ಪ್ರಧಾನ ಮಂತ್ರಿಯವರ ಕಛೇರಿ
ಬೆಂಗಳೂರು ಟೆಕ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಮಾಹಿತಿ ಯುಗದಲ್ಲಿ, ಮೊದಲು ಕಾರ್ಯಪ್ರವೃತ್ತರಾಗುವವರಿಗಿಂತ, ಉತ್ತಮವಾಗಿ ಕಾರ್ಯಪ್ರವೃತ್ತರಾಗುವವರು ಮುಖ್ಯರಾಗುತ್ತಾರೆ
ಭಾರತದಲ್ಲಿ ವಿನ್ಯಾಸಗೊಂಡ ತಂತ್ರಜ್ಞಾನಗಳನ್ನು ಜಗತ್ತಿಗೆ ನೀಡುವ ಸಮಯ ಇದಾಗಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
Posted On:
19 NOV 2020 12:16PM by PIB Bengaluru
ಬೆಂಗಳೂರು ಟೆಕ್ ಶೃಂಗಸಭೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ ಟಿಪಿಐ) ತ್ತು ಎಂಎಂ ಆಕ್ಟಿವ್ ಸೈಕ್-ಟೆಕ್ ಕಮ್ಯುನಿಕೇಷನ್ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರ ಈ ಶೃಂಗಸಭೆಯನ್ನು ಆಯೋಜಿಸಿದೆ. ಈ ವರ್ಷದ ಶೃಂಗಸಭೆಯ ವಿಷಯವು "ಮುಂದಿನದು ಈಗಲೇ". ಈ ಸಂದರ್ಭದಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ಕಾನೂನು ಹಾಗೂ ನ್ಯಾಯ ಖಾತೆ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.
ಇಂದು ಡಿಜಿಟಲ್ ಇಂಡಿಯಾವನ್ನು ಸರ್ಕಾರದ ಒಂದು ಸಾಮಾನ್ಯ ಉಪಕ್ರಮವಾಗಿ ನೋಡುತ್ತಿಲ್ಲ. ಬದಲಿಗೆ ಇದು ವಿಶೇಷವಾಗಿ ಬಡವರಿಗೆ, ಹಿಂದುಳಿದವರಿಗೆ ಮತ್ತು ಸರ್ಕಾರದಲ್ಲಿರುವವರಿಗೆ ಒಂದು ಜೀವನ ವಿಧಾನವಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು,
ಟೆಕ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಡಿಜಿಟಲ್ ಇಂಡಿಯಾದಿಂದಾಗಿ, ನಮ್ಮ ರಾಷ್ಟ್ರವು ಮಾನವ ಕೇಂದ್ರಿತ ಅಭಿವೃದ್ಧಿ ವಿಧಾನವನ್ನು ಕಂಡಿದೆ. ಬೃಹತ್ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ನಾಗರಿಕರು ಹಲವಾರು ಬದಲಾವಣೆಗಳನ್ನು ಕಂಡಿದ್ದಾರೆ ಮತ್ತು ಇದರ ಪ್ರಯೋಜನಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಅವರು ಹೇಳಿದರು.
ಸರ್ಕಾರವು ಡಿಜಿಟಲ್ ಮತ್ತು ತಂತ್ರಜ್ಞಾನಗಳ ಮಾರುಕಟ್ಟೆಯನ್ನು ಸೃಷ್ಟಿಸಿರುವುದು ಮಾತ್ರವಲ್ಲ, ಇದನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ತಂತ್ರಜ್ಞಾನವೇ ಮೊದಲು ಎಂಬುದು ತಮ್ಮ ಆಡಳಿತ ಮಾದರಿಯಾಗಿದ್ದು, ತಂತ್ರಜ್ಞಾನದ ಮೂಲಕ ಕೋಟ್ಯಂತರ ರೈತರು ಒಂದೇ ಕ್ಲಿಕ್ನಲ್ಲಿ ಹಣಕಾಸು ನೆರವು ಪಡೆಯುತ್ತಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ಅನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಕಟ್ಟುನಿಟ್ಟಾದ ಲಾಕ್ಡೌನ್ ಸಂದರ್ಭದಲ್ಲಿಯೂ ತಂತ್ರಜ್ಞಾನದಿಂದಾಗಿ ಭಾರತದ ಬಡವರು ಸೂಕ್ತ ಮತ್ತು ತ್ವರಿತ ನೆರವು ಪಡೆಯಲು ಸಾಧ್ಯವಾಯಿತು ಎಂದು ಅವರು ಒತ್ತಿ ಹೇಳಿದರು. ಇಷ್ಟೊಂದು ಬೃಹತ್ ಪ್ರಮಾಣದ ಪರಿಹಾರಕ್ಕೆ ಸಮನಾಗಿ ಬಹಳವಿಲ್ಲ ಎಂದು ಅವರು ಹೇಳಿದರು.
ಸೇವೆಗಳ ಉತ್ತಮ ವಿತರಣೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಡೇಟಾ ವಿಶ್ಲೇಷಣೆಯನ್ನು ಸರ್ಕಾರ ಬಳಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಯೋಜನೆಗಳು ಕಡತಗಳನ್ನು ಮೀರಿ, ಜನಜೀವನವನ್ನು ಇಷ್ಟೊಂದು ತ್ವರಿತಗತಿಯಲ್ಲಿ ಮತ್ತು ಪ್ರಮಾಣದಲ್ಲಿ ಬದಲಾಯಿಸಲು ತಂತ್ರಜ್ಞಾನವೇ ಪ್ರಮುಖ ಕಾರಣ ಎಂದು ಅವರು ಹೇಳಿದರು. ತಂತ್ರಜ್ಞಾನದಿಂದಾಗಿ ನಾವು ಎಲ್ಲರಿಗೂ ವಿದ್ಯುತ್ ಒದಗಿಸಲು ಸಾಧ್ಯವಾಗಿದೆ, ಟೋಲ್ ಬೂತ್ಗಳನ್ನು ವೇಗವಾಗಿ ದಾಟುತ್ತಿದ್ದೇವೆ, ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಲಸಿಕೆ ಹಾಕುವ ವಿಶ್ವಾಸವನ್ನು ನೀಡಿದೆ ಎಂದು ಅವರು ಹೇಳಿದರು.
ಈ ಸಾಂಕ್ರಾಮಿಕ ಸಮಯದಲ್ಲಿ ತಂತ್ರಜ್ಞಾನ ಕ್ಷೇತ್ರವು ತನ್ನ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಎಂದು ಪ್ರಧಾನಿ ಶ್ಲಾಘಿಸಿದರು. ಒಂದು ದಶಕದಲ್ಲಿ ಆಗಿರದ ತಂತ್ರಜ್ಞಾನದ ಅಳವಡಿಕೆಯು ಕೆಲವೇ ತಿಂಗಳುಗಳಲ್ಲಿ ಸಂಭವಿಸಿದೆ ಎಂದು ಅವರು ಹೇಳಿದರು. ಎಲ್ಲಿಂದಲಾದರೂ ಕೆಲಸ ಮಾಡುವುದು ಹೊಸ ರೂಢಿಯಾಗಿದೆ ಮತ್ತು ಅದೇ ಮುಂದುವರೆಯಲಿದೆ. ಶಿಕ್ಷಣ, ಆರೋಗ್ಯ, ಶಾಪಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ತಂತ್ರಜ್ಞಾನ ಅಳವಡಿಕೆ ಕಂಡುಬರುತ್ತಿದೆ ಎಂದು ಅವರು ಹೇಳಿದರು.
ಕೈಗಾರಿಕಾ ಯುಗದ ಸಾಧನೆಗಳು ಮುಗಿದಿವೆ, ನಾವೀಗ ಮಾಹಿತಿ ಯುಗದ ಮಧ್ಯದಲ್ಲಿದ್ದೇವೆ ಎಂದು ಪ್ರಧಾನಿ ಹೇಳಿದರು. ಕೈಗಾರಿಕಾ ಯುಗದ ಬದಲಾವಣೆಗಳು ಒಂದೇ ದಿಕ್ಕಿನಲ್ಲಿದ್ದವು, ಆದರೆ ಮಾಹಿತಿ ಯುಗದಲ್ಲಿ ಬದಲಾವಣೆಯು ಹಲವು ಆಯಾಮಗಳಲ್ಲಿ ಆಗುತ್ತಿದೆ ಎಂದು ಅವರು ಹೇಳಿದರು. ಕೈಗಾರಿಕಾ ಯುಗದಲ್ಲಿ ಮೊದಲು ಕಾರ್ಯಪ್ರವೃತ್ತರಾಗುವುದು ಮುಖ್ಯವಾಗಿತ್ತು. ಮಾಹಿತಿ ಯುಗದಲ್ಲಿ ಉತ್ತಮವಾಗಿ ಕಾರ್ಯಪ್ರವೃತ್ತರಾಗುವುದು ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಯಾರು ಬೇಕಾದರೂ, ಯಾವುದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಸಮೀಕರಣಗಳನ್ನು ಮುರಿಯುವ ಉತ್ಪನ್ನವನ್ನು ತಯಾರಿಸಬಹುದು ಎಂದು ಅವರು ಹೇಳಿದರು.
ಭಾರತವು ಮಾಹಿತಿ ಯುಗದಲ್ಲಿ ಮುಂದೆ ಸಾಗಲು ಸಾಧ್ಯವಾದ ವಿಶಿಷ್ಟ ಸ್ಥಾನದಲ್ಲಿದೆ ಎಂದು ಪ್ರಧಾನಿ ಹೇಳಿದರು. ಭಾರತವು ಉತ್ತಮ ಬುದ್ಧಿಮತ್ತೆಯವರನ್ನ ಮತ್ತು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಎಂದು ಅವರು ಹೇಳಿದರು. ನಮ್ಮ ಸ್ಥಳೀಯ ತಂತ್ರಜ್ಞಾನಗಳು ಜಾಗತಿಕ ಮಟ್ಟಕ್ಕೇರುವ ಸಾಮರ್ಥ್ಯವನ್ನು ಹೊಂದಿವೆ. ಭಾರತದಲ್ಲಿ ವಿನ್ಯಾಸಗೊಳಿಸಲಾದ ತಂತ್ರಜ್ಞಾನಗಳನ್ನು ಜಗತ್ತಿಗೆ ನಿಯೋಜಿಸುವ ಸಮಯ ಈಗ ಬಂದಿದೆ ಎಂದು ಅವರು ಒತ್ತಿ ಹೇಳಿದರು. ಇತ್ತೀಚೆಗೆ ಐಟಿ ಉದ್ಯಮದ ಅನುಸರಣೆ ಹೊರೆಯನ್ನು ಸರಾಗವಾಗಿಸಿದ ಕ್ರಮವೂ ಸೇರಿದಂತೆ ಸರ್ಕಾರದ ನೀತಿ ನಿರ್ಧಾರಗಳು ಯಾವಾಗಲೂ ತಂತ್ರಜ್ಞಾನ ಮತ್ತು ನಾವೀನ್ಯತೆ ಉದ್ಯಮವನ್ನು ಉದಾರೀಕರಣಗೊಳಿಸುವ ಗುರಿಯನ್ನು ಹೊಂದಿವೆ. ಭಾರತದ ಭವಿಷ್ಯದ ನೀತಿ ಚೌಕಟ್ಟುಗಳನ್ನು ರೂಪಿಸಲು ಟೆಕ್ ಉದ್ಯಮದ ಪಾಲುದಾರರನ್ನು ತೊಡಗಿಸಿಕೊಳ್ಳಲು ಸರ್ಕಾರ ಯಾವಾಗಲೂ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.
ಚೌಕಟ್ಟಿನ ಮಟ್ಟದ ಮನೋಭಾವವು ಅನೇಕ ಯಶಸ್ವಿ ಉತ್ಪನ್ನಗಳ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಯುಪಿಐ, ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್, ಸ್ವಾಮಿತ್ವ ಯೋಜನೆ ಮುಂತಾದ ಚೌಕಟ್ಟಿನ ಮಟ್ಟದ ಮನೋಭಾವದ ಹಲವಾರು ಉಪಕ್ರಮಗಳನ್ನು ಅವರು ಪಟ್ಟಿ ಮಾಡಿದರು. ರಕ್ಷಣಾ ಕ್ಷೇತ್ರದ ವಿಕಸನಕ್ಕೆ ತಂತ್ರಜ್ಞಾನವು ವೇಗವನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುತ್ತಿರುವುದರಿಂದ ಡೇಟಾ ಸಂರಕ್ಷಣೆ ಮತ್ತು ಸೈಬರ್ ಸುರಕ್ಷತೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸೈಬರ್ ದಾಳಿ ಮತ್ತು ವೈರಸ್ಗಳ ವಿರುದ್ಧ ಡಿಜಿಟಲ್ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಬಳಸುವ ಸೈಬರ್ ಭದ್ರತಾ ಪರಿಹಾರಗಳನ್ನು ರೂಪಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.
ಜೈವಿಕ ವಿಜ್ಞಾನ, ಎಂಜಿನಿಯರಿಂಗ್ ಮುಂತಾದ ವಿಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆಯ ವ್ಯಾಪ್ತಿ ಮತ್ತು ಅವಶ್ಯಕತೆ ಪ್ರಸ್ತುತವಾಗಿದೆ ಎಂದು ಪ್ರಧಾನಿ ಹೇಳಿದರು. ನಾವೀನ್ಯತೆಯು ಪ್ರಗತಿಗೆ ಮುಖ್ಯವಾಗಿದೆ. ಪ್ರತಿಭಾವಂತ ಯುವಜನರು ಮತ್ತು ಅವರ ಉತ್ಸಾಹದಿಂದಾಗಿ ನಾವೀನ್ಯತೆಯ ವಿಷಯದಲ್ಲಿ ಭಾರತಕ್ಕೆ ಸ್ಪಷ್ಟವಾದ ಪ್ರಯೋಜನವಿದೆ. ನಮ್ಮ ಯುವಕರ ಸಾಮರ್ಥ್ಯ ಮತ್ತು ತಂತ್ರಜ್ಞಾನದ ಸಾಧ್ಯತೆಗಳಿಗೆ ಅಂತ್ಯವೇ ಇಲ್ಲ ಎಂದು ಅವರು ಹೇಳಿದರು. ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ನೀಡಲು ಮತ್ತು ಅವುಗಳನ್ನು ಪ್ರಯೋಜನ ಪಡೆಯಲು ಇದು ಸುಸಮಯವಾಗಿದೆ. ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ನಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
***
(Release ID: 1673980)
Visitor Counter : 275
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam