ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಮತ್ತು ಉಜ್ಬೇಕಿಸ್ತಾನ ವರ್ಚುವಲ್ ಶೃಂಗಸಭೆಯ ಉದ್ಘಾಟನೆ ವೇಳೆ ಪ್ರಧಾನಮಂತ್ರಿ  ಭಾಷಣ

Posted On: 11 DEC 2020 12:01PM by PIB Bengaluru

ಗೌರವಾನ್ವಿತರೇ ನಮಸ್ಕಾರ

ಮೊದಲಿಗೆ ಇದೇ ಡಿಸೆಂಬರ್ 14ಕ್ಕೆ ನೀವು ಅಧಿಕಾರ ವಹಿಸಿಕೊಂಡು 5 ವರ್ಷ ಪೂರೈಸುತ್ತಿರುವುದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

ಈ ವರ್ಷ ನಾನು ಉಜ್ಬೇಕಿಸ್ತಾನಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದೆ, ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ಇಂದಿನ ‘ಎಲ್ಲಿಂದ ಬೇಕಾದರೂ ಕೆಲಸ ಮಾಡುವ’ ಯುಗದಲ್ಲಿ ನಾವು ವರ್ಚುವಲ್ ರೂಪದಲ್ಲಿ ಭೇಟಿ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ.
ಗೌರವಾನ್ವಿತರೇ,

ಭಾರತ ಮತ್ತು ಉಜ್ಬೇಕಿಸ್ತಾನ ಎರಡು ಐತಿಹಾಸಿಕ ನಾಗರಿಕತೆಗಳನ್ನು ಹೊಂದಿವೆ. ನಾವು ಪ್ರಾಚೀನ ಕಾಲದಿಂದಲೂ ನಿರಂತರ ಸಂಪರ್ಕವನ್ನು ಕಾಯ್ದುಕೊಂಡಿದ್ದೇವೆ.

ನಮ್ಮ ಪ್ರಾಂತ್ಯದ ಅವಕಾಶಗಳು ಮತ್ತು ಸವಾಲುಗಳ ಕುರಿತು ನಮ್ಮ ಮನೋಭಾವ ಮತ್ತು ಅರ್ಥಮಾಡಿಕೊಳ್ಳುವಲ್ಲಿ ಇಬ್ಬರಿಗೂ ವ್ಯಾಪಕ ಹೊಂದಾಣಿಕೆಯಾಗುತ್ತಿದೆ. ಅದರಿಂದಾಗಿ ನಮ್ಮ ನಡುವಿನ ಸಂಬಂಧ ಸದಾ ಸದೃಢವಾಗಿ ಮುಂದುವರಿದಿದೆ.

2018-19ರಲ್ಲಿ ನಿಮ್ಮ ಭಾರತದ ಭೇಟಿ ವೇಳೆ ನಮಗೆ ಹಲವು ವಿಷಯಗಳ ಬಗ್ಗೆ ಸಮಾಲೋಚಿಸುವ ಅವಕಾಶ ದೊರೆತಿತ್ತು. ಅದು ನಮ್ಮ ಸಂಬಂಧಗಳಿಗೆ ಹೊಸ ಆಯಾಮವನ್ನು ನೀಡಿತ್ತು.

ಗೌರವಾನ್ವಿತರೇ,
ಉಗ್ರವಾದ, ಮೂಲಭೂತವಾದ ಮತ್ತು ಪ್ರತ್ಯೇಕತಾವಾದಗಳ ಬಗ್ಗೆ ಇಬ್ಬರಿಗೂ ಸಮಾನ ಆತಂಕವಿದೆ. ನಾವಿಬ್ಬರೂ ಭಯೋತ್ಪಾದನೆ ವಿರುದ್ಧ ಬಲಿಷ್ಠವಾಗಿ ಹೋರಾಡುತ್ತಿದ್ದೇವೆ. ಪ್ರಾದೇಶಿಕ ಭದ್ರತಾ ಹಿತಾಸಕ್ತಿಗಳ ಕುರಿತು ಕೂಡ ಸಮಾನ ಮನೋಭಾವ ಹೊಂದಿದ್ದೇವೆ.  

ಅಫ್ಘನ್ ಶಾಂತಿ ಪ್ರಕ್ರಿಯೆಯ ಅಫ್ಘನ್ ನೇತೃತ್ವದಲ್ಲಿ, ಅಫ್ಘನ್ ಒಡೆತನದ ಮತ್ತು ಅಫ್ಘನ್ ನಿಯಂತ್ರಣದಲ್ಲಿ ನಡೆಯಬೇಕು ಎಂಬುದನ್ನು ಇಬ್ಬರೂ ಒಪ್ಪಿದ್ದೇವೆ. ಕಳೆದ ಎರಡು ದಶಕಗಳಿಂದೀಚೆಗೆ ಪಡೆದಿರುವ ಲಾಭವನ್ನು ಸಂರಕ್ಷಿಸಿಕೊಳ್ಳುವ ಅಗತ್ಯವಿದೆ.

ಭಾರತ ಮತ್ತು ಉಜ್ಬೇಕಿಸ್ತಾನ ಒಟ್ಟಾಗಿ ಭಾರತ-ಕೇಂದ್ರ ಏಷ್ಯಾ ಸಮಾಲೋಚನೆಗಳನ್ನು ಆರಂಭಿಸಿದವು. ಅವುಗಳ ಕಳೆದ ವರ್ಷ ಸಮರ್ ಖಂಡ್ ನಿಂದ ಆರಂಭವಾದವು.

ಗೌರವಾನ್ವಿತರೇ,
ಕಳೆದ ಕೆಲವು ವರ್ಷಗಳಿಂದೀಚೆಗೆ ನಮ್ಮ ಆರ್ಥಿಕ ಪಾಲುದಾರಿಕೆಯೂ ಸಹ ಬಲವರ್ಧನೆಗೊಂಡಿದೆ.

ನಾವು ಉಜ್ಬೇಕಿಸ್ತಾನದೊಂದಿಗೆ ನಮ್ಮ ಅಭಿವೃದ್ಧಿ ಪಾಲುದಾರಿಕೆಯನ್ನು ಮತ್ತಷ್ಟು ಚುರುಕುಗೊಳಿಸಲು ಬಯಸಿದ್ದೇವೆ.

ಭಾರತದ ಸಾಲದ ನೆರವಿನೊಂದಿಗೆ ಹಲವು ಯೋಜನೆಗಳ ಪ್ರಸ್ತಾವನೆಗಳನ್ನು ಪರಿಗಣಿಸುತ್ತಿರುವುದನ್ನು ತಿಳಿದು ನನಗೆ ಸಂತೋಷವಾಗುತ್ತಿದೆ.

ನಿಮ್ಮ ಅಭಿವೃದ್ಧಿ ಆದ್ಯತೆಗಳಲ್ಲಿ ಭಾರತದ ಪರಿಣಿತಿ ಮತ್ತು ಅನುಭವವನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ.

ಭಾರತ ಮೂಲಸೌಕರ್ಯ, ಐಟಿ, ಶಿಕ್ಷಣ, ಆರೋಗ್ಯ, ತರಬೇತಿ ಮತ್ತು ಸಾಮರ್ಥ್ಯವೃದ್ಧಿಯಲ್ಲಿ ವಿಫುಲ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಉಜ್ಬೇಕಿಸ್ತಾನ ಬಳಸಿಕೊಳ್ಳಬಹುದು. ಎರಡೂ ದೇಶಗಳ ನಡುವೆ ಕೃಷಿಗೆ ಸಂಬಂಧಿಸಿದಂತೆ ಜಂಟಿ ಕಾರ್ಯಕಾರಿ ಸಮಿತಿ ಸ್ಥಾಪನೆ ಮತ್ತು ಅದರ ಕಾರ್ಯನಿರ್ವಹಣೆ ಒಂದು ಗಮನಾರ್ಹ ಮತ್ತು ಸಕಾರಾತ್ಮಕ ಹೆಜ್ಜೆಯಾಗಿದೆ. ಇದು ಎರಡೂ ದೇಶಗಳ ರೈತರ ಸಮುದಾಯಕ್ಕೆ ಕೃಷಿ ವ್ಯಾಪಾರದಲ್ಲಿ ಪರಸ್ಪರ ಸಹಾಯ ಮಾಡಲು ಮತ್ತು ಅವಕಾಶಗಳನ್ನು ವಿಸ್ತರಿಸಲು ನೆರವಾಗಲಿದೆ.

ಗೌರವಾನ್ವಿತರೇ,

ನಮ್ಮ ಭದ್ರತಾ ಪಾಲುದಾರಿಕೆ ದ್ವಿಪಕ್ಷೀಯ ಸಂಬಂಧಗಳ ಬಲಿಷ್ಠ ಆಧಾರ ಸ್ಥಂಭವಾಗಿದೆ.

ಕಳೆದ ವರ್ಷ ನಮ್ಮ ಸಶಸ್ತ್ರ ಪಡೆಗಳು ಮೊದಲ ಜಂಟಿ ಮಿಲಿಟರಿ ಅಭ್ಯಾಸವನ್ನು ನಡೆಸಿದವು. ಬಾಹ್ಯಾಕಾಶ ಮತ್ತು ಅಣು ಇಂಧನ ವಲಯದಲ್ಲೂ ಸಹ ನಾವು ಜಂಟಿಯಾಗಿ ಮುಂದೆ ಸಾಗುತ್ತಿದ್ದೇವೆ.

ಕೋವಿಡ್-19 ಸಾಂಕ್ರಾಮಿಕದ ಕ್ಲಿಷ್ಟಕರ ಸಂದರ್ಭದಲ್ಲೂ ಸಹ ಎರಡೂ ರಾಷ್ಟ್ರಗಳು ಪರಸ್ಪರ ಬೆಂಬಲ ನೀಡಿದವು ಎಂಬುದು ತೃಪ್ತಿದಾಯಕ ವಿಚಾರ. ಅದು ಔಷಧಿಗಳ ಪೂರೈಕೆಯಲ್ಲಾಗಿರಬಹುದು ಅಥವಾ ಪರಸ್ಪರ ರಾಷ್ಟ್ರಗಳ ಪ್ರಜೆಗಳ ಸುರಕ್ಷಿತ ವಾಪಸ್ ಕರೆತರುವ ವಿಚಾರವಾಗಿರಬಹುದು.

ಎರಡೂ ದೇಶಗಳ ನಡುವಿನ ಸಹಕಾರ ಸಂಬಂಧ ಬಲವರ್ಧನೆಯಾಗುತ್ತಿದೆ. ಹರಿಯಾಣ ಮತ್ತು ಫರ್ಗಾನಾ ನಡುವಿನ ಸಹಕಾರ ಇದೀಗ ಒಂದು ನೀತಿ ರೂಪಿಸಲಾಗಿದ್ದು, ಅದು ಗುಜರಾತ್ ಮತ್ತು ಅಂದಿಜಾನ್ ಯಶಸ್ವಿ ಮಾದರಿಯನ್ನು ಆಧರಿಸಿದೆ.

ಗೌರವಾನ್ವಿತರೇ,
ನಿಮ್ಮ ಸಮರ್ಥ ನಾಯಕತ್ವದಲ್ಲಿ ಉಜ್ಬೇಕಿಸ್ತಾನದಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಭಾರತದಲ್ಲೂ ಸಹ ನಾವು ಸುಧಾರಣೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ.

ಇದರಿಂದಾಗಿ ಕೋವಿಡ್ ನಂತರದ ಕಾಲಘಟ್ಟದಲ್ಲಿ ನಮ್ಮ ನಡುವೆ ದ್ವಿಪಕ್ಷೀಯ ಸಹಕಾರ ಸಂಬಂಧದ ಸಾಧ್ಯತೆಗಳು ವಿಸ್ತಾರಗೊಳ್ಳಲಿವೆ.

ಇಂದಿನ ನಮ್ಮ ಚರ್ಚೆ ಆ ನಿಟ್ಟಿನಲ್ಲಿ ಹೊಸ ಆಯಾಮ ಮತ್ತು ಶಕ್ತಿಯನ್ನು ನೀಡಲಿದೆ ಎಂಬ ಭರವಸೆ ನನಗಿದೆ.

ಗೌರವಾನ್ವಿತರೇ,
ಇದೀಗ ಆರಂಭಿಕ ನುಡಿಗಳನ್ನಾಡುವಂತೆ ನಿಮ್ಮನ್ನು ಆಹ್ವಾನಿಸುವುದು ನನಗೆ ಹೆಮ್ಮೆ ಎನಿಸುತ್ತಿದೆ.

ಘೋಷಣೆ: ಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು. ಇದು ಅದರ ಅಂಶಗಳನ್ನಾಧರಿಸಿದ ಅನುವಾದ.

***



(Release ID: 1680212) Visitor Counter : 260