮ ನಂಬಿಕೆಯನ್ನು ಬಿಟ್ಟುಬಿಡಲಿ, ಮಹಾನ್ ಗುರು ಪರಂಪರೆಯ ಕಲಿಕೆಯನ್ನು ಬಿಟ್ಟುಬಿಡಲಿ ಎಂದು ದುಷ್ಕರ್ಮಿಗಳು ಬಯಸಿದ್ದರು. ಆದರೆ ನಮ್ಮ ಸಾಹಿಬ್ ಜಾದೆಯವರು ಇಂಥ ಪುಟ್ಟ ವಯಸ್ಸಿನಲ್ಲೂ ಅದ್ಭುತವಾದ ಸಾಹಸವನ್ನು ತೋರಿದರು. ಇಚ್ಛಾಶಕ್ತಿಯನ್ನು ತೋರಿದರು. ಗೋಡೆಯಲ್ಲಿ ಸಮಾಧಿ ಮಾಡುತ್ತಿರುವಾಗ, ಕಲ್ಲುಗಳನ್ನು ಜೋಡಿಸಲಾಗುತ್ತಿತ್ತು, ಗೋಡೆ ಎತ್ತರಕ್ಕೆ ಏರುತ್ತಿತ್ತು, ಆದರೂ ಅವರು ಧೃತಿಗೆಡಲಿಲ್ಲ. ಇಂದಿನ ದಿನವೇ ಗುರುಗೋವಿಂದರ ತಾಯಿಮಾತಾ ಗುಜ್ಜರಿಯವರೂ ದೈವಾಧೀನರಾದರು. ಸುಮಾರು ಒಂದು ವಾರದ ಹಿಂದೆ, ಶ್ರೀ ಗುರು ತೇಗ್ ಬಹಾದೂರ್ ಅವರ ಬಲಿದಾನದ ದಿನವಿತ್ತು. ಇಲ್ಲಿ ದೆಹಲಿಯಲ್ಲಿ ರಕಾಬ್ ಗಂಜ್ ಗುರುದ್ವಾರಕ್ಕೆ ತೆರಳಿ ಗುರು ತೇಗ್ ಬಹಾದೂರ್ ಅವರಿಗೆ ಶೃದ್ಧಾ ಸಮರ್ಪಪಣೆ ಸಲ್ಲಿಸುವ ಮತ್ತು ನಮಿಸುವ ಅವಕಾಶ ದೊರೆಯಿತು. ಇದೇ ತಿಂಗಳು ಶ್ರೀ ಗುರು ಗೋವಿಂದ್ ಸಿಂಗ್ ಜಿ ಅವರಿಂದ ಪ್ರೇರಿತರಾದ ಅನೇಕರು ನೆಲದ ಮೇಲೆ ಮಲಗುತ್ತಾರೆ. ಜನರು ಶ್ರೀ ಗುರು ಗೋವಿಂದ್ ಸಿಂಗ್ ಜಿ ಅವರ ಕುಟುಂಬದವರ ಬಲಿದಾನವನ್ನು ಬಹಳ ಭಾವನಾತ್ಮಕವಾಗಿ ನೆನೆಯುತ್ತಾರೆ. ತ್ಯಾಗ ಇಡೀ ಮಾನವತೆಗೆ, ದೇಶಕ್ಕೆ ಹೊಸ ಪಾಠವನ್ನು ಕಲಿಸಿದೆ. ಬಲಿದಾನ ನಮ್ಮ ನಾಗರಿಕತೆಯನ್ನು ಸುರಕ್ಷಿತವಾಗಿಡುವ ಮಹಾನ್ ಕೆಲಸವನ್ನು ಮಾಡಿದೆ. ತ್ಯಾಗ-ಬಲಿದಾನಕ್ಕೆ ಹುತಾತ್ಮತೆಗೆ ನಾವೆಲ್ಲ ಋಣಿಯಾಗಿದ್ದೇವೆ. ನಾನು ಮತ್ತೊಮ್ಮೆ, ಶ್ರೀ ಗುರು ತೇಗ್ ಬಹಾದೂರ್ ಜಿ, ಮಾತೆ ಗುಜ್ಜರಿಜಿ, ಗುರು ಗೋವಿಂದ್ ಸಿಂಗ್ ಜಿ, ಮತ್ತು ನಾಲ್ವರೂ ಮಕ್ಕಳಿಗೆ ನನ್ನ ನಮನ ಸಲ್ಲಿಸುತ್ತೇನೆ. ಹೀಗೆಯೇ, ಬಹಳಷ್ಟು ಜನ ಹುತಾತ್ಮರು ಇಂದಿನ ಭಾರತದ ಸ್ವರೂಪವನ್ನು ಸಂರಕ್ಷಿಸಿದ್ದಾರೆ ಮತ್ತು ಉಳಿಸಿಕೊಂಡು ಬಂದಿದ್ದಾರೆ.

ನನ್ನ ಪ್ರಿಯ ದೇಶ ಬಾಂಧವರೇ, ಈಗ ನಾನು ನಿಮಗೆ ಸಂತೋಷ ತರುವ ಮತ್ತು ಹೆಮ್ಮೆಯಾಗುವಂಥ ಒಂದು ವಿಷಯವನ್ನು ಹೇಳಲಿದ್ದೇನೆ. ಭಾರತದಲ್ಲಿ, 2014 ರಿಂದ 2018 ಅವಧಿಯ ನಡುವೆ ಚಿರತೆಗಳ ಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಏರಿಕೆಯಾಗಿದೆ. 2014 ರಲ್ಲಿ ನಮ್ಮ ದೇಶದಲ್ಲಿ ಚಿರತೆಗಳ ಸಂಖ್ಯೆ ಸುಮಾರು 7,900 ಆಗಿತ್ತು. ಆದರೆ, 2019 ರಲ್ಲಿ ಅವುಗಳ ಸಂಖ್ಯೆ 12,852 ಕ್ಕೆ ತಲುಪಿದೆ. “ಯಾವ ಜನರು ಚಿರತೆಗಳು ಪಕೃತಿಯಲ್ಲಿ ಆನಂದವಾಗಿ ವಿಹರಿಸುವುದನ್ನು ನೋಡಿಲ್ಲವೋ, ಅವರು ಅವುಗಳ ಸೌಂದರ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲಎಂದು ಜಿಮ್ ಕಾರ್ಬೆಟ್ ಹೇಳಿದಂತಹ ಚಿರತೆಗಳು ಇವೇ ಆಗಿವೆ. ಅವುಗಳಿಗಿರುವ ಬಣ್ಣಗಳ ಸೌಂದರ್ಯ ಮತ್ತು ಅವುಗಳ ಮೋಹಕ ನಡಿಗೆಯನ್ನು, ಊಹಿಸಲೂ ಸಾಧ್ಯವಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯ ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಚಿರತೆಗಳು ಹೆಚ್ಚಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಅಗ್ರ ಸ್ಥಾನಗಳಲ್ಲಿವೆ. ಇದೊಂದು ಮಹತ್ತರವಾದ ಸಾಧನೆಯಾಗಿದೆ. ಇಡೀ ವಿಶ್ವದಲ್ಲೇ ಚಿರತೆಗಳು ಅಪಾಯವನ್ನು ಎದುರಿಸುತ್ತಲೇ ಬಂದಿವೆ. ಅವುಗಳ ಆವಾಸಸ್ಥಾನಗಳು ಕುಗ್ಗುತ್ತಿವೆ, ಜಗತ್ತಿನೆಲ್ಲೆಡೆ ಅವುಗಳ ಸಂತತಿ ವಿನಾಶದ ಅಂಚನ್ನು ತಲುಪುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ಭಾರತ, ಚಿರತೆಗಳ ಸಂಖ್ಯೆಯ ನಿರಂತರ ಹೆಚ್ಚಳದಿಂದ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ, ಹುಲಿಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ ಜೊತೆಗೆ ಭಾರತದ ಅರಣ್ಯ ಪ್ರದೇಶದ ವಿಸ್ತೀರ್ಣವೂ ಹೆಚ್ಚಿದೆ ಎಂಬ ವಿಷಯಗಳು ಬಹುಶಃ ನಿಮಗೆ ಗೊತ್ತಿರಬಹುದು. ಇದು ಕೇವಲ ಸರ್ಕಾರದ ಪ್ರಯತ್ನಗಳಿಂದಷ್ಟೇ ಅಲ್ಲ ಬದಲಿಗೆ, ಹಲವಾರು ನಾಗರಿಕ ಸಮಾಜಗಳು, ಹಲವಾರು ಸಂಸ್ಥೆಗಳು, ನಮ್ಮ ಗಿಡ-ಮರಗಳು ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಗಾಗಿ ಕಾರ್ಯನಿರತವಾಗಿರುವುದರಿಂದ ಸಾಧ್ಯವಾಗಿದೆ. ಅವರೆಲ್ಲರೂ ಅಭಿನಂದನಾರ್ಹರು.

ಸ್ನೇಹಿತರೇ, ನಾನು ತಮಿಳುನಾಡಿನ ಕೊಯಂಬತ್ತೂರಿನ, ಒಂದು ಹೃದಯ ಸ್ಪರ್ಶಿ ಪ್ರಯತ್ನದ ಬಗ್ಗೆ ಓದಿದ್ದೆ. ನೀವೂ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ನೋಡಿರಬಹುದು. ನಾವೆಲ್ಲರೂ ಮನುಷ್ಯರಿಗಾಗಿ wheelchair ಬಳಸುವುದನ್ನು ನೋಡಿದ್ದೇವೆ, ಆದರೆ, ಕೊಯಂಬತ್ತೂರಿನ ಗಾಯತ್ರಿ ಎಂಬ ಹುಡುಗಿ, ಅವಳ ತಂದೆಯ ಜೊತೆಗೆ, ಒಂದು ಗಾಯಗೊಂಡ ನಾಯಿಗೂ wheelchair ತಯಾರಿಸಿದ್ದಾಳೆ. ಸಂವೇದನೆಶೀಲತೆ, ಸ್ಫೂರ್ತಿ ನೀಡುವಂಥದ್ದಾಗಿದೆ ಹಾಗೂ ಇದು ಒಬ್ಬ ವ್ಯಕ್ತಿ ಪ್ರತಿ ಜೀವಿಯೆಡೆಗೆ ಕರುಣೆ ಮತ್ತು ಸಹಾನುಭೂತಿ ತೋರಿದಾಗ ಮಾತ್ರ ಸಾಧ್ಯವಾಗುತ್ತದೆ. ದೆಹಲಿಯ ಎನ್ ಸಿ ಆರ್ ಮತ್ತು ದೇಶದ ಇತರ ನಗರಗಳಲ್ಲಿ ಕೊರೆಯುತ್ತಿರುವ ಚಳಿಯ ನಡುವೆಯೂ, ನಿರಾಶ್ರಿತ ಪ್ರಾಣಿಗಳ ಆರೈಕೆಗಾಗಿ ಅನೇಕ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು, ಪ್ರಣಿಗಳ ಊಟ-ನೀರಿನ ವ್ಯವಸ್ಥೆ ಹಾಗೂ ಅವುಗಳಿಗೆ ಸ್ವೆಟರ್ ಮತ್ತು ಹಾಸಿಗೆಯ ವ್ಯವಸ್ಥೆಯನ್ನೂ ಕಲ್ಪಿಸಲು ಮುಂದಾಗಿದ್ದಾರೆ. ಇನ್ನು ಕೆಲವರು, ಇಂತಹ ನೂರಾರು ಪ್ರಾಣಿಗಳಿಗೆ ದಿನ ನಿತ್ಯದ ಊಟದ ವ್ಯವಸ್ಥೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಪ್ರಯತ್ನಗಳನ್ನು ಮೆಚ್ಚಲೇ ಬೇಕು. ಉತ್ತರ ಪ್ರದೇಶದ ಕೌಶಂಬಿಯಲ್ಲೂ ಇಂತಹ ಉದಾತ್ತ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿಯ ಕಾರಾಗೃಹದಲ್ಲಿರುವ ಕೈದಿಗಳು, ಹಸುಗಳನ್ನು ಕೊರೆಯುವ ಚಳಿಯಿಂದ ರಕ್ಷಿಸಲು, ಹಳೆಯ ಮತ್ತು ಹರಿದ ಕಂಬಳಿಗಳಿಂದ ಹೊದಿಕೆ ತಯಾರಿಸುತ್ತಿದ್ದಾರೆ. ಹೊದಿಕೆಗಳನ್ನು ಕೌಶಂಬಿ ಸೇರಿದಂತೆ ಇತರ ಜಿಲ್ಲೆಗಳ ಕಾರಾಗೃಹಗಳಿಂದಲೂ ಸಂಗ್ರಹಿಸಲಾಗುತ್ತಿದೆ ಮತ್ತು ಅವುಗಳನ್ನು ಹೊಲಿದು ಗೋಶಾಲೆಗೆ ಕಳುಹಿಸಲಾಗುತ್ತದೆ. ಕೌಶಂಬಿ ಕಾರಾಗೃಹದ ಕೈದಿಗಳು ಪ್ರತಿ ವಾರ ಅವುಗಳಿಗಾಗಿ ಹೊದಿಕೆ ತಯಾರಿಸುತ್ತಿದ್ದಾರೆ. ಬನ್ನಿ ಇತರರ ಬಗ್ಗೆ ಕಾಳಜಿವಹಿಸಲು, ಇಂತಹ ಸೇವಾ ಮನೋಭಾವ ತುಂಬಿದ ಪ್ರಯತ್ನಗಳನ್ನು ಪ್ರೋತ್ಸಾಹಿಸೋಣ. ಇದು ನಿಜವಾಗಿಯೂ, ಸಮಾಜದ ಸಂವೇದನೆಗಳನ್ನು ಬಲಿಷ್ಠಗೊಳಿಸುವ ಒಂದು ಶ್ರೇಷ್ಠ ಕೆಲಸವಾಗಿದೆ.

ನನ್ನ ಪ್ರಿಯ ದೇಶಬಾಂಧವರೆ, ಈಗ ನನ್ನ ಮುಂದೆ ಇರುವ ಪತ್ರದಲ್ಲಿ 2 ದೊಡ್ಡ ಫೊಟೋಗಳಿವೆ. ಇವು ದೇವಾಲಯವೊಂದರ before ಮತ್ತು after ಫೊಟೋಗಳು. ಫೊಟೋಗಳೊಂದಿಗಿರುವ ಪತ್ರದಲ್ಲಿ ತಮ್ಮನ್ನು ತಾವು ಯುವಾ ಬ್ರಿಗೇಡ್ ಎಂದು ಕರೆದುಕೊಳ್ಳುವ ಯುವಕರ ಒಂದು ತಂಡದ ಬಗ್ಗೆ ಬರೆಯಲಾಗಿದೆ. ಯುವಾ ಬ್ರಿಗೇಡ್ ಕರ್ನಾಟಕದಲ್ಲಿರುವ ಶ್ರೀರಂಗಪಟ್ಟಣದ ಹತ್ತಿರ ವೀರಭದ್ರ ಸ್ವಾಮಿ ಎಂಬ ಹೆಸರಿನ ಪ್ರಾಚೀನ ಶಿವಾಲಯದ ಪುನರುಜ್ಜೀವನ ಕೈಗೊಂಡಿದ್ದಾರೆ. ದಾರಿಹೋಕರು ಕೂಡಾ ಇಲ್ಲಿ ಒಂದು ದೇವಾಲಯವಿದೆ ಎಂದು ಹೇಳಲಾಗದಷ್ಟು ದೇವಾಲಯದಲ್ಲಿ ಮತ್ತು ಸುತ್ತಲೂ ಗಿಡಗಂಟಿಗಳು ಹಾಗೂ ಹುಲ್ಲು ಬೆಳೆದಿತ್ತು. ಒಂದು ದಿನ ಕೆಲ ಪಯಣಿಗರು ಪುರಾತನ ದೇವಾಲಯದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಯುವಾ ಬ್ರಿಗೇಡ್ ಗೆ ಸುಮ್ಮನಿರಲಾಗಲಿಲ್ಲ ಮತ್ತು ತಂಡ ಒಗ್ಗೂಡಿ ದೇವಾಲಯದ ಜೀರ್ಣೋದ್ಧಾರ ಮಾಡುವ ನಿರ್ಣಯ ಕೈಗೊಂಡರು. ಅವರು ದೇವಾಲಯದ ಸುತ್ತಮುತ್ತ ಬೆಳೆದಂತಹ ಮುಳ್ಳಿನ ಗಿಡಗಳು, ಹುಲ್ಲು ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು. ಎಲ್ಲಿ ರಿಪೇರಿಯ ಮತ್ತು ಕಟ್ಟುವ ಅವಶ್ಯಕತೆಯಿದೆಯೋ ಅದನ್ನು ಮಾಡಿದರು. ಅವರ ಒಳ್ಳೆಯ ಕೆಲಸಗಳನ್ನು ನೋಡಿ ಸ್ಥಳೀಯರು ಸಹಾಯ ಹಸ್ತ ಚಾಚಿದರು. ಒಬ್ಬರು ಸಿಮೆಂಟ್ ಕೊಟ್ಟರೆ, ಇನ್ನೊಬ್ಬರು ಬಣ್ಣವನ್ನು ನೀಡಿದರು. ಇಂಥ ಹಲವಾರು ವಸ್ತುಗಳನ್ನು ನೀಡುವ ಮೂಲಕ ಜನರು ತಮ್ಮ ತಮ್ಮ ಕೊಡುಗೆ ನೀಡಿದರು. ಎಲ್ಲ ಯುವಕರೂ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಥದ್ದರಲ್ಲಿ ವಾರಾಂತ್ಯದಲ್ಲಿ ಇವರೆಲ್ಲರೂ ಸಮಯವನ್ನು ಮುಡಿಪಾಗಿಟ್ಟು ದೇವಾಲಯಕ್ಕಾಗಿ ಕೆಲಸ ಮಾಡಿದರು. ಯುವಕರು ದೇವಾಲಯಕ್ಕೆ ಬಾಗಿಲು ವ್ಯವಸ್ಥೆ ಮಾಡುವ ಮೂಲಕ ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಿದರು. ಹೀಗೆ ಅವರು ದೇವಾಲಯದ ಪುರಾತನ ವೈಭವವನ್ನು ಪುನರ್ ಸ್ಥಾಪಿಸುವ ಕೆಲಸ ಮಾಡಿದರು. ಉತ್ಸಾಹ ಮತ್ತು ಧೃಡನಿಶ್ಚಯ ಎಂಬ ಎರಡು ಗುಣಗಳಿಂದ ಜನರು ಯಾವುದೇ ಗುರಿಯನ್ನು ತಲುಪಬಹುದಾಗಿದೆ. ನಾನು ಭಾರತದ ಯುವಜನತೆಯನ್ನು ನೋಡಿದಾಗ ಬಹಳ ಆನಂದವನ್ನು ಅನುಭವಿಸುತ್ತೇನೆ ಮತ್ತು ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಆನಂದ ಮತ್ತು ಆತ್ಮವಿಶ್ವಾಸ ಏಕೆಂದರೆ ನನ್ನ ದೇಶದ ಯುವಜನತೆಯಲ್ಲಿ ಮಾಡಬಲ್ಲೆವು ಎಂಬ ಮನಸ್ಥಿತಿಯಿದೆ ಮತ್ತು ಮಾಡುತ್ತೇವೆ ಎಂಬ ಚೈತನ್ಯವಿದೆ. ಅವರಿಗೆ ಯಾವುದೇ ಸವಾಲು ದೊಡ್ಡದಲ್ಲ. ಯಾವುದೂ ಅವರಿಗೆ ಅಸಾಧ್ಯವಲ್ಲ. ನಾನು ತಮಿಳುನಾಡಿನ ಒಬ್ಬ ಶಿಕ್ಷಕಿಯ ಬಗ್ಗೆ ಓದಿದೆ. ಅವರ ಹೆಸರು ಹೇಮಲತಾ ಎನ್ ಕೆ. ಅವರು ವಿಡುಪುರಂ ಒಂದು ಶಾಲೆಯಲ್ಲಿ ವಿಶ್ವದ ಅತ್ಯಂತ ಪುರಾತನ ಭಾಷೆಯಾದ ತಮಿಳ್ ಕಲಿಸುತ್ತಾರೆ. ಕೋವಿಡ್ – 19 ಮಹಾಮಾರಿ ಅವರ ಕಲಿಸುವ ಕೆಲಸಕ್ಕೆ ಎಂದಿಗೂ ಅಡ್ಡಿಯಾಗಲಿಲ್ಲ. ಹಾಂ, ಅವರೆದುರು ಸವಾಲುಗಳು ಇದ್ದವು. ಆದರೆ, ಅವರು ಒಂದು ಆವಿಷ್ಕಾರಕ ಮಾರ್ಗವನ್ನು ಕಂಡುಕೊಂಡರು. ಅವರು ಪಠ್ಯದ ಎಲ್ಲ 53 ಚಾಪ್ಟರ್ ಗಳನ್ನು ಧ್ವನಿಮುದ್ರಿಸಿದರು, ಅನಿಮೆಟೆಡ್ ವಿಡಿಯೋ ತಯಾರಿಸಿದರು ಮತ್ತು ಅದನ್ನು ಒಂದು ಪೆನ್ ಡ್ರೈವ್ ನಲ್ಲಿ ತೆಗೆದುಕೊಂಡು ತಮ್ಮ ವಿದ್ಯಾರ್ಥಿಗಳಿಗೆ ಹಂಚಿದರು. ಇದರಿಂದ ಅವರ ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಯಿತು. ಅವರು ಪಠ್ಯಗಳನ್ನು ದೃಶ್ಯರೂಪದಲ್ಲಿ ತಿಳಿದುಕೊಳ್ಳುವಂತಾಯಿತು. ಇದರೊಂದಿಗೆ ದೂರವಾಣಿ ಮೂಲಕವೂ ತನ್ನ ವಿದ್ಯಾರ್ಥಿಗಳೊಂದಿಗ ಅವರು ಸಂಭಾಷಣೆ ಮಾಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಬಹಳ ಆಸಕ್ತಿದಾಯಕವಾಯಿತು. ದೇಶದಾದ್ಯಂತ ಕೊರೊನಾದ ಸಮಯದಲ್ಲಿ ಶಿಕ್ಷಕರು ಅನುಸರಿಸಿದ ನೂತನ ಆವಿಷ್ಕಾರಕ ಪದ್ಧತಿಗಳು, ಸಿದ್ಧಪಡಿಸಿದ ಸೃಜನಾತ್ಮಕ ಕೋರ್ಸ್ ಮಟಿರಿಯಲ್, ಆನ್ ಲೈನ್ ಓದಿನ ದಿನಮಾನದಲ್ಲಿ ಬಹಳ ಅಮೂಲ್ಯವಾಗಿವೆ. ಮಟಿರೀಯಲ್ ನ್ನು ಶಿಕ್ಷಣ ಸಚಿವಾಲಯದ ದೀಕ್ಷಾ ಪೋರ್ಟಲ್ ಲ್ಲಿ ಖಂಡಿತ ಅಪ್ ಲೋಡ್ ಮಾಡಿರಿ ಎಂದು ಎಲ್ಲ ಶಿಕ್ಷಕರಿಗೆ ಆಗ್ರಹಿಸುತ್ತೇನೆ. ಇದರಿಂದ ದೂರ ದೂರದ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಬಹಳ ಲಾಭವಾಗುತ್ತದೆ                            

ಗೆಳೆಯರೇ, ಬನ್ನಿ ಈಗ ಜಾರ್ಖಂಡ್ ಕೊರವಾ ಜನಾಂಗದ ಹೀರಾಮನ್ ಅವರ ಬಗ್ಗೆ ಮಾತಾಡೋಣ. ಹೀರಾಮನ್ ಅವರು ಗಢ್ವಾ ಜಿಲ್ಲೆಯ ಸಿಂಜೋ ಗ್ರಾಮದ ನಿವಾಸಿಯಾಗಿದ್ದಾರೆ. ಕೊರವಾ ಜನಾಂಗದ ಜನಸಂಖ್ಯೆ ಕೇವಲ 6,000 ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು, ಇವರು ನಗರಗಳಿಂದ ದೂರ, ಬೆಟ್ಟಗಳಲ್ಲಿ ಮತ್ತು ಕಾಡಿನಲ್ಲಿ ವಾಸಿಸುತ್ತಾರೆ. ತಮ್ಮ ಸಮುದಾಯದ ಸಂಸ್ಕೃತಿ ಮತ್ತು ಅಸ್ಮಿತತೆಯನ್ನು ಉಳಿಸಲು ಹೀರಾಮನ್ ಅವರು ಮುಂದಾಳತ್ವವಹಿಸಿದ್ದಾರೆ. ಅವರು 12 ವರ್ಷಗಳ ಸತತ ಪ್ರಯತ್ನದ ನಂತರ ಅಳಿವಿನಂಚಿನಲ್ಲಿರುವ ಕೊರವಾ ಭಾಷೆಯ ನಿಘಂಟನ್ನು ಸಿದ್ಧಪಡಿಸಿದ್ದಾರೆ. ಅವರು ನಿಘಂಟಿನಲ್ಲಿ ಪ್ರತಿ ದಿನ ಮನೆಯಲ್ಲಿ ಬಳಸುವ ಪದಗಳಿಂದ ಹಿಡಿದು, ದೈನಂದಿನ ಜೀವನದಲ್ಲಿ ಬಳಸುವಂತಹ ಕೊರವಾ ಭಾಷೆಯ ಅನೇಕ ಪದಗಳನ್ನು ಅರ್ಥದೊಂದಿಗೆ ಬರೆದಿದ್ದಾರೆ. ಕೊರವಾ ಜನಾಂಗಕ್ಕಾಗಿ ಹೀರಾಮನ್ ಅವರು ಮಾಡಿದ ಕಾರ್ಯ ದೇಶಕ್ಕೇ ಒಂದು ಮಾದರಿಯಾಗಿದೆ.

ನನ್ನ ಪ್ರಿಯ ದೇಶ ಬಾಂಧವರೇ, ಅಕ್ಬರನ ಸಭೆಯಲ್ಲಿ ಅಬುಲ್ ಫಜಲ್ ಎಂಬ ಪ್ರಮುಖ ಸದಸ್ಯರೊಬ್ಬರಿದ್ದರು ಎಂದು ಹೇಳಲಾಗುತ್ತದೆ. ಅವರೊಮ್ಮೆ ಕಾಶ್ಮೀರ್ ಯಾತ್ರೆಯ ನಂತರ, ಕಾಶ್ಮೀರದಲ್ಲಿ ಎಂತಹ ಪ್ರಾಕೃತಿಕ ಸೌಂದರ್ಯವಿದೆಯೆಂದರೆ, ಅದನ್ನು ನೋಡಿ ಕಿರಿ-ಕಿರಿ ಆಗುವ ಅಥವಾ ಕೋಪಮಾಡಿಕೊಳ್ಳುವವರೂ ಸಂತೋಷದಿಂದ ಕುಣಿಯುತ್ತಾರೆ ಎಂದು ಹೇಳಿದ್ದರು. ನಿಜಕ್ಕೆ ಅವರು, ಕಾಶ್ಮೀರದ ಕೇಸರಿ ಹೊಲಗಳನ್ನು ಉಲ್ಲೇಖಿಸುತ್ತಿದ್ದರು. ಕೇಸರಿ, ಶತಮಾನಗಳಿಂದಲೂ ಕಾಶ್ಮೀರದೊಂದಿಗೆ ನಂಟನ್ನು ಹೊಂದಿದೆ. ಕಾಶ್ಮೀರದ ಕೇಸರಿಯನ್ನು ಪ್ರಮುಖವಾಗಿ ಪುಲ್ವಾಮಾ, ಬಡಗಾಂ ಮತ್ತು ಕಿಶತ್ ವಾಡ್ ನಂತಹ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಆದ್ದರಿಂದಲೇ, ವರ್ಷದ ಮೇ ತಿಂಗಳಲ್ಲಿ, ಕಾಶ್ಮೀರದ ಕೇಸರಿಗೆ  Geographical Indication Tag ಅಂದರೆ, GI Tag ನೀಡಲಾಗಿದೆ. ಮೂಲಕ ನಾವು ಕಾಶ್ಮೀರದ ಕೇಸರಿಯನ್ನು ಜಾಗತಿಕವಾಗಿ ಒಂದು ಜನಪ್ರಿಯ ಬ್ರಾಂಡಾಗಿ ಪರಿವರ್ತಿಸಲು ಬಯಸುತ್ತಿದ್ದೇವೆ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆಯಾಗಿ ಕಾಶ್ಮೀರದ ಕೇಸರಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇದು ಬಹಳ ಪರಿಮಳವನ್ನು ಹೊಂದಿದೆ, ಇದರ ಬಣ್ಣ ಗಾಢವಾಗಿರುತ್ತದೆ ಮತ್ತು ಇದರ ಎಳೆಗಳು ಉದ್ದ ಮತ್ತು ದಪ್ಪವಾಗಿರುತ್ತವೆ. ಇದು, ಅದರ ಔಷಧೀಯ ಗುಣವನ್ನು ಹೆಚ್ಚಿಸುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಗುಣಮಟ್ಟದ ಬಗ್ಗೆ ಹೇಳುವುದಾದರೆ, ಕಾಶ್ಮೀರದ ಕೇಸರಿ ಬಹಳ ವಿಶಿಷ್ಠವಾದದ್ದು ಮತ್ತು ಇತರ ದೇಶಗಳ ಕೆಸರಿಗಿಂತ ವಿಭಿನ್ನವಾದದ್ದಾಗಿದೆ. ಕಾಶ್ಮೀರದ ಕೇಸರಿಗೆ GI  Tag ಮಾನ್ಯತೆಯಿಂದ ಒಂದು ಹೊಸ ಗುರುತು ದೊರೆತಿದೆ. ಕಾಶ್ಮೀರದ ಕೇಸರಿಗೆ GI  ಪ್ರಮಾಣಪತ್ರ ದೊರೆತ ನಂತರ, ದುಬೈನ ಸೂಪರ್ ಮಾರ್ಕೆಟ್ ಒಂದರಲ್ಲಿ ಇದರ ವ್ಯಾಪಾರವನ್ನು ಪ್ರಾರಂಭಿಸಲಾಯಿತು ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗ ಇದರ ರಫ್ತು ಹೆಚ್ಚಾಗಲಿದೆ. ಇದು ಸ್ವಾವಲಂಬಿ ಭಾರತವನ್ನಾಗಿಸುವ ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಪುಷ್ಠಿ ನೀಡಲಿದೆ. ಕೇಸರಿ ಬೆಳೆಗಾರರಿಗೆ ಇದರಿಂದ ವಿಶಿಷ್ಠ ಲಾಭದೊರೆಯಲಿದೆ. ಪುಲ್ವಾಮಾದ ತ್ರಾಲ್ ಶಾರ್ ಪ್ರದೇಶದ ನಿವಾಸಿಯಾದ ಅಬ್ದುಲ್ ಮಜೀದ್ ವಾನಿಯನ್ನು ನೋಡಿ. ಅವರು GI Tag ಮಾಡಲಾದ ತಮ್ಮ ಕೇಸರಿಯನ್ನು, ರಾಷ್ಟ್ರೀಯ ಸ್ಯಾಫ್ರನ್ ಮಿಷನ್ ಸಹಾಯದಿಂದ, ಪಂಪೋರ್ ವ್ಯಾಪಾರ ಕೇಂದ್ರದಲ್ಲಿ -ಟ್ರೇಡಿಂಗ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇವರಂತೆಯೇ ಅನೇಕರು ಕಾಶ್ಮೀರದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಮುಂದಿನ ಬಾರಿ ನೀವು ಕೇಸರಿಯನ್ನು ಖರೀದಿಸಲು ನಿರ್ಧರಿಸಿದರೆ, ಕೇವಲ ಕಾಶ್ಮೀರದ ಕೇಸರಿಯನ್ನು ಖರೀದಿಸಿ. ಕಾಶ್ಮೀರದ ಜನರಲ್ಲಿ ಎಷ್ಟು ಹುಮ್ಮಸ್ಸು ಇದೆಯೆಂದರೆ ಅಲ್ಲಿಯ ಕೇಸರಿಯ ಸ್ವಾದವೇ ವಿಭಿನ್ನವಾಗಿರುತ್ತದೆ

ನನ್ನ ಪ್ರಿಯ ದೇಶ ಬಾಂಧವರೇ, ಈಗ 2 ದಿನಗಳ ಹಿಂದೆಯಷ್ಟೇ ಗೀತಾ ಜಯಂತಿ ಇತ್ತು. ಭಗವದ್ಗೀತೆ ಜೀವನದ ಎಲ್ಲ ಸಂದರ್ಭಗಳಲ್ಲೂ ಪ್ರೇರಣೆಯನ್ನು ನೀಡುತ್ತದೆ. ಆದರೆ ಭಗವದ್ಗೀತೆ ಇಂಥ ಅದ್ಭುತ ಗ್ರಂಥ ಯಾಕಾಗಿದೆ ಎಂಬುದನ್ನು ನೀವು ಆಲೋಚಿಸಿದ್ದೀರಾ? ಏಕೆಂದರೆ ಇದು ಸ್ವಯಂ ಶ್ರೀ ಕೃಷ್ಣನ ಮುಖವಾಣಿಯಾಗಿದೆ. ಇದು ಅರಿಯುವ ಜಿಜ್ಞಾಸೆಯಿಂದ ಆರಂಭವಾಗುವುದು ಗೀತೆಯ ವಿಶಿಷ್ಠತೆಯಾಗಿದೆ. ಪ್ರಶ್ನೆಗಳಿಂದ ಆರಂಭವಾಗುತ್ತದೆ. ಅರ್ಜುನ ಭಗವಂತ ಕೃಷ್ಣನಿಗೆ ಪ್ರಶ್ನಿಸುತ್ತಾನೆ, ಜಿಜ್ಞಾಸೆಯನನ್ಉ ತೋರುತ್ತಾನೆ, ಆದ್ದರಿಂದಲೇ ಗೀತೆಯ ಜ್ಞಾನ ಜಗತ್ತಿಗೆ ದೊರೆಯಿತು. ಗೀತೆಯಂತೆಯೇ ನಮ್ಮ ಸಂಸ್ಕೃತಿಯಲ್ಲಿ ಎಷ್ಟೆಲ್ಲ ಜ್ಞಾನವಿದೆಯೋ ಎಲ್ಲವೂ ಜಿಜ್ಞಾಸೆಯಿಂದಲೇ ಆರಂಭವಾಗುತ್ತದೆ. ವೇದಾಂತದಲ್ಲಿ ಮೊದಲ ಮಂತ್ರವೇಅಥಾತೊ ಬ್ರಹ್ಮಮ್ ಜಿಜ್ಞಾಸಾಎಂಬುದಾಗಿದೆ. ಇದರರ್ಥ, ಬನ್ನಿ ನಾವು ಬ್ರಹ್ಮನನ್ನು ಅರಿಯುವ ಕುತೂಹಲ ತೋರಿಸೋಣ. ಆದ್ದರಿಂದಲೇ ನಮ್ಮಲ್ಲಿ ಬ್ರಹ್ಮಾನ್ವೇಷಣೆಯ ಮಾತನ್ನು ಹೇಳಲಾಗಿದೆ. ಜಿಜ್ಞಾಸೆಯ ಶಕ್ತಿಯೇ ಅಂಥದ್ದು. ಜಿಜ್ಞಾಸೆ ನಿಮ್ಮನ್ನು ಸದಾ ಹೊಸದರತ್ತ ಪ್ರೇರೆಪಿಸುತ್ತದೆ. ನಮ್ಮಲ್ಲಿ ಜಿಜ್ಞಾಸೆಯಿದೆಯೆಂದೇ ನಾವು ಬಾಲ್ಯದಲ್ಲಿ ಕಲಿಯುತ್ತೇವೆ. ಅಂದರೆ ಅರಿಯುವ ಹಂಬಲ ಇರುವವರೆಗೆ ಜೀವನವಿದೆ. ಜಿಜ್ಞಾಸೆಯಿರುವವರೆಗೆ ಹೊಸತನ್ನು ಕಲಿಯುವ ಕ್ರಮ ಮುಂದುವರಿಯುತ್ತದೆ. ಇದಕ್ಕೆ ವಯಸ್ಸು, ಪರಿಸ್ಥಿತಿ ಎಂಬುದು ಅಪ್ರಸ್ತುತ. ಜಿಜ್ಞಾಸೆಯ ಇಂಥದೇ ಒಂದು ಶಕ್ತಿ ತಮಿಳುನಾಡಿನ ಹಿರಿಯರಾದ ಶ್ರೀ ಟಿ ಶ್ರೀನಿವಾಸಾಚಾರ್ಯ ಸ್ವಾಮಿಗಳ ಬಗ್ಗೆ ನನಗೆ ಗೊತ್ತಾಯಿತು. ಶ್ರೀ ಟಿ ಶ್ರೀನಿವಾಸಾಚಾರ್ಯ ಸ್ವಾಮಿಯವರಿಗೆ 92 ವರ್ಷ ವಯಸ್ಸು. ವಯಸ್ಸಲ್ಲೂ ಅವರು ಕಂಪ್ಯೂಟರ್ ನಲ್ಲಿ ಪುಸ್ತಕವೊಂದನ್ನು ಬರೆಯುತ್ತಿದ್ದಾರೆ ಅದು ಸ್ವತಃ ಟೈಪ್ ಮಾಡ್ತಾ ಇದ್ದಾರೆ. ಪುಸ್ತಕ ಬರೆಯುವುದೇನೋ ಸರಿ ಆದರೆ ಶ್ರೀನಿವಾಸಾಚಾರ್ಯ ಅವರ ಸಮಯದಲ್ಲಿ  ಕಂಪ್ಯೂಟರ್ ಇರಲು ಸಾಧ್ಯವೇ ಇರಲಿಕ್ಕಿಲ್ಲ ಎಂದು ನೀವು ಆಲೋಚಿಸುತ್ತಿರಬಹುದು. ಅಂದ ಮೇಲೆ ಅವರು ಕಂಪ್ಯೂಟರ್ ಯಾವಾಗ ಕಲಿತರು? ಅವರು ಕಾಲೇಜು ಓದುವಾಗ ಕಂಪ್ಯೂಟರ್ ಇರಲಿಲ್ಲ ಎಂಬುದು ನಿಜ. ಆದರೆ, ಅವರ ಯೌವ್ವನದಲ್ಲಿದ್ದಷ್ಟೇ ಜಿಜ್ಞಾಸೆ ಮತ್ತು ಆತ್ಮವಿಶ್ವಾಸ ಇಂದಿಗೂ ಅವರಲ್ಲಿದೆ. ಶ್ರೀನಿವಾಸಾಚಾರ್ಯ ಸ್ವಾಮಿ ಅವರು ಸಂಸ್ಕೃತ ಮತ್ತು ತಮಿಳ್ ಭಾಷೆಯ ವಿದ್ವಾಂಸರಾಗಿದ್ದಾರೆ. ಇಲ್ಲಿವರೆಗೆ ಅವರು ಸುಮಾರು 16 ಆಧ್ಯಾತ್ಮಿಕ ಗ್ರಂಥಗಳನ್ನು ಬರೆದಿದ್ದಾರೆ. ಆದರೆ, ಕಂಪ್ಯೂಟರ್ ಬಂದ ಮೇಲೆ, ಈಗ ಪುಸ್ತಕಳನ್ನು ಬರೆಯುವ ಮತ್ತು ಮುದ್ರಿಸುವ ರೀತಿ ಬದಲಾಗಿದೆ ಎಂದು ಅವರಿಗೆ ಅನ್ನಿಸಿದ ಮೇಲೆ ಅವರು 86 ನೇ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತರು, ತಮಗೆ ಬೇಕಾದ ಅವಶ್ಯಕ ಸಾಫ್ಟ ವೇರ್ ಗಳನ್ನು ಕಲಿತರು. ಈಗ ಅವರು ತಮ್ಮ ಪುಸ್ತಕವನ್ನು ಪೂರ್ಣಗೊಳಿಸುತ್ತಿದ್ದಾರೆ.

ಸ್ನೇಹಿತರೆ, ಜೀವನದಲ್ಲಿ ಎಲ್ಲಿಯವರೆಗೆ ಜಿಜ್ಞಾಸೆ ಜಾಗೃತವಾಗಿರುತ್ತದೆಯೋ, ಕಲಿಯಬೇಕೆಂಬ ಬಯಕೆ ಜೀವಂತವಾಗಿರುತ್ತದೆಯೋ ಅಲ್ಲಿವರೆಗೆ ಜೀವನ ಉತ್ತೇಜಿತವಾಗಿರುತ್ತದೆ ಎಂಬುದಕ್ಕೆ ಶ್ರೀ ಟಿ ಶ್ರೀನಿವಾಸಾಚಾರ್ಯ ಸ್ವಾಮಿ ಅವರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಆದ್ದರಿಂದ ನಾವು ಹಿಂದೆ ಉಳಿದುಬಿಟ್ಟೆವು, ತಪ್ಪು ಮಾಡಿದೆವು, ಬಹುಶಃ! ನಾವೂ ಇದನ್ನು ಕಲಿಯಬಹುದಿತ್ತು ಎಂದು ಯಾವತ್ತೂ ಯೋಚಿಸಬಾರದು. ನಾವು ಕಲಿಯಲಾಗುವುದಿಲ್ಲ, ಮುಂದುವರಿಯಲಾಗುವುದಿಲ್ಲ ಎಂದು ಕೂಡಾ ನಾವು ಯೋಚಿಸಬಾರದು.

ನನ್ನ ಪ್ರಿಯ ದೇಶ ಬಾಂಧವರೇ, ಈಗ ನಾವು ಜಿಜ್ಞಾಸೆಯಿಂದ ಹೊಸತನ್ನು ಕಲಿಯುವ ಮತ್ತು ಹೊಸತ್ನೇನಾದರೂ ಮಾಡುವ ಕುರಿತು ಮಾತನಾಡುತ್ತಿದ್ದೆವು. ಹೊಸ ವರ್ಷಕ್ಕೆ ಹೊಸ ಸಂಕಲ್ಪದ ಬಗ್ಗೆಯೂ ಮಾತನಾಡುತ್ತಿದ್ದೆವು. ಆದರೆ ಕೆಲ ಜನರು ನಿರಂತರ ಹೊಸತು ಏನನ್ನಾದರೂ ಮಾಡುತ್ತಲೇ ಇರುವವರು ಇರುತ್ತಾರೆ. ಹೊಸ ಹೊಸ ಸಂಕಲ್ಪಗಳನ್ನು ಪೂರೈಸುತ್ತಲೇ ಇರುತ್ತಾರೆ. ನಾವು ಸಮಾಜಕ್ಕಾಗಿ ಏನನ್ನಾದರೂ ಮಾಡಿದಾಗ ಬಹಳಷ್ಟು ಸಾಧಿಸುವ ಶಕ್ತಿಯನ್ನು ಸ್ವತಃ ಸಮಾಜ ನಮಗೆ ನೀಡುತ್ತದೆ ಎಂಬುದನ್ನು ನೀವು ಕೂಡಾ ನಿಮ್ಮ ಜೀವನದಲ್ಲಿ ಅನುಭವಿಸಿರಬಹುದು. ಸಾಮಾನ್ಯವೆಂದೆನ್ನಿಸುವ ಪ್ರೇರಣೆಯಿಂದ ಕೂಡಾ ಬಹುದೊಡ್ಡ ಕೆಲಸಗಳಾಗುತ್ತವೆ. ಪ್ರದೀಪ್ ಸಂಗವಾನ್ ಇಂಥದೇ ಒಬ್ಬ ಯುವಕರಾಗಿದ್ದಾರೆ. ಗುರುಗ್ರಾಮ್ ಪ್ರದೀಪ್ ಸಂಗವಾನ್ 2016 ರಲ್ಲಿ Healing Himalayas ಎಂಬ ಹೆಸರಿನ ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ. ಅವರು ತಮ್ಮ ತಂಡ ಮತ್ತು ಸ್ವಯಂ ಸೇವಕರೊಂದಿಗೆ ಹಿಮಾಲಯದ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತಾರೆ ಮತ್ತು ಅಲ್ಲಿ ಪ್ರವಾಸಿಗರು ಬಿಟ್ಟು ಹೋಗುವಂತಹ ಪ್ಲಾಸ್ಟಿಕ್ ಕಸವನ್ನು ಸ್ವಚ್ಛಗೊಳಿಸುತ್ತಾರೆ. ಪ್ರದೀಪ್ ಅವರು ಇಲ್ಲಿವರೆಗೆ ಹಿಮಾಲಯದ ಬೇರೆ ಬೇರೆ ಪ್ರವಾಸಿ ತಾಣಗಳಿಂದ ಟನ್ ಗಟ್ಟಲೇ ಪ್ಲಾಸ್ಟಿಕ್ ಕಸವನ್ನು ಸ್ವಚ್ಛಗೊಳಿಸಿದ್ದಾರೆ. ಹೀಗೆಯೇ, ಅನುದೀಪ್ ಮತ್ತು ಮಿನುಷಾ ಎಂಬ ಕರ್ನಾಟಕದ ಯುವ ದಂಪತಿ ಇದ್ದಾರೆ. ಅನುದೀಪ್ ಮತ್ತು ಮಿನುಷಾ ಅವರು ಕಳೆದ ತಿಂಗಳು ನವೆಂಬರ್ ನಲ್ಲಿ ವಿವಾಹವಾಗಿದ್ದಾರೆ. ವಿವಾಹದ ನಂತರ ಬಹಳಷ್ಟು ಯುವಜನತೆ ಸುತ್ತಾಡಲು ಹೋಗುತ್ತಾರೆ. ಆದರೆ ಇವರಿಬ್ಬರು ವಿಭಿನ್ನವಾದದ್ದನ್ನು ಮಾಡಿದ್ದಾರೆ. ಜನರು ತಮ್ಮ ಮನೆಗಳಿಂದ ಹೊರಗೆ ಸುತ್ತಾಡಲು ಹೋಗುತ್ತಾರೆ ಆದರೆ ಹೋದಲ್ಲೆಲ್ಲ ಸಾಕಷ್ಟು ಕಸವನ್ನು ಬಿಟ್ಟು ಬರುತ್ತಾರೆ ಎಂಬುದನ್ನು ಇವರು ಗಮನಿಸಿದ್ದರು. ಕರ್ನಾಟಕದ ಸೋಮೇಶ್ವರ ಕಡಲತೀರದಲ್ಲೂ ಇದೇ ಸ್ಥಿತಿಯಿತ್ತು. ಸೋಮೇಶ್ವರ ಕಡಲತೀರದಲ್ಲಿ ಜನರು ಬಿಟ್ಟು ಹೋದ ಕಸವನ್ನು ಸ್ವಚ್ಛಗೊಳಿಸುವುದಾಗಿ ಅನುದೀಪ್ ಮತ್ತು ಮಿನುಷಾ ನಿರ್ಧರಿಸಿದ್ದರು. ವಿವಾಹದ ನಂತರ ಪತಿಪತ್ನಿಯರಿಬ್ಬರೂ ಇದನ್ನೇ ತಮ್ಮ ಪ್ರಥಮ ಸಂಕಲ್ಪವಾಗಿ ಕೈಗೊಂಡರು. ಇಬ್ಬರೂ ಜೊತೆಗೂಡಿ ಸಮುದ್ರತೀರದ ಸಾಕಷ್ಟು ಕಸವನ್ನು ಸ್ವಚ್ಛಗೊಳಿಸಿದರು. ತಮ್ಮ ಸಂಕಲ್ಪದ ಕುರಿತು                                   ಸಾಮಾಜಿಕ ಜಾಲತಾಣದಲ್ಲೂ ಅನುದೀಪ್ ಹಂಚಿಕೊಂಡರು. ಇನ್ನೇನು, ಅವರ ಅದ್ಭುತ ವಿಚಾರದಿಂದ ಪ್ರೇರಿತರಾಗಿ ಸಾಕಷ್ಟು ಜನರು ಅವರೊಂದಿಗೆ ಕೈಜೋಡಿಸಿದರು. ಇವರೆಲ್ಲರೂ ಸೇರಿ ಸೋಮೇಶ್ವರ ಕಡಲತೀರದಲ್ಲಿ 800 ಕಿಲೋಗಿಂತ ಹೆಚ್ಚು ಕಸವನ್ನು ಸ್ವಚ್ಛಗೊಳಿಸಿದರು ಎಂಬುದನ್ನು ಕೇಳಿ ನೀವು ಆಶ್ಚರ್ಯಚಕಿತಗೊಳ್ಳುತ್ತೀರಿ.

ಸ್ನೇಹಿತರೆ, ಪ್ರಯತ್ನಗಳ ಮಧ್ಯೆ, ಕಸ ಬೀಚ್ ಗಳ ಮೇಲೆ, ಬೆಟ್ಟಗಳ ಮೇಲೆ ಹೇಗೆ ತಲುಪಿತು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ನಮ್ಮಿಲ್ಲಿರುವ ಯಾರಾದರೊಬ್ಬರು ಕಸವನ್ನು ಅಲ್ಲಿ ಬಿಟ್ಟುಬರುತ್ತೇವೆ. ಪ್ರದೀಪ್, ಅನುದೀಪ್-ಮೀನುಷಾ ಅವರಂತೆ ನಾವು ಸ್ವಚ್ಛತಾ ಅಭಿಯಾನವನ್ನು ಆರಂಭಿಸಬೇಕಿದೆ. ಆದರೆ ಅದಕ್ಕೂ ಮುಂಚೆ ನಾವು ಕಸವನ್ನು ಹರಡುವುದಿಲ್ಲ ಎಂದು ಸಂಕಲ್ಪಗೈಯ್ಯಬೇಕಿದೆ. ಏಕೆಂದರೆ ಸ್ವಚ್ಛ ಭಾರತದ ಆಂದೋಲನದ ಸಂಕಲ್ಪವೂ ಇದೇ ಆಗಿತ್ತು. ಹಾಂಮತ್ತೊಂದು ವಿಷಯವನ್ನು ನಿಮಗೆ ನೆನಪಿಸಬಯಸುತ್ತೇನೆ. ಕೊರೊನಾದಿಂದಾಗಿ ಇದರ ಬಗ್ಗೆ ವರ್ಷ ಅಷ್ಟೊಂದು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ನಾವು ನಮ್ಮ ದೇಶವನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸಲೇಬೇಕಿದೆ. 2021 ಸಂಕಲ್ಪಗಳಲ್ಲಿ ಇದೂ ಒಂದಾಗಿದೆ. ಕೊನೆಯದಾಗಿ ನಿಮ್ಮೆಲ್ಲರಿಗೂ ಹೊಸ ವರ್ಷದ ಅನಂತ ಶುಭಹಾರೈಕೆಗಳನ್ನು ತಿಳಿಸಬಯಸುತ್ತೇನೆ. ಸ್ವತಃ ನೀವು ಆರೋಗ್ಯದಿಂದಿರಿ. ನಿಮ್ಮ ಕುಟುಂಬದ ಆರೋಗ್ಯವನ್ನು ರಕ್ಷಿಸಿ. ಮುಂದಿನ ವರ್ಷ ಜನವರಿಯಲ್ಲಿ ಹೊಸ ವಿಷಯಗಳ ಬಗ್ಗೆಮನದ ಮಾತುಗಳನ್ನಾಡೋಣ.

ಅನಂತ ಅನಂತ ಧನ್ಯವಾದಗಳು           

***



(Release ID: 1684062) Visitor Counter : 346