ಹಣಕಾಸು ಸಚಿವಾಲಯ

ರಾಜ್ಯಗಳಿಗೆ ಜನಸ್ನೇಹಿ ಸುಧಾರಣೆಗಳ ಜಾರಿಗೆ 2021ರ ಫೆಬ್ರವರಿ 15 ರವರೆಗೆ ಕಾಲಾವಕಾಶ ವಿಸ್ತರಣೆ


ಸುಧಾರಣೆಗಳು ಪೂರ್ಣಗೊಂಡ ಬಳಿಕ ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿ

ಯಶಸ್ವಿ ಸುಧಾರಣೆ ಜಾರಿ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸಿನ ನೆರವು

Posted On: 16 DEC 2020 1:06PM by PIB Bengaluru

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, ಹಲವು ವಲಯಗಳಲ್ಲಿ ಜನಸ್ನೇಹಿ ಸುಧಾರಣೆಗಳನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ವಿಧಿಸಿದ್ದ ಕಾಲಾವಕಾಶವನ್ನು ವಿಸ್ತರಿಸಿದೆ. ಇದೀಗ 2021ರ ಫೆಬ್ರವರಿ 15ರೊಳಗೆ ಸಂಬಂಧಿಸಿದ ನೋಡಲ್ ಸಚಿವಾಲಯದ ಸುಧಾರಣೆಗಳ ಜಾರಿ ಕುರಿತಂತೆ ವರದಿಯನ್ನು ಸ್ವೀಕರಿಸಿದರೆ ಅಂತಹ ರಾಜ್ಯಗಳು ಸುಧಾರಣೆ ಆಧಾರಿತ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ. 

ಭಾರತ ಸರ್ಕಾರ, ರಾಜ್ಯಗಳು ಸುಧಾರಣೆಗಳನ್ನು ಕೈಗೊಳ್ಳಬೇಕಿರುವ ನಾಲ್ಕು ಗಂಭೀರ ವಲಯಗಳನ್ನು ಗುರುತಿಸಿದೆ.  ಅವುಗಳೆಂದರೆ

ಎ) ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ವ್ಯವಸ್ಥೆ ಜಾರಿ

ಬಿ) ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ಸುಧಾರಣೆ

ಸಿ) ನಗರ ಸ್ಥಳೀಯ ಸಂಸ್ಥೆಗಳು/ ಸೌಕರ್ಯ ಸುಧಾರಣೆ ಮತ್ತು

ಡಿ) ಇಂಧನ ವಲಯದ ಸುಧಾರಣೆಗಳು

ಈ ಕುರಿತಂತೆ 2020ರ ಮೇ 17ರಂದು ರಾಜ್ಯಗಳಿಗೆ ಮಾಹಿತಿಯನ್ನು ನೀಡಲಾಗಿತ್ತು. ಸುಧಾರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ರಾಜ್ಯಗಳು ಎರಡು ಬಗೆಯ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ. ಅಂತಹ ರಾಜ್ಯಗಳು ಪ್ರತಿಯೊಂದು ಸುಧಾರಣೆಗಳನ್ನು ಪೂರ್ಣಗೊಳಿಸಲು ತಮ್ಮ ಒಟ್ಟು ರಾಜ್ಯ ದೇಶೀಯ ಉತ್ಪನ್ನ(ಜಿಎಸ್ ಡಿಪಿ)ಯ ಶೇಕಡ 0.25ರಷ್ಟು ಮೊತ್ತಕ್ಕೆ ಸಮನಾದ ಹೆಚ್ಚುವರಿ ಸಾಲ ಸೌಕರ್ಯವನ್ನು ಪಡೆಯಲು ಅರ್ಹವಾಗಿವೆ. ಈ ಸೌಕರ್ಯದಡಿ ಎಲ್ಲಾ ನಾಲ್ಕು ಸುಧಾರಣೆಗಳನ್ನು ಪೂರ್ಣಗೊಳಿಸಿದರೆ ರಾಜ್ಯಗಳು 2.14 ಲಕ್ಷ ಕೋಟಿ ರೂ.ಗಳವರೆಗೆ ಹೆಚ್ಚುವರಿ ಸಾಲದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಕೋವಿಡ್-19 ಸಾಂಕ್ರಾಮಿಕ ಸವಾಲುಗಳನ್ನು ಎದುರಿಸಲು ಸಂಪನ್ಮೂಲ ಅಗತ್ಯತೆ ಹಿನ್ನೆಲೆಯಲ್ಲಿ ಭಾರತ ಸರ್ಕಾರ 2020ರ ಮೇ ತಿಂಗಳಲ್ಲಿ ರಾಜ್ಯಗಳಿಗೆ ವಿಧಿಸಲಾಗಿದ್ದ ಜಿಎಸ್ ಡಿಪಿಯ ಶೇ.2ರ ಮಿತಿಯನ್ನು ಹೆಚ್ಚಳ ಮಾಡಿತು. ಇದರಿಂದಾಗಿ ರಾಜ್ಯಗಳು 4.27 ಲಕ್ಷ ಕೋಟಿ ರೂ.ಗಳ ವರೆಗೆ ಹೆಚ್ಚುವರಿ ಸಾಲದ ಮೂಲಕ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಗುರಿ ಹೊಂದಲಾಗಿತ್ತು. ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಸುಧಾರಣೆ ಆಧಾರಿತ ವಿಶೇಷ ವಿಭಾಗದಡಿ ನಿಗದಿಪಡಿಸಲಾಗಿತ್ತು. ಇದರ ಉದ್ದೇಶ ಹಲವು ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿತ್ತು. 

ಎರಡನೇ ಪ್ರಯೋಜನ 4 ಸುಧಾರಣೆಗಳ ಪೈಕಿ ಮೂರು ಸುಧಾರಣೆಗಳನ್ನು ಪೂರ್ಣಗೊಳಿಸಿದ ರಾಜ್ಯಗಳಿಗೆ ಲಭ್ಯವಾಗುವುದು. ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆ ಅಡಿಯಲ್ಲಿ ಹೆಚ್ಚುವರಿ ನಿಧಿಯ ನೆರವು ನೀಡಲಾಯಿತು. ಈ ಯೋಜನೆ ಅಡಿ ನಿಗದಿತ ನಾಲ್ಕು ಸುಧಾರಣೆಗಳ ಪೈಕಿ ಮೂರು ಸುಧಾರಣೆಗಳನ್ನು ಪೂರ್ಣಗೊಳಿಸಿದ ರಾಜ್ಯಗಳಿಗಾಗಿ ಸುಮಾರು ಎರಡು ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.

ಆತ್ಮನಿರ್ಭರ ಭಾರತ ಪ್ಯಾಕೇಜ್ 2.0 ಭಾಗವಾಗಿ ಈ ಕ್ರಮವನ್ನು ಹಣಕಾಸು ಸಚಿವರು 2020ರ ಅಕ್ಟೋಬರ್ 12ರಂದು ಪ್ರಕಟಿಸಿದ್ದರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತೆರಿಗೆ ಆದಾಯ ಕೊರತೆ ಉಂಟಾಗಿ ಆರ್ಥಿಕವಾಗಿ ಈ ವರ್ಷ ಸಂಕಷ್ಟಕ್ಕೊಳಗಾದ ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯಡಿ ಭಾರತ ಸರ್ಕಾರ ಒಟ್ಟು 12,000 ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಬಂಡವಾಳ ವೆಚ್ಚ ಹಲವು ಪರಿಣಾಮಗಳನ್ನು ಬೀರಲಿದ್ದು, ಅದು ಆರ್ಥಿಕತೆಯ ಭವಿಷ್ಯದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲಿದೆ ಮತ್ತು ಆರ್ಥಿಕ ಪ್ರಗತಿಗೆ ಉತ್ತಮ ಫಲಿತಾಂಶವನ್ನು ತಂದುಕೊಡಲಿದೆ. 

ಈ ಎರಡು ಉಪಕ್ರಮಗಳಡಿ ರಾಜ್ಯಗಳಿಗೆ ಸುಧಾರಣೆಗಳನ್ನು ಕೈಗೊಳ್ಳಲು ಒತ್ತು ನೀಡಲಾಗುತ್ತಿದೆ. ಈವರೆಗೆ 9 ರಾಜ್ಯಗಳು ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿವೆ. ನಾಲ್ಕು ರಾಜ್ಯಗಳು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣ ಸುಧಾರಣೆಗಳನ್ನು ಪೂರ್ಣಗೊಳಿಸಿವೆ ಮತ್ತು ಒಂದು ರಾಜ್ಯ ನಗರ ಸ್ಥಳೀಯ ಸಂಸ್ಥೆ/ಸೌಕರ್ಯ ಸುಧಾರಣೆಗಳನ್ನು ಪೂರ್ಣಗೊಳಿಸಿದೆ. ಈ ರಾಜ್ಯಗಳಿಗೆ 40,251 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಅನುಮೋದನೆ ನೀಡಲಾಗಿದೆ. ಇದೀಗ ಸುಧಾರಣೆಗಳನ್ನು ಪೂರ್ಣಗೊಳಿಸಲು ನೀಡಿದ್ದ ಗಡುವು ವಿಸ್ತರಣೆಯಿಂದಾಗಿ ಇತರೆ ರಾಜ್ಯಗಳಿಗೆ ಸುಧಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಉತ್ತೇಜನ ನೀಡಿದಂತಾಗುತ್ತದೆ ಮತ್ತು ಸಾಲ ಸಂಯೋಜಿತ ಹಣಕಾಸು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.

***



(Release ID: 1681066) Visitor Counter : 260